‘ಹಸಿರು ತಾಲ್ಲೂಕನ್ನಾಗಿಸಲು ಯತ್ನ’

7

‘ಹಸಿರು ತಾಲ್ಲೂಕನ್ನಾಗಿಸಲು ಯತ್ನ’

Published:
Updated:

ಹುಕ್ಕೇರಿ: ‘ತಾಲ್ಲೂಕನ್ನು ಹಸಿರು ತಾಲ್ಲೂಕನ್ನಾಗಿ ಪರಿವರ್ತಿಸಲು ನಾಲ್ಕೂ ಗುಡ್ಡಗಳಲ್ಲಿ ಟ್ರೀ ಪಾರ್ಕ್‌ ಮಾಡಲು ಸರ್ಕಾರ ಹಾಗೂ ಶಾಸಕರನ್ನು ಆಗ್ರಹಿಸಲಾಗುವುದು’ ಎಂದು ಉದ್ಯಮಿ ಪೃಥ್ವಿ ಕತ್ತಿ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯ ಪವನ ಕತ್ತಿ ಜಂಟಿಯಾಗಿ ಹೇಳಿದರು.

ತಾಲ್ಲೂಕಿನ ಗುಡಸ್- ಮತ್ತು ಬೆಲ್ಲದ ಬಾಗೇವಾಡಿಯ ಲಕ್ಷ್ಮೀದೇವಿ ಗುಡ್ಡದಲ್ಲಿ ಅರಣ್ಯ, ತೋಟಗಾರಿಕೆ ಇಲಾಖೆ ಹಾಗೂ ವಿಶ್ವರಾಜ ಶುಗರ್ಸ್‌, ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಮತ್ತು ಕೃಷಿ ಸೇವಾ ಸಹಕಾರಿ ಸಂಘಗಳ ಆಶ್ರಯದಲ್ಲಿ ಭಾನುವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉತ್ತಮ ಆರೋಗ್ಯ, ಮಳೆ, ಶುದ್ಧ ಗಾಳಿಗಾಗಿ ಪರಿಸರ ಸಂರಕ್ಷಣೆ ಅವಶ್ಯ. ಆ ನಿಟ್ಟಿನಲ್ಲಿ ಈ ಲಕ್ಷ್ಮೀದೇವಿ, ಹುಕ್ಕೇರಿ ಕ್ಯಾರಗುಡ್ಡ, ಹಿಡಕಲ್ ಡ್ಯಾಂ ಸಮೀಪದ ನಿರ್ವಾಣೇಶ್ವರ ಮತ್ತು ಅಮ್ಮಣಗಿಯ ಹಂದಿಗೂಡ ಗುಡ್ಡಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.

‘ದಟ್ಟ ಅರಣ್ಯ ನಿರ್ಮಾಣದಿಂದ ಉದ್ಯಾನವನ, ಪಶುಪಕ್ಷಿ ಸಂಕುಲ ನಿವಾಸಕ್ಕೆ ಅನುಕೂಲ ಹಾಗೂ ಸಾರ್ವಜನಿಕರು, ಮಕ್ಕಳ ಅನುಕೂಲಕ್ಕೆ ಸಿಮೆಂಟ್ ಬೆಂಚಗಳು ಸೇರಿದಂತೆ ಹತ್ತು ಹಲವು ಸೌಲಭ್ಯಗಳ ಟ್ರೀ ಪಾರ್ಕ್‌ ಬೇಕಾಗಿದೆ’ ಎಂದರು.

ಸಂಬಂಧಿಸಿದ ಅಧಿಕಾರಿಗಳು ‘ಕ್ರಿಯಾ ಯೋಜನೆ’ ತಯಾರಿಸಿ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಅದರ ಮಂಜೂರಾತಿಗೆ ಪ್ರಯತ್ನಿಸಲು ಶಾಸಕ ಉಮೇಶ ಕತ್ತಿ ಅವರನ್ನು ಒತ್ತಾಯಿಸಲಾಗುವುದು ಎಂದರು.

ಸಾಮಾಜಿಕ ಅರಣ್ಯಾಧಿಕಾರಿ ರಾಜೇಂದ್ರ ಕಾಂಬಳೆ, ಹಿಡಕಲ್ ಡ್ಯಾಂ ತೋಟಗಾರಿಕಾ ತರಬೇತಿ ಕೇಂದ್ರದ ರಾಜಶೇಖರ ಪಾಟೀಲ ಮಾತನಾಡಿ ‘ಈಗಾಗಲೇ ಕ್ಯಾರಗುಡ್ಡದಲ್ಲಿ ಶಾಸಕರ ಒತ್ತಾಸೆಯಂತೆ ‘ಟ್ರೀ ಪಾರ್ಕ’ ನಿರ್ಮಿಸಲು ಪ್ರಸ್ತಾವಣೆ ಸಲ್ಲಿಸಲಾಗಿತ್ತು. ಆದರೆ ತಾಂತ್ರಿಕ ತೊಂದರೆಗಳಿಂದ ಅದಕ್ಕೆ ತಡೆಯಾಗಿದೆ. ಮರಳಿ ಅದನ್ನು ಸೇರಿದಂತೆ ವಿವಿಧ ಪ್ರಸ್ತಾವಣೆ ಮರು ಸಲ್ಲಿಸಲಾಗುವುದು’ ಎಂದರು.

ಅರಣ್ಯ ಇಲಾಖೆಯ ಎಸ್.ಎಸ್.ಕೋರಿ, ಪ್ರಶಾಂತ ಗಾಡಿವಡ್ಡರ, ಅರ್ಬನ್ ಬ್ಯಾಂಕಿನ ಸಲಹೆಗಾರ ಎಂ.ಕೆ.ಅಮ್ಮಣಗಿ, ವಿಶ್ವರಾಜ ಶುಗರ್ಸ್‌ ನಿರ್ದೇಶಕ ಎಂ.ಕೆ.ಪೂಜೇರಿ, ಡಿಸ್ಟಲರಿ ವಿಭಾಗದ ವಿ.ಡಿ.ಮುಲ್ತಾನಿ, ಎಂಜಿನಿಯರ್ ಸಿ.ಎಸ್.ಹಿರೇಮಠ ಇದ್ದರು.

ಲಕ್ಷ್ಮೀಗುಡ್ಡದಲ್ಲಿ 600 ಸಸಿಗಳನ್ನು ನೆಡಲಾಗಿದ್ದು ಅವುಗಳ ಪೋಷಣೆಗೆ ವಿಶ್ವರಾಜ ಶುಗರ್ಸ್‌, ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್‌ ಮತ್ತು ಕೃಷಿ ಸೇವಾ ಸಹಕಾರಿ ಸಂಘಗಳ ಆಶ್ರಯದಲ್ಲಿ ಬೋರ್‌ವೆಲ್ ತೋಡಿಸಿ ಸಹಕರಿಸುತ್ತೇವೆ. ಸಸಿಗಳ ಸಂರಕ್ಷಣೆಗೆ ಕುರಿಗಾರರ ಹಾಗೂ ಜಾನುವಾರುಗಳ ಉಪಟಳ ಹೆಚ್ಚಾಗಿದೆ. ಅದನ್ನು ತಪ್ಪಿಸಲು ಅರಣ್ಯ ಇಲಾಖೆ ಗುಡ್ಡದ ಸುತ್ತಲೂ ಪೆನ್ಸಿಂಗ್ ಅಳವಡಿಸಬೇಕು. ಜತೆಗೆ ಸಾರ್ವಜನಿಕರು ಮೂರು ವರ್ಷಗಳವರೆಗೆ ಸಸಿಗಳ ಬೆಳವಣಿಗೆಗೆ ಸಹಕರಿಸಬೇಕು

- ಪೃಥ್ವಿ ಕತ್ತಿ, ಉದ್ಯಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry