ಉತ್ತಮ ಆರೋಗ್ಯಕ್ಕಾಗಿ ಯೋಗ ನಡಿಗೆ

7
4ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌

ಉತ್ತಮ ಆರೋಗ್ಯಕ್ಕಾಗಿ ಯೋಗ ನಡಿಗೆ

Published:
Updated:

ದಾವಣಗೆರೆ: ಒಂದೆಡೆ ತೇಲಿ ಬರುತ್ತಿದ್ದ ತಂಗಾಳಿ. ಇನ್ನೊಂದೆ ಮೂಡಣದಿಂದ ಹೊರಹೊಮ್ಮುತ್ತಿದ್ದ ಚುಮುಚುಮು ಎಳೆ ಬಿಸಿಲು. ಇದರ ನಡುವೆಯೇ ಹೆಜ್ಜೆ ಮೇಲೊಂದು ಹೆಜ್ಜೆ ಹಾಕುತ್ತ ಸಾಗುತ್ತಿದ್ದ ಅವರಲ್ಲಿತ್ತು ಉತ್ತಮ ಆರೋಗ್ಯದ ಕನವರಿಕೆ...!

4ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ‘ನಮ್ಮ ನಡಿಗೆ ಆರೋಗ್ಯದೆಡೆಗೆ’ ಘೋಷವಾಕ್ಯದಡಿ ಭಾನುವಾರ ಹಮ್ಮಿಕೊಂಡಿದ್ದ ‘ಯೋಗ ನಡಿಗೆ’ಯಲ್ಲಿ ಕಂಡುಬಂದ ದೃಶ್ಯವಿದು. ನಸುಕಿನಲ್ಲೇ ಎದ್ದ ಯೋಗ ಪಟುಗಳು, ಯೋಗಪ್ರಿಯರು, ಎನ್‌ಸಿಸಿ ಕೆಡೆಟ್‌ಗಳು ನಗರದ ಮೋತಿ ವೀರಪ್ಪ ಕಾಲೇಜಿನ ಮೈದಾನಕ್ಕೆ ಬಂದಿದ್ದರು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ‘ಯೋಗವೇ ಮದ್ದು’ ಎಂಬ ಸಂದೇಶವನ್ನು ಸಾರಲು ನಗರದ ವಿವಿಧೆಡೆ ಕಾಲ್ನಡಿಗೆಯಲ್ಲಿ ಸಾಗಲು ಸಜ್ಜಾಗಿ ನಿಂತಿದ್ದರು.

ಉತ್ಸಾಹದಿಂದಲೇ ಮೈದಾನಕ್ಕೆ ಬಂದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಅವರು ಯೋಗಪ್ರಿಯರನ್ನು, ಮಕ್ಕಳನ್ನು ಅಭಿನಂದಿಸಿದರು. ಬಳಿಕ ಅವರು ಹಸಿರು ನಿಶಾನೆ ತೋರುವ ಮೂಲಕ ಯೋಗ ನಡಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿಯೂ ತುಸು ದೂರದವರೆಗೆ ಕಾಲ್ನಡಿಗೆಯಲ್ಲಿ ಬಂದು ಯೋಗಪ್ರಿಯರ ಉತ್ಸಾಹವನ್ನು ಇಮ್ಮಡಿಗೊಳಿಸಿದರು.

ಸಾಗಿದ ಮಾರ್ಗ: ಮೋತಿ ವೀರಪ್ಪ ಕಾಲೇಜಿನ ಮೈದಾನದಿಂದ ಹೊರಟ ಜಾಥಾ, ಗುಂಡಿ ಸರ್ಕಲ್‌, ಜಿಲ್ಲಾ ಆಸ್ಪತ್ರೆ ರಸ್ತೆ, ವಿದ್ಯಾರ್ಥಿ ಭವನ, ಅಂಬೇಡ್ಕರ್‌ ವೃತ್ತ, ಜಯದೇವ ವೃತ್ತ, ಗಾಂಧಿ ವೃತ್ತ, ಹಳೆ ಬಸ್‌ನಿಲ್ದಾಣ, ರೇಣುಕಾಮಂದಿರ, ಎ.ವಿ.ಕೆ. ಕಾಲೇಜು, ರಾಮ್‌ ಅಂಡ್‌ ಕೋ ವೃತ್ತ, ಚರ್ಚ್‌ ರಸ್ತೆ ಮೂಲಕ ಸಾಗಿ ಪುನಃ ಕಾಲೇಜಿನ ಮೈದಾನಕ್ಕೆ ಬಂತು. ಸುಮಾರು ಐದು ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಾಗಿದ ಜನ, ಯೋಗದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.

ಯೋಗವೇ ಜೀವನ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರ, ಸಹೋದರಿಯರು ಯೋಗದ ಮಹತ್ವ ಸಾರುವ ವಿವಿಧ ಘೋಷಣೆಗಳಿರುವ ಫಲಕಗಳನ್ನು ಹಿಡಿದು ಸಾಗಿದರು. ‘ಯೋಗಿಗಳಾಗಿ, ಜ್ಞಾನಿಗಳಾಗಿ ರಾಗ–ದ್ವೇಷದಿಂದ ಮುಕ್ತರಾಗಿ’, ‘ಯೋಗವೇ ಜೀವನ, ಯೋಗದಿಂದಲೇ ಪಾವನ’, ‘ಯೋಗ ಕಲಿಯಿರಿ ರೋಗ–ಭೋಗಗಳಿಂದ ಮುಕ್ತರಾಗಿ’, ‘ಯೋಗ ಮನುಕುಲದ ಸುಯೋಗ’ ಎಂಬಿತ್ಯಾದಿ ಘೋಷಣೆಗಳ ಫಲಕಗಳು ಗಮನಸೆಳೆದವು.

ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್‌, ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಯು. ಸಿದ್ದೇಶಿ, ದಾವಣಗೆರೆಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಲೀಲಕ್ಕ, ಎಂಜಿನಿಯರಿಂಗ್‌ ಬೆಟಾಲಿಯನ್‌ನ ಕರ್ನಲ್‌ ಸಿ.ಎಂ. ಭೋಪಣ್ಣ ಜಾಥಾದ ನೇತೃತ್ವ ವಹಿಸಿದ್ದರು. ಪಿಎಸ್‌ಐ ಶಿವರುದ್ರಪ್ಪ ಮೇಟಿ, ಜಿಲ್ಲಾ ಯೋಗ ಒಕ್ಕೂಟದ ಸದಸ್ಯರು, ಎನ್‌.ಸಿ.ಸಿ ಕೆಡೆಟ್‌ಗಳು, ಅಕ್ಕಮಹಾದೇವಿ ಯೋಗ ಶಾಲೆಯ ಮಕ್ಕಳು, ಸಾಸ್‌ ಅಂತರರಾಷ್ಟ್ರೀಯ ಯೋಗ ಫೌಂಡೇಶನ್‌ ಮತ್ತು ಶ್ರೀ ಸಿದ್ದಿ ಶಕ್ತಿ ಮಹಿಳಾ ಯೋಗ ಕೇಂದ್ರದ ಸದಸ್ಯರೂ ಜಾಥಾದಲ್ಲಿ ಭಾಗವಹಿಸಿದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್‌ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ, ತಪೋವನ ಮೆಡಿಕಲ್‌ ಕಾಲೇಜ್‌ ಆಫ್‌ ನ್ಯಾಚುರೋಪಥಿ ಮತ್ತು ಯೋಗಿಕ್‌ ಸೈನ್ಸಸ್‌, ಪದವಿ ಪೂರ್ವ ಶಿಕ್ಷಣ ಇಲಾಖೆ, ಪತಂಜಲಿ ಯೋಗ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಎನ್‌.ಸಿ.ಸಿ, ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ ಯೋಗ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry