ಪರಿಹಾರ ಕಾಣದ ದೆಹಲಿ ಬಿಕ್ಕಟ್ಟು

7
ಒಂದು ವಾರ ಪೂರೈಸಿದ ಕೇಜ್ರಿವಾಲ್‌ ಧರಣಿ

ಪರಿಹಾರ ಕಾಣದ ದೆಹಲಿ ಬಿಕ್ಕಟ್ಟು

Published:
Updated:
ಪರಿಹಾರ ಕಾಣದ ದೆಹಲಿ ಬಿಕ್ಕಟ್ಟು

ನವದೆಹಲಿ: ಎಎಪಿ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ನಡುವೆ ಆರಂಭವಾಗಿರುವ ಸಂಘರ್ಷ ತೀವ್ರ ಸ್ವರೂಪ ಪಡೆದಿದ್ದು, ಹಲವು ನಾಟಕೀಯ ಬೆಳವಣಿಗೆಗಳಿಗೆ ದೆಹಲಿ ಭಾನುವಾರ ಸಾಕ್ಷಿಯಾಯಿತು.

ಎಎಪಿ ಕಾರ್ಯಕರ್ತರು ಪ್ರಧಾನಿ ನಿವಾಸ ಮತ್ತು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದಾಗ ನಿಷೇಧಾಜ್ಞೆ ಕಾರಣ ಅನುಮತಿ ನೀಡಲು ಪೊಲೀಸರು ನಿರಾಕರಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಸಂಸತ್‌ ಭವನದ ಸುತ್ತಮುತ್ತಲಿನ ಐದು ಮೆಟ್ರೊ ನಿಲ್ದಾಣಗಳನ್ನು ಮುಚ್ಚಿಸಿದ್ದರು.

ಇದರ ಹೊರತಾಗಿಯೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಎಎಪಿ ಕಾರ್ಯಕರ್ತರು ಮಂಡಿ ಹೌಸ್‌ನಿಂದ ಪ್ರಧಾನಿ ಕಚೇರಿಯತ್ತ ಮೆರವಣಿಗೆ ಯಲ್ಲಿ ಸಾಗಿದರು. ಪೊಲೀಸರು ಅವರನ್ನು ಮಾರ್ಗಮಧ್ಯೆಯೇ ತಡೆದರು.

ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರಧಾನಿ ಕಚೇರಿ ಮತ್ತು ನಿವಾಸಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲೂ ತಡೆಗೋಡೆ ನಿರ್ಮಿಸಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ವಾರ ಪೂರೈಸಿದ ಧರಣಿ: ಈ ನಡುವೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಮೂವರು ಸಂಪುಟ ಸಹೋದ್ಯೋಗಿಗಳ ಜತೆ ಲೆಫ್ಟಿನೆಂಟ್‌ ಕಚೇರಿಯಲ್ಲಿ ನಡೆಸುತ್ತಿರುವ ಧರಣಿ ಒಂದು ವಾರ ಪೂರೈಸಿದೆ.

ಕೇಜ್ರಿವಾಲ್‌ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಅವರನ್ನು ಭೇಟಿ ಮಾಡಲು ಉದ್ದೇಶಿಸಿದ್ದ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಅವಕಾಶ ನಿರಾಕರಿಸಲಾಗಿದೆ.ಭೇಟಿಗೆ ಅವಕಾಶ ನೀಡದ ಬೈಜಾಲ್‌ ಅವರ ಕ್ರಮವನ್ನು ಬಿಜೆಪಿ ಬಂಡಾಯ ನಾಯಕ ಮತ್ತು ಸಂಸದ ಶತ್ರುಘ್ನ ಸಿನ್ಹಾ ತರಾಟೆಗೆ ತೆಗೆದು ಕೊಂಡಿದ್ದಾರೆ. ಕಾಂಗ್ರೆಸ್‌ ಹೊರತುಪಡಿಸಿ ಉಳಿದ ಎಲ್ಲ ವಿರೋಧ ಪಕ್ಷಗಳು ಎಎಪಿ ಬೆಂಬಲಕ್ಕೆ ನಿಂತಿವೆ.

ಸಂಘರ್ಷ ಪರಿಹಾರ: ಪ್ರಧಾನಿಗೆ ಮನವಿ

ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಾಲ್ವರು ಮುಖ್ಯಮಂತ್ರಿಗಳು ದೆಹಲಿಯಲ್ಲಿ ಎಎಪಿ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ನಡುವೆ ಉದ್ಭವಿಸಿರುವ ಸಂಘರ್ಷ ಕೊನೆಗಾಣಿಸಲು ಮನವಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಕರ್ನಾಟಕದ ಎಚ್‌.ಡಿ. ಕುಮಾರಸ್ವಾಮಿ, ಆಂಧ್ರ ಪ್ರದೇಶದ ಎನ್‌. ಚಂದ್ರಬಾಬು ನಾಯ್ಡು ಮತ್ತು ಕೇರಳದ ಪಿಣರಾಯಿ ವಿಜಯನ್‌ ಪ್ರಧಾನಿಯನ್ನು ಭೇಟಿಯಾಗಿದ್ದರು.

‘ರಾಜಕೀಯ ಬದಿಗಿರಿಸಿ, ಸಾಂವಿಧಾನಿಕ ಬಿಕ್ಕಟ್ಟು ಬಗೆಹರಿಸಿ. ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಿ’ ಎಂದು ಅವರು ಮನವಿ ಮಾಡಿದ್ದಾರೆ.

ನೀತಿ ಆಯೋಗದ ಸಭೆಗೆ ಗೈರು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾನುವಾರ ನಡೆದ ನೀತಿ ಆಯೋಗದ ಸಭೆಗೆ  ಕೇಜ್ರಿವಾಲ್ ಹಾಜರಾಗಲಿಲ್ಲ.

ದೆಹಲಿ ಸರ್ಕಾರದ ಪರ ಗವರ್ನರ್‌ ಅನಿಲ್‌ ಬೈಜಾಲ್‌ ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ ಕೇಜ್ರಿವಾಲ್‌, ‘ಬೈಜಾಲ್‌ ಅವರಿಗೆ ನೀತಿ ಆಯೋಗದ ಸಭೆಗೆ ಹಾಜರಾಗಲು ಅಧಿಕಾರ ನೀಡಿದವರು ಯಾರು’ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌, ‘ಇದು ತಪ್ಪು ಮಾಹಿತಿ. ಬೈಜಾಲ್‌ ಸಭೆಯಲ್ಲಿ ಭಾಗವಹಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು. ನಂತರ ಕೇಜ್ರಿವಾಲ್‌ ತಮ್ಮ ಟ್ವೀಟ್‌ ಅಳಸಿ ಹಾಕಿದರು.

ರಾಜಕೀಯ ದಾಳಗಳಲ್ಲ: ಐಎಎಸ್‌ ಅಧಿಕಾರಿಗಳ ಸ್ಪಷ್ಟನೆ

‘ನಾವು ಯಾವ ರಾಜಕೀಯ ಪಕ್ಷದ ಪರವೂ ಇಲ್ಲ. ನಮ್ಮನ್ನು ರಾಜಕೀಯ ದಾಳಗಳನ್ನಾಗಿ ಬಳಸಬೇಡಿ’ ಎಂದು ದೆಹಲಿ ಐಎಎಸ್‌ ಅಧಿಕಾರಿಗಳ ಸಂಘ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದೆ.

ಐಎಎಸ್‌ ಅಧಿಖಾರಿಗಳ ವಿರುದ್ಧ ಎಎಪಿ ಸರ್ಕಾರ ಮಾಡಿರುವ ಆರೋಪಗಳನ್ನು ಸಂಘ ತಳ್ಳಿ ಹಾಕಿದೆ.

‘ಯಾವ ಅಧಿಕಾರಿಗಳೂ ಮುಷ್ಕರ ನಡೆಸುತ್ತಿಲ್ಲ. ರಜಾ ದಿನಗಳಲ್ಲೂ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಎಲ್ಲ ಇಲಾಖೆಗಳ ಸಭೆಗಳಿಗೂ ತಪ್ಪದೆ ಹಾಜರಾಗುತ್ತಿದ್ದಾರೆ. ಆದರೂ ಅಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಜ್ರಿವಾಲ್‌ ಅಭಯ

‘ಐಎಎಸ್‌ ಅಧಿಕಾರಿಗಳು ನನ್ನ ಕುಟುಂಬದ ಸದಸ್ಯರಿದ್ದಂತೆ. ಅವರಿಗೆ ಎಲ್ಲ ರಕ್ಷಣೆ ನೀಡಲಾಗುವುದು. ತಕ್ಷಣ ಕೆಲಸಕ್ಕೆ ಮರಳಿ’ ಎಂದು ಕೇಜ್ರಿವಾಲ್‌ ಲಿಖಿತ ಭರವಸೆ ನೀಡಿದ್ದಾರೆ.

ಅಧಿಕಾರಿಗಳನ್ನು ಉದ್ದೇಶಿಸಿ ಅವರು ಬರೆದ ಒಂದು ಪುಟದ ಪತ್ರವನ್ನು ಅವರು ಬಿಡುಗಡೆ ಮಾಡಿದ್ದಾರೆ.

* ಐಎಎಸ್‌ ಅಧಿಕಾರಿಗಳ ಪ್ರತಿಭಟನೆಗೆ ಕುಮ್ಮಕ್ಕು ನೀಡುವ ಮೂಲಕ ದೆಹಲಿಯ ಎಎಪಿ ಸರ್ಕಾರದ ಆಡಳಿತಕ್ಕೆ ಅಡ್ಡಗಾಲು ಹಾಕುತ್ತಿರುವ ಇಂತಹ ಪ್ರಧಾನಿಯ ಕೈಯಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿರಬಲ್ಲದೆ?

– ಅರವಿಂದ್‌ ಕೇಜ್ರಿವಾಲ್‌, ದೆಹಲಿ, ಮುಖ್ಯಮಂತ್ರಿ

* ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹುಟ್ಟು ನಕ್ಸಲೀಯ. ಅಂತವರಿಗೆ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಬೆಂಬಲ ನೀಡುವ ಅಗತ್ಯವಾದರೂ ಏನಿತ್ತು?

– ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ಸಂಸದ

* ಪ್ರಧಾನಿ ಮೋದಿ ಫಿಟ್ನೆಸ್‌ ಯೋಗ ಮುಂದುವರಿಸಲು ನಮ್ಮ ತಕರಾರಿಲ್ಲ. ಆದರೆ, ಅಧಿಕಾರಿಗಳಿಗಾದರೂ ಕೇಜ್ರಿವಾಲ್‌ ಅವರ ಜತೆ ಕೆಲಸ ಮಾಡುವಂತೆ ಹೇಳಿ

–ಪ್ರಕಾಶ್‌ ರೈ, ನಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry