ನಾಯಿ ಸತ್ತರೆ, ಮೋದಿ ಉತ್ತರಿಸಬೇಕೆ: ಮುತಾಲಿಕ್

7

ನಾಯಿ ಸತ್ತರೆ, ಮೋದಿ ಉತ್ತರಿಸಬೇಕೆ: ಮುತಾಲಿಕ್

Published:
Updated:
ನಾಯಿ ಸತ್ತರೆ, ಮೋದಿ ಉತ್ತರಿಸಬೇಕೆ: ಮುತಾಲಿಕ್

ಬೆಂಗಳೂರು: ‘ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೂ ಶ್ರೀರಾಮ ಸೇನೆ ಸೇರಿ ಯಾವುದೇ ಹಿಂದೂ ಸಂಘಟನೆಗಳಿಗೂ ಸಂಬಂಧ ಇಲ್ಲ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪಷ್ಟ‌ಪಡಿಸಿದರು.

ಹಿಂದೂ ಜನಜಾಗೃತಿ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ‘ಎಡಪಂಥೀಯರ ಹಿಂದೂ ವಿರೋಧಿ ಷಡ್ಯಂತರ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗೋವಿಂದ್ ಪಾನ್ಸರೆ, ನರೇಂದ್ರ ದಾಭೋಲ್ಕರ್‌, ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಹತ್ಯೆಯಾದಾಗ  ಕಾಂಗ್ರೆಸ್‌ ಸರ್ಕಾರವೇ ಇತ್ತು. ಬುದ್ಧಿಜೀವಿಗಳು ಅವರನ್ನು ಕೇಳುವುದು ಬಿಟ್ಟು, ಮೋದಿ ಮಾತನಾಡುತ್ತಿಲ್ಲ ಎಂದು ಅರಚುತ್ತಿದ್ದಾರೆ. ಕರ್ನಾಟಕದಲ್ಲಿ ನಾಯಿ ಸತ್ತರೆ ಅದಕ್ಕೆ ಮೋದಿ ಉತ್ತರ ಕೊಡಬೇಕೆ’ ಎಂದು ಪ್ರಶ್ನಿಸಿದರು.

‘ಕಲಬುರ್ಗಿ ಹಾಗೂ ಗೌರಿ ಅವರೊಂದಿಗೆ ವೈಚಾರಿಕವಾಗಿ ನಮ್ಮ ವಿರೋಧವಿದೆಯೇ ಹೊರತು, ನಾವು

ಕೊಲೆಗಡುಕರಲ್ಲ, ಹಿಂಸೆಯಲ್ಲಿ ನಂಬಿಕೆ ಇಟ್ಟವರಲ್ಲ. ಆರಂಭದಿಂದಲೇ ಗೌರಿ ಹತ್ಯೆ ತನಿಖೆ ದಿಕ್ಕು ತಪ್ಪಿಸಲಾಗುತ್ತಿದೆ. ಬುದ್ಧಿಜೀವಿಗಳ ಟಾರ್ಗೆಟ್‌ ಹಿಂದೂ ಸಂಘಟನೆಗಳೇ ಆಗಿವೆ’ ಎಂದು ಆರೋಪಿಸಿದರು.

‘ಪೊಲೀಸರ ಬಗ್ಗೆ ನನಗೆ ಅಭಿಮಾನವಿದೆ. ಆದರೆ, ಅವರ ಹಿಂದೆ ನಿಂತು ಆಡಿಸುತ್ತಿರುವ ಕಾಂಗ್ರೆಸ್‌ ಹಾಗೂ ಬುದ್ಧಿಜೀವಿಗಳು ಅಪಾಯಕಾರಿ. ಹತ್ಯೆ ಮಾಡಲು ಗುಂಡು ಪಡೆದವನನ್ನು ಬಂಧಿಸಿ ವಿಚಾರಿಸುತ್ತೀರಿ. ಆದರೆ, ಗುಂಡು ಕೊಟ್ಟವನನ್ನು ಬಿಟ್ಟು ಬಿಡುತ್ತೀರಿ. ಇದು ಯಾವ ಸೀಮೆ ನ್ಯಾಯ’ ಎಂದು ಪ್ರಶ್ನಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ಮೋಹನ್‌ಗೌಡ, 'ಈ ಹತ್ಯೆ ಪ್ರಕರಣದಲ್ಲಿ ನನ್ನ ಹೆಸರೂ ಕೇಳಿ ಬಂದಿದೆ. ಪೊಲೀಸರು ನನಗೆ ಮಂಪರು ಪರೀಕ್ಷೆ ಮಾಡಲಿ. ಆದರೆ, ಒಂದು ಷರತ್ತು ಇದೆ. ರೋಹಿತ್‌ ಚಕ್ರತೀರ್ಥ ಹತ್ಯೆಗೆ ಸುಪಾರಿಕೊಟ್ಟ ವಿಚಾರದಲ್ಲಿ ಹೆಸರು ಕೇಳಿಬಂದಿದ್ದ ದಿನೇಶ್‌ ಅಮಿನ್‌ಮಟ್ಟು ಹಾಗೂ ನಗರದ ನಕ್ಸಲ್‌ ಜಿಗ್ನೇಶ್‌ ಮೇವಾನಿ ಅವರನ್ನೂ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಸವಾಲು ಹಾಕಿದರು.

‘ಭಗವಾನ್ ಹೇಳಿಕೆ ವಿರುದ್ಧ ಕಾನೂನಾತ್ಮಕವಾಗಿ ಪ್ರತಿಭಟಿಸುತ್ತೇವೆ. ಈ ಕುರಿತು ದೂರು ನೀಡಿದ್ದೇವೆ. ಅವರನ್ನು ಹತ್ಯೆ ಮಾಡುವಂತ ಮನೋಧರ್ಮವನ್ನು ರೂಢಿಸಿಕೊಂಡಿಲ್ಲ. ಭಗವಾನ್ ಅವರನ್ನು ಹತ್ಯೆ ಮಾಡುವುದರಿಂದ ನಮಗೇನು ಪ್ರಯೋಜನ?’ ಎಂದರು.

ಹೈಕೋರ್ಟ್ ವಕೀಲ ಎನ್‌.ಪಿ. ಅಮೃತೇಶ್, 'ರಾಜ್ಯದಲ್ಲಿ ಇನ್ನು ಮುಂದೆ ಪೊಲೀಸರು, ಎಸ್‌ಐಟಿ, ಸಿಬಿಐ, ಸಿಸಿಬಿ, ನ್ಯಾಯಾಂಗ ಯಾರೇ ಉಡಾಫೆಯಾಗಿ ನಡೆದುಕೊಂಡರೂ ಹಿಂದೂ ಜನಜಾಗೃತಿ ಸಮಿತಿ ಸುಮ್ಮನಿರುವುದಿಲ್ಲ. ಹಿಂದೂಗಳಿಗೆ ಅನ್ಯಾಯವಾದರೆ ಅವರ ಪರವಾಗಿ ನಿಲ್ಲುತ್ತೇವೆ' ಎಂದು ಹೇಳಿದರು.

‘ಕಾಂಗ್ರೆಸ್‌ ಏಜೆಂಟ್‌ ಆಗಿರುವ ‍‍ಪ್ರಕಾಶ್‌ ರೈ ಅವರೇ ಬಹಿರಂಗ ಸಂವಾದ ಏರ್ಪಡಿಸಿ. ಎಲ್ಲವನ್ನೂ ಮುಕ್ತವಾಗಿ ಮಾತನಾಡೋಣ ಬನ್ನಿ’ ಎಂದು ಚರ್ಚೆಗೆ ಆಹ್ವಾನಿಸಿದರು.

‘ಇಬ್ರಾಹಿಂ ಐಎಸ್‌ಐ ಏಜೆಂಟ್‌’

‘ಗೌರಿ ಹತ್ಯೆ ಪ್ರಕರಣದಲ್ಲಿ ಮುತಾಲಿಕ್‌ ‘ಹೆಡ್‌ ಆಫೀಸ್‌’. ಮೊದಲು ಅವರನ್ನು ಬಂಧಿಸಿ’ ಎಂದು ವಿಧಾನ ಪರಿಷತ್ ಸದಸ್ಯ ಸದ್ಸಯಸಿ.ಎಂ. ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ‘ಆ ಕುರಿತು ದಾಖಲೆಗಳಿದ್ದರೆ ಅವರು ಸಿಐಡಿಗೆ ನೀಡಲಿ, ಅದನ್ನು ಬಿಟ್ಟು ಸುಮ್ಮನೆ ಬೊಗಳಬೇಡಿ. ನಾನೂ ನಿಮ್ಮನ್ನು ಐಎಸ್ಐ ಏಜೆಂಟ್‌ ಎಂದು ಕರೆದರೆ ಸುಮ್ಮನಿರುತ್ತೀರಾ’ ಎಂದು ಮುತಾಲಿಕ್‌ ಆಕ್ರೋಶ ವ್ಯಕ್ತಪಡಿಸಿದರು.

ವಾಘ್ಮೋರೆ ಕುರಿತು ಗೊಂದಲದ ಹೇಳಿಕೆ

ಪರಶುರಾಮ ವಾಘ್ಮೋರೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ‘ವಾಘ್ಮೋರೆ ನನ್ನೊಂದಿಗೆ ಛಾಯಚಿತ್ರ ತೆಗೆಸಿಕೊಂಡಿರಬಹುದು. ದಿನಕ್ಕೆ ನೂರಾರು ಮಂದಿ ಹಾಗೆ ಛಾಯಚಿತ್ರ ತೆಗೆಸಿಕೊಳ್ಳುತ್ತಾರೆ. ವಾಘ್ಮೋರೆ ಶ್ರೀರಾಮ ಸೇನೆ ಸದಸ್ಯ ಅಲ್ಲ. ಆದರೆ, ಅವರು ಹಿಂದೂ ಅಭಿಮಾನಿ’ ಎಂದು ಹೇಳಿದರು.

ಬೀದರ್‌ನಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದ ಪ್ರಕರಣದ ಬಗ್ಗೆ ಕೇಳಿದಾಗ, ‘ಯಾವ ಹಿಂದೂ ಸಂಘಟನೆಗಳೂ ಅವರನ್ನು ಬಿಡಿಸಿಕೊಂಡು ಬರದಿದ್ದಾಗ ನಾನೇ ಅವರನ್ನು ಬಿಡಿಸಿದೆ’ ಎಂದೂ ಅವರು ಒಪ್ಪಿಕೊಂಡರು. ಆ ಆರು ಜನರಲ್ಲಿ ವಾಘ್ಮೋರೆ ಸಹ ಒಬ್ಬರಾಗಿದ್ದರು ಎಂದಾಗ ಒಂದು ಕ್ಷಣ ಉತ್ತರ ನೀಡಲಾಗದೆ ತಬ್ಬಿಬ್ಬಾದರು.

‘ಎಸ್‌ಐಟಿ ಅಧಿಕಾರಿಗಳ ರೀತಿಯಲ್ಲಿ ನೀವೂ ಪ್ರಶ್ನಿಸುತ್ತೀರಲ್ಲ’ ಎಂದು ಮಾಧ್ಯಮದವರ ವಿರುದ್ಧವೇ ಹರಿಹಾಯ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry