ಪ್ಲಾಸ್ಟಿಕ್ ವ್ಯಾಪಾರಿಗಳಿಗೆ ಕಡಿವಾಣ

7
'ದಂಡ'ಕ್ಕೂ ಮಣಿಯದಿದ್ದರೆ ಪೊಲೀಸ್ ದೂರು ದಾಖಲಿಸಲು ತಯಾರಿ

ಪ್ಲಾಸ್ಟಿಕ್ ವ್ಯಾಪಾರಿಗಳಿಗೆ ಕಡಿವಾಣ

Published:
Updated:
ಪ್ಲಾಸ್ಟಿಕ್ ವ್ಯಾಪಾರಿಗಳಿಗೆ ಕಡಿವಾಣ

ರಾಯಚೂರು: ಪ್ಲಾಸ್ಟಿಕ್ ಮಾರಾಟ ನಿಷೇಧ ಕಾನೂನು ಜಾರಿಗೊಳಿಸಲು ರಾಯಚೂರು ನಗರಸಭೆ ಕೊನೆಗೂ ಬಿಗಿ ನಿಲುವು ತಾಳಿದೆ. ದಂಡ ವಿಧಿಸಿದ ನಂತರವೂ ವ್ಯಾಪಾರ ಆರಂಭಿಸಿದವರ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತಯಾರಿ ಮಾಡಿಕೊಂಡಿದೆ!

ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ನಿಷೇಧಿಸುವಂತೆ ಸರ್ಕಾರಕ್ಕೆ ಕೋರ್ಟ್ ಆದೇಶ ಮಾಡಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಸಂಸ್ಥೆಗಳು ಆಗಾಗ್ಗೆ ಪ್ಲಾಸ್ಟಿಕ್ ವ್ಯಾಪಾರಿಗಳನ್ನು ಎಚ್ಚರಿಕೆ ನೀಡುತ್ತಿದ್ದರೂ ತೆರೆಮರೆಯಿಂದ ವ್ಯಾಪಾರ ಯಥಾಸ್ಥಿತಿಯಲ್ಲಿ ನಡೆಯುತ್ತಿದೆ.

ಸಗಟು ವ್ಯಾಪಾರಕ್ಕಾಗಿ ದಾಸ್ತಾನು ಮಾಡಿಕೊಂಡಿದ್ದ ಪ್ಲಾಸ್ಟಿಕ್ ಚೀಲಗಳು ಹಾಗೂ ಪ್ಲಾಸ್ಟಿಕ್‌ನಿಂದ ತಯಾರಿಸಿದ ಇತರೆ ವಸ್ತುಗಳನ್ನು ಅಧಿಕಾರಿಗಳು ಆಗಾಗ ಜಪ್ತಿ ಮಾಡಿದ್ದಾರೆ. ವ್ಯಾಪಾರಿಗಳಿಗೆ ದಂಡ ವಿಧಿಸಿದ್ದಾರೆ. ಪ್ಲಾಸ್ಟಿಕ್ ಹಾವಳಿ ದಂಡಕ್ಕೂ ಮಣಿಯುತ್ತಿಲ್ಲ ಎಂಬುದು ಸಾಬೀತಾಗಿದೆ.

ಈ ಸಲ ಪ್ಲಾಸ್ಟಿಕ್ ನಿಷೇಧ ಜಾರಿಯನ್ನು ನಗರಸಭೆ ಗಂಭೀರವಾಗಿ ತೆಗೆದುಕೊಂಡಿದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಪ್ರತಿ ದಿನ ನಿಗಾ ವಹಿಸುವುದಕ್ಕೆ ಸಿಬ್ಬಂದಿಯ ತಂಡ ರಚಿಸಲಾಗಿದೆ. ಅಲ್ಲದೆ, ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಆಯಾ ವಾರ್ಡ್ ನೈರ್ಮಲ್ಯ ನಿರೀಕ್ಷಕನನ್ನು ಹೊಣೆಗಾರನನ್ನಾಗಿ ಮಾಡಲಾಗುತ್ತದೆ.

ರಾಯಚೂರಿನಲ್ಲಿ ಸಗಟು ಪ್ಲಾಸ್ಟಿಕ್ ಮಾರಾಟದ ಎಂಟು ಅಂಗಡಿಗಳಿವೆ. ನಗರಸಭೆ ಸಿಬ್ಬಂದಿಯು ಈಚೆಗೆ ದಾಳಿ ನಡೆಸಿ ಸುಮಾರು 1 ಕ್ವಿಂಟಲ್ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ.

ಈ ದಾಳಿ ನಡೆಸುವ ಪೂರ್ವದಲ್ಲಿ, ಪ್ಲಾಸ್ಟಿಕ್ ಮಾರಾಟ ಅಪರಾಧ ಎಂಬ ವಿಷಯವನ್ನು ಧ್ವನಿವರ್ಧಕದ ಮೂಲಕ ಮಾರುಕಟ್ಟಿಯಲ್ಲಿ 2 ದಿನ ಮುಂಚೆಯೇ ಬಿತ್ತರಿಸಲಾಗಿತ್ತು. ಆದರೂ ವ್ಯಾಪಾರಿಗಳು ಎಚ್ಚೆತ್ತುಕೊಂಡಿಲ್ಲ.

ಇದು ಕೋರ್ಟ್‌ ನಿರ್ದೇಶನ ಜಾರಿ ವಿಷಯ ಆಗಿರುವುದರಿಂದ ಯಾವ ಜನಪ್ರತಿನಿಧಿಗಳು ಅಥವಾ ಪ್ರಭಾವಿಗಳು ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ. ಪ್ಲಾಸ್ಟಿಕ್ ಹಾವಳಿಯನ್ನು ಶತಾಯಗತಾಯ ತಡೆಗಟ್ಟಲು ನಗರಸಭೆಯು ಕಾರ್ಯಾಚರಣೆ ಆರಂಭಿಸಿರುವುದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಪ್ಲಾಸ್ಟಿಕ್ ಹಾವಳಿ ತಡೆಗಟ್ಟುವ ಬಗ್ಗೆ ಎರಡು ವರ್ಷಗಳಿಂದ ನಗರಸಭೆಯು ಘೋಷಿಸುತ್ತಿದೆ. ಪ್ಲಾಸ್ಟಿಕ್ ವ್ಯಾಪಾರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಅದರಲ್ಲಿ ಸ್ವಲ್ಪ ಭಾಗ ಜಪ್ತಿ ಮಾಡಿಕೊಂಡು ಪ್ರಚಾರ ಮಾಡುತ್ತಾರೆ. ಆನಂತರ ಮೌನವಾಗುತ್ತಾರೆ. ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಆಗದಿರುವುದಕ್ಕೆ ದಾಳಿ ನಡೆಸುವ ಸಿಬ್ಬಂದಿ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ. ಪೌರಾಯುಕ್ತರು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡರೆ ಮಾತ್ರ ಅದು ಸಾಧ್ಯವಾಗುತ್ತದೆ' ಎಂದು ಎಲ್‌ವಿಡಿ ಪದವಿ ಕಾಲೇಜು ವಿದ್ಯಾರ್ಥಿ ಮಹೇಶ ಹೇಳಿದರು.

ಪ್ಲಾಸ್ಟಿಕ್‌ ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಿ ಈ ಹಿಂದೆ ಕೈಬಿಡಲಾಗುತ್ತಿತ್ತು. ಈಗ ನಿರಂತರ ನಿಗಾ ವಹಿಸಿ ಸಂಪೂರ್ಣ ಕಡಿವಾಣ ಹಾಕಲಾಗುವುದು.

- ರಮೇಶ ನಾಯಕ, ಪೌರಾಯುಕ್ತ, ನಗರಸಭೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry