ನೊಣ ಹಾವಳಿ: ಜನ ಕಂಗಾಲು

7
ಶಾಮನೂರು ಡಾಲರ್ಸ್ ಕಾಲೊನಿ, ರವೀಂದ್ರನಾಥ ಬಡಾವಣೆ

ನೊಣ ಹಾವಳಿ: ಜನ ಕಂಗಾಲು

Published:
Updated:
ನೊಣ ಹಾವಳಿ: ಜನ ಕಂಗಾಲು

ದಾವಣಗೆರೆ: ‘ಯಾರಾದರೂ ಮನೆಗೆ ಬಂದರೆ ಅವರಿಗೆ ಚಹಾ ಕೊಡಲೂ ನಾವು ಹಿಂದೆ ಮುಂದೆ ನೋಡುವಂತಾಗಿದೆ. ಎಲ್ಲಿ ನೊಣ ಬಿದ್ದಿರುತ್ತದೋ ಎಂಬ ಅಳುಕು ಕಾಡುತ್ತದೆ. ಹಾಗಾಗಿ ಮನೆಗೆ ನೆಂಟರು ಬರುತ್ತಾರೆ ಎಂದರೆ ನಮಗೇ ನಾಚಿಕೆಯಾಗುತ್ತಿದೆ...’ ಶಾಮನೂರು ಡಾಲರ್ಸ್‌ ಕಾಲೊನಿ ನಿವಾಸಿ ಆಶಾ ಅವರ ಬೇಸರದ ಮಾತುಗಳು ಇವು.

ಇದು ಒಂದು ಮನೆಯ ಕತೆಯಲ್ಲ. ಡಾಲರ್ಸ್‌ ಕಾಲೊನಿ, ರವೀಂದ್ರನಾಥ ಬಡಾವಣೆಯ ಸುತ್ತಮುತ್ತಲ 300ಕ್ಕೂ ಅಧಿಕ ಮನೆಗಳ ಸಮಸ್ಯೆ. ಪ್ರತಿ ವರ್ಷ ಮಳೆ ಆರಂಭಗೊಳ್ಳುತ್ತಿದ್ದಂತೆ ನೊಣಗಳ ಹಾವಳಿಯೂ ಆರಂಭವಾಗುತ್ತದೆ. ಮೂರು ತಿಂಗಳು ಇದನ್ನು ಸಹಿಸಿಕೊಂಡರೆ ಬಳಿಕ ಕಡಿಮೆಯಾಗುತ್ತದೆ. ಪ್ರತಿ ವರ್ಷಕ್ಕಿಂತ ಈ ಬಾರಿ ನೊಣಗಳು ಹೆಚ್ಚಾಗಿರುವುದು ಸುತ್ತಮುತ್ತಲಿನ ಜನರ ನೆಮ್ಮದಿಯನ್ನು ಹಾಳು ಮಾಡಿದೆ. ನೊಣಗಳು ಕುಳಿತ ಗೋಡೆ, ಚಾವಣಿಗಳು ಕಪ್ಪಾಗಿ ಕಲಾವಿದರು ಚಿತ್ರ ಬಿಡಿಸಿದಂತೆ ಕಾಣುತ್ತಿವೆ.

‘ಪಕ್ಕದಲ್ಲಿ ಇರುವ ಕೋಳಿ ಫಾರ್ಮ್‌ನಿಂದಾಗಿ ನೊಣಗಳು ಸೃಷ್ಟಿಯಾಗುತ್ತವೆ. ನಮ್ಮ ಸಮಸ್ಯೆಯನ್ನು ಅವರ ಬಳಿ ಹೇಳಿಕೊಂಡರೆ ನೊಣ ಸಾಯಿಸುವ ಔಷಧ ಕೊಡುತ್ತಾರೆ. ಅದನ್ನು ಹಾಕಿದಾಗ ಕೆಲವು ಸಾಯುತ್ತವೆ. ಸ್ವಲ್ಪ ಹೊತ್ತಾದ ಬಳಿಕ ಮತ್ತೆ ಒಂದು ರಾಶಿ ನೊಣಗಳು ಬರುತ್ತವೆ’ ಎನ್ನುತ್ತಾರೆ ಶಿಕ್ಷಕ ನಾಗರಾಜ್‌.

‘ಕೋಳಿ ಫಾರ್ಮ್‌ನವರು ನೀಡುವ ಔಷಧ ಅದಕ್ಕೆ ತಾಗುವುದಿಲ್ಲ. ನಾವು ಹೊರಗಿನಿಂದ ಒಂದು ಪ್ಯಾಕೆಟ್‌ಗೆ ₹ 40 ಕೊಟ್ಟು ತರುತ್ತೇವೆ. ದಿನಕ್ಕೆ ಎರಡು ಪ್ಯಾಕೆಟ್‌ ಬೇಕಾಗುತ್ತದೆ. ಪ್ರತಿ ದಿನ ಇಷ್ಟು ಖರ್ಚು ಮಾಡಿ ಬದುಕುವುದು ಹೇಗೆ’ ಎನ್ನುವುದು ಅವರ ಪ್ರಶ್ನೆ.

‘ಮೈ ಮೇಲೆಯೇ ಕೂತಿರುತ್ತವೆ. ಆರಂಭದಲ್ಲಿ ಹೇಸಿಗೆ ಅನಿಸುತ್ತಿತ್ತು. ಈಗ ಅಭ್ಯಾಸ ಆಗಿಬಿಟ್ಟಿದೆ. ಕೋಳಿ ಫಾರ್ಮ್‌ನವರು ಇದಕ್ಕೆ ಏನಾದರೂ ಮಾಡಬೇಕು’ ಎಂದು ಗೃಹಿಣಿ ರಂಜಿತಾ ಸಮಸ್ಯೆ ತೆರೆದಿಟ್ಟರು.

‘ಪಾಲಿಕೆಗೆ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಅವರು ನೊಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಆಹಾರದ ಮೇಲೆ ನೊಣ ಕೂರುವುದರಿಂದ ಆಗಾಗ ವಾಂತಿ–ಭೇದಿಯೂ ಕಾಣಿಸಿಕೊಳ್ಳುತ್ತಿದೆ’ ಎನ್ನುತ್ತಾರೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಸ್ಥಳೀಯ ನಿವಾಸಿ ರುದ್ರೇಶ್‌.

‘ನಾವು ಬಾಗಿಲು ತೆಗೆಯುವುದೇ ಇಲ್ಲ. ಕಿಟಕಿಗಳಿಗೆ ಜಾಲರಿ ಅಳವಡಿಸಿದ್ದೇವೆ. ಆದರೂ ಅವು ನುಸುಳಿಕೊಂಡು ಬರುತ್ತವೆ’ ಎಂದು ಹೇಮಂತರಾಜ್‌ ಮತ್ತು ಚಂದ್ರಮ್ಮ ಅವರು ನುಸುಳಿ ಬರುತ್ತಿದ್ದ ನೊಣಗಳನ್ನು ತೋರಿಸಿದರು.

‘ನೊಣಗಳ ಹಾವಳಿಯಿಂದ ಊಟ ಮಾಡುವುದೂ ಕಷ್ಟ, ನೀರು ಕುಡಿಯುವುದೂ ಕಷ್ಟ. ನಾವು ತುಂಬಾ ಮುತುವರ್ಜಿ ವಹಿಸುವುದರಿಂದ ರೋಗ ಬಂದಿಲ್ಲ. ಮುಂದೆ ಹೇಗೆ ಎಂದು ಗೊತ್ತಿಲ್ಲ. ನೊಣ ಬಾರದಂತೆ ಮಾಡಬೇಕು’ ಎಂದು ರವೀಂದ್ರನಾಥ ಬಡಾವಣೆಯ ರೇಣುಕಾ ಒತ್ತಾಯಿಸುತ್ತಾರೆ.

‘ಕೋಳಿ ಫಾರ್ಮ್‌ನ ಮಾಲೀಕರು ಒಳ್ಳೆಯವರು. ಬಡವರಿಗೆ ತುಂಬಾ ಉಪಕಾರ ಮಾಡುತ್ತಾರೆ. ಅವರೂ ನೊಣ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಆದರೆ ಆಗುತ್ತಿಲ್ಲ’ ಎಂದು ಬಡಾವಣೆಯ ಮಂಜಪ್ಪ ಕರುಣೆಯ ಮಾತನ್ನಾಡಿದರು.

ಪಾಲಿಕೆ, ಜಿಲ್ಲಾಡಳಿತ ಸೇರಿ ನೊಣಗಳ ಹಾವಳಿಯನ್ನು ನಿಯಂತ್ರಿಸಬೇಕು. ಅವು ಸೃಷ್ಟಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೋಳಿ ಫಾರ್ಮ್‌ ಮಾಲೀಕರಿಗೆ ಸೂಚನೆ ನೀಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ನಿಯಂತ್ರಣಕ್ಕೆ ಕ್ರಮ

‘ಬೆಲ್ಲದ ಪಾಕದ ಜತೆಗೆ ಔಷಧ ಬೆರೆಸಿ ಇಟ್ಟು ನೊಣ ಸಾಯುವಂತೆ ಮಾಡುತ್ತಿದ್ದೇವೆ. ಸಕ್ಕರೆ ಜತೆ ಔಷಧ ಪುಡಿ ಹಾಕಿ ಚೆಲ್ಲುತ್ತೇವೆ. ಬಾಕ್ಸ್‌ ಇಟ್ಟು ಅದರ ಒಳಗೆ ನೊಣ ಬರುವಂತೆ ಆಕರ್ಷಿಸಿ ಅಲ್ಲೇ ಸಾಯುವಂತೆ ಮಾಡುತ್ತಿದ್ದೇವೆ’ ಎಂದು ಕೋಳಿ ಫಾರ್ಮ್‌ನ ಸೂಪರ್‌ವೈಸರ್‌ ಸುನಿಲ್‌ ನೊಣ ನಿಯಂತ್ರಣಕ್ಕೆ ತಾವು ಕೈಗೊಂಡಿರುವ ಕ್ರಮಗಳನ್ನು ತೋರಿಸಿದರು.

ಮಳೆಗಾಲ ಆರಂಭವಾಗುವ ಹೊತ್ತು ನೊಣಗಳ ಸೀಸನ್‌ ಕೂಡ ಆಗಿರುತ್ತದೆ. ಮಾವು, ಹಲಸಿನಂಥ ಹಣ್ಣುಹಂಪಲು ಕೂಡ ನೊಣ ಜಾಸ್ತಿಯಾಗಲು ಕಾರಣ ಎಂದು ವಿವರಿಸಿದರು.

‘ನಮ್ಮ ಪೌಲ್ಟ್ರಿಯಲ್ಲಿ ನೊಣಗಳು ಹೊರಗೆ ಹೋಗದಂತೆ ಮಾಡುತ್ತಿದ್ದೇವೆ. ಜೋರು ಗಾಳಿ ಬೀಸಿದಾಗ ಗಾಳಿ ಜತೆ ಹೋಗಿರುತ್ತವೆ. ಬೇರೆ ಸಮಯದಲ್ಲಿ ಹೋಗುವುದಿಲ್ಲ. ಇಲ್ಲೇ ಸಾಯುತ್ತವೆ’ ಎಂದು ಅವರು ಸ್ಪಷ್ಟನೆ ನೀಡಿದ ಅವರು, ‘ನೊಣ ನಿಯಂತ್ರಣಕ್ಕೆ ಬೇರೆ ಬೇರೆ ಕ್ರಮಗಳನ್ನೂ ಕೈಗೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

ಕ್ರಮಕ್ಕೆ ಒತ್ತಾಯ

‘ನೊಣ ಹಾವಳಿ ಇರುವ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಜನರು ಸಮಸ್ಯೆಗಳನ್ನು ಹೇಳಿದ್ದಾರೆ. ಅವರಿಂದ ಮನವಿ ಪಡೆದು ಬಳಿಕ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಮತ್ತು ಪಾಲಿಕೆ ಆಯಕ್ತರಿಗೆ ದೂರು ನೀಡಲಾಗುವುದು. ನೊಣ ನಿಯಂತ್ರಿಸಲು ಆಗದಿದ್ದರೆ ಪೌಲ್ಟ್ರಿಯನ್ನೇ ಸ್ಥಳಾಂತರ ಮಾಡಲು ಒತ್ತಾಯಿಸಲಾಗುವುದು’ ಎಂದು ಪಾಲಿಕೆಯ ಸ್ಥಳೀಯ ಸದಸ್ಯ ಎನ್‌. ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಲಕೃಷ್ಣ ಪಿ.ಎಚ್‌. ಶಿಬಾರ್ಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry