ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಪ್ರಾಂಗಣದಲ್ಲಿ ‘ಸಮಸ್ಯೆ’ಗಳ ಹರಾಜು!

ಮೂಲಸೌಕರ್ಯ ಕೊರತೆಯಲ್ಲಿ ನಲುಗುತ್ತಿರುವ ಪ್ರಾಂಗಣ, ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಅಸಮಾಧಾನ
Last Updated 18 ಜೂನ್ 2018, 10:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಂಡಿಯುದ್ದದ ಗುಂಡಿ ಬಿದ್ದ ರಸ್ತೆಗಳು, ನೀರಿಲ್ಲದ ಒಣಗಿ ಭಣಗುಡುವ ಟ್ಯಾಂಕ್‌ಗಳು, ಗಬ್ಬೆದ್ದು ನಾರುವ ಶೌಚಾಲಯ, ನೀರನ್ನೇ ಕಾಣದ ಶುದ್ಧೀಕರಣ ಘಟಕ, ಹತ್ತಾರು ವರ್ಷಗಳಿಂದ ದೂಳು ತಿನ್ನುತ್ತಿರುವ ಶೈತ್ಯಾಗಾರ.. ಹೀಗೆ ಹೇಳುತ್ತ ಹೊರಟರೆ ಒಂದಲ್ಲ ಎರಡಲ್ಲ ಹತ್ತಾರಿವೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದಲ್ಲಿ ಗೋಚರಿಸುವ ಸಮಸ್ಯೆಗಳು.

1967ರ ಅಕ್ಟೋಬರ್ 12ರಂದು ಅಧಿಕೃತ ಪರವಾನಗಿ ಪಡೆದ ಈ ಮಾರುಕಟ್ಟೆ 1981ರ ವರೆಗೆ ನಗರದ ಬಿ.ಬಿ.ರಸ್ತೆಯ ವೃತ್ತದಲ್ಲಿ ನಡೆಯುತಿತ್ತು. ಬಳಿಕ ಸದ್ಯ ಇರುವ ಮಾರುಕಟ್ಟೆಗೆ ಸ್ಥಳಾಂತರಗೊಂಡಿತು ಎನ್ನುತ್ತದೆ ಇದರ ಇತಿಹಾಸ. ಮಾರುಕಟ್ಟೆ ಜನ್ಮತಳೆದ ದಿನ ಗಣನೆಗೆ ತೆಗೆದುಕೊಂಡರೆ ಇದಕ್ಕೀಗ ಸುವರ್ಣ ಮಹೋತ್ಸವ ಕಾಲ. 50 ವಸಂತಗಳನ್ನು ಪೂರೈಸಿರುವ ಮಾರುಕಟ್ಟೆಯ ಸ್ಥಿತಿ ಸದ್ಯ ‘ಹೇಳುವವರಿಲ್ಲದ ಮನೆ ಹಾಳು ಬಿತ್ತು’ ಎನ್ನುವ ಸ್ಥಿತಿಯಲ್ಲಿದೆ.

ನಿತ್ಯ ಹತ್ತಾರು ಲಾರಿ ಹೂವು, ನೂರಾರು ಗಾಡಿ ತರಕಾರಿ ಮಾರಾಟಕ್ಕೆ ಪ್ರಾಂಗಣ ಒದಗಿಸುವ ಮಾರುಕಟ್ಟೆ ಸದ್ಯ ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ರಫ್ತುದಾರರು, ಕಮಿಷನ್‌ ಏಜೆಂಟರು, ವರ್ತಕರು, ದಾಸ್ತಾನುದಾರರು, ಚಿಲ್ಲರೆ ಮಾರಾಟಗಾರರು, ಹಮಾಲಿಗರು ಮಾತ್ರ ಲೆಕ್ಕ ಹಾಕಿದರೂ ನಿತ್ಯ ಸಾವಿರ ಜನರ ‘ಸಂತೆ’ ಈ ಮಾರುಕಟ್ಟೆಯಲ್ಲಿ ನೆರೆಯುತ್ತದೆ. ಆ ಸಂತೆಗೆ ತಕ್ಕ ಸೌಕರ್ಯಗಳು ದೊರೆತಿವೆಯೇ ಎಂದು ಪ್ರಶ್ನಿಸಿಕೊಂಡರೆ ಸಿಗುವುದು ಬರೀ ನಿರಾಸೆಯ ಉತ್ತರ.

28 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಹೂವಿನ ವ್ಯಾಪಾರದ ಜತೆಗೆ ದನದ ಸಂತೆಯೂ ನಡೆಯುತ್ತದೆ. ನಿತ್ಯ ನೂರಾರು ವಾಹನಗಳು, ರೈತರು ಭೇಟಿ ನೀಡುವ ಇಂತಹ ಸ್ಥಳದಲ್ಲಿ ಕನಿಷ್ಠ ಮೂಲಸೌಕರ್ಯಗಳು ಇಲ್ಲ. ಅಂಕೆ ತಪ್ಪಿದ ವಾಹನಗಳ ದಟ್ಟಣೆಯಿಂದಾಗಿ ತರಕಾರಿ ಮಾರಾಟ ಮಳಿಗೆಗಳ ಸುತ್ತ ಭಾರಿ ಗಾತ್ರದ ಗುಂಡಿಗಳು ಬಿದ್ದು ವಾಹನ ಸಂಚರಿಸಲು ಏದುಸಿರು ಬಿಡುವಷ್ಟು ಪರಿಸ್ಥಿತಿ ಹದಗೆಟ್ಟು ಹೋಗಿದೆ.

ಮಾರುಕಟ್ಟೆಗೆ ಬರುವ ವಾಹನ ನಿರ್ವಹಣೆಗೆ ಒಂದು ಶಿಸ್ತಿಲ್ಲದ ಕಾರಣ ಹಬ್ಬ ಹರಿದಿನಗಳಲ್ಲಿ ಮಾರುಕಟ್ಟೆಯೊಳಗೆ ಪ್ರವೇಶಿಸಿ ಹೊರಬೇಕಾದರೆ ಜನರು ಪಡಬಾರದ ಪಾಡು ಪಡಬೇಕಾಗುತ್ತಿದೆ. ಮಾರುಕಟ್ಟೆ ಒಳಗಡೆ ಸುಮಾರು ಐದಾರು ಕಡೆಗಳಲ್ಲಿ ಕುಡಿಯುವ ನೀರಿನ ಟ್ಯಾಂಕುಗಳನ್ನು ಅಳವಡಿಸಲಾಗಿದೆ. ಆದರೂ ಕುಡಿಯಲು ಹನಿ ನೀರು ಸಿಗುವುದಿಲ್ಲ.

ತರಕಾರಿ ಮಳಿಗೆಗಳ ಬಳಿ ಹೆಸರಿಗೊಂದು ಶೌಚಾಲಯವಿದೆ. ₹ 5 ಕೊಟ್ಟು ಅದರೊಳಗೆ ಹೋದರೆ ವಾಂತಿ ಮಾಡಿಕೊಂಡು ಹೊರ ಬರುವ ಪಾಡು ಅಲ್ಲಿನದು. ಇನ್ನು ಕ್ಯಾಂಟಿನ್‌ ನಿರ್ವಹಣೆ ಕೂಡ ಅಷ್ಟಕಷ್ಟೆ. ಸ್ವಚ್ಛತೆಯಂತೂ ಮರೀಚಿಕೆಯಾಗಿದೆ. ಇಂದಿರಾ ಕ್ಯಾಂಟಿನ್ ಯೋಜನೆ ಕೂಡ ನನೆಗುದಿಗೆ ಬಿದ್ದಿದೆ. ದನದ ಸಂತೆ ಪ್ರದೇಶದ ಚಿತ್ರಣವಂತೂ ಹೇಳತೀರದಷ್ಟು ಅಧ್ವಾನವಾಗಿದೆ. ಅಲ್ಲಿ ಅಗತ್ಯವಾಗಿ ಇರಲೇ ಬೇಕಾದ ಕುಡಿಯುವ ನೀರಿನ ತೊಟ್ಟಿ, ದನಕರುಗಳನ್ನು ವಾಹನಕ್ಕೆ ಏರಿಸಲು ಬೇಕಾದ ರ‍್ಯಾಂಪ್‌ಗಳು ನಾಪತ್ತೆಯಾಗಿವೆ.

ಮಾರುಕಟ್ಟೆಗೆ ಬರುವ ತರಕಾರಿ, ಹೂವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕೆಲಸವಾಗಿಲ್ಲ. ಹೀಗಾಗಿ ಮಾರುಕಟ್ಟೆ ಪ್ರಾಂಗಣ ಇಕ್ಕಟ್ಟಾಗುತ್ತಿದೆ. ಸದ್ಯ ಹೂವು ಅಥವಾ ತರಕಾರಿ ಪೈಕಿ ಒಂದು ಮಾರುಕಟ್ಟೆ ಬೇರೆಡೆ ಸ್ಥಳಾಂತರಿಸಿದರೆ ಸಮಸ್ಯೆ ತಹಬದಿಗೆ ತರಬಹುದು ಎಂದು ಎಪಿಎಂಸಿ ಸಿಬ್ಬಂದಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸುವರು.

ಅನೇಕ ವರ್ಷಗಳ ಕಾಲ ಎಪಿಎಂಸಿ ಆಡಳಿತ ಮಂಡಳಿ ಇಲ್ಲದೆ ಬರೀ ಆಡಳಿತಾಧಿಕಾರಿ ಅವರ ಉಸ್ತುವಾರಿಯಲ್ಲಿರುವ ಕಾರಣ ಮಾರುಕಟ್ಟೆ ಸ್ಥಿತಿ ಅಧ್ವಾನಗೊಂಡಿದೆ ಎಂಬ ಆರೋಪಗಳು ಹರಿದಾಡುತ್ತಿದ್ದವು. ಆದರೆ ಹೊಸ ಆಡಳಿತ ಮಂಡಳಿ ರಚನೆಯಾಗಿ ಒಂದೂವರೆ ವರ್ಷ ಕಳೆದರೂ ಮಾರುಕಟ್ಟೆಯ ಚಿತ್ರಣ ಮಾತ್ರ ಎಳ್ಳಷ್ಟು ಬದಲಾಗಿಲ್ಲ ಎನ್ನುವುದು ಸಾರ್ವಜನಿಕರ ಅಸಮಾಧಾನ.

ಎಪಿಎಂಸಿ ಒಳಗಿನ ಸ್ಥಿತಿ ನೋಡಿದರೆ ಏನು ಹೇಳಬೇಕೋ ತೋಚುತ್ತಿಲ್ಲ. ಆಡಳಿತ ಮಂಡಳಿ ಸದಸ್ಯರು ನಿದ್ದೆಯಲ್ಲಿದ್ದರೆ, ಅಧಿಕಾರಿಗಳ ಅಸಡ್ಡೆ ಕೇಳುವವರಿಲ್ಲದಂತಾಗಿದೆ
ಮುನಿಕಾಳಪ್ಪ, ಚಿಕ್ಕಬಳ್ಳಾಪುರದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT