ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕು ನೀಡುವ ಕೃತಕ ಎಲೆ!

ಐಐಎಸ್‌ಸಿ ವಿಜ್ಞಾನಿಗಳಿಂದ ಹೊಸ ಶೋಧನೆ
Last Updated 17 ಜೂನ್ 2018, 17:37 IST
ಅಕ್ಷರ ಗಾತ್ರ

ಬೆಂಗಳೂರು: ಹವೆಯಲ್ಲಿರುವ ಇಂಗಾಲಾಮ್ಲವನ್ನು ಹೀರಿ ಇಂಧನವಾಗಿ ಪರಿವರ್ತಿಸುವ ಕೃತಕ ದ್ಯುತಿ ಸಂಶ್ಲೇಷಣೆಯ ಎಲೆಯನ್ನು ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಜಗತ್ತೇ ಇಂಧನದ ತೀವ್ರ ಕೊರತೆ ಎದುರಿಸುತ್ತಿರುವಾಗ ಭಾರತೀಯ ವಿಜ್ಞಾನಿಗಳ ವಿನೂತನ ಆವಿಷ್ಕಾರ ಮಹತ್ವದ ಹೆಜ್ಜೆಯಾಗಿದೆ. ಈ ಕೃತಕ ಎಲೆಗಳು ಬಳಕೆಗೆ ಬಂದರೆ ಬೆಳಕು ನೀಡುವುದರ ಜತೆಗೆ ಮಿತಿ ಮೀರುತ್ತಿರುವ ಇಂಗಾಲಾಮ್ಲದ ಪ್ರಮಾಣವನ್ನು ತಗ್ಗಿಸಿ ವಾತಾವರಣ ಸ್ವಚ್ಛವಾಗಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ.

ಐಐಎಸ್‌ಸಿಯ ಜೈವಿಕ ರಸಾಯನಿಕ ವಿಜ್ಞಾನ ವಿಭಾಗದ ಶಂತನು ಮುಖರ್ಜಿ ಮತ್ತು ತಂಡ ಈ ಕೃತಕ ಎಲೆಯನ್ನು ಅಭಿವೃದ್ಧಿ ಪಡಿಸಿದೆ.

ಹಲವು ದೇಶಗಳಲ್ಲಿ ಇಂತಹ ಪ್ರಯೋಗ ಕಳೆದ ಒಂದೂವರೆ ದಶಕಗಳಿಂದ ನಡೆಯುತ್ತಲೇ ಇದೆ. ಅಮೆರಿಕದಲ್ಲಿ 2013ರಲ್ಲಿ ಸೌರಶಕ್ತಿಯನ್ನು ಉತ್ಪಾದಿಸುವ ಕೃತಕ ಎಲೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಆ ದೇಶದಲ್ಲಿ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ವಾಸಿಸುವವರಿಗೆ ವಿದ್ಯುತ್‌ ಒದಗಿಸುವ ಉದ್ದೇಶದಿಂದ ಕೃತಕ ಎಲೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಇದರ ವಿಶೇಷತೆ ಎಂದರೆ ಈ ಎಲೆಗಳನ್ನು ಹೊಂದಿದ ಗಿಡ ಅಥವಾ ಪುಟ್ಟ ಮರಗಳಿಗೆ ಹಾನಿ ಆದರೆ, ಸ್ವಯಂ ಸರಿಪಡಿಸಿಕೊಳ್ಳುವ ಶಕ್ತಿಯನ್ನೂ ಹೊಂದಿತ್ತು.

ಆದರೆ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕೃತಕ ಎಲೆ ವಿದೇಶಗಳಲ್ಲಿ ಅಭಿವೃದ್ಧಿಪಡಿಸಿದ ಎಲೆಗಳಿಗಿಂತ ಭಿನ್ನವಾದುದು. ಎಲೆಗಳಿಗೆ ವಿದ್ಯುತ್‌ ಪಡೆಯುವುದರ ಜತೆಗೆ ಕೈಗಾರಿಕಾ ಬಳಕೆಗೂ ಇದರ ಶಕ್ತಿ ಪಡೆಯಬಹುದಾಗಿದೆ. ಈ ತಂತ್ರಜ್ಞಾನದಲ್ಲಿ ಇಂಗಾಲಾಮ್ಲ ಮತ್ತು ದ್ಯುತಿವಿದ್ಯುಜ್ಜನಕ (photocatalytic) ಮಹತ್ವದ ಪಾತ್ರವಹಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಕೃತಕ ಎಲೆಯಲ್ಲಿ ಕ್ವಾಂಟಮ್ ಚುಕ್ಕೆಗಳನ್ನು ಅಳವಡಿಸಲಾಗಿರುತ್ತದೆ. ಈ ಕ್ವಾಂಟಮ್‌ ಚುಕ್ಕೆಗಳು ಇಂಗಾಲಾಮ್ಲವನ್ನು ಹೀರಿ ಅದನ್ನು ಇಂಧನವನ್ನಾಗಿ ಪರಿವರ್ತಿಸುತ್ತವೆ. ಇವು ದೃಷ್ಟಿಗೋಚರ ಬೆಳಕಿನಲ್ಲಿ ಬೈಕಾರ್ಬನೇಟ್‌ ಅಯಾನುಗಳನ್ನು ಕಡಿಮೆ ಮಾಡುತ್ತದೆ. ಮತ್ತೊಂದು ವಿಶೇಷವೆಂದರೆ, ಇದರಲ್ಲಿ ರಸಾಯನಿಕ ಶಕ್ತಿಯಾಗಿ ಪರಿವರ್ತನೆಗೊಳ್ಳುವ ಕ್ಷಮತೆಯೂ ಶೇ 20 ರಷ್ಟು ಹೆಚ್ಚಳವಾಗಿದೆ. ಈ ಕ್ಷಮತೆ ನೈಸರ್ಗಿಕ ದ್ಯುತಿಸಂಶ್ಲೇಷಣೆಗಿಂತಲೂ ನೂರು ಪಾಲು ಅಧಿಕ ಎಂಬುದು ವಿಜ್ಞಾನಿಗಳ ಅಂದಾಜು.

‘ಹವಾಮಾನ ಬದಲಾವಣೆ ಮತ್ತು ಜಾಗತಿಕ ಬಿಸಿ ಏರುವಿಕೆಯಿಂದಾಗಿ ಸೌರ ಆಧಾರಿತ ಪುನರ್‌ಬಳಕೆ ಇಂಧನದ ಅನ್ವೇಷಣೆಯಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ. ನಮ್ಮ ಹೊಸ ಆವಿಷ್ಕಾರ ಈ ನಿಟ್ಟಿನಲ್ಲಿ ಮಹತ್ವದ್ದು’ ಎನ್ನುತ್ತಾರೆ ವಿಜ್ಞಾನಿಗಳ ತಂಡದ ಮುಖ್ಯಸ್ಥ ಶಂತನು ಮುಖರ್ಜಿ.

ಇದರ ಪ್ರಯೋಜನಗಳು

* ಇದು ಸಂಪೂರ್ಣ ಜೈವಿಕ ಹೊಂದಾಣಿಕೆಯುಳ್ಳದ್ದು, ಹವೆಯಲ್ಲಿ ಹೇರಳವಾಗಿ ಲಭ್ಯ, ಇದಕ್ಕಾಗಿ ಹಣ ಖರ್ಚು ಮಾಡಬೇಕಾಗಿಲ್ಲ.

* ಇದು ಅತ್ಯಧಿಕ ಸೌರ ಮತ್ತು ರಸಾಯನಿಕ ಶಕ್ತಿಯಾಗಿ ಪರಿವರ್ತನೆ ಹೊಂದುವ ಕ್ಷಮತೆ ಹೊಂದಿದೆ.

* ಹವೆಯಲ್ಲಿ ಲಭ್ಯವಿರುವ ಇಂಗಾಲಾಮ್ಲವನ್ನು ಪಡೆದು ಬೇಕಾದಷ್ಟು ಬೆಳಕು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT