ಹಕ್ಕಿಪಿಕ್ಕಿ; ಗಿಡಮೂಲಿಕೆ ಔಷಧ ಪದ್ಧತಿ ಅಧ್ಯಯನ

7
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಸಂಶೋಧನಾ ಅಧ್ಯಯನ ವರದಿ ಸಲ್ಲಿಕೆ

ಹಕ್ಕಿಪಿಕ್ಕಿ; ಗಿಡಮೂಲಿಕೆ ಔಷಧ ಪದ್ಧತಿ ಅಧ್ಯಯನ

Published:
Updated:

ಮೈಸೂರು: ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯ ನೀಡುವ ಗಿಡಮೂಲಿಕೆ ಔಷಧ ಪದ್ಧತಿಯ ವಿಧಾನವನ್ನು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಸಂರಕ್ಷಿಸಿದೆ.

ಗಿಡಮೂಲಿಕೆಗಳಿಂದ ಔಷಧ ತಯಾರಿಸುವ ಹಾಗೂ ನೀಡುವ ಪದ್ಧತಿ ಹಕ್ಕಿಪಿಕ್ಕಿ ಸಮುದಾಯದಲ್ಲಿ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತದೆ. ಆದರೆ, ಈ ವಿಚಾರವನ್ನು ಸಮುದಾಯದವರು ಇತರರಿಗೆ ಹೇಳುವುದಿಲ್ಲ. ಹೀಗಾಗಿ, ಸಂಸ್ಥೆಯು ಅವರ ಮನವೊಲಿಸಿ ಪಾರಂಪರಿಕ ಜ್ಞಾನವನ್ನು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಯಾವ ಕಾಯಿಲೆಗೆ ಯಾವ ಗಿಡಮೂಲಿಕೆ ಬಳಸುತ್ತಾರೆ? ಎಷ್ಟು ಪ್ರಮಾಣ ಬಳಸುತ್ತಾರೆ ಎನ್ನುವುದನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಲಾಗಿದೆ. ಅವರ ಪಾರಂಪರಿಕ ಜ್ಞಾನವನ್ನು ಆಧುನಿಕ ಸಮಾಜಕ್ಕೆ ಪರಿಚಯ ಮಾಡಿಕೊಡುವುದು ಅಧ್ಯಯನದ ಮುಖ್ಯ ಉದ್ದೇಶವಾಗಿದೆ.

ಅರಣ್ಯದಲ್ಲಿ ಸಿಗುವ ಔಷಧೀಯ ಸಸ್ಯಗಳ ಬೇರು, ಗಿಡ, ಮರ ಹಾಗೂ ವನ್ಯಪ್ರಾಣಿಗಳಿಂದಲೂ ಔಷಧಿ ಸಿದ್ಧಗೊಳಿಸುತ್ತಾರೆ. ಎತ್ತರದ ದೇಹ, ಸದೃಢ ಆರೋಗ್ಯ ಹಾಗೂ ನೀಳಗೂದಲಿನ ಹಕ್ಕಿಪಿಕ್ಕಿಗಳು ತಾವು ತಯಾರಿಸುವ ಔಷಧಿಯನ್ನೇ ಸೇವಿಸುತ್ತಾರೆ ಹೊರತು ಆಸ್ಪತ್ರೆಗಳಿಗೆ ಅಲೆಯುವುದು ವಿರಳ. ಈ ಕುರಿತು ಅಧ್ಯಯನ ಕೈಗೊಂಡ ಸಂಸ್ಥೆಯು, ಇದಕ್ಕಾಗಿ ಹಕ್ಕಿಪಿಕ್ಕಿಗಳ 15–20 ಗುಂಪುಗಳನ್ನು ರಚಿಸಿತ್ತು. ಈ ಗುಂಪಿನೊಳಗೆ ಸಂಸ್ಥೆಯ ಸಿಬ್ಬಂದಿಯೂ ಸೇರಿ ಮಾಹಿತಿ ಕಲೆ ಹಾಕಿದರು.

ಈ ಸಂಬಂಧ ಸಂಸ್ಥೆಯು ನಗರದಲ್ಲಿ ಎರಡು ಕಾರ್ಯಾಗಾರಗಳನ್ನು ಏರ್ಪಡಿಸಿತ್ತು. ಜನರ ಎದುರೇ ಔಷಧಿ ತಯಾರಿಸುವ ಪ್ರಾತ್ಯಕ್ಷಿಕೆಯನ್ನು ಹಕ್ಕಿಪಿಕ್ಕಿ ಸಮುದಾಯದವರು ನೀಡಿದ್ದರು. ದೃಷ್ಟಿದೋಷ, ಕಿವಿ ಸೋರುವುದು, ಮಕ್ಕಳಿಗೆ ನಿರಂತರವಾಗಿ ಕಾಡುವ ಕೆಮ್ಮು, ಅಶಕ್ತತೆ, ಹಾವು, ಚೇಳು ಕಡಿತಕ್ಕೆ ಔಷಧಿ, ಕಿಡ್ನಿಯಲ್ಲಿ ಕಲ್ಲು, ಭುಜ, ಮಂಡಿನೋವಿಗೂ ಔಷಧ ಸಿದ್ಧಪಡಿಸುತ್ತಾರೆ.

ವರದಿ ಸಲ್ಲಿಕೆ: ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ರಾಜ್ಯ ಸರ್ಕಾರದ ಮೂಲಕ ಈಚೆಗೆ ವರದಿಯನ್ನು ಸಲ್ಲಿಸಲಾಗಿದೆ. ಇತರ ರಾಜ್ಯಗಳ ಬುಡಕಟ್ಟು ಸಮುದಾಯಗಳ ಔಷಧ ಪದ್ಧತಿಯೊಂದಿಗೆ ಈ ವರದಿಯ ತೌಲನಿಕ ಅಧ್ಯಯನ ನಡೆಯಲಿದೆ. ಜತೆಗೆ, ಬೇರೆ ಬುಡಕಟ್ಟು ಸಮುದಾಯಗಳಿಗೆ ಪರಿಚಯಿಸುವುದರೊಂದಿಗೆ ವಿಶ್ವವ್ಯಾಪಿ ಪ್ರಸಾರಗೊಳಿಸುವ ಉದ್ದೇಶ ಹೊಂದಲಾಗಿದೆ.

ಇದರೊಂದಿಗೆ ಅವರು ಮಸಾಜ್ ಪರಿಣತರು, ವಿವಿಧ ರಾಜ್ಯಗಳಿಗೆ ಅಲ್ಲದೆ, ವಿದೇಶಕ್ಕೂ ತೆರಳುತ್ತಾರೆ. ನೇಪಾಳ, ಮಲೇಷ್ಯಾ, ಹಾಂಕಾಂಗ್, ಕುವೈತ್, ದುಬೈ ಮೊದಲಾದ ದೇಶಗಳಿಗೆ ಕುಟುಂಬ ಸಮೇತ ತೆರಳಿ ತಿಂಗಳುಗಟ್ಟಲೆ ಉಳಿದು ವಾಪಸು ಬರುತ್ತಾರೆ.

‘ಎರಡು ವರ್ಷಗಳ ಹಿಂದೆ ಹಕ್ಕಿಪಿಕ್ಕಿ ಸಮುದಾಯದ ಭಾಷೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಧ್ಯಯನವನ್ನು ನಮ್ಮ ಸಂಸ್ಥೆ ಮೂಲಕ ಕೈಗೊಂಡಿದ್ದೆವು. ಸದ್ಯ ಅವರ ನಾಟಿ ಇಲ್ಲವೆ ಗಿಡಮೂಲಿಕೆ ಔಷಧ ಪದ್ಧತಿಯನ್ನು ಒಂದೂವರೆ ವರ್ಷದಿಂದ ಅಧ್ಯಯನ ಮಾಡಿದ್ದೇವೆ. ಇದರಿಂದ ಆಧುನಿಕ ವೈದ್ಯಕೀಯ ಪದ್ಧತಿಗೂ ನೆರವಾಗಲಿದೆ’ ಎನ್ನುತ್ತಾರೆ ಸಂಸ್ಥೆ ನಿರ್ದೇಶಕ ಡಾ.ಟಿ.ಟಿ.ಬಸವನಗೌಡ.

ಮೈಸೂರು ಜಿಲ್ಲೆಯಲ್ಲಿಯೇ ಹೆಚ್ಚು

2011ರ ಜನಸಂಖ್ಯೆ ಪ್ರಕಾರ ರಾಜ್ಯದಲ್ಲಿ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರು 11,892 ಇದ್ದಾರೆ. ಇದರಲ್ಲಿ 6,039 ಪುರುಷರು ಹಾಗೂ 5,853 ಮಹಿಳೆಯರು. ಇವರಲ್ಲಿ ಮೈಸೂರು ಜಿಲ್ಲೆಯಲ್ಲಿಯೇ ಹೆಚ್ಚು ಅಂದರೆ 1,898 ಹಕ್ಕಿಪಿಕ್ಕಿಯವರಿದ್ದು, 938 ಪುರುಷರು ಹಾಗೂ 960 ಮಹಿಳೆಯರು ಇದ್ದಾರೆ.

‘ಕಾಡಂಚಿನಲ್ಲಿ ವಾಸಿಸುವ ಅವರು, ಮೊದಲಿನ ಹಾಗೆ ಕಾಡಿನ ಬಳಕೆಗೆ ಅರಣ್ಯ ಕಾಯ್ದೆಯು ತಡೆಯೊಡ್ಡಿದೆ. ಇದರೊಂದಿಗೆ ಅವರು ಅಲೆಮಾರಿಗಳಾಗಿರುವುದರಿಂದ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕಾಗಿ ಆಶ್ರಮ ಶಾಲೆಗಳಿದ್ದರೂ ಬೆಳಿಗ್ಗೆ ಮಕ್ಕಳನ್ನು ಕಳುಹಿಸಿ, ಸಂಜೆಗೆ ಮನೆಗೆ ಕರೆದೊಯ್ಯುತ್ತಾರೆ. ಬೇರೆ ಊರುಗಳಿಗೆ ತೆರಳಿದರೆ ಮಕ್ಕಳನ್ನೂ ಕರೆದೊಯ್ಯುತ್ತಾರೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದು ಸಂಸ್ಥೆ ನಿರ್ದೇಶಕ ಡಾ.ಟಿ.ಟಿ.ಬಸವನಗೌಡ ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry