4
ಧುತ್ತರಗಿಯವರಿಗೊಂದು ನುಡಿ ನಮನ: ಮಲ್ಲಯ್ಯ ಕೋಮಾರಿ

ಖಾಲಿ ಕಿಸೆಯಲ್ಲಿ ಬದುಕಿದ್ದ ಧುತ್ತರಗಿ

Published:
Updated:

ಹನುಮಸಾಗರ: ‘ಪಿ.ಬಿ.ಧುತ್ತರಗಿ ನೇಕಾರರ ಮನೆತನದಲ್ಲಿ ಹುಟ್ಟಿದರೂ ಒಂದು ದಿನವೂ ನೂಲು ನೇಯಲಿಲ್ಲ. ಆದರೆ, ಅವರು ನೇಯ್ದದ್ದೆಲ್ಲ ರಂಗಭೂಮಿಯಲ್ಲಿ’ ಎಂದು ನಿಸರ್ಗ ಸಂಗೀತ ಶಾಲೆಯ ಮುಖ್ಯಸ್ಥ ಮಲ್ಲಯ್ಯ ಕೋಮಾರಿ ಹೇಳಿದರು.

ಇಲ್ಲಿನ ನಿಸರ್ಗ ಸಂಗೀತ ಶಾಲೆಯಲ್ಲಿ ನಾಟಕ ರಚನೆಕಾರ ದಿ.ಪಿ.ಬಿ.ಧುತ್ತರಗಿ ಅವರ 89ನೇ ಜನ್ಮದಿನದ ನಿಮಿತ್ತ ಶನಿವಾರ ಏರ್ಪಡಿಸಿದ್ದ ‘ಧುತ್ತರಗಿಯವರಿಗೊಂದು ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹನುಮಸಾಗರದಲ್ಲಿ ರಂಗ ಕಲಾವಿದರ ಸಂಘದಿಂದ ಧುತ್ತರಗಿ ಅವರು ಬರೆದ ಎಲ್ಲ ನಾಟಕಗಳನ್ನು ಸರಣಿ ರೂಪದಲ್ಲಿ ಉಚಿತವಾಗಿ ಪ್ರದರ್ಶನ ಮಾಡುತ್ತಿದ್ದೇವೆ. ಧುತ್ತರಗಿ ಅವರು ಸೂಳಿಭಾವಿಯಲ್ಲಿ ಜನಿಸಿದರು ಎಂಬ ಕಾರಣದಿಂದ ಸರ್ಕಾರ ಅಲ್ಲಿನ ಧುತ್ತರಗಿ ಪ್ರತಿಷ್ಠಾನಕ್ಕೆ ಅನುದಾನ ನೀಡಿದೆ. ಪ್ರತಿಷ್ಠಾನದಲ್ಲಿ ಯಾವೊಂದು ಕಾರ್ಯಕ್ರಮ ನಡೆಯದೆ ಅನುದಾನ ಹಾಗೇ ಉಳಿದಿದೆ ಎಂದರು.

ಧುತ್ತರಗಿ ಅವರು ಇರುವವರೆಗೂ ಹನುಮಸಾಗರದಲ್ಲಿ ಕಲಾವಿದರು ಸಾಲ ಮಾಡಿ ನಾಟಕೋತ್ಸವ ಏರ್ಪಡಿಸುತ್ತಿದ್ದರು ಎಂದು ಅವರು ಹೇಳಿದರು.

ಸಾಹಿತಿ ರಾಮಚಂದ್ರ ಬಡಿಗೇರ ಮಾತನಾಡಿ, ‘ಧುತ್ತರಗಿ ಅವರು ಬರೆದ 53 ನಾಟಕ ಹಾಗೂ ನಾಲ್ಕಾರು ಸಿನಿಮಾ ಕಥೆಗಳಲ್ಲಿ ಈ ನೆಲದ ಭಾಷೆ, ಬದುಕು, ಬವಣೆ ಕಾಣುತ್ತವೆ. ಧುತ್ತರಗಿಯವರು ರಂಗಭೂಮಿಯಲ್ಲಿ ರಾಜನಾಗಿ ಮೆರೆದರೂ ಅವರು ಹುಟ್ಟಿನಿಂದ ಅಂತ್ಯದವರೆಗೂ ಖಾಲಿ ಕಿಸೆಯಲ್ಲಿಯೇ ಬದುಕು ಕಳೆದರು’ ಎಂದರು.

ಕಲಾವಿದ ಗುರುರಾಜ ದೇಸಾಯಿ ಮಾತನಾಡಿ, ‘ಧುತ್ತರಗಿ ಅವರು ರಂಗಭೂಮಿಗೆ ಧುತ್ತೆಂದು ಬಂದವರಲ್ಲ. ಪರಿಶ್ರಮದಿಂದ ಒಂದೊಂದೆ ಮೆಟ್ಟಿಲುಗಳನ್ನು ಹತ್ತಿದವರು. ಅವರ ಪ್ರತಿಯೊಂದು ನಾಟಕಗಳು ವಾಸ್ತವಿಕ ಬದುಕಿನ ಕಟು ಸತ್ಯಗಳ ಅನಾವರಣ ಮಾಡುತ್ತವೆ. ಮಾತಿನ ಚಮತ್ಕಾರ ಹಾಗೂ ಮನಮಿಡಿಯುವ ಮಾತುಗಳು ಧುತ್ತರಗಿಯವರ ನಾಟಕದ ಜೀವಾಳ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಲಂಕೇಶ ವಾಲಿಕಾರ, ಅಜ್ಜಯ್ಯ ಶಶಿಮಠ, ಚಂದಪ್ಪ ಹಕ್ಕಿ, ಗುರುರಾಜ ದೇಸಾಯಿ, ಮಲ್ಲಮ್ಮ ತಮ್ಮಣ್ಣವರ, ಬಸಮ್ಮ ಹಿರೇಮಠ, ಅಕ್ಕಮಹಾದೇವಿ, ವೀರೇಶ ವಿಶ್ವಕರ್ಮ, ಬಸವರಾಜ ದಟ್ಟಿ, ಶಶಿಧರ ಸಿನ್ನೂರ, ಪ್ರಕಾಶ ಕಬ್ಬರಗಿ ಅವರು ಈ ಸಂದರ್ಭದಲ್ಲಿ ಇದ್ದರು.

ಧುತ್ತರಗಿವರು ಸೂಳಿಭಾವಿಯಲ್ಲಿ ಜನಿಸಿದ ಕಾರಣಕ್ಕಾಗಿ ಸರ್ಕಾರ ಧುತ್ತರಗಿ ಪ್ರತಿಷ್ಠಾನ ಸ್ಥಾಪಿಸಿ ಅನುದಾನ ನೀಡಿದೆ, ಅವರು ಬೆಳೆದ ಹನುಮಸಾಗರದಲ್ಲಿ ರಂಗಕರ್ಮಿಯ ಮೆರವಣಿಗೆ ನಡೆದಿದೆ.

- ಮಲ್ಲಯ್ಯ ಕೋಮಾರಿ, ನಿಸರ್ಗ ಸಂಗೀತ ಶಾಲೆಯ ಮುಖ್ಯಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry