4

ಹೆಚ್ಚು ನಿಗಮ–ಮಂಡಳಿಗೆ ಜೆಡಿಎಸ್‌ ಒತ್ತಾಯ

Published:
Updated:
ಹೆಚ್ಚು ನಿಗಮ–ಮಂಡಳಿಗೆ ಜೆಡಿಎಸ್‌ ಒತ್ತಾಯ

ಬೆಂಗಳೂರು: ನಿಗಮ– ಮಂಡಳಿಗಳಲ್ಲಿ ಸ್ಥಾನ ಪಡೆಯಲು ‘ದೋಸ್ತಿ’ ಪಕ್ಷ‌ಗಳ ಶಾಸಕರು ಭಾರೀ ಪೈಪೋಟಿ ನಡೆಸಿರುವ ಬೆನ್ನಲ್ಲೇ, ಇನ್ನೂ ಹೆಚ್ಚು ನಿಗಮ– ಮಂಡಳಿಗಳನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡುವಂತೆ ಜೆಡಿಎಸ್‌ ವರಿಷ್ಠರು ಕಾಂಗ್ರೆಸ್‌ಗೆ ಮನವಿ ಮಾಡಿದ್ದಾರೆ.

ಈಗಾಗಲೇ ಆಗಿರುವ ಒಪ್ಪಂದದಂತೆ ಕಾಂಗ್ರೆಸ್‌ಗೆ ಮೂರನೇ ಎರಡು ಭಾಗ, ಜೆಡಿಎಸ್‌ಗೆ ಮೂರನೇ ಒಂದು ಭಾಗ ನಿಗದಿ ಆಗಿದೆ. ಹೆಚ್ಚು ಸಂಖ್ಯೆಯ ನಿಗಮ ಮಂಡಳಿ ನೀಡಬೇಕು ಎಂಬ ಹೊಸ ಪ್ರಸ್ತಾವನೆಗೆ ಕಾಂಗ್ರೆಸ್‌ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಇನ್ನು ಹತ್ತು ದಿನಗಳಲ್ಲಿ ನಿಗಮ– ಮಂಡಳಿಗಳಿಗೆ ನೇಮಕ ಮಾಡುವ ಸಾಧ್ಯತೆ ಇದೆ. ಬಜೆಟ್‌ ಅಧಿವೇಶನಕ್ಕೆ ಮೊದಲೇ ಉಳಿದಿರುವ ಸಚಿವ ಸ್ಥಾನಗಳನ್ನೂ ಭರ್ತಿ ಮಾಡಲಾಗುವುದು. ಇಲ್ಲವಾದರೆ ಶಾಸಕರ ಒತ್ತಡ ತಡೆಯುವುದು ಕಷ್ಟವಾಗಿ ಸರ್ಕಾರದ ಅಸ್ತಿತ್ವಕ್ಕೆ ಸಂಚಕಾರ ಬರಬಹುದು ಎಂದು ಜೆಡಿಎಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆದವರು, ಸಚಿವ ಸ್ಥಾನ ವಂಚಿತರು ಮತ್ತು ವಿಧಾನಪರಿಷತ್‌ ಸದಸ್ಯರು ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಕಾಂಗ್ರೆಸ್‌ನಲ್ಲಿ  ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಬಿ.ಕೆ. ಹರಿಪ್ರಸಾದ್‌ ಅವರ ಮೇಲೆ ಆಕಾಂಕ್ಷಿಗಳು ಒತ್ತಡ ಹೇರುತ್ತಿದ್ದಾರೆ. ಎಚ್‌.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಜೆಡಿಎಸ್‌ನಿಂದ ಯಾರಿಗೆಲ್ಲ ಅವಕಾಶ ನೀಡಬೇಕು ಎಂಬ ಪಟ್ಟಿಯನ್ನು ಈಗಾಗಲೇ ತಯಾರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಪುಟದಲ್ಲಿ ಸ್ಥಾನ ಪಡೆಯದ ಕಾಂಗ್ರೆಸ್‌ನ ಹಿರಿಯ ಶಾಸಕರೂ ಸೇರಿ 25ಕ್ಕೂ ಹೆಚ್ಚು ಶಾಸಕರು ಪ್ರಮುಖ ನಿಗಮ– ಮಂಡಳಿಗಳಿಗಾಗಿ ಪಟ್ಟು ಹಿಡಿದಿದ್ದಾರೆ. ಮೊದಲ ಬಾರಿ ಆಯ್ಕೆ ಆದವರಲ್ಲದೆ, ಎರಡರಿಂದ ಮೂರು ಬಾರಿ ಆಯ್ಕೆ ಆದ ಶಾಸಕರು ಮತ್ತು ಕಾರ್ಯಕರ್ತರಿಗೂ ಅವಕಾಶ ನೀಡಬೇಕಾಗಿದೆ. ಈ ನೇಮಕದ ಬಳಿಕವೂ ಇನ್ನೊಂದು ಸುತ್ತಿನ ಭಿನ್ನಮತ ಭುಗಿಲೇಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಪಟ್ಟಿ ತಯಾರಿಸುವ ಕಸರತ್ತು ಆರಂಭಿಸಿದ್ದಾರೆ. ಈ ಕುರಿತು ಭಾನುವಾರ ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಜಿ.ಪರಮೇಶ್ವರ, ‘ನಿಗಮ–ಮಂಡಳಿ ನೇಮಕಕ್ಕೆ ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಯಾರಿಗೆಲ್ಲ ಸ್ಥಾನ ನೀಡಲಾಗುತ್ತದೆ ಎಂಬ ಮಾಹಿತಿ ಬಹಿರಂಗಪಡಿಸುವುದಿಲ್ಲ. ಆದಷ್ಟು ಶೀಘ್ರ ನೇಮಕ ಮಾಡಲಾಗುವುದು’ ಎಂದು ಹೇಳಿದರು.

ಜೆಡಿಎಸ್‌ ವಕ್ತಾರ ಹಾಗೂ ವಿಧಾನಪರಿಷತ್‌ ಸದಸ್ಯ ಟಿ.ಎ. ಶರವಣ ಮಾತನಾಡಿ, ‘ಬಜೆಟ್‌ ಮಂಡನೆಗೆ ಮೊದಲೇ ನಿಗಮ–ಮಂಡಳಿಗಳಿಗೆ ನೇಮಕ ಆಗಲಿದೆ. ನನಗೂ ಒಂದು ಅವಕಾಶ ಕೊಡಿ ಎಂದು ದೇವೇಗೌಡರಲ್ಲಿ ಮನವಿ ಮಾಡಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry