ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಕುಸಿದ ಟೊಮೆಟೊ ಬೆಲೆ

ಮಾರುಕಟ್ಟೆಗೆ ದಿನಕ್ಕೆ 15 ಸಾವಿರ ಬಾಕ್ಸ್‌ಗಳ ಆವಕ
Last Updated 18 ಜೂನ್ 2018, 10:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಟೊಮೆಟೊ ಉತ್ಪಾದನೆ ಗಣನೀಯವಾಗಿ ಹೆಚ್ಚಿದ ಪರಿಣಾಮ ಬೆಲೆ ಪಾತಾಳಕ್ಕೆ ಕುಸಿದಿದೆ. ನಗರದ ಕೃಷಿ ಉತ್ಪನ್ನ ಮಾರಾಟ ಸಮಿತಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರೇ ಇಲ್ಲದಂತಾಗಿದೆ. ರಸ್ತೆಬದಿ ರಾಶಿ ರಾಶಿ ಕೊಳೆಯುತ್ತಿದೆ.

ಎಪಿಎಂಸಿಯಲ್ಲಿ ಏಳೆಂಟು ತಿಂಗಳಿನಿಂದ 15 ಕೆ.ಜಿ. ಟೊಮೆಟೊ ಬಾಕ್ಸ್‌ವೊಂದಕ್ಕೆ ₹60ರಿಂದ ₹120ಕ್ಕೆ ಮಾರಾಟವಾಗುತ್ತಿತ್ತು. ಇದೀಗ ಗುಣಮಟ್ಟದ ಟೊಮೆಟೊ ಬಾಕ್ಸ್ ₹50ರಿಂದ ₹ 60ಕ್ಕೆ ಮಾರಾಟ ವಾಗುತ್ತಿದೆ. ಸಾಧಾರಣ ಟೊಮೆಟೊ ಕೇಳುವವರಿಲ್ಲ. ವಾರದಿಂದೀಚೆ ಮಾರುಕಟ್ಟೆಗೆ ದಿನಕ್ಕೆ 15 ಸಾವಿರಕ್ಕೂ ಹೆಚ್ಚು ಬಾಕ್ಸ್‌ ಟೊಮೆಟೊ ಆವಕ ಆಗುತ್ತಿದೆ. ಬೇಡಿಕೆ ಇಲ್ಲದೆ ಖರೀದಿದಾರರೂ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಬೆಲೆ ಚೇತರಿಕೆ ಕಾಣುತ್ತಿಲ್ಲ.

ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಿಂದ ಬೆಂಗಳೂರು, ಹೊಸಕೋಟೆ, ರಾಯಚೂರು, ಗದಗ, ಬಳ್ಳಾರಿ ಸೇರಿದಂತೆ ನೆರೆಯ ಆಂಧ್ರಪ್ರದೇಶ, ಕೇರಳ, ತಮಿಳುನಾಡಿಗೆ ನಿತ್ಯ ಟೊಮಟೊ ರವಾನೆ ಆಗುತ್ತದೆ. ಏಳೆಂಟು ತಿಂಗಳಿನಿಂದ ಆ ಭಾಗಗಳ ರೈತರೂ ಅತಿಯಾಗಿ ಟೊಮೆಟೊ ಬೆಳೆದಿದ್ದಾರೆ. ಹೀಗಾಗಿ ಇಲ್ಲಿಯ ಟೊಮೆಟೊ ಬೇಡಿಕೆ ಕಳೆದುಕೊಂಡಿದೆ ಎಂಬುದು ವರ್ತಕ ವೆಂಕಟೇಶ್‌ ಅನಿಸಿಕೆ.

ಸದ್ಯ ಮಾರುಕಟ್ಟೆಯಲ್ಲಿ ವರ್ತಕರು ಕೆ.ಜಿ ಟೊಮೆಟೊ ₹ 4ರಿಂದ ₹ 6ಕ್ಕೆ ಖರೀದಿಸುವರು. ಈ ದರದಿಂದ ರೈತರಿಗೆ ಉತ್ಪಾದನೆಯ ಖರ್ಚು ಸಹ ಸಿಗುತ್ತಿಲ್ಲ. ಹಾಗೆಯೇ ಬಿಟ್ಟರೆ ಕೊಳೆತು ಹಾಳಾಗುತ್ತದೆ. ಬೇಸತ್ತ ರೈತರು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅದಾಗ್ಯೂ ಅವರಿಗೆ ಟ್ರಾಕ್ಟರ್‌ ಮತ್ತು ಟೆಂಪೊ ಬಾಡಿಗೆ ಖರ್ಚು ಸಹ ಸಿಗುತ್ತಿಲ್ಲ ಎಂಬುದು ಬೆಳೆಗಾರರ ಅಳಲು.

‘ಈ ಬಾರಿ ಏಳು ಎಕರೆಯಲ್ಲಿ ಮೊದಲ ಬಾರಿಗೆ ಟೊಮೆಟೊ ಬೆಳೆದಿದ್ದೇನೆ. ಈವರೆಗೆ ಒಟ್ಟು ₹ 14 ಲಕ್ಷ ಖರ್ಚು ಮಾಡಿದ್ದೇನೆ. ಉತ್ತಮ ಫಸಲು ಬಂದಿದೆ. ಮಾರುಕಟ್ಟೆಗೆ ಸಾಗಣೆ, ಕಾರ್ಮಿಕರಿಗೆ ಸೇರಿ ₹ 20 ಲಕ್ಷ ಖರ್ಚಾಗಿದೆ. ಮೊದಲ ಕೊಯ್ಲಿನ ಟೊಮೆಟೊ ಬಾಕ್ಸ್ ₹ 60ರಂತೆ ಮಾರಾಟವಾಗಿದ್ದು, ನಷ್ಟದ ಹೊರೆ ಮೈಮೇಲಿದ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ರೈತ ಶಂಕರ್‌.

‘ಒಂದೂವರೆ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದೇನೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಗೆ ಎರಡು ದಿನಕೊಮ್ಮೆ 40 ಬಾಕ್ಸ್‌ ಟೊಮೆಟೊ ತರುತ್ತಿದ್ದೇನೆ. ದಿನದಿನಕ್ಕೂ ಬೆಲೆ ಕುಸಿಯುತ್ತಿದೆ. ಇದುವರೆಗೆ ₹ 35 ಸಾವಿರ ಖರ್ಚು ಮಾಡಿದ್ದು, ಅದರಲ್ಲಿ ಶೇ 8ರಷ್ಟು ಲಾಭವೂ ಸಿಗುತ್ತಿಲ್ಲ. ಟೊಮೆಟೊ ಕೀಳದೆ ಬಿಟ್ಟಿದ್ದರಿಂದ ತೋಟದಲ್ಲಿಯೇ ಕೊಳೆಯುತ್ತಿದೆ. ದಿಕ್ಕು ತೋಚುತ್ತಿಲ್ಲ’ ಎಂದು ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿ ರೈತ ನಾಗೇಶ್‌ ಬೇಸರ ವ್ಯಕ್ತಪಡಿಸಿದರು.

‘ವಿದ್ಯುತ್‌ ಕಾಟ, ನೀರಿನ ಅಭಾವದ ನಡುವೆಯೂ ದುಬಾರಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಕ್ಕೆ ಖರ್ಚು ಮಾಡಿ ಟೊಮೆಟೊ ಬೆಳೆದರೆ ಹಣ್ಣು ಬಿಡಿಸಿದ ಆಳಿನ ಕೂಲಿ ಖರ್ಚು ಸಹ ಹುಟ್ಟುತ್ತಿಲ್ಲ. ನನ್ನದೇ ಈ ಪಾಡು. ಇನ್ನು ದೊಡ್ಡ ರೈತರ ಸ್ಥಿತಿ ಹೇಗಾಗಿರಬೇಡ ಎಂದು ಪ್ರಶ್ನಿಸುವರು.

ಸದ್ಯ ಬೆಳೆಗಾರರಿಗೆ ತಪ್ಪದ ಕಷ್ಟ

ವಾರದಿಂದೀಚೆಗೆ ದಿನಕ್ಕೆ 10 ರಿಂದ 15 ಸಾವಿರ ಬಾಕ್ಸ್‌ ಟೊಮೆಟೊ ಮಾರುಕಟ್ಟೆಗೆ ಆವಕವಾಗುತ್ತಿದೆ. ಕೇರಳದಲ್ಲಿ ನಿಫಾ ವೈರಸ್‌ ರೋಗದ ಭೀತಿಯಿಂದಾಗಿ ಒಂದು ತಿಂಗಳಿನಿಂದ ಅಲ್ಲಿಗೆ ಟೊಮೆಟೊ ಸರಬರಾಜು ಆಗಿಲ್ಲ. ಹೈದರಾಬಾದ್‌ಗೆ ಜ್ಯೂಸ್‌ ಕಂಪನಿಗಳಿಗೂ ಸರಬರಾಜು ಆಗುತ್ತಿಲ್ಲ. ರಂಜಾನ್‌ ಕಾರಣಕ್ಕೆ ಅನೇಕ ಕಂಪನಿಗಳು ಬೀಗ ಜಡಿದಿವೆ. ಹೀಗಾಗಿ ಸ್ಥಳೀಯ ಮಾರುಕಟ್ಟೆಯಿಂದ ಬೇಡಿಕೆ ಇಲ್ಲದೆ ಮಾರಾಟ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದು ತರಕಾರಿ ವರ್ತಕ ಸುರೇಶ್‌ ತಿಳಿಸಿದರು.

ಟೊಮೆಟೊ ಬಾಕ್ಸ್‌ವೊಂದಕ್ಕೆ ಜಮೀನಿನಿಂದ ಮಾರುಕಟ್ಟೆ ಸಾಗಾಟಕ್ಕೆ ₹ 20 ಖರ್ಚಾಗುತ್ತದೆ. ಸದ್ಯ ಹಾಕಿದ ಬಂಡವಾಳವೂ ವಾಪಸ್ ಬರುತ್ತಿಲ್ಲ. ದಿಕ್ಕೇ ತೋಚದಂತಾಗಿದೆ
– ಹರೀಶ್‌, ಶಿಡ್ಲಘಟ್ಟ ತಾಲ್ಲೂಕಿನ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT