ದೇವಾಲಯ ನಿರ್ಮಾಣ: ಸಹಾಯಕ್ಕೆ ಮನವಿ

7

ದೇವಾಲಯ ನಿರ್ಮಾಣ: ಸಹಾಯಕ್ಕೆ ಮನವಿ

Published:
Updated:

ಸೋಮವಾರಪೇಟೆ: ‘ಸಮೀಪದ ಬಜೆಗುಂಡಿಯ ಶನೇಶ್ವರ ದೇವಾಲಯವು ಸುಮಾರು ₹ 40 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರವಾಗುತ್ತಿದ್ದು, ಮುಂದಿನ ಆರು ತಿಂಗಳೊಳಗೆ ಲೋಕಾರ್ಪಣೆಗೊಳ್ಳಲಿದೆ’ ಎಂದು ದೇವಾಲಯ ಸಮಿತಿ ಅಧ್ಯಕ್ಷ ಜಿ.ಸಿ.ರಾಜಶೇಖರ್ ತಿಳಿಸಿದರು.

ನಾಲ್ಕು ದಶಕಗಳ ಹಿಂದೆ ಸಣ್ಣ ಗುಡಿಯಾಗಿ ಆರಂಭಗೊಂಡ ಬಜೆಗುಂಡಿಯ ಶನೇಶ್ವರ ದೇವಾಲಯ, ನಂತರದ ದಿನಗಳಲ್ಲಿ ಭಕ್ತಾದಿಗಳ ನೆರವಿನಿಂದ ಅಲ್ಪ ಪ್ರಮಾಣದಲ್ಲಿ ಜೀರ್ಣೋದ್ಧಾರಗೊಂಡಿತ್ತಾದರೂ, ಪೂರ್ಣಗೊಂಡಿರಲಿಲ್ಲ.

ಪಟ್ಟಣದಿಂದ 4 ಕಿ.ಮೀ. ದೂರದಲ್ಲಿರುವ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಜೆಗುಂಡಿ ಗ್ರಾಮದ ದೇವಾಲಯಕ್ಕೆ ರಾಜ್ಯದ ವಿವಿಧ ಪ್ರದೇಶಗಳಾದ ಬೆಂಗಳೂರು, ಮೈಸೂರು, ಮಂಗಳೂರು, ನಂಜನಗೂಡು, ಸಕಲೇಶಪುರ, ಹಾಸನ, ಜಿಲ್ಲೆಯ ವಿರಾಜಪೇಟೆ, ಮಡಿಕೇರಿ ಹಾಗೂ ತಾಲ್ಲೂಕಿನ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ವಾರಕ್ಕೆರಡು ಬಾರಿ ಬಂದು ಹೋಗುತ್ತಾರೆ.

ಇದೀಗ 2012ರಿಂದ ದೇವಾಲಯವನ್ನು ಪರಿಪೂರ್ಣವಾಗಿ ಜೀರ್ಣೋದ್ಧಾರ ಮಾಡುವ ಉದ್ದೇಶದಿಂದ ದೇವಾಲಯದ ಸಮಿತಿಯ ಪದಾಧಿಕಾರಿಗಳಾದ ಜಿ.ಸಿ.ರಾಜಶೇಖರ್, ದೇವರಾಜು, ಸುಧಾಕರ್, ಸಣ್ಣಮ್ಮ, ರಾಜಮ್ಮ, ಪ್ರಶಾಂತ್, ಸತೀಶ್, ಗಿರಿ ವ್ಯಾಲಿ ಎಸ್ಟೇಟ್‌ನ ಸೋಮಪ್ಪ ಮತ್ತಿತರರು ಶ್ರಮಿಸುತ್ತಿದ್ದಾರೆ.

ಆರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಹಣದ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಸಾಗಿರಲಿಲ್ಲ.

ಆದರೆ ಕಳೆದ ಮೂರು ತಿಂಗಳಿನಿಂದ ದೇವಾಲಯ ಕಾಮಗಾರಿ ಬಿರುಸಿನಿಂದ ಸಾಗಿದೆ. ಕೊನೆಯ ಹಂತದ ಕಾಮಗಾರಿಗೆ ಇನ್ನೂ ಹೆಚ್ಚಿನ ಹಣದ ಅವಶ್ಯಕತೆಯಿದೆ’ ಎಂದು ಆಡಳಿತ ಮಂಡಳಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry