ಕೋಮುವಾದಕ್ಕೆ ಬಲಿಯಾಗಿ ಅನ್ನ ಕೊಟ್ಟವರ ಮರೆತರು

7
ಸಂವಾದ ಕಾರ್ಯಕ್ರಮದಲ್ಲಿ ದಿನೇಶ್‌ ಅಮೀನ್‌ಮಟ್ಟು ಅಭಿಮತ

ಕೋಮುವಾದಕ್ಕೆ ಬಲಿಯಾಗಿ ಅನ್ನ ಕೊಟ್ಟವರ ಮರೆತರು

Published:
Updated:

ಶಿವಮೊಗ್ಗ: ಜನರಲ್ಲಿ ಕೋಮುವಾದ ಹರಡುವುದು ಸುಲಭ. ಆದರೆ ಇದಕ್ಕೆ ವಿರುದ್ಧವಾಗಿ ಜಾತ್ಯತೀತತೆಯ ಪ್ರಜ್ಞೆ ಬೆಳೆಸುವುದು  ಕಷ್ಟ ಎಂದು ಪ್ರಗತಿಪರ ಚಿಂತಕ ದಿನೇಶ್‌ ಅಮೀನ್‌ಮಟ್ಟು ಅಭಿಪ್ರಾಯಪಟ್ಟರು.

ನಗರದ ಕಮಲಾ ನೆಹರೂ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಭಾನುವಾರ ಏರ್ಪಡಿಸಿದ್ದ ‘ಚುನಾವಣೆ: ಒಳ, ಹೊರಗೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋಮುವಾದ ಹರಡುವವರಿಗೆ ಈ ದೇಶದ ವೇದ, ಉಪನಿಷತ್ತು, ಸಂಸ್ಕೃತಿ, ಆಚಾರ, ವಿಚಾರದ ಬಗ್ಗೆ ಕೇಳಿದರೇ ಗೊತ್ತಿರುವುದಿಲ್ಲ. ಆದರೆ ಕೋಮುವಾದ ಎನ್ನುವ ವೈರಸ್‌ ಮೆದುಳಿನಲ್ಲಿ ಪ್ರವೇಶ ಮಾಡಿದರೇ ಸಾಕು ಅನ್ನ, ನೀರು, ಹಾಲು, ಮನೆ, ಔಷಧಿ, ಉದ್ಯೋಗ, ಶಿಕ್ಷಣ ಕೊಟ್ಟವರನ್ನು ಮರೆಯುತ್ತಾರೆ ಎಂದರು.

ಈ ಬಾರಿಯೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿತ್ತು. ಸಮೀಕ್ಷೆಗಳು ಸಹ ಕಾಂಗ್ರೆಸ್ ಪರವಾಗಿಯೇ ಇದ್ದವು. ಈ ಬಾರಿ ಅಭಿವೃದ್ಧಿ ವಿಷಯದಲ್ಲಿ ಅಥವಾ ಭ್ರಷ್ಟಾಚಾರದ ವಿಷಯದಲ್ಲಿ ಚುನಾವಣೆ ನಡೆದಿದ್ದರೂ ಕಾಂಗ್ರೆಸ್‌ ಗೆಲ್ಲುತ್ತಿತ್ತು. ಆದರೆ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಚುನಾವಣೆ ನಡೆಯಿತು. ಇದರಿಂದ ಕಾಂಗ್ರೆಸ್‌ಗೆ ದೊಡ್ಡ ಸವಾಲು ಎದುರಾಯಿತು. ಕಾಂಗ್ರೆಸ್‌ ನಾಯಕರು ಸಹ ಜನರಲ್ಲಿರುವ ಕೋಮುವಾದದ ವೈರಸ್‌ ತೊಳೆಯುವಲ್ಲಿ ವಿಫಲರಾದರು ಎಂದು ಹೇಳಿದರು.

ಕಾಂಗ್ರೆಸ್‌ ಜಾತ್ಯತೀತ ಬದ್ಧತೆ ಸಾಧಿಸಿದ ಪಕ್ಷ ಎನಿಸಿಕೊಂಡರೂ ಈ ಬದ್ಧತೆ ಸಾಕಷ್ಟು ಮಂದಿ ಕಾಂಗ್ರೆಸ್‌ ನಾಯಕರಿಗಿಲ್ಲ. ಸೈದ್ಧಾಂತಿಕ ನೆಲೆಯಲ್ಲಿ ಪಕ್ಷವನ್ನು ಕಟ್ಟದಿರುವುದು ಸಹ ಕಾಂಗ್ರೆಸ್‌ನ ಬಹುದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಸೈದ್ಧಾಂತಿಕವಾದ ಆತ್ಮವಂಚನೆ, ಸೈದ್ಧಾಂತಿಕವಾದ ಅಸ್ಪಷ್ಟತೆಯೇ ಕಾಂಗ್ರೆಸ್‌ಗೆ ಹಿನ್ನಡೆಯಾಯಿತು. ಹಾಗಾಗಿ ಕಾಂಗ್ರೆಸ್‌ ನಾಯಕರಿಗೆ ಸೈದ್ಧಾಂತಿಕ ತರಬೇತಿಯ ಅಗತ್ಯವಿದೆ ಎಂದರು.

ಇಂದಿಗೂ ರಾಜ್ಯದಲ್ಲಿ ಕಾಂಗ್ರೆಸ್‌ ಭದ್ರವಾಗಿದೆ. ಕಳೆದ ಬಾರಿಗಿಂತಲೂ ಕಾಂಗ್ರೆಸ್‌ಗೆ ಮತ ಪ್ರಮಾಣ ಏರಿಕೆಯಾಗಿದೆ. ಈವರೆಗೂ ಬಿಜೆಪಿಗೆ ಮತ ಪ್ರಮಾಣದಲ್ಲಿ ಕಾಂಗ್ರೆಸ್‌ನ್ನು ಹಿಂದಕ್ಕೆ ಹಾಕಲು ಸಾಧ್ಯವಾಗಿಲ್ಲ. ಆದರೆ ಪ್ರಚಾರದ ಕೊನೆಯ ದಿನಗಳಲ್ಲಿ ಕಾಂಗ್ರೆಸ್ ಹಿಂದೆ ಬಿತ್ತು. ಜತೆಗೆ ಸಾಕಷ್ಟು ಅಪಪ್ರಚಾರ ನಡೆಯಿತು. ಈ ಬಗ್ಗೆ ಆತ್ಮಾವಲೋಕನ ನಡೆದು 2019ರ ಚುನಾವಣೆಯನ್ನು ಕಾಂಗ್ರೆಸ್‌ ಎದುರಿಸಬೇಕಿದೆ. ರಾಜಕೀಯದಲ್ಲಿ ಮಾತ್ರವೇ ಅಹಿಂದ ಇದ್ದರೆ ಸಾಲದು. ಅದು ಉದ್ಯೋಗ, ಶಿಕ್ಷಣ, ಉದ್ಯಮ, ಮಾಧ್ಯಮ ಹೀಗೆ ಎಲ್ಲಾ ಸಾಮಾಜಿಕ ಕ್ಷೇತ್ರಗಳಲ್ಲೂ ವಿಸ್ತಾರವಾಗಬೇಕು. ಇಲ್ಲವಾದರೇ ಉಳಿದ ಅಹಿಂದಗಳು ಸೇರಿ ರಾಜಕೀಯ ಅಹಿಂದವನ್ನು ಮುಗಿಸುತ್ತವೆ ಎಂದರು.

ಮಹಿಳಾ ಹೋರಾಟಗಾರ್ತಿ ಯಮುನಾ ಗಾಂವ್ಕರ್‌ ‘ಚುನಾವಣೆಯಲ್ಲಿ ಮಹಿಳಾ ಅನುಭವ’ ಕುರಿತು ಮಾತನಾಡಿ, ‘ಹೆಣ್ಣುಮಕ್ಕಳು ರಾಜಕಾರಣಕ್ಕೆ ಬಂದರೇ ಹೇಸಿಗೆಯಿಂದ ನೋಡುವ ದೃಷ್ಟಿಕೋನ ಇಂದಿಗೂ ಇದೆ. ಲಿಂಗ ಸಂವೇದನೆ ಇಲ್ಲದ ಸಮಾಜದಲ್ಲಿ ಮಹಿಳೆಯರಿದ್ದಾರೆ. ಹಾಗಾಗಿ ಇಂದಿನ ರಾಜಕಾರಣದಲ್ಲಿ ಹೆಣ್ಣುಮಕ್ಕಳು ಸೆಣಸಾಡುವುದು ಸುಲಭವಲ್ಲ’ ಎಂದು ತಿಳಿಸಿದರು.

ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಡಾ.ಎಚ್‌.ಎಸ್‌. ಅನುಪಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಸಬಿತಾ ಬನ್ನಾಡಿ ವಿಷಯ ಮಂಡಿಸಿದರು. ಗಾಯತ್ರಿ ನಿರೂಪಿಸಿದರು.

ಹಣೆಯಲ್ಲಿ ಕುಂಕುಮ, ಹೆಗಲಮೇಲೆ ಕೇಸರಿ ಶಾಲು, ಸುಳ್ಳು ಹೇಳುವ ನಾಲಿಗೆ ಇದ್ದರೇ ಸಾಕು ಈ ದೇಶದಲ್ಲಿ ಕೋಮುವಾದ ಹರಡುವುದು  ಸುಲಭ. ಆದರೆ ಜಾತ್ಯತೀತತೆಯ ಪ್ರಜ್ಞೆ ಬೆಳೆಸುವುದು ಬಲು ಕಷ್ಟ

- ದಿನೇಶ್‌ ಅಮೀನ್‌ಮಟ್ಟು, ಚಿಂತಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry