‘ಹೊಸತಾಗಿ ಬಜೆಟ್ ಮಂಡಿಸುವುದು ವಾಡಿಕೆ’

7
ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಕಾಂಗ್ರೆಸ್‍ ಮುಖಂಡರಲ್ಲೇ ಅಪಸ್ವರ

‘ಹೊಸತಾಗಿ ಬಜೆಟ್ ಮಂಡಿಸುವುದು ವಾಡಿಕೆ’

Published:
Updated:
‘ಹೊಸತಾಗಿ ಬಜೆಟ್ ಮಂಡಿಸುವುದು ವಾಡಿಕೆ’

ಬೆಂಗಳೂರು: ‘ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೊಸತಾಗಿ ಬಜೆಟ್ ಮಂಡಿಸುವ ಅಗತ್ಯವಿಲ್ಲ. ಪೂರಕ ಬಜೆಟ್ ಮಂಡಿಸಲಿ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಕಾಂಗ್ರೆಸ್‍ನಲ್ಲೇ ಅಪಸ್ವರ ಎದ್ದಿದೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಶಮನಗೊಂಡು ಕುಮಾರಸ್ವಾಮಿ ಸರ್ಕಾರ ಟೇಕಾಫ್ ಆಗಿದೆ ಎನ್ನುವಷ್ಟರಲ್ಲೆ ಸಿದ್ದರಾಮಯ್ಯ ನೀಡಿರುವ ಈ ಹೇಳಿಕೆ ಕಾಂಗ್ರೆಸ್‌ ನಾಯಕರಿಗೆ ಮುಜುಗರ ಉಂಟು ಮಾಡಿದೆ. ಪಕ್ಷದ ಕೆಲವು ಹಿರಿಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

‘ಹೊಸ ಸರ್ಕಾರ ಬಂದಾಗ ಹೊಸತಾಗಿ ಬಜೆಟ್ ಮಂಡಿಸುವುದು ವಾಡಿಕೆ. ಪ್ರತಿಯೊಂದು ಸರ್ಕಾರಕ್ಕೂ ಅದರದ್ದೇ ಆದ ಯೋಜನೆಗಳಿರುತ್ತವೆ. ಅದನ್ನು ಬಜೆಟ್‌ನಲ್ಲಿ ಘೋಷಿಸುವುದು ಸ್ವಾಭಾವಿಕ’ ಎಂದು ಹೇಳಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ‘ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೊ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಭಾನುವಾರ ಮಾತನಾಡಿದ ಪರಮೇಶ್ವರ, ‘ಸಮ್ಮಿಶ್ರ ಸರ್ಕಾರದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದ (ಸಿಎಂಪಿ) ಕಾರ್ಯಸೂಚಿ ರೂಪಿಸಲು ಸಮಿತಿ ರಚಿಸಲಾಗಿದೆ. ಈ ಸಮಿತಿ ಹತ್ತು ದಿನಗಳ ಒಳಗೆ ವರದಿ ನೀಡಲಿದೆ. ಸಿಎಂಪಿ ರೂಪಿಸದೆ ಬಜೆಟ್ ಮಂಡನೆ ಅಸಾಧ್ಯ. ಸಮನ್ವಯ ಸಮಿತಿಯಲ್ಲಿ ಈ ಕುರಿತು ಚರ್ಚೆಯಾಗಲಿದೆ’ ಎಂದರು.

‘ಮೈತ್ರಿ ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕೇ ಅಥವಾ ಪೂರಕ ಬಜೆಟ್‍ನಲ್ಲೇ ಹೊಸ ಸರ್ಕಾರದ ಕಾರ್ಯಕ್ರಮಗಳನ್ನು ಸೇರಿಸಬೇಕೇ ಮತ್ತಿತರ ಅಂಶಗಳು ಸಿಎಂಪಿ ರೂಪುಗೊಂಡ ಬಳಿಕ ನಿರ್ಧಾರವಾಗಲಿದೆ’ ಎಂದೂ ಹೇಳಿದರು.

‘ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದನ್ನು ಎಲ್ಲರೂ ನಿಲ್ಲಿಸಬೇಕು. ಮುಖ್ಯಮಂತ್ರಿ, ಸಿದ್ದರಾಮಯ್ಯ ಅಥವಾ ಉಪ ಮುಖ್ಯಮಂತ್ರಿಯಾಗಿರುವ ನಾನು ಮಾತ್ರ ಮೈತ್ರಿ ಸರ್ಕಾರದ ವಿಷಯವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಬೇರೆಯವರೆಲ್ಲ ಮಾತನಾಡುವುದರಿಂದ ಗೊಂದಲಗಳು ಸೃಷ್ಟಿಯಾಗುತ್ತದೆ’ ಎಂದೂ ಹೇಳಿದರು.

ಮುಖ್ಯಮಂತ್ರಿಗೆ ಬೆಂಬಲ ನೀಡಬೇಕು: ‘ಪೂರಕ ಬಜೆಟ್ ಬಗ್ಗೆ ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ. ಆದರೆ, ಮುಖ್ಯಮಂತ್ರಿಗೆ ಬೆಂಬಲ ನೀಡಬೇಕು’ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಸಮ್ಮಿಶ್ರ ಸರ್ಕಾರ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟು ಕಾರ್ಯಕ್ರಮಗಳನ್ನು

ರೂಪಿಸಬೇಕಿದೆ. ಬಜೆಟ್‌ನಲ್ಲಿ ಘೋಷಿಸಿದ ಬಳಿಕ ಅದನ್ನು ಈಡೇರಿಸದಿದ್ದರೆ ನಗೆಪಾಟಲಿಗೀಡಾಗಬೇಕಾಗುತ್ತದೆ’ ಎಂದೂ ಅವರು ಹೇಳಿದರು.

‘ಸಮ್ಮಿಶ್ರ ಸರ್ಕಾರದ ಬಗ್ಗೆ ಯಾರೂ ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದು. ಸಮಸ್ಯೆಗಳನ್ನು ಪಕ್ಷದ ಚೌಕಟ್ಟಿನೊಳಗೆ ಪರಿಹರಿಸಿಕೊಳ್ಳಬೇಕು’

ಎಂದೂ ಜೆಡಿಎಸ್– ಕಾಂಗ್ರೆಸ್ ನಾಯಕರಿಗೆ ಶಿವಕುಮಾರ್‌ ಸಲಹೆ ನೀಡಿದರು.

ಸಿಎಂಪಿ ಸಭೆ 20ರಂದು: ಮೈತ್ರಿ ಸರ್ಕಾರದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದ (ಸಿಎಂಪಿ) ಕಾರ್ಯಸೂಚಿ ಸಮಿತಿ ಸಭೆ ಬುಧವಾರ (ಜೂನ್‌ 20) ನಡೆಯಲಿದೆ.

ಈ ಸಭೆಗೆ ಪೂರ್ವಭಾವಿಯಾಗಿ ಸಮಿತಿಯಲ್ಲಿರುವ ಕಾಂಗ್ರೆಸ್‌ ಸದಸ್ಯರ ಸಭೆ ಸಂಸದ ವೀರಪ್ಪ ಮೊಯಿಲಿ ನಿವಾಸದಲ್ಲಿ ಭಾನುವಾರ ನಡೆಯಿತು. ಸಮಿತಿ ಸದಸ್ಯರಾದ ಆರ್.ವಿ. ದೇಶಪಾಂಡೆ ಮತ್ತು ಡಿ.ಕೆ. ಶಿವಕುಮಾರ್ ಸಭೆಯಲ್ಲಿದ್ದರು. ಪಕ್ಷದ ಯಾವೆಲ್ಲಾ ಕಾರ್ಯಕ್ರಮಗಳನ್ನು ಕಾರ್ಯಸೂಚಿಯಲ್ಲಿ ಸೇರಿಸಬೇಕೆಂಬ ಕುರಿತು ಈ ನಾಯಕರು ಚರ್ಚೆ ನಡೆಸಿದರು.

ಬಜೆಟ್‌ ಪೂರ್ವಭಾವಿ ಸಭೆ 21ರಿಂದ

ಹೊಸ ಬಜೆಟ್‌ ಮಂಡಿಸುವ ಬಗ್ಗೆ ದೋಸ್ತಿ ಪಕ್ಷದ ನಾಯಕರು ಅಪಸ್ವರ ಎತ್ತಿರುವ ಬೆನ್ನಲ್ಲೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಇದೇ 21 ರಿಂದ 30ರವರೆಗೆ ವಿವಿಧ ಇಲಾಖೆಗಳ ಬಜೆಟ್‌ ಪೂರ್ವಭಾವಿ ಸಭೆ ಕರೆದಿದ್ದಾರೆ.

ಜುಲೈ ಮೊದಲ ವಾರದಲ್ಲಿ ಬಜೆಟ್‌ ಮಂಡಿಸುವುದಾಗಿ ಹೇಳಿರುವ ಕುಮಾರಸ್ವಾಮಿ, ಹೊಸತಾಗಿ ಬಜೆಟ್‌ ಮಂಡಿಸುವ ಸಂಬಂಧ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸದೇ ಬಜೆಟ್‌ ಪೂರ್ವಭಾವಿ ಸಭೆಗೆ ದಿನಾಂಕ ನಿಗದಿ ಮಾಡಿದ್ದಾರೆ.

ಈ ಸಂಬಂಧ ಟಿಪ್ಪಣಿಯೊಂದನ್ನು ಎಲ್ಲ ಸಚಿವರಿಗೂ ಕಳುಹಿಸಲಾಗಿದೆ. ವಿವಿಧ ಇಲಾಖೆಗಳ ಸಭೆಯ ವೇಳಾಪಟ್ಟಿ ಸಿದ್ದವಾಗಿದೆ. ಸಚಿವರು ಪ್ರವಾಸ ಕಾರ್ಯಕ್ರಮ ರೂಪಿಸುವಾಗ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ವೇಳಾಪಟ್ಟಿ ಗಮನಿಸಬೇಕು. ಅನಿವಾರ್ಯ ಸಂದರ್ಭ ಹೊರತುಪಡಿಸಿ, ಸಭೆಗೆ ಹಾಜರಾಗಬೇಕು ಎಂದು ಕುಮಾರಸ್ವಾಮಿ ಸೂಚಿಸಿದ್ದಾರೆ.

ಮುಖ್ಯಾಂಶಗಳು

* ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು– ಪರಮೇಶ್ವರ ತಾಕೀತು

* ಯಾರೂ ಬಹಿರಂಗವಾಗಿ ಹೇಳಿಕೆ ನೀಡಬಾರದು– ಶಿವಕುಮಾರ್‌

* ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry