ಜಯ ತಂದಿತ್ತ ಅಲೆಕ್ಸಾಂಡರ್‌

7
ಬಲಿಷ್ಠ ಕೋಸ್ಟರಿಕಾ ತಂಡಕ್ಕೆ ಸೋಲುಣಿಸಿದ ಸರ್ಬಿಯಾ

ಜಯ ತಂದಿತ್ತ ಅಲೆಕ್ಸಾಂಡರ್‌

Published:
Updated:
ಜಯ ತಂದಿತ್ತ ಅಲೆಕ್ಸಾಂಡರ್‌

ಸಮಾರ, ರಷ್ಯಾ: ನಾಯಕ ಅಲೆಕ್ಸಾಂಡರ್‌ ಕೊಲರೊವ್‌ ಕಾಲ್ಚಳಕದಲ್ಲಿ ಅರಳಿದ ಏಕೈಕ ಗೋಲಿನ ಬಲದಿಂದ ಸರ್ಬಿಯಾ ತಂಡ 21ನೇ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿಯಿತು.

ಭಾನುವಾರ ನಡೆದ ‘ಇ’ ಗುಂಪಿನ ತನ್ನ ಮೊದಲ ಹಣಾಹಣಿಯಲ್ಲಿ ಸರ್ಬಿಯಾ 1–0 ಗೋಲಿನಿಂದ ಬಲಿಷ್ಠ ಕೋಸ್ಟರಿಕಾ ತಂಡಕ್ಕೆ ಆಘಾತ ನೀಡಿತು.

ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿ ಯಾಗಿದ್ದ ಉಭಯ ತಂಡಗಳು ಆರಂಭದಿಂದಲೇ ವೇಗದ ಆಟಕ್ಕೆ ಅಣಿಯಾದವು. ಕೋಸ್ಟರಿಕಾ ತಂಡ 3–4–2–1ರ ಯೋಜನೆಯೊಂದಿಗೆ ಕಣಕ್ಕಿಳಿದರೆ, ಸರ್ಬಿಯಾ 4–2–3–1ರ ರಣನೀತಿ ಹೆಣೆದು ಆಡಿತು.

ಮೊದಲ 20 ನಿಮಿಷಗಳಲ್ಲಿ ಕೋಸ್ಟರಿಕಾ ತಂಡ ಗೋಲು ಗಳಿಸುವ ಹಲವು ಅವಕಾಶಗಳನ್ನು ಪಡೆದಿತ್ತು. ಆದರೆ ಚೆಂಡನ್ನು ಗುರಿ ಮುಟ್ಟಿಸಲು ಈ ತಂಡದ ಆಟಗಾರರಿಗೆ ಸಾಧ್ಯವಾಗಲಿಲ್ಲ.

ನಂತರ ಸರ್ಬಿಯಾ ತಂಡದ ರಕ್ಷಣಾ ವಿಭಾಗದ ಆಟಗಾರರು ಪರಿಣಾಮಕಾರಿ ಸಾಮರ್ಥ್ಯ ತೋರಿದರು. ಮುಂಚೂಣಿ ಮತ್ತು ಮಿಡ್‌ಫೀಲ್ಡ್‌ ವಿಭಾಗಗಳ ಆಟಗಾರರು ಕೋಸ್ಟರಿಕಾ ತಂಡದ ರಕ್ಷಣಾ ಕೋಟೆ ಭೇದಿಸುವ ಪ್ರಯತ್ನ ಮುಂದುವರಿಸಿದರು. ಹೀಗಿದ್ದರೂ ಯಾರಿಗೂ ಖಾತೆ ತೆರೆಯಲು ಆಗಲಿಲ್ಲ. ಹೀಗಾಗಿ ಮೊದಲಾರ್ಧ ಗೋಲು ರಹಿತವಾಗಿ ಅಂತ್ಯವಾಯಿತು.

ಆದರೆ 56ನೇ ನಿಮಿಷದಲ್ಲಿ ಡಿಫೆಂಡರ್‌ ಕೊಲಾರೊವ್‌ ಚೆಂಡನ್ನು ಗುರಿ ಮುಟ್ಟಿಸಿದರು. ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದ ಅವರನ್ನು ಕೋಸ್ಟರಿಕಾ ತಂಡದ ಆಟಗಾರ ಬೀಳಿಸಿದ. ಹೀಗಾಗಿ ಪಂದ್ಯದ ರೆಫರಿ ಸರ್ಬಿಯಾಗೆ ಫ್ರೀ ಕಿಕ್‌ ನೀಡಿದರು. ಈ ಅವಕಾಶವನ್ನು ಕೊಲಾರೊವ್‌ ಸದುಪಯೋಗಪಡಿಸಿಕೊಂಡರು. 25 ಮೀಟರ್ಸ್‌ ದೂರದಿಂದ ಅವರು ಒದ್ದ ಚೆಂಡು ಗಾಳಿಯಲ್ಲಿ ತೇಲಿಕೊಂಡು ಸಾಗಿ ಕೋಸ್ಟರಿಕಾ ತಂಡದ ಗೋಲು ಪೆಟ್ಟಿಗೆಯ ಬಲೆಗೆ ಮುತ್ತಿಕ್ಕಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry