ಸಚಿವ ಸ್ಥಾನ ಕೊಡದಿದ್ದರೆ ಸರ್ಕಾರಕ್ಕೇ ನಷ್ಟ

7
ಶಾಂತಿನಗರ ಶಾಸಕ ಎನ್‌.ಎ.ಹ್ಯಾರಿಸ್‌ ಖಡಕ್‌ ಮಾತು

ಸಚಿವ ಸ್ಥಾನ ಕೊಡದಿದ್ದರೆ ಸರ್ಕಾರಕ್ಕೇ ನಷ್ಟ

Published:
Updated:
ಸಚಿವ ಸ್ಥಾನ ಕೊಡದಿದ್ದರೆ ಸರ್ಕಾರಕ್ಕೇ ನಷ್ಟ

ಬೆಂಗಳೂರು: ಮಂತ್ರಿ ಸ್ಥಾನಕ್ಕೆ ನನಗೆ ಅರ್ಹತೆ ಇದೆ. ನನ್ನನ್ನು ಬಳಸಿಕೊಳ್ಳಲಿಲ್ಲ ಅಂದರೆ ಅದು ಸರ್ಕಾರಕ್ಕೆ ನಷ್ಟ. ಅದನ್ನು ಅವರು ತಿಳಿದುಕೊಳ್ಳಬೇಕು. ಅದಕ್ಕಾಗಿ ಕಣ್ಣೀರು ಹಾಕುವುದು, ಭಿಕ್ಷೆ ಬೇಡುವುದು ಮಾಡಬೇಕೇ? ನನ್ನ ಸಾಮರ್ಥ್ಯ ಬಳಕೆ ಅಗತ್ಯವೆನಿಸಿದರೆ ಅವರೇ ಕರೆದು ಸ್ಥಾನ ನೀಡಬೇಕು...

ಹೀಗೆಂದು ಖಡಕ್ಕಾಗಿ ನುಡಿದವರು ಶಾಂತಿನಗರದ ಶಾಸಕ ಎನ್‌.ಎ.ಹ್ಯಾರಿಸ್‌. ನಾಲ್ಕು ತಿಂಗಳಿನಿಂದ ತಮ್ಮ ಪುತ್ರನ ವಿಚಾರದಲ್ಲಿ ಸದಾ ವಿವಾದ, ಸುದ್ದಿಯಲ್ಲಿದ್ದ ಅವರು ಆ ಒತ್ತಡದಲ್ಲಿಯೂ ಮೂರನೇ ಬಾರಿ ಗೆಲುವು ಸಾಧಿಸಿದರು. ಪುತ್ರನ ವಿಚಾರ ಕೇಳುತ್ತಿದ್ದಂತೆಯೇ ಕೆಂಡಾಮಂಡಲರಾಗಿ ರೇಗಿದರು. ‘ನಾನು 30 ವರ್ಷಗಳ ಅನುಭವಿ ರಾಜಕಾರಣಿ. ಕ್ಷೇತ್ರದ ಜನ ನನ್ನ ಮೇಲಿಟ್ಟ ಭಾವನೆ ಬದಲಾಗಿಲ್ಲ. ಹಾಗಾಗಿಯೇ ಗುರುತಿಸಿ ಗೆಲ್ಲಿಸಿದ್ದಾರೆ’ ಎಂದು ವಿಶ್ವಾಸದಿಂದ ಬೀಗಿದ ಹ್ಯಾರೀಸ್‌ ಕೆಲಕಾಲ ‘ಪ್ರಜಾವಾಣಿ’ ಜತೆ ಮಾತಿಗಿಳಿದರು.

* ಶಾಸಕ ಸ್ಥಾನದ ವರ್ಚಸ್ಸು ಹೇಗೆ ವೃದ್ಧಿಸಿಕೊಳ್ಳುತ್ತೀರಿ?

ವರ್ಚಸ್ಸು ಚೆನ್ನಾಗಿಯೇ ಇದೆ. ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಎಂಜಿ ರಸ್ತೆ ಸೇರಿದಂತೆ ಕ್ಷೇತ್ರದ ಸುತ್ತಮುತ್ತ ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದ್ದೇನೆ. ಅಧಿವೇಶನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ನನಗಿದು ಉದ್ಯೋಗ ಅಲ್ಲ. ಜನರ ಮೇಲಿರುವ ಕಾಳಜಿ, ಸಮಾಜ ಸೇವೆಯ ತುಡಿತ ಅಷ್ಟೆ. ನನ್ನ ಕೆಲಸಗಳನ್ನು ಮೆಚ್ಚಿ ಬೆಂಗಳೂರಿನ ಬಿ–ಪ್ಯಾಕ್‌ ಸ್ವತಂತ್ರ ಸಂಸ್ಥೆ ಅತ್ಯಧಿಕ ಅಂಕ ನೀಡಿ ಗೌರವಿಸಿದೆ. ಅದೇ ಜವಾಬ್ದಾರಿಯನ್ನು ಇನ್ನಷ್ಟು ಚೆನ್ನಾಗಿ ನಿರ್ವಹಿಸುತ್ತೇನೆ.

* ಶಾಂತಿನಗರಕ್ಕೆ ವಿಶೇಷ ಯೋಜನೆಗಳೇನಾದರೂ ಇವೆಯೇ?

ಯಾವುದೇ ಯೋಜನೆಗಳನ್ನು ಜನರ ಜತೆ ಸೇರಿಕೊಂಡೇ ಅನುಷ್ಠಾನಕ್ಕೆ ತರಬೇಕು. ನಗರದ ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ಜನರ ಜವಾಬ್ದಾರಿಯೂ ಮುಖ್ಯ. ಕ್ಷೇತ್ರಕ್ಕೆ ಇನ್ನಷ್ಟು ಮೂಲಸೌಕರ್ಯ ಬೇಕು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ಎಲ್ಲ ಮಕ್ಕಳಿಗೂ ಸಿಗುವಂತೆ ಮಾಡಬೇಕು. ಇದೊಂದು ದೊಡ್ಡ ಗುರಿ ಮತ್ತು ಸವಾಲು ನನ್ನ ಮುಂದಿದೆ. ಯುವಜನರಿಗೆ ಉದ್ಯೋಗ ಸಿಗಬೇಕು. ಅವರು ಸಬಲರಾದರೆ ಆರ್ಥಿಕವಾಗಿ ಬಲಿಷ್ಠರಾಗುತ್ತಾರೆ. ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.

* ಪುತ್ರ ನಡೆಸಿದ ಹಲ್ಲೆ ವಿಚಾರ ಕಂಗೆಡಿಸಿತೇ?

ಪುತ್ರ ಸರಿಯಾಗಿಯೇ ಇದ್ದಾನೆ. ಯಾರೋ ಮಾಡಿದ ಕೃತ್ಯಕ್ಕೆ ಅವನನ್ನು ಬಲಿಪಶು ಮಾಡಿದರು. ರಾಜಕೀಯ ವೈರತ್ವಕ್ಕೆ ಆ ಘಟನೆಯನ್ನು ಬಳಸಲಾಯಿತು. ಅವರಿಗೆ ಬೇರೇನೂ ಮಾಡಲಾಗಲಿಲ್ಲ. ಬೆಂಗಳೂರಿನ ಬಾರ್‌ಗಳಲ್ಲಿ ಅದೆಷ್ಟು ಗಲಾಟೆಗಳು ನಡೆಯುತ್ತವೆ. ಅವನ್ನೆಲ್ಲಾ ನೀವು ಬರೆಯುತ್ತೀರಾ? ಆ ತಾಕತ್ತು ನಿಮಗಿದೆಯೇ? ಹಾಗೆ ನೋಡಿದರೆ ಮಾಧ್ಯಮಗಳೇ ನನ್ನ ವೈರಿಗಳು. ನಾನು ಮಾಡಿದ ಒಳ್ಳೆಯ ಕೆಲಸಗಳನ್ನು ಏಕೆ ತೋರಿಸುತ್ತಿಲ್ಲ? ನಾವೂ ಮನುಷ್ಯರು. ನಮಗೂ ನೋವಾಗುತ್ತದೆ.

* ಹಾಗಿದ್ದರೆ ರಾಜಕೀಯ ವಿರೋಧಿಗಳ ಸವಾಲು ಹೇಗೆ ಎದುರಿಸುತ್ತೀರಿ?

ಒಳ್ಳೆಯ ಕೆಲಸ ಮಾಡುವ ಮೂಲಕ ಅವರನ್ನು ಬದಿಗೆ ಸರಿಸುತ್ತೇನೆ. ನನ್ನ ಟ್ರಸ್ಟ್‌ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ವೈಯಕ್ತಿಕವಾಗಿಯೂ ಕೊಡುಗೆ ನೀಡುತ್ತಿದ್ದೇನೆ. ನೇರ ನಡೆ ನುಡಿಯೇ ಒಮ್ಮೊಮ್ಮೆ ನನ್ನನ್ನು ಸಂದಿಗ್ದತೆಗೆ ಸಿಲುಕಿಸುತ್ತದೆ. ಏನು ಮಾಡಲಿ ಹೇಳಿ.

* ಸರ್ಕಾರದ ಸ್ಥಿರತೆ ಬಗ್ಗೆ ಏನೆನ್ನಿಸುತ್ತದೆ?

ಸದ್ಯಕ್ಕೆ ಯಾರೂ ಸರ್ಕಾರವನ್ನು ಉರುಳಿಸುವುದಿಲ್ಲ. ಏಕೆಂದರೆ ಯಾರೂ ಕೂಡಾ ಮತ್ತೆ ಚುನಾವಣೆಗೆ ಹೋಗಲು ತಯಾರಾಗಿಲ್ಲ. 5 ವರ್ಷದ ಅವಧಿಯನ್ನು ಪೂರ್ಣಗೊಳಿಸುತ್ತದೆ. ಒಂದು ಜಾತ್ಯತೀತ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry