ಗುತ್ತಿಗೆದಾರರಿಗೆ ತುರ್ತು ಸಭೆ ಇಂದು; ಕಟು ಟೀಕೆ

7
ಒಂಭತ್ತು ತಿಂಗಳಾದರೂ ನಡೆಯದ ವಿಜಯಪುರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ

ಗುತ್ತಿಗೆದಾರರಿಗೆ ತುರ್ತು ಸಭೆ ಇಂದು; ಕಟು ಟೀಕೆ

Published:
Updated:

ವಿಜಯಪುರ: ಬರೋಬ್ಬರಿ ಒಂಭತ್ತನೇ ತಿಂಗಳು. ಇಲ್ಲಿಯವರೆಗೂ ನಗರದ ಅಭಿವೃದ್ಧಿ, ಸಮಸ್ಯೆಗಳ ಕುರಿತಂತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲು ವಿಜಯಪುರ ಮಹಾನಗರ ಪಾಲಿಕೆಯ ಮೇಯರ್‌–ಉಪ ಮೇಯರ್‌, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಹಿರಿಯ ಸದಸ್ಯರು ಸಹ ಸಾಮಾನ್ಯ ಸಭೆ ನಿಗದಿ ಪಡಿಸಲು ಮುಂದಾಗದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಕಟು ಟೀಕೆ ವ್ಯಕ್ತವಾಗಿದೆ.

ಒಂದು ವರ್ಷದ ಅವಧಿಗೆ ಟೆಂಡರ್‌ ಮೂಲಕ ಗುತ್ತಿಗೆ ನೀಡಲಾಗಿದ್ದ ‘ಭಾನುವಾರದ ಸಂತೆಯಲ್ಲಿ ಶುಲ್ಕ ವಸೂಲಿ’ ಮಾಡುವ ಗುತ್ತಿಗೆಯನ್ನು ಮೂರು ವರ್ಷದ ಅವಧಿಯವರೆಗೂ ಮುಂದುವರೆಸುವುದಕ್ಕಾಗಿಯೇ ಸೋಮವಾರ (ಜೂನ್‌ 18) ಬೆಳಿಗ್ಗೆ 11 ಗಂಟೆಗೆ ತುರ್ತು ಸಭೆ ಆಯೋಜಿಸಿರುವುದಕ್ಕೆ ತೀವ್ರ ಆಕ್ರೋಶವೂ ಕೇಳಿ ಬಂದಿದೆ.

‘ಪಾಲಿಕೆಯಲ್ಲಿ ಇದೀಗ ನಾಲ್ಕನೇ ಅವಧಿಯ ಮೇಯರ್–ಉಪ ಮೇಯರ್ ಆಡಳಿತವಿದೆ. ಮುಂಬರುವ ಜುಲೈ ಅಂತ್ಯದೊಳಗೆ ಇವರ ಅಧಿಕಾರದ ಅವಧಿ ಪೂರ್ಣಗೊಳ್ಳಲಿದೆ. ಇದೂವರೆಗೂ ಎರಡು ಸಾಮಾನ್ಯ ಸಭೆಗಳಷ್ಟೇ ನಡೆದಿವೆ. ಒಂದು ಬಜೆಟ್‌ ಸಭೆ ನಡೆದಿದೆಯಷ್ಟೇ.

ಈ ಕುರಿತಂತೆ ಯಾವೊಬ್ಬ ಜನಪ್ರತಿನಿಧಿಯೂ ಧ್ವನಿ ಎತ್ತಿಲ್ಲ. ಪಾಲಿಕೆಯ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಸಹ ಆಡಳಿತಕ್ಕೆ ಮೌನ ಸಮ್ಮತಿಯ ಮುದ್ರೆಯೊತ್ತಿದ್ದಾರೆ. ಪ್ರಚಾರಕ್ಕಾಗಿ ಸಭೆಯಲ್ಲಿ ಗದ್ದಲ ಎಬ್ಬಿಸುತ್ತಾರೆ. ಕಾನೂನು ಪುಸ್ತಕವಿಡಿದು ಮಾತನಾಡುತ್ತಾರೆ. ನಂತರ ಎಲ್ಲವನ್ನೂ ಅಲ್ಲಿಗೆ ಬಿಡುತ್ತಾರೆ. ಅಕ್ಷರಶಃ ವಿಜಯಪುರಿಗರ ದೌರ್ಭಾಗ್ಯವಿದು’ ಎಂದು ಸಾಮಾಜಿಕ ಕಾರ್ಯಕರ್ತ ಗಿರೀಶ ಕುಲಕರ್ಣಿ ‘ಪ್ರಜಾವಾಣಿ’ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘2017ರ ಜುಲೈ 28ರಿಂದ ಪಾಲಿಕೆಯಲ್ಲಿ ನಾಲ್ಕನೇ ಅವಧಿಯ ಆಡಳಿತ ಆರಂಭಗೊಂಡಿದೆ. ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಯಲೇಬೇಕು ಎಂಬುದು ರಾಜ್ಯ ಸರ್ಕಾರದ ನಡಾವಳಿಯಲ್ಲಿದೆ. ಆದರೆ ಹನ್ನೊಂದು ತಿಂಗಳ ಅವಧಿಯಲ್ಲಿ ನಡೆದಿರುವುದು ಎರಡು ಸಾಮಾನ್ಯ ಸಭೆಗಳು ಮಾತ್ರ.

ಅದರಲ್ಲೂ 2017ರ ಸೆ 15ರಂದು ನಡೆದ ಮೊದಲ ಸಭೆ ಅಧಿಕಾರಿಗಳು–ಸದಸ್ಯರ ತಿಕ್ಕಾಟಕ್ಕೆ ಬಲಿಯಾಯ್ತು. ಮುಂದುವರೆದ ಸಭೆ ಭಯದಲ್ಲೇ ಮುಕ್ತಾಯಗೊಂಡಿತು. ಅ 12ರಂದು ನಡೆದ ಸಭೆ ಸಹ ಅಧಿಕಾರಿಗಳ ಭಯದಲ್ಲೇ ನಿಗದಿತ ಠರಾವು ಪಾಸು ಮಾಡಲಷ್ಟೇ ಸೀಮಿತವಾಯ್ತು...

2018ರ ಮಾರ್ಚ್‌ 5ರಂದು ಬಜೆಟ್‌ ಸಭೆ ನಡೆದಿತ್ತು. ಇದೀಗ ತುರ್ತು ಸಭೆ ಆಯೋಜನೆಯಾಗಿದೆ. ಅದೂ ಗುತ್ತಿಗೆದಾರರ ಹಿತ ಕಾಪಾಡಲು’ ಎಂದು ಕೆ.ಎ.ಪಟೇಲ ಅಂಕಿ–ಅಂಶಗಳನ್ನಿಟ್ಟುಕೊಂಡು ಪಾಲಿಕೆ ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.

‘ಪಾಲಿಕೆ ರಾಜಕಾರಣದಲ್ಲಿ ಈಚೆಗಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬಿಜೆಪಿ ಬಹುಮತದೊಂದಿಗೆ ಅಧಿಕಾರದಲ್ಲಿದೆ. ಆದರೂ ಸುಸೂತ್ರವಾಗಿ ಆಡಳಿತ ನಡೆಸುವಲ್ಲಿ ಎಡವುತ್ತಿದೆ. ನಗರದ ಅಭಿವೃದ್ಧಿಯ ಕಾಳಜಿಗಿಂತ ಸ್ವ ಹಿತಾಸಕ್ತಿ ಹೊಂದಿರುವ ಸದಸ್ಯರೇ ಹೆಚ್ಚಿರುವುದರಿಂದ ಪಾಲಿಕೆ ಆಡಳಿತ ವ್ಯವಸ್ಥೆಯ ಸುಧಾರಣೆ ಎಂಬುದು ಗಗನಕುಸುಮವಾಗಿದೆ. ಇದರ ಪ್ರತಿಫಲವೇ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಿಕ್ಕಾಗಿ ಕರೆದಿರುವ ತುರ್ತು ಸಭೆ’ ಎಂದು ಎನ್.ಎ.ಮಮದಾಪುರ ದೂರಿದರು.

‘ತಿಳಿ ಹೇಳಿದರೂ ಪ್ರಯೋಜನವಿಲ್ಲ’

‘ಪಾಲಿಕೆಯ ನಾಲ್ಕು ವರ್ಷದ ಆಡಳಿತದಲ್ಲಿ ನಡೆದಿರುವ ಬಹುತೇಕ ಸಾಮಾನ್ಯ ಸಭೆಗಳ ಆರಂಭದಲ್ಲೇ ನಿಗದಿತ ಸಮಯಕ್ಕೆ ಸಭೆ ಕರೆಯದಿರುವುದಕ್ಕೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ತಾಸಿನ ಅವಧಿ ಗದ್ದಲ ಎಬ್ಬಿಸುತ್ತಾರೆ. ಈ ಸಂದರ್ಭ ಪ್ರತಿ ಬಾರಿಯೂ ನಿಯಮಾವಳಿಗಳನ್ನು ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಮಹಾನಗರ ಪಾಲಿಕೆಯ ಹೆಸರು ಬಹಿರಂಗಪಡಿಸಲಿಚ್ಚಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೇಯರ್‌ ಪ್ರತಿ ತಿಂಗಳು ಸಭೆ ಕರೆಯದಿದ್ದರೇ ಉಪ ಮೇಯರ್ ಕರೆಯಬಹುದು. ಸ್ಥಾಯಿ ಸಮಿತಿ ಅಧ್ಯಕ್ಷರಿಗೂ ಈ ಅಧಿಕಾರವಿದೆ. ಕೆಲ ಸದಸ್ಯರು ಒಟ್ಟಾಗಿ ಸಭೆ ಕರೆಯುವಂತೆ ಆಯುಕ್ತರಿಗೆ ಲಿಖಿತವಾಗಿ ಸೂಚಿಸಿದರೆ, ಕಾನೂನಿನ ಚೌಕಟ್ಟಿನಡಿ ಸಭೆ ಕರೆಯುವಂತೆ ಪರಿಷತ್ ಕಾರ್ಯದರ್ಶಿಗೆ ಆಯುಕ್ತರು ಸೂಚಿಸುತ್ತಾರೆ.

ಇದೂವರೆಗೂ ಸಾಕಷ್ಟು ಬಾರಿ ತಿಳಿ ಹೇಳಿದ್ದರೂ; ಒಮ್ಮೆಯೂ ಮೇಯರ್ ಹೊರತುಪಡಿಸಿ ಉಳಿದವರು ಸಭೆ ಕರೆಯಲು ಲಿಖಿತ ನೋಟಿಸ್ ಕೊಟ್ಟಿಲ್ಲ. ಸಭೆಯಲ್ಲಷ್ಟೇ ಪ್ರಚಾರದ ಹಪಾಹಪಿಗೆ ಗದ್ದಲ ಎಬ್ಬಿಸುತ್ತಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಟೆಂಡರ್‌ ಸಂಬಂಧವಾಗಿಯೇ ತುರ್ತು ಸಭೆ ಆಯೋಜಿಸಿರುವುದು ನಾಚಿಕೆಗೇಡಿನ ಕ್ರಮ. ಉಳಿದ ಒಂದು ವರ್ಷದಲ್ಲಾದರೂ ಉತ್ತಮ ಆಡಳಿತ ನೀಡಿ

ಸಂಗಮೇಶ ಅಂಬಿಗೇರ, ವಿಜಯಪುರ ನಿವಾಸಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry