ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಕ್ಕು ಹಿಡಿಯುತ್ತಿರುವ ಶುದ್ದ ಕುಡಿಯುವ ನೀರಿನ ಘಟಕಗಳು

ಲಕ್ಷಾಂತರ ವೆಚ್ಚದಲ್ಲಿ ಅನುಷ್ಠಾನಗೊಳಿಸಿದ ಯೋಜನೆಗೆ ಗ್ರಹಣ
Last Updated 18 ಜೂನ್ 2018, 9:00 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರಸಭೆ ಅನುದಾನದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ನಗರದ ಅಂಚೆ ಕಚೇರಿ ವೃತ್ತ, ನಗರಸಭೆ ಆವರಣ ಮತ್ತು ಸಿದ್ಧೇಶ್ವರನಗರದ ಮಿನಿ ವಿಧಾನಸೌಧದ ಎದುರಿಗೆ ಸೇರಿದಂತೆ 3 ಕಡೆ ಲಕ್ಷಾಂತರ ಅನುದಾನ ಖರ್ಚು ಮಾಡಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿತ್ತು.

3 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ದುರಸ್ತಿ ಕಾಣದೇ ಎಲ್ಲ ಹಾಳಾಗಿ ಎರಡು ಮೂರು ವರ್ಷ ಗತಿಸಿದರೂ ದುರಸ್ತಿ ಕಂಡಿಲ್ಲ. ನಗರಸಭೆ ಕಾಂಪೌಂಡಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತರೂ ಯಾವೊಬ್ಬ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿಲ್ಲ. ಹಿಂದಿನ ಶಾಸಕ ಕೋಳಿವಾಡ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದ್ದರು. ಉದ್ಘಾಟನೆ ಮಾಡಿದ ಕೆಲವೇ ತಿಂಗಳುಗಳಲ್ಲಿ ಶುದ್ಧ ನೀರಿನ ಘಟಕಗಳು ಕೆಟ್ಟಿವೆ

ತಹಶೀಲ್ದಾರ್ ಕಚೇರಿಗೆ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರು ಪಾಣಿ, ಪಹಣಿ ಪತ್ರಿಕೆ, ಆಧಾರ್‌ ಕಾರ್ಡ್, ರೇಷನ್‌ ಕಾರ್ಡ್‌, ವಿಧವಾ ವೇತನ, ಸಂಧ್ಯಾ ಸುರಕ್ಷಾ ಸರ್ಕಾರದ ಯೋಜನೆಗಳನ್ನು ಪಡೆಯಲು ಮತ್ತು ಸಬ್‌ ರಿಜಿಸ್ಟ್ರಾರ್‌ ಕಚೇರಿ, ಒಂದಿಲ್ಲೊಂದು ಕೆಲಸಕ್ಕೆ ಸಾರ್ವಜನಿಕರು ಮಿನಿ ವಿಧಾನಸೌಧಕ್ಕೆ ದಿನಾಲು ಸಾವಿರಾರು ಜನರು ಬರುತ್ತಾರೆ.

‘ಮಹಿಳೆಯರು ಮಕ್ಕಳು ಸರದಿಯಲ್ಲಿ ನಿಂತು ಸುಸ್ತಾಗಿ ಸಮೀಪದಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಬೇಸಿಗೆಯಲ್ಲಂತೂ ಕುಡಿಯುವ ನೀರಿಗಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ. ಈ ಬಗ್ಗೆ ಅನೇಕ ಬಾರಿ ನಗರಸಭೆಗೆ ದೂರವಾಣಿ ಮೂಲಕ ಮತ್ತು ಸಿದ್ಧೇಶ್ವರ ನಗರದ ಚುನಾಯಿತ ಪ್ರತಿನಿಧಿಗಳಿಗೆ ತಿಳಿಸಿದರೂ ಏನೂ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ರೈತ ಮುಖಂಡ ಹನುಮಂತಪ್ಪ ಕಬ್ಬಾರ.

‘ಅಂಚೆ ಕಚೇರಿ ವೃತ್ತದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದೆ. ಬಿಎಸ್‌ಎನ್‌ಎಲ್‌, ಅಂಚೆ ಕಚೇರಿ, ತಾಲ್ಲೂಕು ಪಂಚಾಯಿತಿ, ವಿವಿಧ ಬ್ಯಾಂಕುಗಳು, ನಗರಠಾಣೆ, ಎಪಿಎಂಸಿ ಮತ್ತು ವಿವಿಧ ಶಾಲಾ ಕಾಲೇಜುಗಳಿಗೆ ದೂರದ ಊರಿನಿಂದ ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ತೀವ್ರ ತೊಂದರೆಯಾಗಿದೆ. ಸರ್ಕಾರಿ ಹೆರಿಗೆ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಚಿತ್ರಮಂದಿರ ಬಂದವರ ಪಾಡು ಹೇಳತೀರದು.
ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ತಿ ಬಗ್ಗೆ ಆಟೊ ಚಾಲಕರು, ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು, ನಗರಸಭೆ ಮತ್ತು ತಹಶೀಲ್ದಾರ್‌ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಸ್ವಾಭಿಮಾನಿ ಕರವೇ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಕುಂದಾಪುರ.

ಮಿನಿವಿಧಾನ ಸೌಧದ ಬಳಿ ರೈತರ ಪ್ರತಿಭಟನೆ, ದರಣಿ ಸತ್ಯಾಗ್ರಹ, ವಿವಿಧ ಜನಪರ ಸಂಘಟನೆಗಳಿಂದ ಹೋರಾಟ ಮಾಡಲು ಯುವಕರು, ರೈತರು, ಅಂಗನವಾಡಿ ಕಾರ್ಯಕರ್ತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆಗಳು ನಡೆಸಿ ತಹಶೀಲ್ದಾರಗೆ ಮನವಿ ಕೊಡಲು ಬರುತ್ತಾರೆ. ಕುಡಿಯುವ ನೀರಿಗಾಗಿ ಹೋಟೆಲ್‌ಗಳಿಗೆ ಅಲೆದಾಡುವಂತಾಗಿದೆ. ಹಗಲೆಲ್ಲ ಹೋದರೆ ಹೊಟೆಲ್‌ನವರು ನೀರು ಕೊಡುವುದಿಲ್ಲ. ದುಡ್ಡು ಕೊಟ್ಟು ಬಿಸಲೇರಿ ನೀರು ಕೊಂಡು ಕೊಳ್ಳಲಾಗದೇ ಹಳ್ಳಿಯಿಂದ ಒಂದು ಬಾಟಲ್‌ ನೀರು ತುಂಬಿಕೊಂಡು ಬಂದರೆ ಕೆಲವೇ ಹೊತ್ತಿಗೆ ಕಾಲಿಯಾಗುತ್ತವೆ.

‘ಶುದ್ಧ ಕುಡಿಯುವ ನೀರಿನ ಘಟಕದಿಂದ ಅಧಿಕಾರಿಗಳಿಗೆ, ಸಿಬ್ಬಂದಿಗೆ, ಸಂಚಾರ ಠಾಣೆ ಸಿಬ್ಬಂದಿ ಮತ್ತು ಸಿದ್ದೇಶ್ವರ ದೇವಸ್ಥಾನಕ್ಕೆ ಬಂದವರಿಗೆ ಸುತ್ತಮುತ್ತಲಿನ ಜನಗರಿಗೆ ಹೆಚ್ಚು ಅನುಕೂಲವಾಗಿತ್ತು. ಗೂಡಂಗಡಿಗಳ ನೀರು ಕುಡಿದು ರೋಗರುಜಿನಗಳು ಅಂಟಿಕೊಳ್ಳುತ್ತಿವೆ ಎನ್ನುತ್ತಾರೆ’ ರೈತ ಮುಖಂಡರಾದ ಮಾರುತಿ ಬಳ್ಳಾರಿ ಮತ್ತು ಭರಮರಡ್ಡಿ ದೇವರಡ್ಡಿ.

ಈಗಾಗಲೇ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ನೀರು ಕಾಣದೇ ಎಲ್ಲ ಕಬ್ಬಿಣ ವಸ್ತುಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಟ್ಯಾಂಕ್‌ನಲ್ಲಿ ದೂಳು, ಎಲೆ ಮರದ ಕಸ ಕಡ್ಡಿ ತುಂಬಿಕೊಂಡಿವೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಶುದ್ದ ಕುಡಿಯುವ ನೀರಿನ ಘಟಕಗಳನ್ನು ಆದಷ್ಟು ಬೇಗನೇ ದುರಸ್ಥಿಗೊಳಿಸಲಾಗುವುದು. ಎರಡು ಘಟಕಗಳ ಮಷಿನ್‌ ದುರಸ್ಥಿಗೆ ಕೊಟ್ಟಿದ್ದೇವೆ. ಬಂದ ತಕ್ಷಣ ಪುನ: ಪ್ರಾರಂಭ ಮಾಡುತ್ತೇವೆ
ಎಂ.ವಿ.ಗಿರಡ್ಡಿ, ಸಹಾಯಕ ಎಂಜಿನಿಯರ್‌ ನಗರಸಭೆ ರಾಣೆಬೆನ್ನೂರು

ಮುಕ್ತೇಶ ಕೂರಗುಂದಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT