ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸತ್ಯಾಗ್ರಹ ಸ್ಮಾರಕ ಅನಾಥ

ಕರ ನಿರಾಕರಣೆ ಚಳವಳಿ ನೆನಪಿನಲ್ಲಿ ನಿರ್ಮಾಣ
Last Updated 18 ಜೂನ್ 2018, 8:44 IST
ಅಕ್ಷರ ಗಾತ್ರ

ಸಿದ್ದಾಪುರ: ತಾಲ್ಲೂಕಿನ ಮಾವಿನಗುಂಡಿಯಲ್ಲಿರುವ ಮಹಿಳಾ ಸತ್ಯಾಗ್ರಹ ಸ್ಮಾರಕ ನಿರ್ವಹಣೆಯಿಲ್ಲದೇ ಅನಾಥವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಿದ್ದಾಪುರ ತಾಲ್ಲೂಕು ಮಹತ್ವದ ಸ್ಥಾನ ಪಡೆದಿದೆ. ಅಂದಿನ ಬ್ರಿಟಿಷ್ ಸರ್ಕಾರದ ವಿರುದ್ಧ ಮಹಿಳೆಯರು ಪ್ರತಿರೋಧ ತೋರಿದ್ದ ಸ್ಥಳವಾಗಿರುವ ಮಾವಿನಗುಂಡಿ ಕೂಡ, ಸ್ವಾತಂತ್ರ್ಯ ಚಳವಳಿಯ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಸ್ವಾತಂತ್ರ್ಯ ಹೋರಾಟದ ಕರ ನಿರಾಕರಣೆ ಚಳವಳಿಗೆ ಈ ತಾಲ್ಲೂಕು ಸ್ಪಂದಿಸಿದ ರೀತಿಯೇ ರೋಮಾಂಚಕವಾದುದು. ತೆರಿಗೆ ನೀಡುವುದನ್ನು ನಿರಾಕರಿಸುವ ಚಳವಳಿಯಲ್ಲಿ ಭಾಗಿಯಾಗಿದ್ದ ತಾಲ್ಲೂಕಿನ ಸಾವಿರಾರು ಜನರು ತಮ್ಮ ತೋಟ, ಗದ್ದೆ, ಮನೆ–ಮಠವನ್ನು ಕಳೆದುಕೊಂಡ ದೇಶಭಕ್ತಿಯ ಆ ಅಧ್ಯಾಯ ಇತಿಹಾಸದ ಪುಟ ಸೇರಿದೆ. ಇಂತಹ ಕರ ನಿರಾಕರಣೆ ಚಳವಳಿಯ ಅಂಗವಾದ ರೋಚಕ ಘಟನೆಯೊಂದು ಮಾವಿನಗುಂಡಿಯಲ್ಲಿ ನಡೆದಿತ್ತು.

1932ರ ಮೇ 18ರಂದು ಮಾವಿನಗುಂಡಿಯಲ್ಲಿ ನಡೆದ ಪ್ರತಿಭಟನೆ ಅದು. ಕರ ನೀಡದ ಕಾರಣದಿಂದ ಬ್ರಿಟಿಷ್ ಸರ್ಕಾರ ಜಪ್ತು ಮಾಡಿದ್ದ ಎಮ್ಮೆಗಳನ್ನು ರಸ್ತೆ ಕೆಲಸದ ಕಾರಕೂನ ಹಾಗೂ ಹವಾಲ್ದಾರ್‌ನೊಬ್ಬ ಹರಾಜಿನಲ್ಲಿ ಪಡೆದರು. ಈ ಇಬ್ಬರ ಕೃತ್ಯವನ್ನು ವಿರೋಧಿಸಿ ಮಹಿಳೆಯರು ಮಾವಿನಗುಂಡಿಯಲ್ಲಿ ಸತ್ಯಾಗ್ರಹ ನಡೆಸಿದರು.

ತ್ಯಾಗಲಿ ಭುವನೇಶ್ವರಮ್ಮ 32 ದಿನಗಳ ಉಪವಾಸವನ್ನು, ಕಲ್ಲಾಳದ ಲಕ್ಷ್ಮಮ್ಮ 22 ದಿನಗಳ ಉಪವಾಸವನ್ನು ಕೈಗೊಂಡರು. ಅವರೊಂದಿಗೆ ದೊಡ್ಮನೆ ಮಹಾದೇವಮ್ಮ, ಕುಳೀಬೀಡು ಗಣಪಮ್ಮ, ಹಣಜಿಬೈಲ್ ದುಗ್ಗಮ್ಮ, ಕುಳಿಬೀಡು ಭಾಗೀರಥಮ್ಮ, ಕಲ್ಲಾಳ ಕಾವೇರಮ್ಮ, ಹೊಸಕೊಪ್ಪ ಸೀತಮ್ಮ, ಗುಂಜಗೋಡು ಮಾದೇವಮ್ಮ ಹೆಗ್ಗಾರ ದೇವಮ್ಮ ಭಾಗವಹಿಸಿದ್ದರು. ಈ ಮಹಿಳೆಯರಲ್ಲಿ ಹಸುಗೂಸಿನ ತಾಯಂದಿರು ಕೂಡ ಇದ್ದರು’ ಎಂಬ ವಿವರ ಸ್ಮಾರಕದಲ್ಲಿರುವ ಫಲಕದಲ್ಲಿದೆ.

ಈ ಹೋರಾಟವನ್ನು ವರದಿ ಮಾಡಲು ಮದ್ರಾಸ್‌ನಿಂದ ಬಂದಿದ್ದ ‘ಹಿಂದೂ’ ಪತ್ರಿಕೆಯ ಪ್ರತಿನಿಧಿಯನ್ನು ಕಾರವಾರದಲ್ಲಿಯೇ ತಡೆ ಹಿಡಿಯಲಾಯಿತು. ಆದರೂ, ಅದೇ ಪತ್ರಿಕೆಯ ಮತ್ತೊಬ್ಬ ಪ್ರತಿನಿಧಿ ಇಲ್ಲಿಗೆ ಬಂದು ಈ ಮಹಿಳಾ ಹೋರಾಟವನ್ನು ತಮ್ಮ ಪತ್ರಿಕೆಯಲ್ಲಿ ವರದಿ ಮಾಡಿದರು. ಇದರಿಂದ ಈ ಸತ್ಯಾಗ್ರಹ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಿತು ಎಂಬ ವಿವರ ಇಲ್ಲಿನ ಹಿರಿಯರಿಂದ ಲಭ್ಯವಾಗುತ್ತದೆ.

ಸ್ಥಳೀಯರ ಆಗ್ರಹದ ಮೇರೆಗೆ ಆರು ವರ್ಷಗಳ ಹಿಂದೆ ಅರಣ್ಯ ಇಲಾಖೆ ಹಾಗೂ ಪಶ್ಚಿಮಘಟ್ಟ ಕಾರ್ಯಪಡೆ ಇಲ್ಲಿ ಸ್ಮಾರಕವೊಂದನ್ನು ನಿರ್ಮಾಣ ಮಾಡಿದೆ. ಸ್ವಾತಂತ್ರ್ಯ ಚಳವಳಿಯ ಕಾಲದ ಮಹಿಳಾ ಬಂದಿಖಾನೆಯ ಕಟ್ಟಡ ಹಾಗೂ ಅಂದಿನ ಘಟನೆಯನ್ನು ಹೋಲುವಂತಹ ಪ್ರತಿಕೃತಿಯನ್ನು, ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವಂತಹ ಮಹಿಳಾ ಶಿಲ್ಪಗಳನ್ನು ನಿರ್ಮಿಸಲಾಯಿತು. ಶಿವನ ಮುಖ ಹೊಂದಿದ ಶಿಲ್ಪವೊಂದನ್ನೂ ಮಾಡಲಾಗಿದೆ.

ಈ ಸತ್ಯಾಗ್ರಹ ಸ್ಮಾರಕವನ್ನು ನೋಡಿದರೆ, ಇದರ ನಿರ್ವಹಣೆ ಸರಿ ಇಲ್ಲ ಎಂಬ ಸಂಗತಿ ಕಣ್ಣಿಗೆ ರಾಚುತ್ತದೆ. ಸ್ಮಾರಕದ ಶಿಲ್ಪಗಳ ಸುತ್ತ ಕಳೆ ಬೆಳೆದಿದೆ. ಈ ಶಿಲ್ಪಗಳ ಕೆಳಗಡೆಯ ಫಲಕದ ಅಕ್ಷರಗಳು ಬಿದ್ದುಹೋಗಿವೆ. ಶಿವನ ಶಿಲ್ಪ ಒಡೆದಿದೆ. ಬಾಗಿಲಿನಲ್ಲಿ ಹಾಕಲಾದ ನಾಮಫಲಕ ಹಳೆಯದಾಗಿದೆ. ನೀರಿನ ಪಂಪ್ ಹಾಳಾಗಿದೆ.

’ಈ ಸ್ಮಾರಕದಲ್ಲಿರುವ ಶಿವನ ಮೂರ್ತಿಯ ಹಸ್ತದಿಂದ ನೀರು ಬೀಳುವಂತೆ ಮಾಡಲಾಗಿತ್ತು. ಆದರೆ ಈಗ ಆ ಮೂರ್ತಿ ಒಡೆದು ಹೋಗಿರುವುದರಿಂದ ಅದರಿಂದ ನೀರು ಬೀಳುವುದನ್ನು ನಿಲ್ಲಿಸಲಾಗಿದೆ’ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಹೇಳುತ್ತಾರೆ.

‘ಈ ಮಹಿಳಾ ಸತ್ಯಾಗ್ರಹ ಸ್ಮಾರಕದ ಶಿವನ ಹಸ್ತದಿಂದ ನೀರು ಹರಿಯುವುದನ್ನು ಸರಿಪಡಿಸಬೇಕು. ಎರಡೂ ಫಲಕಗಳನ್ನು ಪುನಃ ಬರೆಯಿಸಬೇಕು. ಸ್ಮಾರಕದ ಒಂದು ಕಡೆ ಧರೆ ಕುಸಿಯುತ್ತಿದ್ದು, ಅದಕ್ಕೆ ತಡೆಗೋಡೆ ಕಟ್ಟಬೇಕು. ಈ ಎಲ್ಲದಕ್ಕೂ ಅನುದಾನ ಬೇಕು. ಅದರೊಂದಿಗೆ ಇದರ ನಿರ್ವಹಣೆಯನ್ನೂ ಕೂಡ ಮಾಡಬೇಕು ಅನುದಾನ ಇಲ್ಲದ ಕಾರಣದಿಂದ ಇದು ಸಾಧ್ಯವಾಗಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ಲೋಕೇಶ ಪಾಟಣಕರ್ ತಿಳಿಸಿದರು.

‘ಅಭಿವೃದ್ಧಿಗೆ ಅನುದಾನದ ಕೊರತೆ’

‘ಈ ಮಹಿಳಾ ಸತ್ಯಾಗ್ರಹ ಸ್ಮಾರಕದ ಶಿವನ ಹಸ್ತದಿಂದ ನೀರು ಹರಿಯುವುದನ್ನು ಸರಿಪಡಿಸಬೇಕು. ಎರಡೂ ಫಲಕಗಳನ್ನು ಪುನಃ ಬರೆಯಿಸಬೇಕು. ಸ್ಮಾರಕದ ಒಂದು ಕಡೆ ಧರೆ ಕುಸಿಯುತ್ತಿದ್ದು, ಅದಕ್ಕೆ ತಡೆಗೋಡೆ ಕಟ್ಟಬೇಕು. ಈ ಎಲ್ಲದಕ್ಕೂ ಅನುದಾನ ಬೇಕು. ಅದರೊಂದಿಗೆ ಇದರ ನಿರ್ವಹಣೆಯನ್ನೂ ಕೂಡ ಮಾಡಬೇಕು ಅನುದಾನ ಇಲ್ಲದ ಕಾರಣದಿಂದ ಇದು ಸಾಧ್ಯವಾಗಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ಲೋಕೇಶ ಪಾಟಣಕರ್ ತಿಳಿಸಿದರು.

ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕದ ನಿರ್ವಹಣೆಗೆ ₹ 4–5 ಲಕ್ಷ ಅನುದಾನದ ಅಗತ್ಯವಿದೆ. ನಿರ್ವಹಣೆ ಹಾಗೂ ಅಭಿವೃದ್ಧಿಗೆ ಅನುದಾನವನ್ನು ಈ ಹಿಂದೆಯೇ ಕೇಳಿದ್ದೆವು. ಆದರೆ ಅನುದಾನ ಲಭ್ಯವಾಗಲಿಲ್ಲ.
ಲೋಕೇಶ ಪಾಟಣಕರ್, ವಲಯ ಅರಣ್ಯಾಧಿಕಾರಿ

–ರವೀಂದ್ರ ಭಟ್ ಬಳಗುಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT