ಬಿಆರ್‌ಟಿಎಸ್ ಕಾಮಗಾರಿ ವಿಳಂಬಕ್ಕೆ ರೇವಣ್ಣ ಗರಂ

7
ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಅಧಿಕಾರಿ, ಗುತ್ತಿಗೆದಾರರ ಮೇಲೆ ಕ್ರಮ

ಬಿಆರ್‌ಟಿಎಸ್ ಕಾಮಗಾರಿ ವಿಳಂಬಕ್ಕೆ ರೇವಣ್ಣ ಗರಂ

Published:
Updated:

ಧಾರವಾಡ: ‘ಹಲವು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿರುವ ಬಿಆರ್‌ಟಿಎಸ್‌ ಕಾಮಗಾರಿಯನ್ನು ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು. ಇಲ್ಲವೇ ಇಲಾಖೆಯ ಮೇಲಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಭಾನುವಾರ ನಡೆದ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಪ್ರಕೃತಿ ಹಾನಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಲೋಕೋಪಯೋಗಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ನಾಲ್ಕು ಗುತ್ತಿಗೆದಾರರು ಹಾಗೂ ಬಿಆರ್‌ಟಿಎಸ್‌ನಿಂದ 17 ಗುತ್ತಿಗೆದಾರರು ಈ ಕಾಮಗಾರಿ ನಡೆಸುತ್ತಿದ್ದಾರೆ. 2016ರಲ್ಲೇ ಮುಗಿಯಬೇಕಾದ ಕಾಮಗಾರಿ ಈಗಲೂ ಪೂರ್ಣ

ಗೊಂಡಿಲ್ಲ ಎಂದಾದರೆ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಅಧಿಕಾರಿಗಳ ನಿಷ್ಕಾಳಜಿ ಇದ್ದಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದು ಕಟ್ಟುನಿಟ್ಟಿನ ಕ್ರಮ ಜರುಗಿಸಲು ಕೋರುತ್ತೇನೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

‘ಮಂದಿರಗಳ ತೆರವು ಕಾರ್ಯಾಚರಣೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ಆಗಬೇಕಾದರೆ, ಇಂಥವು ಸಾಮಾನ್ಯ. ಯಾವುದೇ ಮುಲಾಜಿಲ್ಲದೆ ದೇವಸ್ಥಾನಗಳನ್ನು ಒಡೆದು ಕಾಮಗಾರಿ ಪೂರ್ಣಗೊಳಿಸಿ’ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಬೈಪಾಸ್ ರಸ್ತೆ ಕಿರಿದಾಗಿದ್ದು, ಇದನ್ನು ಚತುಷ್ಪಥ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಲು ಈ ಭಾಗದ ಶಾಸಕರು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಈ ರಸ್ತೆಯಲ್ಲಿ ಈವರೆಗೂ ಆಗಿರುವ ಅಪಘಾತ ಹಾಗೂ ಪ್ರಾಣಹಾನಿಯ ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ತರಿಸಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರ ಹಣ ನೀಡಲಿದೆ ಎಂದು ಹೇಳಿದ ಅರವಿಂದ ಬೆಲ್ಲದ ಅವರಿಗೆ ಪ್ರತಿಕ್ರಿಯಿಸಿದ ರೇವಣ್ಣ, ‘ಇಲ್ಲಿ ಸುಳ್ಳು ಹೇಳುವುದು ಬೇಡ. ಅವರು ಕೊಡುತ್ತಾರೋ ಬಿಡುತ್ತಾರೊ ಜನರಿಗೆ ತೊಂದರೆಯಾಗದಂತೆ ಕೆಲಸ ನಡೆಯಬೇಕು ಅಷ್ಟೇ. ಅದನ್ನು ಮಾಡೋಣ. ಹಣ ನೀಡುವುದು ನನ್ನ ಜವಾಬ್ದಾರಿ. ನಿಂತು ಕೆಲಸ ಮಾಡಿಸಿಕೊಳ್ಳುವುದು ಜಿಲ್ಲಾಧಿಕಾರಿ ಹಾಗೂ ಶಾಸಕರ ಜವಾಬ್ದಾರಿ. ನನಗೆ ಯಾವುದೇ ಕೆಟ್ಟ ಹೆಸರು ಬೇಡ’ ಎಂದರು.

ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ನಿಂದ ರಾಣಿ ಚನ್ನಮ್ಮ ವೃತ್ತದವರೆಗಿನ ಚತುಷ್ಪಥ ರಸ್ತೆ ಕುರಿತು ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ‘ನ್ಯೂ ಇಂಗ್ಲಿಷ್ ಮಿಡಿಯಂ ಶಾಲೆವರೆಗೂ ಕಾಮಗಾರಿ ನಡೆಸಲು ತೊಂದರೆ ಇಲ್ಲ. ಆದರೆ, ಮುಂದಿನ ಹಾದಿಯಲ್ಲಿ ಭೂಸ್ವಾಧೀನ ನಡೆಯಬೇಕು. ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದರೂ, ಭೂಸ್ವಾಧೀನಕ್ಕೆ ಸರ್ಕಾರದ ಅನುಮೋದನೆ ಅಗತ್ಯ. ಹಾಗೆಯೇ ಹಳೇ ಮಂಟೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಅದರ ದುರಸ್ತಿ ಕಾರ್ಯ ಆಗಬೇಕಿದೆ’ ಎಂದರು.

‘ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 35 ರಸ್ತೆಗಳು ಹಾಳಾಗಿದ್ದು, ಒಟ್ಟು ₹ 1.27ಕೋಟಿ ನಷ್ಟ ಉಂಟಾಗಿದೆ. ಹಾಗೆಯೇ ಪಂಚಾಯತ್‌ ರಾಜ್‌ಗೆ ಸೇರಿದ 70 ರಸ್ತೆಗಳು, 35 ಕಿರು ರಸ್ತೆ ಹಾಗೂ ಸೇತುವೆಗಳು ಹಾಳಾಗಿದ್ದು ₹30 ಕೋಟಿ ಹಾನಿಯಾಗಿದೆ. ಹಾನಿಯ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ಎಸ್‌.ಬಿ.ಬೊಮ್ಮನಹಳ್ಳಿ ತಿಳಿಸಿದರು.

ಮತ್ತೆ 15 ದಿನಗಳ ನಂತರ ಜಿಲ್ಲೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸುವುದಾಗಿ ರೇವಣ್ಣ ಹೇಳಿದರು. ಜತೆಗೆ ವಿಪತ್ತು ನಿರ್ವಹಣೆ ಕುರಿತು ಪ್ರತಿದಿನದ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ರೇವಣ್ಣ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry