ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಗದ ಕಂದಾಯ ಗ್ರಾಮ: ತಪ್ಪದ ಗುಡಿಸಲು ವಾಸ

ಮೂಲಸೌಲಭ್ಯ ಕೊರತೆ; ಲಕ್ಷ್ಮೇಶ್ವರ ಸಮೀಪದ ಚನ್ನಪಟ್ಟಣ ಹಳ್ಳಿಯ ಗ್ರಾಮಸ್ಥರ ಶೋಚನೀಯ ಬದುಕು
Last Updated 18 ಜೂನ್ 2018, 9:18 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸಮೀಪದ ಚನ್ನಪಟ್ಟಣ ಎಂಬ ಪುಟ್ಟ ಹಳ್ಳಿ ಇನ್ನೂ ಕಂದಾಯ ಗ್ರಾಮ ಆಗಿಲ್ಲ. ಇಲ್ಲಿನ ನಿವಾಸಿಗಳಲ್ಲಿ ಶೇ 98ರಷ್ಟು ಮಂದಿ ಪರಿಶಿಷ್ಟ ಜಾತಿಗೆ ಸೇರಿದವರು. ಆರ್ಥಿಕವಾಗಿ ತೀವ್ರ ಹಿಂದುಳಿದವರು. ಕಂದಾಯ ಗ್ರಾಮದ ಆಗದ ಕಾರಣ ಇಲ್ಲಿನ ನಿವಾಸಿಗಳು ಈಗಲೂ ಗುಡಿಸಲುಗಳಲ್ಲೇ ವಾಸಿಸುತ್ತಿದ್ದಾರೆ.

‘ನಮ್ಮ ಊರನ್ನು ಕಂದಾಯ ಗ್ರಾಮ ಮಾಡಿರಿ’ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಅಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ನಿವಾಸಿಗಳು ದೂರಿದರು.

ಚನ್ನಪಟ್ಟಣದ ಜನಸಂಖ್ಯೆ 700ರಷ್ಟಿದ್ದು, ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯ ಈ ಗ್ರಾಮವನ್ನು ಪ್ರತಿನಿಧಿಸುತ್ತಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಕೆ. ಪಾಟೀಲ ಅವರು ಈ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಊರನ್ನು ಕಂದಾಯ ಗ್ರಾಮ ಮಾಡಿ ಎಂದು ಮನವಿ ಸಲ್ಲಿಸಿದ್ದರು. ಆದರೆ, ಈವರೆಗೂ ಬೇಡಿಕೆ ಈಡೇರಿಲ್ಲ.

ಮಾಗಡಿ ಗ್ರಾಮ ಪಂಚಾಯ್ತಿಗೆ ಬರುವ ಈ ಹಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ನೀರು, ವಿದ್ಯುತ್, ರಸ್ತೆ, ಚರಂಡಿ ಸಂಪರ್ಕ ಇದೆ. ಆದರೆ, ಆಶ್ರಯ ಮನೆ ಕಟ್ಟಿಸಿಕೊಳ್ಳಲು ಮಾತ್ರ ಅವಕಾಶ ಇಲ್ಲ.

ಕಂದಾಯ ಗ್ರಾಮ ಆಗದಿರುವುದರಿಂದ ಆಶ್ರಯ ಮನೆ ಮಂಜೂರು ಮಾಡಲು ಅವಕಾಶ ಇಲ್ಲ ಎನ್ನುವುದು ಅಧಿಕಾರಿಗಳ ವಿವರಣೆ. ‘ನಮ್ಮೂರು ಕಂದಾಯ ಗ್ರಾಮ ಆದರೆ ನಮಗೂ ಆಶ್ರಯ ಮನಿ ಸಿಗ್ತಾವು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಫಕ್ಕೀರಯ್ಯ ಶಿವಯ್ಯ ಗಡ್ಡದೇವರಮಠ ಹೇಳಿದರು.

‘ನಮ್ಮೂರಿನ ಜನಾ ಹೆಚ್ಚು ಕಡಿಮಿ ಎಲ್ಲಾರೂ ಗುಡಸಲದಾಗ ಅದಾರ. ಮಳಿ ಬಂದಾಗ ಮನಿ ಸೋರತಾವು. ಮಳಿ, ಚಳಿಗೆ ನಮ್ಮ ಮಕ್ಕಳು ರೋಗ ಬಂದು ನರಳತಾವು. ಈಗಲಾದರೂ ಸರ್ಕಾರ ನಮ್ಮ ಸಮಸ್ಯೇನ ಪರಿಹಾರ ಮಾಡಿ ಪುಣ್ಯ ಕಟ್ಟಿಕೊಳ್ಳಲಿ’ ಎಂದು ಗ್ರಾಮಸ್ಥರು ಆಗ್ರಹಿಸಿದರು.

‘ಚನ್ನಪಟ್ಟಣದ 26 ನಿವಾಸಿಗಳಿಗೆ ಅರಣ್ಯ ಇಲಾಖೆಯಿಂದ ಹಕ್ಕುಪತ್ರ ಕೊಡಲಾಗಿದೆ. ಆದರೆ, ಅವರು ಭೂಮಿ ಮಾರಾಟ ಮಾಡುವಂತಿಲ್ಲ’ ಎಂದು ತಾಲ್ಲೂಕು ವಲಯ ಅರಣ್ಯಾಧಿಕಾರಿ ವೀರೇಶ ಹೇಳಿದರು.

ಮಳಿ ಬಂದ್ರ ನಮ್ಮ ಗುಡಿಸಲು ಪೂರ್ತಿ ಸೋರತೈತಿ. ಹದಿನೈದು ದಿನದ ಹಿಂದ ಬೀಸಿದ ಗಾಳಿಗೆ ಗುಡಿಸಲು ಹಾರಿ ಹೋಗಿ ಮಕ್ಕಳು ಮರಿ ಮಳ್ಯಾಗ ನೆನಿಬೇಕಾತ್ರಿ
- ನಾಗಮ್ಮ ಕಡಕೋಳ, ಚನ್ನಪಟ್ಟಣ ನಿವಾಸಿ

ನಾಗರಾಜ ಎಸ್. ಹಣಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT