ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಳ್ಳೆ ಕಾಟ: ಶಾಲೆ ಬದಲಾಯಿಸಿದ ವಿದ್ಯಾರ್ಥಿಗಳು!

ಕುಮಟಾ ತಾಲ್ಲೂಕಿನ ಖೈರೆ ಗ್ರಾಮದ ಸರ್ಕಾರಿ ಶಾಲೆಯ ಸಮೀಪ ಅನಧಿಕೃತ ಗುಜರಿ ಸಾಮಗ್ರಿ ರಾಶಿ
Last Updated 17 ಜೂನ್ 2018, 10:49 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಖೈರೆ ಗ್ರಾಮದ ಸರ್ಕಾರಿ ಕಿರಿಯ ಶಾಲೆಯ ವಿದ್ಯಾರ್ಥಿಗಳಿಗೆ ಸೊಳ್ಳೆಗಳ ಕಾಟ ಮಿತಿಮೀರಿದೆ. ಇದರಿಂದ ಕಂಗೆಟ್ಟ ನಾಲ್ವರು ವಿದ್ಯಾರ್ಥಿಗಳು ಬೇರೆ ಶಾಲೆಗಳಿಗೆ ಹೋಗುತ್ತಿದ್ದಾರೆ. ಶಾಲೆಯ ಹಿಂಬದಿಯಿರುವ ಗುಜರಿ ಸಾಮಗ್ರಿ ರಾಶಿಯಲ್ಲಿ ನಿಂತಿರುವ ನೀರು ಇದಕ್ಕೆಲ್ಲ ಕಾರಣ.

ಅಬ್ದುಲ್ ಹಸನ್ ಆಗಾ ಎಂಬುವವರು ತಮ್ಮ ಜಾಗದಲ್ಲಿ ಗುಜರಿ ಸಾಮಗ್ರಿಯನ್ನು ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದಾರೆ. ಅಲ್ಲಿ ರಾಶಿ ಹಾಕಲಾಗಿರುವ ಹಳೆಯ ಟೈರ್‌, ಪ್ಲಾಸ್ಟಿಕ್ ಬಕೆಟ್, ಡ್ರಮ್, ಪಾತ್ರೆಗಳಲ್ಲಿ ಸಂಗ್ರಹಗೊಂಡ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಅವು ಶಾಲೆಗೆ ನುಗ್ಗಿ ಪುಟ್ಟ ಮಕ್ಕಳನ್ನು ಕಡಿಯುತ್ತಿವೆ.

‘ಶಾಲೆಯ ಕಿಟಕಿಗಳಿಗೆ ಜಾಳಿಗೆ ಹಾಕಿದರೂ ಪ್ರಯೋಜನವಾಗುತ್ತಿಲ್ಲ. ಸೊಳ್ಳೆಗಳ ಕಾಟದಿಂದ ಮಕ್ಕಳಿಗೆ, ಶಿಕ್ಷಕರಿಗೆ ಡೆಂಗಿ, ಮಲೇರಿಯಾ ಮುಂತಾದ ರೋಗ ಹರಡುವ ಆತಂಕ ನಮ್ಮನ್ನು ಕಾಡುತ್ತಿದೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸವಿತಾ ಅಂಬಿಗ ಹೇಳುತ್ತಾರೆ.

ಹೋರಾಟಕ್ಕೂ ಬೆಲೆಯಿಲ್ಲ: ‘ಸೊಳ್ಳೆ ಕಾಟ ನಿವಾರಿಸುವಂತೆ ಐದಾರು ವರ್ಷಗಳ ಹಿಂದೆ ಸ್ಥಳೀಯರು ಹೋರಾಟ ನಡೆಸಿದ್ದರು. ಗುಜರಿ ಸಾಮಗ್ರಿ ಮಾಲೀಕ ಅಬ್ದುಲ್ ಹಸನ್ ಆಗಾ ಶಾಲೆಯ ಕಿಟಕಿಗಳಿಗೆ ಪರದೆ ಹಾಕಿಸಿದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಡಿಡಿಪಿಐ ಅವರೂ ಶಾಲೆಗೆ ಭೇಟಿ ನೀಡಿದ್ದರು. ಆದರೂ  ಸಮಸ್ಯೆ ಪರಿಹಾರ ಕಾಣಲಿಲ್ಲ’ ಎಂದು ಸಮಸ್ಯೆಯನ್ನು ವಿವರಿಸುತ್ತಾರೆ ಪೋಷಕರಾದ ರಾಮ ಸತ್ಯ ಪಟಗಾರ.

‘ನಾಲ್ಕನೇ ತರಗತಿ ಓದುತ್ತಿರುವ ನನ್ನ ಇಬ್ಬರು ಹೆಣ್ಣುಮಕ್ಕಳನ್ನು ಈ ಶಾಲೆಯಿಂದ ವರ್ಗಾವಣೆ ಪತ್ರ ಪಡೆದು ಮಿರ್ಜಾನ್ ಶಾಲೆಗೆ ಸೇರಿಸಿದ್ದೇನೆ. ರಾಮನಾಥ ನಾಯ್ಕ ಎನ್ನುವ ಇನ್ನೊಬ್ಬ ಪಾಲಕರೂ ತಮ್ಮಿಬ್ಬರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ’ ಎಂದು ಹೇಳಿದರು.

ಶಾಲೆಯ ಮುಖ್ಯ ಶಿಕ್ಷಕರ ಮಧುಕರ ನಾಯ್ಕ, ‘ಶಾಲೆಯ ನ್ಯಾಯ ನಿರ್ಣಯ ಸಮಿತಿಯವರು ಬುಧವಾರದೊಳಗೆ ಗುಜರಿ ಸಾಮಗ್ರಿ ಸ್ಥಳಾಂತರ ಮಾಡುವಂತೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿದ್ದಾರೆ. ಗುರುವಾರ ಶಾಲಾಭಿವೃದ್ಧಿ ಸಮಿತಿ, ಪಂಚಾಯ್ತಿ ಪದಾಧಿಕಾರಿಗಳು, ನ್ಯಾಯ ನಿರ್ಣಯ ಸಮಿತಿಯವರು ಮತ್ತೊಮ್ಮೆ ಸಭೆ ಸೇರಿ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

ಸೂಕ್ತ ಕ್ರಮ ಕೈಗೊಳ್ಳುವ ಭರವಸೆ

ಕಾರವಾರ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಜಿ.ನಾಯ್ಕ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ನಾನು ಈಚೆಗಷ್ಟೇ ವರ್ಗಾವಣೆಯಾಗಿ ಬಂದಿದ್ದೇನೆ. ಸೊಳ್ಳೆಗಳ ಕಾಟದ ಬಗ್ಗೆ ದೂರು ಬಂದಿಲ್ಲ. ಸೊಳ್ಳೆಗಳ ಕಾರಣದಿಂದಾಗಿ ಮಕ್ಕಳು ಶಾಲೆ ಬಿಟ್ಟು ಹೋಗಿರುವ ಸಂಗತಿ ಕೂಡ ಗಮನಕ್ಕೆ ಬಂದಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಶಾಲೆಗೆ ಕಳುಹಿಸಿ ಪರಿಸ್ಥಿತಿಯ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT