ಕೂಡ್ಲಿಗಿ: ಕಾರ್ಮಿಕ ನಿರೀಕ್ಷಕರೇ ಇಲ್ಲ!

7

ಕೂಡ್ಲಿಗಿ: ಕಾರ್ಮಿಕ ನಿರೀಕ್ಷಕರೇ ಇಲ್ಲ!

Published:
Updated:

ಕೂಡ್ಲಿಗಿ: ಇಲ್ಲಿನ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಕಾರ್ಮಿಕ ನಿರೀಕ್ಷಕರು ಇಲ್ಲದಿರುವುದರಿಂದ ಕಾರ್ಮಿಕರು ಸೌಲಭ್ಯಗಳನ್ನು ಪಡೆಯಲು ಪರದಾಡುತ್ತಿದ್ದಾರೆ.

ಪಟ್ಟಣದ ಸಂತೆ ಮೈದಾನ ಬಳಿ ಸಣ್ಣದೊಂದು ಖಾಸಗಿ ವಾಣಿಜ್ಯ ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಯಲ್ಲಿ ಮಳೆ ಬಂದರೆ ನೀರು ನಿಲ್ಲುತ್ತದೆ. ಕಾರ್ಮಿಕರಿಗೆ ಸಂಬಂಧಿಸಿದ ಕಡತಗಳನ್ನು ಜೋಡಿಸಿ ಇಡಲು ಕಪಾಟುಗಳು ಇಲ್ಲ.

ಇಲ್ಲಿ ಇದ್ದ ವಾದಿರಾಜ ಎಂಬ ಅಧಿಕಾರಿ ವರ್ಗಾವಣೆಯಾಗಿ ಎರಡು ವರ್ಷವಾದರೂ ಮತ್ತೊಬ್ಬರನ್ನು ನಿಯೋಜಿಸಿಲ್ಲ. ಸಂಡೂರು ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರೇ ಇಲ್ಲಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಾರದಲ್ಲಿ ಒಂದೆರಡು ಬಾರಿಯಷ್ಟೇ ಭೇಟಿ ನೀಡುತ್ತಾರೆ.

ಅವರ ಅನುಪಸ್ಥಿತಿಯಲ್ಲಿ ಹೊರಗುತ್ತಿಗೆಯ ಒಬ್ಬ ಡಾಟಾ ಎಂಟ್ರಿ ಸಿಬ್ಬಂದಿಯೇ ಕಚೇರಿಯ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಕಾರ್ಮಿಕರು ನೀಡಿದ ಅರ್ಜಿಗಳನ್ನು ಪರಿಶೀಲಿಸಿ, ಅವುಗಳನ್ನು ಅನುಮೋದಿಸಿ, ಮೇಲಾಧಿಕಾರಿಗಳಿಗೆ ಕಳಿಸಬೇಕಾದ ಅಧಿಕಾರಿ ಇಲ್ಲದಿರುವುದರಿಂದ ಅರ್ಜಿಗಳ ವಿಲೇವಾರಿ ನಡೆಯುತ್ತಿಲ್ಲ.

30 ಸಾವಿರ ಕಾರ್ಮಿಕರು:

‘ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸುಮಾರು 30 ಸಾವಿರ ಕಾರ್ಮಿಕರಿದ್ದಾರೆ. ಆದರೆ ಇಲಾಖೆಯಲ್ಲಿ ಕೇವಲ 4616 ಕಟ್ಟಡ ಕಾರ್ಮಿಕರು ಮಾತ್ರ ನೋಂದಣಿಯಾಗಿದ್ದಾರೆ. ಅವರೊಂದಿಗೆ ಹಮಾಲರು, ಆಟೊ, ಟ್ಯಾಕ್ಸಿ ಚಾಲಕರು ಸೇರಿ ಸುಮಾರು 200ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಆದರೆ ಇಲಾಖೆ ಅವರನ್ನು ಕಾರ್ಮಿಕರೆಂದು ಪರಿಗಣಿಸಿಲ್ಲ. ಅಲ್ಲದೆ ಅನೇಕ ಜನ ಕಟ್ಟಡ ಕಾರ್ಮಿಕರಲ್ಲದವರು ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದು ತಾಲ್ಲೂಕು ಬಡಿಗೇರ ಸಂಘದ ಅಧ್ಯಕ್ಷ ಗುನ್ನಳ್ಳಿ ರಾಘವೇಂದ್ರ ದೂರಿದರು.

‘ಸಂಡೂರು ತಾಲ್ಲೂಕಿಗಿಂತ ಹೆಚ್ಚು ಕಟ್ಟಡ ಕಾರ್ಮಿಕರು ಕೂಡ್ಲಿಗಿ ತಾಲ್ಲೂಕಿನಲ್ಲಿ ನೋಂದಣಿಯಾಗಿದ್ದಾರೆ. ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಮಾಲರನ್ನೂ ಕಾರ್ಮಿಕರೆಂದು ನೋಂದಣಿ ಮಾಡಿಕೊಳ್ಳಲು ಇಲಾಖೆ ತೀರ್ಮಾನಿಸಿದೆ. ಶೀಘ್ರದಲ್ಲಿ ಆರ್ಜಿ ವಿತರಿಸಲಾಗುವುದು’ ಎಂದು ಪ್ರಭಾರಿ ಕಾರ್ಮಿಕ ನಿರೀಕ್ಷಕ ವಿ. ದಿವಾಕರ್ ಪ್ರತಿಕ್ರಿಯಿಸಿದರು.

ಜಿಲ್ಲೆಯ ಇಬ್ಬರು ಶಾಸಕರು ಕಾಂಗ್ರೆಸ್ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದರೂ ಇಲಾಖೆಯ ಕಚೇರಿಗಳಲ್ಲಿ ಅಧಿಕಾರಿಗಳೇ ಇಲ್ಲದಿರುವ ಪರಿಸ್ಥಿತಿ ವಿಷಾದಕರ

ಗುನ್ನಳ್ಳಿ ರಾಘವೇಂದ್ರ, ತಾಲ್ಲೂಕು ಬಡಿಗರ ಸಂಘ

ಎ.ಎಂ. ಸೋಮಶೇಖರಯ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry