ರಸ್ತೆ ವಿಸ್ತರಣೆಯಿಂದ ರೈತರಿಗೆ ಸಂಕಷ್ಟ

7
ಹೊಂಡದಂತಾಗುತ್ತಿರುವ ರಸ್ತೆಗಳು

ರಸ್ತೆ ವಿಸ್ತರಣೆಯಿಂದ ರೈತರಿಗೆ ಸಂಕಷ್ಟ

Published:
Updated:
ರಸ್ತೆ ವಿಸ್ತರಣೆಯಿಂದ ರೈತರಿಗೆ ಸಂಕಷ್ಟ

ಹಂಸಭಾವಿ: ರಾಣೆಬೆನ್ನೂರ–ಸಾಗರ ರಾಜ್ಯ ಹೆದ್ದಾರಿಯನ್ನು ಕೆಲವು ದಿನಗಳ ಹಿಂದೆ ಖಾಸಗಿ ಕಂಪನಿಯೊಂದು ವಿಸ್ತರಣೆ ಮಾಡಿ ಕೆಲಸ ಮುಗಿಸಿ ಕೈತೊಳೆದುಕೊಂಡಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನೆಮ್ಮದಿಯಿಂದ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾರೆ.

ಆದರೆ ಕೋಡ–ಚಿಕ್ಕೇರೂರವರೆಗಿನ ಈ ರಸ್ತೆಯ ಇಕ್ಕೆಲಗಳಲ್ಲಿ ಕೃಷಿ ಜಮೀನು ಹೊಂದಿರುವ ರೈತರು ಮಾತ್ರ ತಲೆ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ಎದುರಾಗಿದೆ. ಕಾರಣ ರಸ್ತೆಯ ವಿಸ್ತರಣೆ ಜೊತೆಗೆ ರಸ್ತೆಯ ಎತ್ತರವನ್ನೂ ಹೆಚ್ಚಿಸಲಾಗಿದೆ. ಹೀಗಾಗಿ ರೈತರ ಕೃಷಿ ಜಮೀನು ತಳಮಟ್ಟಕ್ಕೆ ಇಳಿದಿದ್ದರಿಂದ ಮಳೆ ಬಂದರೆ ನೀರು ನಿಂತು ಹೊಂಡಗಳಂತೆ ಕಾಣುತ್ತಿವೆ.

‘ರಸ್ತೆ ಅಗಲ ಮಾಡಿದ್ದರಿಂದ ನಮ್ಮ ಜಮೀನು ಕಳಕೊಂಡಿವಿ. ಅದರ ಜೊತೆಗೆ ಗೋವಿನಜೋಳ, ಹತ್ತಿ ಬೆಳಿತಿದ್ದ ನಮ್ಮ ಜಮೀನು ಈಗ ಭತ್ತ ಬೆಳೆಯೋ ಗದ್ದಿ ಆಗಿದಾವು. ಮೂರು ಎಕರೆ ಜಮೀನು ಈ ರಸ್ತೆ ಪಕ್ಕದಾಗ ಐತಿ ಹೋದವಾರ ಎಲ್ಲಾ ಹೊಲಕನೂ ಗೋವಿನಜೋಳ ಬಿತ್ತಿದೆ ಆಮೇಲೆ ಕೆರಿ ಕಟ್ಟಿ ತುಂಬೋ ದೊಡ್ಡ ಮಳಿ ಬಂತು ಹೀಂಗಾಗಿ ಹಾಕಿದ ಒಂದು ಬೀಜನೂ ಹುಟ್ಟಿಲ್ಲ ಹೊಲದ ತುಂಬನೂ ನೀರು ನಿಂತು ನೆಲ ಕಾಣದಂಗಾಗಿತ್ತು. ಹೋದ ವರ್ಷ ಏನೂ ತಾಪತ್ರಯ ಇಲ್ಲದಂಗ ಬೆಳಿ ಬೆಳದವಿ. ಆದರ ಈ ವರ್ಷ ಈ ರಸ್ತೆ ಅಗಲ ಮಾಡಿ ನಮ್ಮ ಹೊಲನಾ ತೆಗ್ಗು ಮಾಡಿದಾರ ಹೊಲಕ ಬರಾಕ ದಾರಿನೂ ಬಿಟ್ಟಿಲ್ಲ. ಒಂದು ಸಾರಿ ಬಿತ್ತನೆ ಮಾಡಾಕ ಮೂರು ಎಕರೆಗೆ ಮೂವತ್ತು ಸಾವಿರ ಖರ್ಚು ಮಾಡೇವಿ ಈಗ ಬೀಜ ಹುಟ್ಟಲಿಲ್ಲ ಅಂತಾ ಭತ್ತ ಬಿತ್ತಾಕತೀವಿ. ನಮ್ಮ ಗೋಳು ಕೇಳೋರು ಇಲ್ಲದಂಗಾಗೇತಿ ಎನ್ನುತ್ತಾರೆ ಹಂಸಭಾವಿ ಸಮೀಪದ ಸುತ್ತಕೋಟಿ ಗ್ರಾಮದ ರೈತ ಫಾಲಾಕ್ಷಪ್ಪ ಹಳ್ಳೇರ.

ನಮ್ಮೂರಾಗ ಸುಮಾರು ಐವತ್ತು ಎಕರೆ ಜಮೀನು ರಸ್ತೆ ಪಕ್ಕಕ್ಕೆ ಇದ್ದು ಈ ರಸ್ತೆ ಮಾಡಿದಕ ಮಳಿ ಹೆಚ್ಚಾದರ ಪೂರ್ತಿ ನೀರು ತುಂಬುತೈತಿ. ರಸ್ತೆ ಪಕ್ಕಕ್ಕೆ ಸರಿಯಾದ ಕಾಲುವೆನೂ ಮಾಡಿಲ್ಲ ರಸ್ತೆ ಮೇಲೆ ಹರಿಯೋ ನೀರು ನಮ್ಮ ಜಮೀನಿಗೆ ಬರುತೈತಿ, ಇದನ ಸರಿ ಮಾಡರಿ ಅಂತಾ ಹೇಳಿದರ ಬರೀ ಕಾಲುವೆ ಅಷ್ಟ ಮಾಡಿ ನಮ್ಮ ಜಮೀನಿಗೆ ದಾರಿ ಇಲ್ಲದಂಗ ಮಾಡಿ ಹೋಗ್ಯಾರ ನಮ್ಮ ಜಮೀನಿಗೆ ಎತ್ತು, ಬೇಸಾಯ, ಬೀಜ , ಗೊಬ್ಬರ, ಸಾಗಿಸೋದಾದರೂ ಹೆಂಗ....? ಮಳಿ ಹೆಚ್ಚಾಗಿ ಹೊಲಕ ನೀರು ನುಗ್ಗಿ ಗೋವಿನ ಜೋಳ ಹುಟ್ಟಲಿಲ್ಲ

ಅದಕ ಭತ್ತ ಬಿತ್ತಾಕತೀವಿ ಮುಂದಿನ ದಿನ ಮಳಿ ಕಡಿಮಿ ಆದರ ನಮ್ಮ ಗತಿ ಏನು ... ನಾವು ಯಾವ ಬೆಳಿ ಬೆಳಿಬೇಕು ಅಂತಾನೇ ಗೊತ್ತಾಗತಿಲ್ಲ ಎನ್ನುತ್ತಾರೆ ರೈತ ಮಾಲತೇಶ ಬಡಿಗೇರ.

ನಾವು ರಸ್ತೆ ಮಾಡುವಾಗಲೇ ರೈತರಿಗೆ ಕಾಲುವೆ ಮಾಡಲು ಸಹಕರಿಸಲು ಕೇಳಿಕೊಂಡೆವು ಆದರೆ ಆ ಭಾಗದ ರೈತರು ನಮಗೆ ತಕರಾರುಗಳನ್ನು ಒಡ್ಡಿದರು. ಹೀಗಾಗಿ ಅಲ್ಲಿ ಕಾಲುವೆ ನಿರ್ಮಾಣ ವಿಳಂಭವಾಯಿತು. ಇನ್ನು ಪ್ರತಿಯೊಬ್ಬ ರೈತರ ಜಮೀನಿಗೆ ದಾರಿಗಳನ್ನು ಮಾಡುತ್ತಾ ಹೋದರೆ ಅದು ಅಪಘಾತ ವಲಯವಾಗಿ ಮಾರ್ಪಾಡಾಗುತ್ತದೆ. ಎಲ್ಲಿ ಅವಶ್ಯವಿದೆಯೋ ಅಲ್ಲಿ ನಾವು ರೈತರು ಸಾಮೂಹಿಕವಾಗಿ ಬಳಕೆ ಮಾಡಲು ದಾರಿಗಳನ್ನು ಮಾಡಿಕೊಟ್ಟಿದ್ದೇವೆ. ಹೀಗಾಗಿ ಇಲ್ಲಿ ನಮ್ಮ ತಪ್ಪೇನೂ ಇಲ್ಲ ಎನ್ನುತ್ತಾರೆ ಕೆಆರ್‌ಡಿಸಿಎಲ್ ಎಂಜಿನಿಯರ್ ರಿಜ್ವಾನ್.

ಸಮಸ್ಯೆ ಏನೇ ಇರಲಿ ಇಲ್ಲಿನ ರೈತರ ಜಮೀನುಗಳು ತಗ್ಗು ಪ್ರದೇಶವಾಗಿ ನಷ್ಟ ಅನುಭವಿಸುತ್ತಿರುವುದಂತೂ ನಿಜ ಹೀಗಾಗಿ ಈ ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ಪ್ರಯತ್ನ ಮಾಡಬೇಕು ಎಂದು ಸುತ್ತಕೋಟಿ ಹಾಗೂ ಭೋಗಾವಿ ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry