ಕೇಂದ್ರದಿಂದ ರೈತರ ಸಾಲ ಮನ್ನಾ ಇಲ್ಲ

4
ಸಂಸದ ಶಿವಕುಮಾರ ಉದಾಸಿ ಸ್ಪಷ್ಟನೆ

ಕೇಂದ್ರದಿಂದ ರೈತರ ಸಾಲ ಮನ್ನಾ ಇಲ್ಲ

Published:
Updated:

ನರೇಗಲ್: ಕೇಂದ್ರ ಸರ್ಕಾರದಿಂದ ರಾಜ್ಯ ರೈತರ ಸಾಲ ಮನ್ನಾ ಮಾಡಲಾಗುವುದಿಲ್ಲ. ಈಶಾನ್ಯ ರಾಜ್ಯಗಳಲ್ಲಿನ ರೈತರ ಸಾಲ ತಲಾ ₹10 ಸಾವಿರ ಇದ್ದರೆ ಕರ್ನಾಟಕದಲ್ಲಿ ಇದು ತಲಾ ₹12 ಲಕ್ಷ ಹಾಗೂ ದೆಹಲಿ ರೈತರ ಸಾಲ ತಲಾ ₹1.3 ಕೋಟಿ ಇದೆ. ಇದೆಲ್ಲವನ್ನೂ ಮನ್ನಾ ಮಾಡಲು ಮುಂದಾದರೆ ಸರ್ಕಾರಕ್ಕೆ ದೊಡ್ಡ ಹೊರೆಯಾಗಿ ದೇಶದ ಅಭಿವೃದ್ಧಿಗೆ ತೊಂದರೆಯಾಗಲಿದೆ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಸ್ಪಷ್ಟಪಡಿಸಿದರು.

ಸ್ಥಳೀಯ ಕೆಎಸ್ಎಸ್‌ ಕಾಲೇಜಿನಲ್ಲಿ ಶನಿವಾರ ನಡೆದ ಸಂಸದರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ರೈತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಹೀಗೆ ಉತ್ತರಿಸಿದರು.

ಆರಂಭದಲ್ಲಿ ಮಾತನಾಡಿದ ಹಿರಿಯ ವೈದ್ಯ ಡಾ. ಜಿ.ಕೆ.ಕಾಳೆ, ಪಟ್ಟಣದಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಹಲವಾರು ವರ್ಷಗಳಿಂದ ಹೂಳೆತ್ತದೇ ಇರುವ ಕಾರಣ ಹಿರೇಕೆರೆಯ ಗಾತ್ರ 40 ಎಕರೆಯಿಂದ 29 ಎಕರೆಗೆ ಬಂದು ನಿಂತಿದೆ. ಕೆರೆಯನ್ನು ಅಭಿವೃದ್ಧಿಪಡಿಸಿ ನೀರು ತುಂಬಿಸಲು ಮುಂದಾದಲ್ಲಿ ಮತ್ತೆ 25 ಎಕರೆ ಭೂಮಿಯನ್ನು ಉಚಿತವಾಗಿ ನೀಡುವುದಾಗಿ ಹಾಲಕೆರೆಯ ಅನ್ನದಾನ ಶ್ರೀಗಳು ಹೇಳಿದ್ದಾರೆ. ಆದ್ದರಿಂದ ಕೆರೆ ಅಭಿವೃದ್ಧಿ ಹಾಗೂ ಅಂತರ್ಜಲ ಮಟ್ಟ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಿ ಕಾರ್ಯರೂಪಕ್ಕೆ ತರಬೇಕು ಎಂದರು.

ಶಿವನಗೌಡ ಪಾಟೀಲ ಮಾತನಾಡಿ, ಪಟ್ಟಣಕ್ಕೆ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಮಂಜೂರು ಮಾಡಿಸುವಂತೆ ಕೇಳಿದಾಗ ಉತ್ತರಿಸಿದ ಸಂಸದರು, ಜಿಲ್ಲೆಗೊಂದು ಕೆವಿಕೆಗಳು ಮಾತ್ರ ಇರುತ್ತವೆ. ಹುಲಕೋಟಿಯಲ್ಲಿ ಈಗಾಗಲೇ ಒಂದು ಕೆವಿಕೆ ಇದೆ. ಈಚೆಗೆ ಕೆಲ ಜಿಲ್ಲೆಗಳಲ್ಲಿ ಎರಡು ಕೆವಿಕೆಗಳನ್ನು ನೀಡಿರುವ ಮಾಹಿತಿ ಬಂದಿದೆ. ನರೇಗಲ್ ಪಟ್ಟಣಕ್ಕೂ ಒಂದು ಕೆವಿಕೆ ಮಂಜೂರು ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ₹800 ಕೋಟಿ ಬೆಳೆ ವಿಮೆ ಸಿಕ್ಕಿದ್ದು ಅದರಲ್ಲಿ ಗದಗ ಜಿಲ್ಲೆಗೆ ₹150 ಕೋಟಿ ಬಿಡುಗಡೆಯಾಗಿದೆ. ಜಿಲ್ಲೆಯ 1.50 ಲಕ್ಷ ರೈತರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಗದಗ–ವಾಡಿ ರೈಲು ಯೋಜನೆಗಾಗಿ ಇಲ್ಲಿನ ಜನರು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಅದಕ್ಕೆ ಪರ್ಯಾಯವಾಗಿ ಹೊಸ ಯೋಜನೆ ಮಂಜೂರಾಗಿದ್ದು ಸರ್ವೆ ಕಾರ್ಯ ನಡೆದಿದೆ ಎಂದು ಸಂಸದರು ತಿಳಿಸಿದರು. ಇದೇ ರೀತಿ 371(ಜೆ), ಸಂತೆ ಮಾರುಕಟ್ಟೆ, ಉದ್ಯಾನವನ, ಆರೋಗ್ಯ, ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ, ಮಹಿಳಾ ಶೌಚಾಲಯದ ಕುರಿತು ಜನರು ಪ್ರಶ್ನೆ ಮಾಡಿ ಸಂಸದರಿಂದ ಉತ್ತರ ಪಡೆದರು.

ರೈತ ಮುಖಂಡ ಶರಣಪ್ಪ ಧರ್ಮಾಯತ ಕೇಳಿದ ಪ್ರಶ್ನೆಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದ ಜನರು ಗದ್ದಲ ಮಾಡಲಾರಂಭಿಸಿ ಗೊಂದಲದ ವಾತವರಣ ಸೃಷ್ಟಿಯಾಗಿ ಸಂವಾದಕ್ಕೆ ತೆರೆ ಎಳೆಯಲಾಯಿತು.

ಶಾಸಕರಿಗೆ ಸನ್ಮಾನ: ಪಟ್ಟಣದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶಾಸಕ ಕಳಕಪ್ಪ ಜಿ.ಬಂಡಿ ಅವರಿಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಪಟ್ಟಣದ ಎಲ್ಲಾ ವಾರ್ಡಿನ ಮುಖಂಡರು ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಚಿಕಿತ್ಸೆ ಫಲಕಾರಿಯಾಗದೆ ಕೆಲವೇ ತಿಂಗಳಲ್ಲಿ ಪತನವಾಗಲಿದೆ ಎಂದು ಲೇವಡಿ ಮಾಡಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಹಂಪಸಾಗರದ ನವಲಿ ಹಿರೇಮಠದ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯರು ವಹಿಸಿದ್ದರು. ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರವಿ ದಂಡಿನ, ಎಸ್.ವಿ.ಸಜ್ಜನ, ಉಮೇಶ ಸಂಗನಾಳಮಠ, ಶಶಿಧರ ಸಂಕನಗೌಡ್ರ, ಬಸವರಾಜ ವಂಕಲಕುಂಟಿ, ಮುತ್ತು ಕಡಗದ, ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು ಇದ್ದರು.\

ಹಠ ಹಿಡಿದ ಬಂಡಿ ಅಭಿಮಾನಿ

ಕಳಕಪ್ಪ ಬಂಡಿ ಶಾಸಕರಾಗಿ ಆಯ್ಕೆಯಾದರೆ 101 ತೆಂಗಿನ ಕಾಯಿಗಳನ್ನು ಒಡೆಸುವುದಾಗಿ ಪಟ್ಟಣದ ಕಡತೋಟದ ಹಾಗೂ ಕುಷ್ಟಗಿ ಓಣಿಯ ಕಾರ್ಯಕರ್ತರು ಹುಚ್ಚೀರೇಶ್ವರನಲ್ಲಿ ಹರಕೆಯನ್ನು ಮಾಡಿದ್ದರಂತೆ. ಶಾಸಕರು ನೇರವಾಗಿ ಸಂವಾದ ಕಾರ್ಯಕ್ರಮಕ್ಕೆ ಬಂದಾಗ, ಅಂದಪ್ಪ ಹುಲ್ಲೂರು ಅವರು ಒತ್ತಾಯದ ಮೇರೆಗೆ ಶಾಸಕರನ್ನು ಹುಚ್ಚಿರೇಶ್ವರ ದೇವಸ್ಥಾನಕ್ಕೆ ಹೋಗಿ ಕಾಯಿ ಒಡೆದು ಹರಕೆ ತೀರಿಸಿ ಸಂವಾದ ಕಾರ್ಯಕ್ರಮಕ್ಕೆ ಮರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry