ಪೌರಕಾರ್ಮಿಕರಿಗೆ 95 ವಸತಿ ಸಮುಚ್ಚಯ ನಿರ್ಮಾಣ

7
ಜಿ ಪ್ಲಸ್‌ 1 ಮಾದರಿಯಲ್ಲಿ ನಿರ್ಮಾಣಕ್ಕೆ ಭೂಮಿಪೂಜೆ ಪೂಜೆ ನೆರವೇರಿಸಿದ ಶಾಸಕ ಶಾಮನೂರು

ಪೌರಕಾರ್ಮಿಕರಿಗೆ 95 ವಸತಿ ಸಮುಚ್ಚಯ ನಿರ್ಮಾಣ

Published:
Updated:

ದಾವಣಗೆರೆ: ದೊಡ್ಡಬೂದಿಹಾಳ್ ಗ್ರಾಮದ ಸರ್ವೆ ನಂ.112ರಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಜಿ ಪ್ಲಸ್‌ 1 ಮಾದರಿಯ 95 ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುವುದು ಎಂದು ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಪಾಲಿಕೆಯ ಪೌರಕಾರ್ಮಿಕರಿಗೆ ರಾಜ್ಯ ಸರ್ಕಾರದ ಗೃಹ ಭಾಗ್ಯ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ ವಸತಿ ಸಮುಚ್ಚಯ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು.

ಈ ಸಮುಚ್ಚಯದಲ್ಲಿ ಒಟ್ಟು 381 ಮನೆಗಳು ನಿರ್ಮಾಣಗೊಳ್ಳಲಿದ್ದು, ಅರ್ಹ ಪೌರ ಕಾರ್ಮಿಕರಿಗಷ್ಟೇ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಗುತ್ತಿಗೆದಾರರಿಗೆ 18 ತಿಂಗಳು ಕಾಲಾವಕಾಶ ನೀಡಲಾಗಿದೆ. 8–10 ತಿಂಗಳಲ್ಲಿ ಮನೆ ನಿರ್ಮಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಪ್ರತಿ ಮನೆ ನಿರ್ಮಾಣಕ್ಕೆ ಸುಮಾರು ₹ 8 ಲಕ್ಷ ವೆಚ್ಚವಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಶೇ 80 ಆಗಿದ್ದು, ಉಳಿದ ಶೇ 20 ಅನ್ನು ಪೌರಕಾರ್ಮಿಕರು ಭರಿಸಲಿರುವರು. ಇಲ್ಲಿಗೆ ಎಲ್ಲಾ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ಕಾಮಗಾರಿ ಕಳೆದ 2 ವರ್ಷಗಳ ಹಿಂದೆಯೇ ಆರಂಭಗೊಳ್ಳಬೇಕಾಗಿತ್ತು. ಕೆಲವು ಅಡಚಣೆಗಳು ಉಂಟಾಗಿದ್ದರಿಂದ ತಡವಾಗಿದೆ ಎಂದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸುಮಾರು 200 ಎಕರೆ ಪ್ರದೇಶವನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಪೌರ ಕಾರ್ಮಿಕರ ಸಂಘದ ನೀಲಗಿರಿಯಪ್ಪ ಸ್ವಾಗತಿಸಿದರು. ಪಾಲಿಕೆ ಸದಸ್ಯ ಎಂ.ಹಾಲೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಕೆ. ಚಮನ್ ಸಾಬ್, ಆಯುಕ್ತ ಮಂಜುನಾಥ್ ಬಳ್ಳಾರಿ, ಸದಸ್ಯರಾದ ಅನಿತಾಬಾಯಿ, ದಿನೇಶ್ ಕೆ. ಶೆಟ್ಟಿ, ಬಸಪ್ಪ, ಎಲ್.ಎಂ. ಹನುಮಂತಪ್ಪ, ಪೌರ ಕಾರ್ಮಿಕರ ಸಂಘದ ಬಿ.ಎಚ್. ವೀರಭದ್ರಪ್ಪ, ದೂಡಾ ಮಾಜಿ ಅಧ್ಯಕ್ಷ ಮಾಲತೇಶ್ ಪೈಲ್ವನ್, ನಗರಸಭೆ ಮಾಜಿ ಉಪಾಧ್ಯಕ್ಷ ಎ.ನಾಗರಾಜ್, ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ್, ಟಿ.ರಮೇಶ್, ಅಣ್ಣಪ್ಪ, ಸಾಗರ್, ಸುಪರಿಟೆಂಡೆಂಟ್‌ ಎಂಜಿನಿಯರ್‌ ಸತೀಶ್, ಎಚ್.ಎನ್.ರಾಜು, ರಾಮಚಂದ್ರಪ್ಪ, ಆರೋಗ್ಯ ನಿರೀಕ್ಷಕರು ಉಪಸ್ಥಿತರಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry