ಶಿಥಿಲಾವಸ್ಥೆಯಲ್ಲಿರುವ ಹೊಸಬಾಳು ಸೇತುವೆ

7
ಯಾರಿಗೆ ಹೇಳೋಣ ನಮ್ ಪ್ರಾಬ್ಲಂ..

ಶಿಥಿಲಾವಸ್ಥೆಯಲ್ಲಿರುವ ಹೊಸಬಾಳು ಸೇತುವೆ

Published:
Updated:
ಶಿಥಿಲಾವಸ್ಥೆಯಲ್ಲಿರುವ ಹೊಸಬಾಳು ಸೇತುವೆ

ಸಿದ್ದಾಪುರ: ಗ್ರಾಮೀಣ ಭಾಗದ ಜನರ ಜೀವನಕ್ಕೆ ಯಾವುದೇ ಸಮಸ್ಯೆ ಬಾರದೇ ಇರಲು ಹಳ್ಳಿಗಳ ಸಂಪರ್ಕ ರಸ್ತೆ ಪ್ರಮುಖ ಪಾತ್ರ ವಹಿಸುತ್ತದೆ. ಹಳ್ಳಿ-ಪೇಟೆಗಳ ನಡುವಿನ ಸಂಪರ್ಕ ಕೊಂಡಿ ಕಳಚಿದರೆ ಹಳ್ಳಿ ನಿವಾಸಿಗಳ ಗೋಳನ್ನು ದೇವರಿಗೆ ಹೇಳಬೇಕು.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಯಡಮೊಗೆ ಗ್ರಾಮದ ಹೊಸಬಾಳಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಸೇತುವೆ ದುರಸ್ತಿಗೆ ಅನುದಾನ ಮಂಜೂರಾಗಿದ್ದರೂ ಕಾಮಗಾರಿ ವಿಳಂಬದಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ ಮಣ್ಣಿನ ಸಂಪರ್ಕ ಕೂಡ ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋದ ಪರಿಣಾಮ ಹೊಸಬಾಳು ನಿವಾಸಿಗಳ ದೈನಂದಿನ ವ್ಯವಹಾರವೇ ಅಸ್ತವ್ಯಸ್ತವಾಗಿದೆ.

ನೂತನವಾಗಿ ರಚಿತವಾದ ಯಡಮೊಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಿಯುವ ಕುಬ್ಜಾ ನದಿಗೆ ಹೊಸಬಾಳು ಸಂಪರ್ಕಕ್ಕೆ ಸೇತುವೆಯೊಂದಿದೆ. ಅದಕ್ಕೆ ಬಹಳಷ್ಟು ವರ್ಷಗಳ ಹಿಂದೆ ಅಡ್ಡಲಾಗಿ ಕಟ್ಟಿದ ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತ್ತು. ಗ್ರಾಮಸ್ಥರ ಒಕ್ಕೊರಲ ಧ್ವನಿಗೆ ಸ್ಪಂದಿಸಿದ ಸ್ಥಳೀಯ ಜನಪ್ರತಿನಿಧಿಗಳು ಶಿಥಿಲಗೊಂಡ ಸೇತುವೆ ದುರಸ್ತಿಗೆ ಸಿಆರ್‌ಎಫ್ ಯೋಜನೆ ಅಡಿ ಅನುದಾನ ಮಂಜೂರುಗೊಳಿಸಿದ್ದರು. ಸೇತುವೆ ನಿರ್ಮಾಣ ವಿಳಂಬ ಆಗುವುದನ್ನು ಮನಗಂಡು ಹೊಸಬಾಳು ಜನರಿಗೆ ಪೇಟೆ ಸಂಪರ್ಕಕ್ಕೆ ತಾತ್ಕಾಲಿಕವಾಗಿ ಹೊಳೆಗೆ ಅಡ್ಡಲಾಗಿ ಮಣ್ಣಿನ ಸೇತುವೆ ನಿರ್ಮಿಸಿದ್ದರು. ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ತಾತ್ಕಾಲಿಕ ಸೇತುವೆಯೂ ಈಗ ನೀರು ಪಾಲಾಗಿದೆ.

ಹತ್ತಿರದ ಸಂಪರ್ಕ ಕೊಂಡಿ ಕಳಚಿತು:

ಯಡಮೊಗೆ ಭಾಗದ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ದಿನಂಪ್ರತಿ ಹೊಸಬಾಳು ಸೇತುವೆ ಮೂಲಕವೆ ಹೊಸಂಗಡಿ ಮಾರ್ಗವಾಗಿ ಸಿದ್ದಾಪುರ, ಶಂಕರನಾರಾಯಣ, ಕುಂದಾಪುರ ಸೇರಿದಂತೆ ಇತ್ಯಾದಿ ಪ್ರದೇಶದಲ್ಲಿರುವ ಕಾಲೇಜುಗಳಿಗೆ ತೆರಳುತ್ತಾರೆ. ಮಳೆಗಾಲ ಪ್ರಾರಂಭಕ್ಕಿಂತ ಮುಂಚೆ ಸೇತುವೆ ನಿರ್ಮಾಣವಾಗಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವವರ ಅನುಕೂಲಕ್ಕೆ ಅನುಗುಣವಾಗಿ ಹೊಸಂಗಡಿ, ಸಿದ್ದಾಪುರ, ಕುಂದಾಪುರಕ್ಕೆ ತೆರಳಲು ಬಸ್ ವ್ಯವಸ್ಥೆಯಿದೆ. ಸೇತುವೆ

ಶಿಥಿಲಾವಸ್ಥೆಯಲ್ಲಿದ್ದರಿಂದ ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆಯೂ ಮಳೆ ನೀರಿಗೆ ಕೊಚ್ಚಿಕೊಂಡು ಹೋದ ಪರಿಣಾಮ ಹೊಸಬಾಳು ಪರಿಸರದ ನಾಗರೀಕರು ಪ್ರತಿನಿತ್ಯ ಹತ್ತಾರು ಕಿಲೋ ಮೀಟರ್‌ ಸುತ್ತುವರಿದು ಕಮಲಶಿಲೆ ಮಾರ್ಗವಾಗಿ ಪೇಟೆ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ.

ಹೊಸಬಾಳು ಸೇತುವೆ ಸಂಪೂರ್ಣ ಶಿಥಿಲವಾಗಿದ್ದು, ಅನುದಾನ ಮಂಜೂರಾಗಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ. ತಾತ್ಕಾಲಿಕವಾಗಿ ನಿರ್ಮಿಸಿದ ಮಣ್ಣಿನ ಸೇತುವೆ ಮಳೆನೀರಿನಲ್ಲಿ ಕೊಚ್ಚಿಹೋಗಿದೆ ಎಂದು ಯಡಮೊಗೆ ಸ್ಥಳೀಯ ನಿವಾಸಿ ಡಿ.ಎನ್.ಪಟಗಾರ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಯಾಣ ಕಷ್ಟ

ಸೇತುವೆ ಶಿಥಿಲಾವಸ್ಥೆಯಿಂದ ಕೂಡಿದ್ದರಿಂದ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ. ಅದು ಕೂಡಾ ಈಗ ಕುಸಿದಿರುವುದು ಜನರಲ್ಲಿ ಆತಂಕ ಮನೆ ಮಾಡಿದೆ. ಹಳ್ಳಿ ಜನರ ಬದುಕಿಗೆ ಧಕ್ಕೆ ಉಂಟಾಗಿದೆ.

ಸಿಆರ್‌ಎಫ್ ಅನುದಾನದಡಿ ಜಂಬೆಹಾಡಿ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದರೂ ಇದುವರೆಗೆ ಸೇತುವೆ ನಿರ್ಮಾಣವಾಗಿಲ್ಲ. – ಬಾಲಚಂದ್ರ ಕುಲಾಲ್, ಉಪಾಧ್ಯಕ್ಷ ಯಡಮೊಗೆ ಗ್ರಾಮಪಂಚಾಯಿತಿ

ಸಂದೇಶ್ ಶೆಟ್ಟಿ ಆರ್ಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry