ಮುಸ್ಲಿಂ ಬಾಲಕಿಗೆ ಆಸರೆ ಕೊಟ್ಟಾತನಿಗೆ ಇರಿತ

7
ಮಾನವೀಯತೆ ಮೆರೆದ ವ್ಯಕ್ತಿಯನ್ನು ಕೊಲ್ಲುವ ಯತ್ನ

ಮುಸ್ಲಿಂ ಬಾಲಕಿಗೆ ಆಸರೆ ಕೊಟ್ಟಾತನಿಗೆ ಇರಿತ

Published:
Updated:
ಮುಸ್ಲಿಂ ಬಾಲಕಿಗೆ ಆಸರೆ ಕೊಟ್ಟಾತನಿಗೆ ಇರಿತ

ಹೈದರಾಬಾದ್‌: ಪುಟ್ಟ ಮುಸ್ಲಿಂ ಬಾಲಕಿಯನ್ನು ಮನೆಗೆ ಕರೆತಂದ ಬಳಿಕ ತಮ್ಮ ಜೀವನ ಹೀಗೆಲ್ಲಾ ಬದಲಾಗಬಹುದು ಎಂಬುದನ್ನು ದೇವಸ್ಥಾನಗಳಲ್ಲಿ ಚಿತ್ರ ಬಿಡಿಸುವ ಕೆಲಸ ಮಾಡುವ ಪಾಪಾಲಾಲ್‌ ರವಿಕಾಂತ್‌ ಊಹಿಸಿಯೂ ಇರಲಿಲ್ಲ.

2007ರಲ್ಲಿ ಕೋಠಿ ಎಂಬಲ್ಲಿ ನಡೆದ ಬಾಂಬ್‌ ಸ್ಫೋಟದಲ್ಲಿ ಹಲವರು ಜೀವ ಕಳೆದುಕೊಂಡಿದ್ದರು. ಅಲ್ಲೇ, ಗೋಕುಲ್‌ ಚಾಟ್‌ ಸೆಂಟರ್‌ ಸಮೀಪ‍ದಲ್ಲಿ ಅನಾಥೆಯಂತೆ ನಿಂತಿದ್ದ ಹುಡುಗಿಯನ್ನು ಜುಮ್‌–ಎ–ರಾತ್‌ ಬಜಾರ್‌ನಲ್ಲಿರುವ ತಮ್ಮ ಮನೆಗೆ ರವಿಕಾಂತ್‌ ಕರೆದೊಯ್ದರು. ಸ್ಫೋಟದಲ್ಲಿ ಬಾಲಕಿ ತನ್ನ ತಂದೆ–ತಾಯಿಯನ್ನು ಕಳೆದುಕೊಂಡಿದ್ದಳು.

ಹಿಂದೂ ರವಿಕಾಂತ್‌ ಮುಸ್ಲಿಂ ಬಾಲಕಿಗೆ ಆಶ್ರಯ ಕೊಟ್ಟದ್ದನ್ನು ಕೋಮು ಧ್ರುವೀಕರಣಕ್ಕೆ ಒಳಗಾಗಿದ್ದ ನಗರದ ಈ ಭಾಗದ ಮುಸ್ಲಿಂ ಮತ್ತು ಹಿಂದೂ ಸಮುದಾಯಗಳೆರಡೂ ವಿರೋಧಿಸಿದ್ದವು.

ರಜಪೂತನಾದ ರವಿಕಾಂತ್‌ ಈ ವಿರೋಧಕ್ಕೆ ಸೊಪ್ಪು ಹಾಕಲಿಲ್ಲ. ಸಾನಿಯಾ ಫಾತಿಮಾ ಎಂದು ಹೆಸರಿಟ್ಟು ಬಾಲಕಿಯನ್ನು ಮುಸ್ಲಿಂ ಸಂಪ್ರದಾಯ‍ ‍ಪ್ರಕಾರವೇ ಬೆಳೆಸಿದರು. ಸಾನಿಯಾ ಮನೆಗೆ ಬಂದದ್ದು ರವಿಕಾಂತ್‌ ದಂಪತಿಗೆ ಭಾಗ್ಯ ಬಂದಂತೆಯೇ ಆಯಿತು. ಮಕ್ಕಳಿಲ್ಲದ ರವಿಕಾಂತ್‌–ಜಯಶ್ರೀ ದಂಪತಿಗೆ ಮೂರು ಮಕ್ಕಳಾದವು. ಸಾನಿಯಾ ಜತೆಗೇ ಏಕತಾ, ಉಮಾನಂದ ಮತ್ತು ಪ್ರಾರ್ಥನಾ ಕೂಡ ಬೆಳೆದರು.

ಈ ತಿಂಗಳ ಒಂದನೇ ತಾರೀಖಿನಂದು ಹಿಂದೂಗಳ ಒಂದು ಗುಂಪು ರವಿಕಾಂತ್‌ ಮನೆಗೆ ನುಗ್ಗಿ ಅವರಿಗೆ 16 ಬಾರಿ ಇರಿದು ರಕ್ತದ ಮಡುವಿನಲ್ಲಿ ಅವರನ್ನು ಕೆಡವಿ ಹೋಯಿತು. ಕುಡಿಯುವ ನೀರು ತರಲು ಹೊರಗೆ ಹೋಗಿದ್ದ ಜಯಶ್ರೀ ಮತ್ತು ಮಕ್ಕಳು ಓಡೋಡಿ ಬಂದು ರವಿಕಾಂತ್‌ ಅವರನ್ನು ಉಸ್ಮಾನಿಯಾ ಜನರಲ್‌ ಆಸ್ಪತ್ರೆಗೆ ಸೇರಿಸಿದರು. 

‘ಒಂಬತ್ತನೇ ತರಗತಿ ಓದುತ್ತಿರುವ ಬೆಳೆದು ನಿಂತ ಸಾನಿಯಾಳನ್ನು ಸ್ಥಳೀಯ ಹುಡುಗರು ಹಲವು ಬಾರಿ ಚುಡಾಯಿಸಿದ್ದರು ಮತ್ತು ಬೆದರಿಸಿದ್ದರು. ಇದರಿಂದ ಅಸಮಾಧಾನ ಗೊಂಡಿದ್ದ ನನ್ನ ಗಂಡ ಹಲವು ಬಾರಿ ಈ ಯುವಕರಿಗೆ ಎಚ್ಚರಿಕೆ ನೀಡಿದ್ದರು. ಸಮುದಾಯದ ಇಚ್ಛೆಗೆ ವಿರುದ್ಧವಾಗಿ ಮುಸ್ಲಿಂ ಹುಡುಗಿಯನ್ನು ಬೆಳೆಸಿದ್ದಕ್ಕೆ ಅವರಿಗೆಲ್ಲಾ ಸಿಟ್ಟಿತ್ತು’ ಎಂದು ಜಯಶ್ರೀ ಹೇಳಿದ್ದಾರೆ.

ರವಿಕಾಂತ್‌ ಸತ್ತೇ ಹೋದರು ಎಂದೇ ಯುವಕರ ಗುಂಪು ಭಾವಿಸಿತ್ತು. ಅವರು ಈ ಸಾವಿಗಾಗಿ ಸಂಭ್ರಮಿಸಿದ್ದರು. ಆದರೆ, ರವಿಕಾಂತ್‌ ಉಳಿದರು. 

‘ಹುಡುಗರು ನನ್ನನ್ನು ಸದಾ ಚುಡಾಯಿಸುತ್ತಾರೆ. ಹಾಗಾಗಿ ನಾನೊಂದು ಪೀಡೆ ಎಂದು ಹೇಳಿದ ಶಾಲೆಯ ಆಡಳಿತ ಮಂಡಳಿ ನನ್ನನ್ನು ಹೊರಗೆ ಹಾಕಿದೆ’ ಎಂದು ಸಾನಿಯಾ ಹೇಳುತ್ತಾಳೆ.

* ನನ್ನ ತಂದೆಗೆ ಇರಿದವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ತಂದೆಗೆ ನ್ಯಾಯ ದೊರೆಯುವ ತನಕ ನಾನು ಹೋರಾಡುತ್ತೇನೆ

–ಸಾನಿಯಾ ಫಾತಿಮಾ, ರವಿಕಾಂತ್‌ ಮಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry