ಎಲ್ಲರ ಎದೆಯಲ್ಲಿ ಸದ್ಭಾವನಾ ಬೀಜ ಮೊಳೆಯಲಿ

7
ಶಿವಮೊಗ್ಗ ಸದ್ಭಾವನಾ ವೇದಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅರವಿಂದ ಜತ್ತಿ

ಎಲ್ಲರ ಎದೆಯಲ್ಲಿ ಸದ್ಭಾವನಾ ಬೀಜ ಮೊಳೆಯಲಿ

Published:
Updated:

ಶಿವಮೊಗ್ಗ: ಭಗವದ್ಗೀತೆ, ಬೈಬಲ್‌, ಕುರಾನ್‌ ಬೇರೆಯಲ್ಲ. ಇವೆಲ್ಲವೂ ಜ್ಞಾನದ ಮಾರ್ಗಗಳು ಎಂದು ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್‌ ಭವನದಲ್ಲಿ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನ, ಬಸವ ಸಮಿತಿ ಹಾಗೂ ಸದ್ಭಾವನಾ ವೇದಿಕೆ ಶಿವಮೊಗ್ಗದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸದ್ಭಾವನಾ ವೇದಿಕೆಯ ಉದ್ಘಾಟನೆ ಮತ್ತು ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಾಂಧರು ಒಂದುಗೂಡಿದಾಗ ಸದ್ಭಾವನೆ ಹೋಗಿ ದುರ್ಭಾವನೆ ಉಂಟಾಗುತ್ತದೆ. ಇದನ್ನು ಹೋಗಲಾಡಿಸಬೇಕಾದರೆ ಎಲ್ಲರಲ್ಲೂ ಸದ್ಭಾವನೆಯ ಬೀಜಗಳನ್ನು ಬಿತ್ತಬೇಕಿದೆ. ಆಗ ಮಾತ್ರ ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

‘ನಮ್ಮ ಹೃದಯದಲ್ಲಿ ಸದ್ಭಾವನೆ ಮೂಡಿಸಲು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮೊದಲಾದ ದಾರ್ಶನಿಕರು ಬರಬೇಕೆಂದಿಲ್ಲ. ನಮ್ಮ ಅಂತರಂಗ ಜಾಗೃತಿಯಾದರೆ ತಂತಾನೇ ಸದ್ಭಾವನೆ ಬೆಳಗುತ್ತದೆ. ಎಲ್ಲಾ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸದ್ಭಾವನಾ ವೇದಿಕೆಯನ್ನು ಪ್ರತಿ ಜಿಲ್ಲೆಯಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

ವೈದ್ಯ ಲೇಖಕಿ ಡಾ.ಎಚ್‌.ಎಸ್‌. ಅನುಪಮಾ ಅವರು ‘ಗಾಂಧಿ ಮತ್ತು ಮಹಿಳೆ’ ವಿಷಯದ ಕುರಿತು ಮಾತನಾಡಿ, ‘ಸದ್ಭಾವನೆ ಎನ್ನುವುದು ಒಂದು ಕಾಲದಲ್ಲಿ ನಿತ್ಯ ಹರಿದ್ವರ್ಣದ ಕಾಡಿನಂತಿತ್ತು. ಇದೀಗ ರಕ್ಷಿತ ಅರಣ್ಯವಾಗಿ ಮಾರ್ಪಟ್ಟಿದೆ. ಧರ್ಮ ಎನ್ನುವ ಮಿಷನ್‌ನಿಂದಾಗಿ ರಾಜಕಾರಣ ಕೊಳಕಾಗಿದೆ. ಕೊಟ್ಟ ಭರವಸೆಗಳನ್ನು ಗಾಳಿಗೆ ತೂರಿ, ಧರ್ಮ ಮತ್ತು ಜಾತಿ ರಾಜಕಾರಣ ವಿಜೃಂಭಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಗಾಂಧೀಜಿ ಅವರ ವಿಚಾರಗಳನ್ನು ಕೊಲೆ ಮಾಡಿ ಕೇವಲ ಅವರ ಮೂರ್ತಿಯನ್ನು ಆರಾಧನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಅಸಹಕಾರ ಚಳವಳಿ, ಉಪ್ಪಿನ ಚಳವಳಿ, ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಹೆಣ್ಣುಮಕ್ಕಳು ಸಂಘಟಿತರಾಗಲು ಮತ್ತು ರಾಜಕೀಯವಾಗಿ ಬೆಳೆಯಲು ಗಾಂಧೀಜಿ ಮಾರ್ಗವಾಗಿದ್ದಾರೆ. ಆದ್ದರಿಂದ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಚಿಂತಕರು ಮತ್ತು ಬರಹಗಾರರು ಅವರ ಮನೆಯಲ್ಲಿ ಲಿಂಗ ನ್ಯಾಯಕ್ಕೆ ಎಷ್ಟರ ಬಗ್ಗೆ ಮಾನ್ಯತೆ ನೀಡಿದ್ದಾರೆ ಎಂಬುದನ್ನು ತಿಳಿಯಬೇಕಿದೆ. ಹಾಗಾಗಿ ಇಂದು ಸದ್ಭಾವನೆ ಉಳಿಯಲು ಗಾಂಧೀಜಿಯ ಚಿಂತನೆಗಳು ಉಳಿಯಬೇಕಿದೆ. ಮಹಿಳೆಯರು ಸಂಘಟಿತರಾಗಬೇಕಿದೆ ಎಂದರು.

‘ಭಾರತೀಯ ಪರಂಪರೆಯಲ್ಲಿ ಶಾಂತಿಯ ಪರಿಕಲ್ಪನೆ’ ವಿಷಯದ ಕುರಿತು ಮಾತನಾಡಿ ಚಿಂತಕ ಡಾ.ರಂಜಾನ್‌ ದರ್ಗಾ, ‘ಅಂಬೇಡ್ಕರ್ ಅವರ ಸಾತ್ವಿಕ ಕೋಪ, ಗಾಂಧೀಜಿಯವರ ಆಧ್ಯಾತ್ಮಿಕ ಸಂವೇದನೆ ಕೂಡಿದಾಗ ಮಾತ್ರ ನವಭಾರತ ನಿರ್ಮಾಣ ಸಾಧ್ಯ. ಎಲ್ಲರನ್ನೂ ಕರುಣೆಯಿಂದ ನೋಡುವ ಮನಸ್ಥಿತಿ ಬೆಳೆಸಿಕೊಂಡಲ್ಲಿ ಸದ್ಭಾವನೆ ತಾನಾಗಿಯೇ ಬೆಳೆಯುತ್ತದೆ. ಧರ್ಮದ ಮುಂದಾಳತ್ವ ವಹಿಸುವವರು ಧರ್ಮಗ್ರಂಥಗಳನ್ನು ಅರಿಯುವ ಅಗತ್ಯವಿದೆ’ ಎಂದು ಕಿವಿಮಾತು ಹೇಳಿದರು.

ಇತ್ತೀಚೆಗೆ ಧರ್ಮ ಎನ್ನುವುದು ಬಳಕೆ ಮತ್ತು ಶೋಷಣೆಯ ವಸ್ತುವಾಗಿದೆ. ಎಲ್ಲಾ ಧರ್ಮಗಳು ಒಳ್ಳೆಯದನ್ನೇ ನೀಡಿವೆ. ಆದರೆ ಕೆಲವರು ಧರ್ಮಗಳನ್ನು ಬಳಸಿಕೊಂಡು ದುಷ್ಕೃತ್ಯ ಎಸಗುತ್ತಿದ್ದಾರೆ. ಒಬ್ಬ ವ್ಯಕ್ತಿ ಮನುಷ್ಯನಾಗದ ಹೊರತು ಯಾವುದೇ ಧರ್ಮದ ವ್ಯಕ್ತಿ ಎನಿಸಿಕೊಳ್ಳಲಾರ. ಹಾಗಾಗಿ ಪ್ರತಿಯೊಬ್ಬರೂ ದೇವರು ಒಬ್ಬನೇ ನಾಮ ಹಲವು ಎಂಬುದನ್ನು ಅರಿಯಬೇಕಿದೆ ಎಂದರು.

ಶಿವಮೊಗ್ಗ ಸದ್ಭಾವನಾ ವೇದಿಕೆಯ ಅಧ್ಯಕ್ಷ ಎಸ್‌.ಬಿ. ಅಶೋಕ್‌ ಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಬಿ. ವಾಸುದೇವ, ಸದ್ಭಾವನಾ ವೇದಿಕೆಯ ರಾಜ್ಯ ಉಪ ಸಂಚಾಲಕ ಅಕ್ಬರ್‌ ಅಲಿ, ಶಿವಮೊಗ್ಗ ಸದ್ಭಾವನಾ ವೇದಿಕೆಯ ಗೌರವಾಧ್ಯಕ್ಷ ಅಬ್ದುಲ್‌ ಮುಜೀಬ್‌, ಫಾ. ವೀರೇಶ್‌ ಮೊರಾಸ್‌, ಕೆ.ಜಿ. ವೆಂಕಟೇಶ್‌, ರಾಜಪ್ಪ ಮಾಸ್ತರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry