ಕಾಮಗಾರಿ ಅಪೂರ್ಣ: ನೀರಿಗಾಗಿ ತಪ್ಪದ ಅಲೆದಾಟ

7
ಹಲಕರ್ಟಿ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕಾಮಗಾರಿ ಅಪೂರ್ಣ: ನೀರಿಗಾಗಿ ತಪ್ಪದ ಅಲೆದಾಟ

Published:
Updated:

ವಾಡಿ: ಸಮೀಪದ ಹಲಕರ್ಟಿ ಗ್ರಾಪಂ ವ್ಯಾಪ್ತಿಯ ಬಳವಡ್ಗಿ ಗ್ರಾಮದಲ್ಲಿ ಬೇಸಿಗೆ ಕಳೆದರೂ ಕುಡಿಯುವ ನೀರಿಗಾಗಿ ಅಲೆದಾಟ ತಪ್ಪಿಲ್ಲ. ಕುಡಿಯಲು ನೀರು ಒದಗಿಸಿ ಎನ್ನುವ ಗ್ರಾಮಸ್ಥರ ಕೂಗು, ಅರಣ್ಯರೋಧನವಾಗಿದೆ. ಸಮಸ್ಯೆಗೆ ಸ್ಪಂಧಿಸಬೇಕಾದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮಹಿಳೆಯರು, ಮಕ್ಕಳು ಕೈಯಲ್ಲಿ ಕೊಡಗಳನ್ನು ಹಿಡಿದು ನೀರಿನ ಸೆಲೆ ಹುಡುಕುತ್ತಾ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ವಾರ್ಡ್ ನಂ. ೨ರ ಭೀಮನಗರದಲ್ಲಿ ನೀರಿನ ಹಾಹಾಕಾರ ಮುಂದುವರೆದಿದ್ದು, ಸಮಸ್ಯೆ ಪರಿಹರಿಸದ ಪಂಚಾಯಿತಿ ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪೂರ್ಣ ಕಾಮಗಾರಿ ಸಮಸ್ಯೆಗೆ ಮೂಲಕಾರಣ: ನೀರಿನ ಸಮಸ್ಯೆ ಅರಿತು ಸರ್ಕಾರ, ಪೈಪ್ ಲೈನ್ ಮೂಲಕ ಭೀಮನಗರಕ್ಕೆ ನೀರು ಸರಬರಾಜು ಮಾಡಲು ಕಳೆದ ವರ್ಷ ೧.೨೦ ಲಕ್ಷ ಅನುಧಾನ ಒದಗಿಸಿತ್ತು. ಹಳೆಯ ಬೋರ್ ಗೆ ಮೋಟಾರು ಅಳವಡಿಸಿ ಸುಮಾರು ೧೦೦ ಮೀಟರ್ ಪೈಪ್ ಲೈನ್ ಹಾಕಿಸಿ ನೀರು ಒದಗಿಸಲು ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆ ಸಹ ರೂಪಿಸಲಾಯಿತು. ನಮ್ಮ ಬಡಾವಣೆಯ ನೀರಿನ ಸಮಸ್ಯೆ ಪರಿಹಾರವಾಗಿ ದಿನನಿತ್ಯ ಗೋಳು ತಪ್ಪುತ್ತದೆ ಎಂದು ಗ್ರಾಮಸ್ಥರು ನಂಭಿದ್ದರು. ಆದರೆ, ಕಾಮಗಾರಿ ಮಾತ್ರ ಮುಗಿಯದೇ ಸಮಸ್ಯೆ ಜೀವಂತವಾಗಿ ಉಳಿದು ಗ್ರಾಮಸ್ಥರ ಗೋಳಾಟಕ್ಕೆ ಕಾರಣವಾಗುತ್ತಿದೆ. ಗುತ್ತಿಗೆ ಪಡೆದ ಗುತ್ತಿಗೆದಾರರು, ಕೆಲಸ ಪೂರ್ಣಗೊಳಿಸದೇ ಹಣ ಲಪಟಾಯಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸುತ್ತಾರೆ ಗ್ರಾಮಸ್ಥರು. "ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸದೇ ಸಂಪೂರ್ಣ ಹಣದ ಖರ್ಚು ತೋರಿಸಲಾಗಿದೆ. ಅಧಿಕಾರಿಗಳ ಬೇಜವಬ್ದಾರಿಯಿಂದ ಗುಮ್ಮಿಗೆ ಒಂದು ಹನಿ ನೀರು ಹರಿದಿಲ್ಲ" ಎಂದು ಆರೋಪಿಸುತ್ತಾರೆ ದಲಿತ ಮುಖಂಡ ಜೈಭೀಮ ಶರ್ಮಾ.

ತೆರೆದ ಬಾವಿಯೇ ಆಸರೆ: ಗ್ರಾಮದ ಹೊರವಲಯದ ಮಸೀದಿ ಹತ್ತಿರ ಇರುವ ಪುಟ್ಟ ಬಾವಿಯ ನೀರು, ಸದ್ಯ ಗ್ರಾಮಸ್ಥರಿಗೆ

ಆಸರೆಯಾಗಿದೆ.

೩ ಅಡಿ ಸುತ್ತಳತೆಯ ಬಾವಿ ನೀರು ಸಹ ಕೆಲವೊಮ್ಮೆ ಕಲುಷಿತಗೊಳ್ಳುತ್ತದೆ. ಆದರೂ ಗ್ರಾಮಸ್ಥರು, ಅನಿವಾರ್ಯವಾಗಿ ಅದೇ ಬಾವಿಯ ನೀರು ಸೇವನೆ ಮಾಡುತ್ತಾರೆ. "ನಮ್ಮ ಮನಿಯಿಂದ ಬಾವಿ ಬಹಳ ದೂರಾ ಆದಾರ್ರಿ, ಆದ್ರೂ ಕೈಯಲ್ಲಿ ಕೊಡ ಹಾಗೂ ಸೇದಲು ಹಗ್ಗ ಹಿಡಿದುಕೊಂಡು ಬಾವಿಗೆ ನೀರು ಒಯ್ಲಾಕ್ ಬರ್ತೀನ್ರೀ. ಯಾರಿಗೆ ಹೇಳಬೇಕು ನಮ್ಮ ಸಮಸ್ಯೆ" ಎನ್ನುತ್ತಾರೆ ವಾರ್ಡ್ ನಂ.೨ ರ ನಿವಾಸಿ ಯಲ್ಲಮ್ಮ ಬಳವಡ್ಗಿ.

"ಅಧಿಕಾರಿಗಳಿಗೆ ನಮ್ಮ ಸಮಸ್ಯೆ ಹೇಳಬೇಕಂದ್ರ ಅವರು ಪೋನು ಸ್ವೀಕರಿಸುವುದಿಲ್ಲ. ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ನಮಗೆ ಸಂಬಂಧ ಇಲ್ಲ ಅನ್ನೋ ರೀತಿ ವರ್ತಿಸುತ್ತಾರೆ. ನಮಗೆ ಶುದ್ದವಾದ ಕುಡಿಯುವ ನೀರು ಒದಗಿಸದಿದ್ದರೆ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು. ಪೈಪ್ ಲೈನ್ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದ್ದು, ಗುತ್ತಿಗೆದಾರರ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸುತ್ತಾರೆ ಸ್ಥಳೀಯ ನಿವಾಸಿ ಮಹಾನಂಧಿ ಹೊನಗುಂಟಿಕರ್.

ಪತ್ರ ಚಳುವಳಿಗೆ ಗ್ರಾಮಸ್ಥರ ನಿರ್ಧಾರ: ಸಮಸ್ಯೆ ಪರಿಹರಿಸದ ಅಧಿಕಾರಿಗಳ ವಿರುದ್ದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಒಂದು ವಾರದಲ್ಲಿ ಸಮಸ್ಯೆ ಪರಿಹರಿಸದಿದ್ದಲ್ಲಿ ಹಲಕರ್ಟಿ ಗ್ರಾಮ ಪಂಚಾಯಿತಿ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದರ ಮೂಲಕ ಒತ್ತಾಯಿಸಲಾಗುವುದು ಎನ್ನುವ ಗ್ರಾಮಸ್ಥರು ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಿ, ನೀರು ಹರಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸಿದ್ದರಾಜ ಎಸ್ ಮಲಕಂಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry