7

‘ಇದೆನ್ನ ತವರೂರು’

Published:
Updated:
‘ಇದೆನ್ನ ತವರೂರು’

* ತಾಯಿ ಮೃಣಾಲಿನಿ ಸಾರಾಭಾಯ್‌ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದೆ. ನಿಮ್ಮ ಅನಿಸಿಕೆ?

ಇಲ್ಲೇ ನನ್ನ ಅಪ್ಪ– ಅಮ್ಮ ಭೇಟಿ ಮಾಡಿ, ಪ್ರೀತಿಸಿ ಮದುವೆಯಾಗಿದ್ದು. ಒಂದು ವೇಳೆ ಇಲ್ಲಿ ಅವರು ಭೇಟಿಯಾಗದೇ ಇರುತ್ತಿದ್ದರೆ ಮಲ್ಲಿಕಾ ಹುಟ್ಟುತ್ತಿರಲಿಲ್ಲವೇನೋ . ಅಪ್ಪ– ಅಮ್ಮನ ಬಳಿ ಬೆಂಗಳೂರಿನ ದಿನಗಳ ನೆನಪುಗಳ ಮೂಟೆ ಇತ್ತು. ಅನೇಕ ಕತೆಗಳನ್ನು ನಮ್ಮಲ್ಲಿ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಬೆಂಗಳೂರು ನನ್ನ ತವರೂರು. ಈಗಲೂ ನಾನು ವೈಟ್‌ಫೀಲ್ಡ್‌ನಲ್ಲಿನ ಸೌಖ್ಯ ಹೆಲ್ತ್‌ ಸೆಂಟರ್‌ಗೆ ಪ್ರತಿವರ್ಷ 15 ದಿನ ಬಂದು ಹೋಗುತ್ತೇನೆ. ಇಂತಹ ನೆನಪಿನ ಊರಿನಲ್ಲಿ ಅಮ್ಮನ ನೂರನೇ ಜನ್ಮದಿನದ ಕಾರ್ಯಕ್ರಮ ನನಗೆ ತುಂಬಾ ಖುಷಿ. ಅಮ್ಮನ ಜನ್ಮದಿನ ಮೇ 11ರಂದು ಅಹಮದಾಬಾದ್‌ನಲ್ಲಿ ನೃತ್ಯ ಕಾರ್ಯಕ್ರಮ ಏರ್ಪಾಟಾಗಿತ್ತು.

* ನೃತ್ಯಪ್ರಯೋಗ ಹಾಗೂ ಬದುಕಿನಲ್ಲಿ ಅಮ್ಮನ ಪ್ರಭಾವ?

ನಾನು ದರ್ಪಣ ಇನ್‌ಸ್ಟಿಟ್ಯೂಟ್‌ಗೆ ಹೋದಾಗ ಅಮ್ಮ ಅಲ್ಲೇ ಇದ್ದಾಳೆ ಎಂಬ ಭಾವನೆ ಬರುತ್ತದೆ. ನನಗಷ್ಟೇ ಅಲ್ಲ, ಅಲ್ಲಿ ಇರುವ ಪ್ರತಿಯೊಬ್ಬರಿಗೂ ಹಾಗೇ ಅನಿಸುತ್ತದೆಯಂತೆ. ಅಲ್ಲಿನ ಪ್ರತಿ ವಸ್ತುವಿನಲ್ಲೂ ಅಮ್ಮನ ಆತ್ಮ, ಪ್ರೀತಿ ಇದೆ. ಅಲ್ಲಿ ಹೋದರೆ ಅಮ್ಮನ ಮಡಿಲಲ್ಲಿ, ಅಮ್ಮನ ಕೈಯಲ್ಲಿ ನಾನಿದ್ದೇನೆ ಎಂಬಂತಾಗುತ್ತದೆ. ಆದರೆ ನನ್ನ ನೃತ್ಯಗಳಲ್ಲಿ ಅಮ್ಮನ ಪ್ರಭಾವ ಇಲ್ಲ. ಆದರೆ ನನ್ನ ಶಕ್ತಿ, ಸೌಂದರ್ಯ ಎಲ್ಲವೂ ಅಮ್ಮನೇ. ನನ್ನ ಅಭಿರುಚಿ ಅಮ್ಮನಿಂದ ಬಂದಿರುವುದು. ನಾನು ಸಾಮಾಜಿಕ ವಿಷಯಗಳನ್ನೂ ಹೇಗೆ ನೃತ್ಯ ಪ್ರಾಕಾರಕ್ಕೆ ಒಗ್ಗಿಸಿಕೊಳ್ಳಬಹುದು ಎಂಬುದನ್ನು ಕಲಿತೆ. ಆಕೆಯ ಪ್ರಭಾವಕ್ಕೊಳಗಾಗುವುದು ಆಕೆಗೆ ಒಂಚೂರು ಇಷ್ಟವಿರಲಿಲ್ಲ. ಹೊಸ ಪ್ರಯೋಗ ಮಾಡುವಂತೆ ಹುರಿದುಂಬಿಸುತ್ತಿದ್ದಳು. ‘ನಾನು ನಿನಗೆ ರಂಗಭೂಮಿ, ಸಂಗೀತ, ನೃತ್ಯ ಹೇಳಿಕೊಟ್ಟಿದ್ದೇನೆ. ಎಲ್ಲವನ್ನೂ ಪ್ರಯೋಗಿಸು’ ಎನ್ನುತ್ತಿದ್ದಳು.

* ನೃತ್ಯಗಳಲ್ಲಿ ಮಹಿಳಾ ಸಬಲೀಕರಣ ಹೇಗೆ ಸಾಧ್ಯವಾಯಿತು?

ಮದುವೆಯಾದ ಬಳಿಕ ಅಮ್ಮ ಗುಜರಾತ್‌ಗೆ ಹೋದಳು. ಆಗ ಆಕೆಗೆ ಗುಜರಾತಿ ಭಾಷೆ ಬರುತ್ತಿರಲಿಲ್ಲ. ಆಗ ಗುಜರಾತಿ ಕಲಿಯಲು ಆರಂಭಿಸಿದಳು. ಅವರ ಟೀಚರ್‌ ದಿನಪತ್ರಿಕೆ ಓದಲು ಕೊಡುತ್ತಿದ್ದರು. ಆಗ ಸೌರಾಷ್ಟ್ರದಲ್ಲಿ ಹೆಣ್ಣುಮ್ಕಕಳು ಮದುವೆಯಾದ ಕೆಲ ದಿನಗಳಲ್ಲೇ ಬಾವಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ದಿನಾ ಇದೇ ಸುದ್ದಿ. ಅಮ್ಮನಿಗೆ ಇದೇನು ಹೀಗೆ? ಎಂದು ಅದರ ಹಿಂದೆ ಬಿದ್ದಾಗ ವರದಕ್ಷಿಣೆ ಕಿರುಕುಳ ತಾಳಲಾರದೇ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಯಿತು. ಇದೆಲ್ಲಾ 1963ರ ಕತೆ. ಆಗ ಅಮ್ಮ ವರದಕ್ಷಿಣೆ ಭೂತದ ಬಗ್ಗೆ ನೃತ್ಯ ಸಂಯೋಜಿಸಿದರು. ಈ ಭರತನಾಟ್ಯದಲ್ಲಿ ಭಾರಿ ಕ್ರೌರ್ಯವನ್ನು ತೋರಿಸಿದ್ದರು. ಅಲ್ಲಿಂದ ಹೆಣ್ಣುಮಕ್ಕಳ ಸಮಸ್ಯೆ, ಸಾಮಾಜಿಕ ವಿಷಯಗಳ ಬಗ್ಗೆ ನೃತ್ಯದ ಮೂಲಕ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದರು. ನಾನು ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ನಾನು ಪುರುಷರು ಹೇಗೆ ಮಹಿಳಾ ಸಬಲೀಕರಣಕ್ಕೆ ಕಾರಣವಾಗಬೇಕು ಎಂಬುದನ್ನು ನನ್ನ ನೃತ್ಯದಲ್ಲಿ ಹೇಳಿದ್ದೇನೆ. ನನ್ನ ಬರಹಗಳಲ್ಲಿ, ನೃತ್ಯಗಳಲ್ಲಿ, ಭಾಷಣಗಳಲ್ಲಿ ಇಂತಹ ಸಾಮಾಜಿಕ ಸಂಗತಿಗಳ ಬಗ್ಗೆ ಧ್ವನಿ ಎತ್ತುತ್ತೇನೆ.

* ನಿಮ್ಮ ಬಾಲ್ಯದ ದಿನಗಳು ಹೇಗಿದ್ದವು?

ಮನೆಯಲ್ಲಿ ಅಪ್ಪ ಖ್ಯಾತ ಬಾಹ್ಯಾಕಾಶ ವಿಜ್ಞಾನಿ. ಅಮ್ಮ ಖ್ಯಾತ ನೃತ್ಯಗಾರ್ತಿ. ಆದರೆ ನನಗೆ ಹಾಗೂ ಸಹೋದರ ಕಾರ್ತಿಕೇಯನಿಗೆ ಯಾವುದೇ ಒತ್ತಡವಿರಲಿಲ್ಲ. ನಮ್ಮಿಷ್ಟದ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪೋಷಕರು ಬೆಂಬಲಿಸುತ್ತಿದ್ದರು. ನಾನು ಸಣ್ಣ ವಯಸ್ಸಿನಿಂದ ನೃತ್ಯ ಕಲಿತಿದ್ದೆ. ಆದರೆ ನನಗೆ ಕಲಾವಿದೆಯಾಗಬೇಕು, ನೃತ್ಯಗಾರ್ತಿಯಾಗಬೇಕು ಎಂದು ಯಾವುದೇ ಆಸೆಯಿರಲಿಲ್ಲ. ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದಿತ್ತು. ಆದರೆ ನಂತರ ನನಗೆ ಸಿನಿಮಾ, ಕಲೆಯಲ್ಲಿ, ಕಾರ್ತಿಕೇಯನಿಗೆ ಪರಿಸರ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದುಕೊಂಡೆವು. ಈಗದು ಸ್ವಲ್ಪ ಮಟ್ಟಿಗೆ ನಿಜವಾಗಿದೆ.

* ನಿಮ್ಮ ಪಾಲಿಗೆ ನೃತ್ಯ ಅಂದ್ರೆ ಏನು?

ನೃತ್ಯ ನನ್ನ ಬ್ಯಾಟರಿ ಚಾರ್ಜರ್‌. ನನ್ನ ಉಸಿರು. ಉಸಿರಾಟ ಎಂಬ ಕ್ರಿಯೆ ನಮ್ಮ ದೇಹದಲ್ಲಿ ನಡೆಯುತ್ತಿದೆ ಎಂಬುದೇ ನಮ್ಮ ಅರಿವಿನಲ್ಲಿರುವುದಿಲ್ಲ. ಯಾರಾದರೂ ನಮ್ಮ ಮೂಗನ್ನು ಗಟ್ಟಿ ಮುಚ್ಚಿದಾಗ ಅಥವಾ ನೀರಿನಲ್ಲಿ ಮುಳುಗಿದಾಗ ಅದರ ಅನುಭವ ನಮ್ಮದಾಗುತ್ತದೆ. ನೃತ್ಯ ನನಗೇ ಗಾಳಿ ಇದ್ದ ಹಾಗೇ. ನೃತ್ಯ ನನ್ನ ಮೂಡ್‌, ನನ್ನ ಸ್ವಭಾವವನ್ನು ಬದಲಾಯಿಸುವಂತಹ ಗುಣ ಹೊಂದಿದೆ. ನಾನು ಒತ್ತಡಕ್ಕೆ ಒಳಗಾದಾಗ, ಕೋಪ ಮಾಡಿಕೊಂಡಾಗ, ಸಂತೋಷಪಟ್ಟಾಗ ಎಲ್ಲ ಸಂದರ್ಭದಲ್ಲಿ ನನಗೆ ನೃತ್ಯವೇ ಜೊತೆಗಾರ್ತಿ. ನೃತ್ಯದಲ್ಲಿ ತೊಡಗಿಸಿಕೊಂಡಾಗ ನನ್ನ ಮನಸು ಎಲ್ಲಾ ಮರೆತು ಆಹ್ಲಾದಗೊಳ್ಳುತ್ತದೆ.

* ಒಬ್ಬ ಕಲಾವಿದನಿಗೆ ಹೊಸ ಪ್ರಯೋಗ ಎಷ್ಟು ಮುಖ್ಯ?

ಒಬ್ಬ ಸೃಜನಶೀಲ ಕಲಾವಿದನಿಗೆ ಚೌಕ್ಕಟ್ಟು ಇರುವುದಿಲ್ಲ. ಕಂಫರ್ಟ್‌ ಝೋನ್‌ನಲ್ಲಿ ಉಳಿಯಲು ಅವನಿಗೆ ಅಸಾಧ್ಯ. ಯಾವಾಗಲೂ ಸವಾಲುಗಳನ್ನು ಒಪ್ಪಿಕೊಳ್ಳುವಂತಿರಬೇಕು. ಬೇರೆಯವರಿಗೆ ಆತ ಸವಾಲು ಕೊಡುತ್ತಿರಬೇಕು. ತಾನೂ ಪ್ರಯೋಗದ ಮೂಲಕ ಜವಾಬು ಕೊಡಬೇಕು. ಕಲಾವಿದನೊಬ್ಬ ಸೋಲಿಗೆ ಭಯ ಪಡುತ್ತಾನೆ ಎಂದಾದಲ್ಲಿ, ಅವನಿಂದ ಹೊಸ ಪ್ರಯೋಗ ಸಾಧ್ಯವೇ ಇಲ್ಲ. ಆದರೆ ಪ್ರಯೋಗಕ್ಕಾಗಿಯೇ ಪ್ರಯೋಗ ಮಾಡಬೇಕು ಎಂಬುದನ್ನು ನಾನು ಒಪ್ಪಲ್ಲ. ಕಲೆ ಎಂಬುದು ಸಂವಹನದ ಭಾಷೆ. ನಮ್ಮ ಮನದ ಆಲೋಚನೆಗಳನ್ನು ಕಲೆಯ ಮೂಲಕ ಸಮರ್ಥವಾಗಿ ಪ್ರೇಕ್ಷಕನಿಗೆ ತಲುಪಿಸಬೇಕು.

* ಆಧುನಿಕ ನೃತ್ಯ ಪ್ರಕಾರಗಳಿಂದ ಶಾಸ್ತ್ರೀಯ ನೃತ್ಯ ಪ್ರಕಾರಗಳು ಕಡೆಗಣನೆ ಒಳಗಾಗುತ್ತವೆ ಎನ್ನುವ ಅಭಿಪ್ರಾಯವಿದೆಯಲ್ಲ? ‌

ನನಗೆ ವೈಯಕ್ತಿಕವಾಗಿ ಆಧುನಿಕ ನೃತ್ಯಗಳು ಇಷ್ಟ. ಸಿನಿಮಾಗಳಲ್ಲಿನ ನೃತ್ಯ ಎಲ್ಲರಿಗೂ ಇಷ್ಟವಾಗುತ್ತವೆ. ಆದರೆ ಈ ನೃತ್ಯಗಳಿಂದ ಶಾಸ್ತ್ರೀಯ ನೃತ್ಯಗಳಿಗೆ ಯಾವುದೇ ತೊಂದರೆಯಿಲ್ಲ. ನಮ್ಮ ನೃತ್ಯ ಸಂಪ್ರದಾಯದ ಬೇರು ತುಂಬಾ ಗಟ್ಟಿಯಾಗಿದೆ. ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಬಾಲಿವುಡ್‌ ನೃತ್ಯವನ್ನೇ ಕೆಲವರು ಅನುಕರಣೆ ಮಾಡುತ್ತಿದ್ದರೆ, ವಿಶ್ವದ ನಾನಾ ಭಾಗ, ಭಾರತದಲ್ಲಿ ಲಕ್ಷಾಂತರ ಜನರು ಭರತನಾಟ್ಯ, ಕಥಕ್‌, ಮೋಹಿನಿಯಾಟ್ಟಂ ಕಲಿಯುವವರಿದ್ದಾರೆ. ಶಾಸ್ತ್ರೀಯ ನೃತ್ಯದ ಶೈಲಿ, ಆಕರ್ಷಣೆಯೇ ಬೇರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry