ಮಳೆಯಿಂದ ಮಾವು ಫಸಲು ನಾಶ

7
ಬೆಳೆ ನಷ್ಟಕ್ಕೆ ಒಳಗಾದ ರೈತರ ನೆರವಿಗೆ ಸರ್ಕಾರ ಮುಂದಾಗಲಿ

ಮಳೆಯಿಂದ ಮಾವು ಫಸಲು ನಾಶ

Published:
Updated:

ಮಾಗಡಿ: ‘ತಾಲ್ಲೂಕಿನಲ್ಲಿ ಬೀಳುತ್ತಿರುವ ಜೋರು ಮಳೆಯಿಂದಾಗಿ ಮಾವು ಬೆಳೆಗಾರರು ಕಂಗಾಲಾಗಿದ್ದೇವೆ’ ಎಂದು ನಾಯಕನ ಪಾಳ್ಯದ ರೈತ ರಾಜಾ ರಂಗಪ್ಪ ನಾಯಕ ಅವರು ಬೇಸರ ವ್ಯಕ್ತಪಡಿಸಿದರು.

ಸಾವನದುರ್ಗದ ತಪ್ಪಲಿನಲ್ಲಿರುವ ನಾಯಕನ ಪಾಳ್ಯದಲ್ಲಿನ ಅವರ ತೋಟದಲ್ಲಿ ಮಳೆಯ ರಭಸಕ್ಕೆ ಸಿಲುಕಿ ಕಟಾವಿಗೆ ಬಂದಿದ್ದ ಮಾವು ನಾಶವಾಗಿರುವುದನ್ನು ತೋರಿಸಿ ಅವರು ಮಾತನಾಡಿದರು.

‘ನಮ್ಮ ತೋಟದಲ್ಲಿ 15 ವಿವಿಧ ತಳಿಯ 560 ಮಾವಿನ ಮರಗಳಿವೆ. ಈ ಬಾರಿ ಉತ್ತಮ ಫಸಲು ಬಂದಿತ್ತು. ಸತತವಾಗಿ ಬೀಳುತ್ತಿದ್ದ ಮಳೆಗೆ ಸಿಲುಕಿ ಕಾಯಿಗಳು ನೆಲಕ್ಕೆ ಉರುಳಿವೆ’ ಎಂದರು.

ಮಾವಿನ ಬೆಳೆಯನ್ನು ಹಸಿರು ಗೊಬ್ಬರ ಬಳಸಿ, ಸಾವಯವ ಕೃಷಿಯಿಂದ ಬೆಳೆಸಲಾಗಿತ್ತು. ದುರಂತ ಎಂದರೆ ’ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬತೆ ಬಿರುಗಾಳಿ ಸಹಿತ ಮಳೆಗೆ ಸಂಪೂರ್ಣ ಹಾಳಾಗಿದೆ ಎಂದು ವಿವರಿಸಿದರು.

‘ಫಸಲನ್ನು ನೋಡಿ ಕನಿಷ್ಠ ₹ 5 ಲಕ್ಷವಾದರೂ ಲಾಭವಾಗಬಹುದು ಎಂಬ ನಿರೀಕ್ಷೆ ಇತ್ತು. ಬೆಳೆಗಾಗಿ ಸಾಕಷ್ಟು ಶ್ರಮ ಪಟ್ಟಿದ್ದೇವೆ. ಈಗ ನಷ್ಟವಾಗಿದೆ ಯಾರೂ ಸಹಾಯಕ್ಕೆ ಬಂದಿಲ್ಲ’ ಎಂದು ಅಸಹಾಯಕತೆ ತೋಡಿಕೊಂಡರು.

ದೇಶದ ವಿವಿಧ ರಾಜ್ಯಗಳಲ್ಲಿ ಸುತ್ತಿ ಮಾವಿನ 15 ವಿವಿಧ ಬಗೆಯ ಸಸಿಗಳನ್ನು ತಂದು, ಬಿಂದಿಗೆಯಲ್ಲಿ ನೀರು ಹೊತ್ತೊಯ್ದು, ಮಾವಿನ ಸಸಿಗಳನ್ನು ಮಕ್ಕಳಂತೆ ಸಾಕಿದ್ದೇವೆ ಎಂದರು.

‘ನಮಗಲ್ಲದಿದ್ದರೂ, ಮಕ್ಕಳು, ಮೊಮ್ಮಕ್ಕಳಿಗೆ ಅನುಕೂಲವಾದೀತು, ಪ್ರಾಣಿ ಪಕ್ಷಿಗಳಿಗೆ ಮತ್ತು ದಾರಿಹೋಕರಿಗೆ ನಾಲ್ಕು ಮಾವಿನ ಹಣ್ಣು ಕೊಟ್ಟರೆ ಅದೇ ನಮಗೆ ಪುಣ್ಯದ ಕೆಲಸ ಎಂದು ನಂಬಿ ನಾನು ಮತ್ತು ನನ್ನ ಪತ್ನಿ ಶ್ರಮಪಟ್ಟು ಮಾವಿನ ಸಸಿಗಳನ್ನು ಬೆಳೆಸಿದ್ದೇವೆ’ ಎಂದರು.

‘ಮಳೆಯಿಂದಾಗಿ ನಷ್ಟಕ್ಕೆ ಸಿಲುಕಿರುವ ನಮಗೆ ಸರ್ಕಾರದಿಂದ ಬರುವ ಬೆಳೆ ನಷ್ಟ ಪರಿಹಾರ ಬಂದೀತೇ ಎಂಬುದನ್ನು ಕಾದು ನೋಡಬೇಕಿದೆ. ಮಳೆರಾಯನ ಕರುಣೆ ಇಲ್ಲದಿದ್ದರೆ, ರೈತ ಬದುಕಲಾರ’ ಎಂದರು.

‘ಜೊತೆಗೆ ವಾಯುದೇವನೂ ನಮ್ಮ ಬೆಂಬಲಕ್ಕೆ ನಿಂತರೆ ಮಾತ್ರ ರೈತ ಉಳಿದಾನು. ಇಲ್ಲ ಸಾಲ ಮಾಡಿಕೊಂಡು, ವ್ಯವಸಾಯ ಮನೆ ಮಂದಿಯೆಲ್ಲಾ ಸಾಯ ಎಂಬ ಅನುಭವಸ್ಥರ ಮಾತಿನಂತೆ, ಆತ್ಮಹತ್ಯೆಯತ್ತ ತೆರಳಿ, ನಂಬಿದವರನ್ನು ನಡುನೀರಿನಲ್ಲಿ ಕೈಬಿಟ್ಟು ತೆರಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ’ ಎಂದರು.

ಸರ್ಕಾರ ದೊಡ್ಡ ಮನಸ್ಸು ಮಾಡಿ, ಬೆಳೆ ನಷ್ಟಕ್ಕೆ ಒಳಗಾದ ರೈತರ ನೆರವಿಗೆ ಮುಂದಾಗಲಿ ಎಂದು ಮನವಿ ಮಾಡಿದರು.

ಖರೀದಿ ಕೇಂದ್ರ ಬೇಕು

ತಾಲ್ಲೂಕಿನಲ್ಲಿ ಮಾವು ಬೆಳೆಯುವ ರೈತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಾವು ಫಸಲು ಹುಲುಸಾಗಿ ಬಂದಿದೆ. ಆದ್ದರಿಂದ ಇಲ್ಲಿ ಮಾವು ಖರೀದಿ ಕೇಂದ್ರ ಬೇಕಿದೆ ಎಂದು ಪೋಲೋಹಳ್ಳಿಯ ಮಾವು ಬೆಳೆಗಾರ ಗಿರಿಯಪ್ಪ ತಿಳಿಸಿದ್ದಾರೆ. ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡುವ ವ್ಯವಸ್ಥೆ ಇಲ್ಲದೆ ರೈತರು ಸಂಕಟಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ.

ಮಳೆಯಿಂದಾಗಿ ಮಾವು ಫಸಲು ನಷ್ಟವಾಗಿದ್ದು, ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮಾವು ಬೆಳೆಗಾರರ ನೆರವಿಗೆ ಮುಂದಾಗ ಬೇಕು. ಮಾವು ಖರೀದಿಗೆ ಎಪಿಎಂಸಿ ಮಾರುಕಟ್ಟೆ ಆರಂಭಿಸಬೇಕು.
– ಬಾಲಿ ಚಿಕ್ಕಣ್ಣ , ಮಾವು ಬೆಳೆಗಾರ, ಬಸವೇನಹಳ್ಳಿ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry