ಸಾಂಕ್ರಾಮಿಕ ರೋಗ ವ್ಯಾಪಿಸುವ ಭೀತಿ

7
ಮಖಬೂಲಿಯಾ ನಗರ: ಸೊಳ್ಳೆ–ಹಂದಿಗಳ ತಾಣ ಈ ಪ್ರದೇಶ

ಸಾಂಕ್ರಾಮಿಕ ರೋಗ ವ್ಯಾಪಿಸುವ ಭೀತಿ

Published:
Updated:
ಸಾಂಕ್ರಾಮಿಕ ರೋಗ ವ್ಯಾಪಿಸುವ ಭೀತಿ

ಹಾನಗಲ್: ಹದಗೆಟ್ಟ ರಸ್ತೆ, ಹೂಳು ತುಂಬುದ ಚರಂಡಿ. ನೈರ್ಮಲ್ಯ ಇಲ್ಲಿ ನಾಪತ್ತೆ, ಹೀಗಾಗಿ ಪಟ್ಟಣದ ಮಖಬೂಲಿಯಾ ನಗರವು ಹಂದಿ ಮತ್ತು ಸೊಳ್ಳೆಗಳ ಸಾಮ್ರಾಜ್ಯವಾಗಿ ಬದಲಾಗಿದೆ.

ಸುಮಾರು 30 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಮಖಬೂಲಿಯಾ ನಗರವು ಬಹುತೇಕ ಮುಸ್ಲಿಂ ಜನರು ಇರುವ ಸುಮಾರು 150 ಮನೆಗಳನ್ನು ಹೊಂದಿದ್ದು, ಮೂಲ ಸೌಲಭ್ಯಗಳು ಇಲ್ಲಿ ಮರಿಚಿಕೆ, ಒಂದು ಓಣಿಯ ರಸ್ತೆ ಮಾತ್ರ ಈತನಕ ಡಾಂಬರ್‌ ಕಂಡಿದೆ. ಮಿಕ್ಕೆಲ್ಲವೂ ತಗ್ಗು –ಗುಂಡಿಗಳಿಂದ ಕೂಡಿವೆ, ಚರಂಡಿಗಳು ನಿರ್ಮಾಣಗೊಂಡಿವೆ, ಆದರೆ ಚರಂಡಿ ಸ್ವಚ್ಚಗೊಳಿಸಿ 6 ತಿಂಗಳು ಗತಿಸಿದೆ, ಹೀಗಾಗಿ ಹೂಳು ತುಂಬಿಕೊಂಡ ಚರಂಡಿಯಲ್ಲಿ ಈಗ ಮಳೆಯ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ಗಲೀಜು ಸೃಷ್ಠಿಯಾಗುತ್ತಿದೆ, ಇದು ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ, ಚರಂಡಿ ಗುಂಟ ಹಂದಿಗಳ ಕಾರುಬಾರು, ಸಂಜೆಯಾಗುತ್ತಲೇ ಮನೆ ತುಂಬ ಸೊಳ್ಳೆಗಳ ನೀನಾದ,..!

ಇಲ್ಲಿರುವ ಅಂಗನವಾಡಿ ಕೇಂದ್ರಕ್ಕೆ 45 ಮಕ್ಕಳು ಬರುತ್ತಾರೆ, ಅಂಗನವಾಡಿ ಮುಂದಿನ ರಸ್ತೆಯಲ್ಲಿ ಮಳೆ ನೀರು ತುಂಬಿಕೊಂಡು ಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುತ್ತಾರೆ, ಬೈಕ್‌ ಸವಾರರು ಇಲ್ಲಿ ಫಜೀತಿಗೆ ಒಳಗಾಗುತ್ತಾರೆ, ಅಂಗನವಾಡಿ ಸುತ್ತಲೂ ಸ್ವಚ್ಚತೆ ಇಲ್ಲದಂತಾಗಿ ಸೊಳ್ಳೆ ಕಚ್ಚಿಸಿಕೊಳ್ಳುವ ಕಷ್ಟ ಮಕ್ಕಳದ್ದು..!

ರಸ್ತೆ ಮತ್ತು ಚರಂಡಿ ಒಂದಾಗಿರುವ ಈ ಪ್ರದೇಶ ಗಬ್ಬೆದ್ದು ನಾರುತ್ತಿದೆ, ಮಳೆಗಾಲದ ಈ ದಿನಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಇಲ್ಲಿನ ನಿವಾಸಿಗಳಿದ್ದಾರೆ. ಇಲ್ಲಿರುವ ಪ್ರಾರ್ಥನಾ ಮಂದಿರದ ಸುತ್ತಲೂ ತ್ಯಾಜ್ಯ ಸಂಗ್ರಹಣೆಗೊಂಡು ನೈರ್ಮಲ್ಯ ಹದಗೆಟ್ಟಿದೆ.

‘ಈ ವಾರ್ಡ್‌ನ ಸದಸ್ಯೆ ಲಕ್ಷ್ಮೀ ಹರಿಜನ ಹಿಂದಿನ ಅವಧಿಗೆ ಪುರಸಭೆ ಅಧ್ಯಕ್ಷರಾಗಿದ್ದರು. ಆದರೂ ಈ ಭಾಗ ಅಭಿವೃದ್ಧಿ ಕಂಡಿಲ್ಲ, ಚರಂಡಿ ಸ್ವಚ್ಚಗೊಳಿಸಿ, ಫಾಗಿಂಗ್‌, ಕ್ರಿಮಿನಾಶಕ ಪೌಡರ್‌ ಸಿಂಪಡಣೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪುರಸಭೆ ಇತ್ತ ತಲೆ ಹಾಕುತ್ತಿಲ್ಲ’ ಎಂದು ಇಲ್ಲಿನ ನಿವಾಸಿ ಎ.ಎಂ.ನಾಶಿಪುಡಿ ಹೇಳುತ್ತಾರೆ, ಶಬ್ಬೀರ್‌ ಅಹ್ಮದ್‌ ಉಪ್ಪೀನ್‌, ‘ಹಂದಿ ಮುಕ್ತ ಪಟ್ಟಣ ಮಾಡಲು ಪುರಸಭೆ ಮುಂದಾಗಿದೆ. ಮಖಬೂಲಿಯಾ ನಗರದಲ್ಲೆ ಹಂದಿಗಳು ಅಧಿಕವಾಗಿವೆ, ಒಂದು ಹಂದಿಯನ್ನೂ ಇಲ್ಲಿ ಹಿಡಿದಿಲ್ಲ’ ಎಂದು ಆರೋಪಿಸಿದರು.

ನಾಸೀರ್‌ಖಾನ್‌ ಮತ್ತಳ್ಳಿ, ‘ಈಗ ರಮ್ಜಾನ್‌ ಉಪವಾಸದ ದಿನಗಳು, ಮನೆಯಿಂದ ಹೊರ ಬಂದರೆ ಕೆಟ್ಟ ವಾಸನೆ ಸೇವಿಸಬೇಕು, ಪ್ರಾರ್ಥನಾ ಮಂದಿರಕ್ಕೆ ತೆರಳಲು ಸಂಜೆ ಸಾಧ್ಯವಾಗದ ರೀತಿಯಲ್ಲಿ ರಸ್ತೆಯಲ್ಲಿ ಹೊಂಡಗಳು ಬಾಯ್ತೆರೆದಿವೆ’ ಎಂದು ಹೇಳಿದರು.

ಮಾರುತಿ ಪೇಟಕರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry