ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುರಸ್ತಿಗೆ ಬೇಕು ₹ 7 ಸಾವಿರ ಕೋಟಿ

ಮಳೆ ಹಾನಿ ನೆರವು ಕೋರಿ ಕೇಂದ್ರಕ್ಕೆ ಮನವಿ : ಸಚಿವ ಎಚ್‌.ಡಿ. ರೇವಣ್ಣ
Last Updated 17 ಜೂನ್ 2018, 17:49 IST
ಅಕ್ಷರ ಗಾತ್ರ

ಧಾರವಾಡ: ರಾಜ್ಯದ ಹಲವೆಡೆ ಸುರಿದ ಮಳೆಯಿಂದಾಗಿ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಅಂದಾಜು ₹7 ಸಾವಿರ ಕೋಟಿ ಬೇಕಾಗಲಿದೆ. ಹೆಚ್ಚಿನ ಅನುದಾನಕ್ಕಾಗಿ ಸೋಮವಾರ ದೆಹಲಿಯಲ್ಲಿ ನಡೆಯುವ ಕೇಂದ್ರ ವಿಪತ್ತು ನಿರ್ವಹಣಾ ನಿಧಿ ಪರಿಶೀಲನಾ ಸಭೆಯಲ್ಲಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ತಿಳಿಸಿದರು.

ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮಳೆ ಹಾನಿ ಹಾಗೂ ಪರಿಹಾರ ಕಾರ್ಯ ಕುರಿತು ಭಾನುವಾರ ಇಲ್ಲಿ ಅಧಿಕಾರಿಗಳು, ಶಾಸಕರೊಂದಿಗೆ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

‘ಸರ್ಕಾರದ ಅನುಮತಿ ಇಲ್ಲದೆ ₹10 ಲಕ್ಷದವರೆಗಿನ ತುರ್ತು ಕಾಮಗಾರಿಗಳನ್ನು ಮಾಡಿಸಲು ಈ ಹಿಂದೆ ಎಂಜಿನಿಯರ್‌ಗಳಿಗೆ ಅನುಮತಿ ನೀಡಲಾಗಿತ್ತು. ಈಗ, ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ₹1 ಕೋಟಿ, ಸೂಪರಿಂಟೆಂಡಿಂಗ್ ಎಂಜಿನಿಯರ್‌ಗೆ ₹ 2 ಕೋಟಿ, ಮುಖ್ಯ ಎಂಜಿನಿಯರ್‌ಗೆ ₹10 ಕೋಟಿವರೆಗಿನ ಕಾಮಗಾರಿಗೆ ಅನುಮತಿ ನೀಡಲಾಗಿದೆ’ ಎಂದರು.

‘ಮಳೆಗಾಲ ಮುಗಿಯುವವರೆಗೂ ಇಲಾಖೆ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ. ಪ್ರತಿ ದಿನದ ಪ್ರಗತಿಯ ವರದಿಯನ್ನು ಜಿಲ್ಲಾಧಿಕಾರಿಗೆ ಕಡ್ಡಾಯವಾಗಿ ಸಲ್ಲಿಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗದಗ ಜಿಲ್ಲಾಧಿಕಾರಿ ಮನೋಜಕುಮಾರ್ ಜೈನ್‌ ಮಾತನಾಡಿ, ‘ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್‌ಗಳು ಹೆಚ್ಚು ಕಾಲ ಒಂದೇ
ಸ್ಥಳದಲ್ಲಿ ಇರುತ್ತಿಲ್ಲ. ಇದರಿಂದ ಪ್ರಗತಿಗೆ ತೊಂದರೆಯಾಗಿದೆ. ಗುಣಮಟ್ಟ ಪರಿಶೀಲನೆಗೆ ಜಿಲ್ಲಾಧಿಕಾರಿ ಅಧ್ಯಕ್ತೆಯಲ್ಲಿ ಸಮಿತಿ ರಚಿಸಿದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಲು ಸಾಧ್ಯ’ ಎಂದರು.

ಅಧಿಕಾರಿಗಳ ಕೈಗೆ ಖಾಲಿ ಚೆಕ್‌ !

ಬೆಳಗಾವಿ: ‘ರಾಜ್ಯದಲ್ಲಿ ಗುಂಡಿ ಮುಚ್ಚುವ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಲು ಅನುದಾನಕ್ಕಾಗಿ ಕಾಯಬಾರದು ಎನ್ನುವ ಉದ್ದೇಶದಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಬ್ಲಾಂಕ್‌ (ಖಾಲಿ) ಚೆಕ್‌ಗಳನ್ನು ಕೊಡಲಾಗಿದೆ. ಹಾಗೆಂದು ಯಾರೂ ಬೋಗಸ್‌ ಬಿಲ್‌ ಮಾಡಬಾರದು’ ಎಂದು ಸಚಿವ ರೇವಣ್ಣ ಎಚ್ಚರಿಸಿದರು.

ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಿದ ಅವರು, ‘ಕೇಂದ್ರ ಸರ್ಕಾರ ಕೇಂದ್ರ ರಸ್ತೆ ನಿಧಿ ಅಡಿ (ಸಿಆರ್‌ಎಫ್‌) ವರ್ಷಕ್ಕೆ ಕೇವಲ ₹500 ಕೋಟಿ ನೀಡುತ್ತಿದೆ. ಹೀಗಾದರೆ ರಾಜ್ಯದ ರಸ್ತೆಗಳನ್ನು ದುರಸ್ತಿಪಡಿಸಲು 12 ವರ್ಷ ಬೇಕಾಗಲಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮುಖ್ಯಾಂಶಗಳು

* ತುರ್ತು ಕಾಮಗಾರಿಗೆ ಖರ್ಚಿನ ಮಿತಿ ಏರಿಕೆ

* ಇಲಾಖೆಗಳ ನಡುವೆ ಸಮನ್ವಯಕ್ಕೆ ಸಲಹೆ

* ಪ್ರತಿ ದಿನ ಜಿಲ್ಲಾಧಿಕಾರಿಗಳಿಗೆ ವರದಿ ಕಡ್ಡಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT