ಮೀನುಗಾರರಿಗೆ ನಷ್ಟ ತಂದೊಡ್ಡಿದ ಕಸ!

7
ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿತ್ಯಾಜ್ಯದ ರಾಶಿ

ಮೀನುಗಾರರಿಗೆ ನಷ್ಟ ತಂದೊಡ್ಡಿದ ಕಸ!

Published:
Updated:

ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಸಮುದ್ರದಿಂದ ತ್ಯಾಜ್ಯದ ರಾಶಿಗಳು ಬಂದು ಬೀಳುತ್ತಿರುವುದು ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಜತೆಗೆ, ಮೀನುಗಾರರಿಗೆ ನಷ್ಟ ತಂದೊಡ್ಡಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸಮುದ್ರದಿಂದ ತ್ಯಾಜ್ಯದ ರಾಶಿಗಳು ತೀರಕ್ಕೆ ಬರುತ್ತಿವೆ. ಅಲಿಗದ್ದಾದಿಂದ ಕೋಡಿಬಾಗದವರೆಗಿನ ಕಡಲತೀರ ಸಂಪೂರ್ಣ ಕಸಮಯವಾಗಿದೆ. ಪ್ರವಾಸಿಗರು ಕಾಲಿಡಲು ಹೇಸಿಗೆ ಪಡುವಷ್ಟು ಕಡಲತೀರ ತನ್ನ ಸೌಂದರ್ಯವನ್ನು ಕಳೆದುಕೊಂಡಿದೆ. ಇದರಿಂದಾಗಿ ಇಲ್ಲಿಗೆ ಬರುವವರ ಸಂಖ್ಯೆಯಲ್ಲಿ ತೀರಾ ಇಳಿಮುಖವಾಗಿದೆ ಎನ್ನುತ್ತಾರೆ ಕಡಲ ಜೀವ ರಕ್ಷಕ ಸಿಬ್ಬಂದಿ.

ಎಲ್ಲಿಂದ ಬರುತ್ತಿದೆ ಇಷ್ಟೊಂದು ಕಸ?: ನಗರದ ಕೋಣೆನಾಲದಿಂದ ಮಲೀನ ನೀರು ನೇರವಾಗಿ ಸಮುದ್ರ ಸೇರುತ್ತಿದೆ. ಇದರ ಜತೆಗೆ, ಪ್ಲಾಸ್ಟಿಕ್ ತ್ಯಾಜ್ಯಗಳು, ಕಸ– ಕಡ್ಡಿಗಳೂ ಕಡಲು ಸೇರುತ್ತಿರುವುದರಿಂದ ಸಮುದ್ರದಲ್ಲಿ ತ್ಯಾಜ್ಯದ ರಾಶಿ ಹೆಚ್ಚಾಗುತ್ತಿದೆ.

ಇನ್ನೊಂದೆಡೆ, ಕಾಳಿ ನದಿಯಿಂದಲೂ ಅಧಿಕ ಪ್ರಮಾಣದ ಅರಣ್ಯ ತ್ಯಾಜ್ಯ ಹಾಗೂ ಮಾನವ ಬಳಕೆ ಮಾಡಿ ಬಿಸಾಡಿದ ವಸ್ತು‌ಗಳು ಮಳೆಯಿಂದಾಗಿ ಸಮುದ್ರ ಸೇರಿವೆ. ಕಾಂಡ್ಲಾ ಸಸ್ಯಗಳ ಬೇರುಗಳು ಕೂಡ ತೀರ ಪ್ರದೇಶಕ್ಕೆ ಬಂದು ಬಿದ್ದಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.

ಹೂಳು ಹೆಚ್ಚು ಇದೆ: ಡಿಸೆಂಬರ್‌ ತಿಂಗಳಿನಲ್ಲಿ ಇಲ್ಲಿನ ಬಂದರು ಪ್ರದೇಶದಲ್ಲಿ ಸುಮಾರು 17 ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳು ತೆಗೆಯಲಾಗಿತ್ತು. ಆದರೆ, ಅದನ್ನು ಪುನಃ ಸಮುದ್ರದ 20 ನಾಟಿಕಲ್ ಮೈಲಿ ದೂರದಲ್ಲಿ ಸುರಿಯಲಾಗಿತ್ತು. ಅದೀಗ ಸಮುದ್ರದ ಉಬ್ಬರ–ಇಳಿತದಿಂದಾಗಿ ತೀರಕ್ಕೆ ಬಂದಿವೆ ಎನ್ನುತ್ತಾರೆ ಕಡಲ ಜೀವ ವಿಜ್ಞಾನಿಗಳು.

ಮೀನುಗಾರರಿಗೆ ನಷ್ಟ: ಇವೆಲ್ಲ ತ್ಯಾಜ್ಯಗಳು ಕಡಲತೀರಕ್ಕೆ ಬಂದು ಬಿದ್ದಿರುವುದು ಮೀನುಗಾರರಿಗೆ ಹೆಚ್ಚಿನ ನಷ್ಟ ಉಂಟು ಮಾಡಿದೆ. ಸಮುದ್ರಕ್ಕೆ ಬೀಸಿದ ಏಂಡಿ ಬಲೆಗಳಲ್ಲಿ ತ್ಯಾಜ್ಯಗಳೆ ತುಂಬಿಕೊಳ್ಳುತ್ತಿರುವುದು ಅವರನ್ನು ಸಂಕಷ್ಟಕ್ಕೆ ದೂಡಿದೆ.

‘ಬೀಸಿದ ಬಲೆ ಎಳೆಯಲು ಹೊರಟರೆ ಕಸದ ರಾಶಿಗಳು ಮೇಲಕ್ಕೆ ಬರುತ್ತಿದೆ. ಇನ್ನೊಂದೆಡೆ, ಹರಿತ ತ್ಯಾಜ್ಯಗಳಿಗೆ ಸಿಲುಕಿ ಬಲೆಗಳು ಹರಿದು ಹೋಗುತ್ತಿದೆ. ಇದರಿಂದಾಗಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವಂತಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಮೀನುಗಾರ ನಾಗೇಶ ಉಳ್ವೇಕರ.

‘ಸಾಮಾನ್ಯವಾಗಿ ಮಳೆಗಾಲದಲ್ಲಿ ತ್ಯಾಜ್ಯಗಳು ಕಡಲತೀರಕ್ಕೆ ಬಂದು ಬೀಳುವುದು ಸಹಜ. ಕಳೆದ ವರ್ಷ, ಅದಕ್ಕೂ ಹಿಂದಿನ ವರ್ಷವೆಲ್ಲ ಹೀಗೆ ಆಗಿತ್ತು. ಆದರೆ, ಈ ಬಾರಿಯಷ್ಟು ರಾಶಿ ತ್ಯಾಜ್ಯಗಳು ದಡಕ್ಕೆ ಬಂದು ಬಿದ್ದಿರುವುದು ಇದೇ ಮೊದಲು ಅನಿಸುತ್ತದೆ. ಈವರೆಗೂ ನಾನು ಇ್ಟೊಂದು ತ್ಯಾಜ್ಯಗಳನ್ನು ಕಡಲತೀರದಲ್ಲಿ ನೋಡಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರಾಮು ಗೌಡ.

ಶನಿವಾರವೂ ಮುಂದುವರಿದಿತ್ತು

ತ್ಯಾಜ್ಯಗಳಿಂದಾಗಿ ಗುರುವಾರ (ಜೂ.14) ಇಲ್ಲಿನ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗಿತ್ತು. ಕಸದ ರಾಶಿಗಳು ದಡಕ್ಕೆ ಬಂದು ಬಿದ್ದಿದ್ದವು. ಅದನ್ನು ಕಡಲತೀರ ಸ್ವಚ್ಛಗೊಳಿಸುವ ಯಂತ್ರದ ಮೂಲಕ ತೆರವು ಮಾಡಲಾಗಿತ್ತು. ಆದರೆ, ದಡಕ್ಕೆ ತ್ಯಾಜ್ಯಗಳು ಬಂದು ಬೀಳುವುದು ಶನಿವಾರದವರೆಗೂ ಮುಂದುವರಿದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry