7

ಕಾರಿನ ಈ ಹತ್ತು ಬಿಡಿಭಾಗಗಳು ಅಪಾಯ ಆಹ್ವಾನಿಸಬಲ್ಲವು

Published:
Updated:

ದೇಶದಲ್ಲಿ ಕಾರು ಬಳಕೆದಾರರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಹಾಗಾಗಿ ಈ ವಾಹನಗಳ ಬಿಡಿಭಾಗಗಳ ಮಾರುಕಟ್ಟೆಯೂ ಬೆಳೆಯುತ್ತಿದೆ. ತಮಗೆ ಅನುಕೂಲವಾಗಲೆಂದೊ ಅಥವಾ ಕಾರು ಆಕರ್ಷಕವಾಗಿ ಕಾಣಲೆಂದೊ ಬಹುತೇಕ ಮಾಲೀಕರು ವಾಹನಗಳಿಗೆ ವಿವಿಧ ಸಾಧನ, ಬಿಡಿಭಾಗಗಳನ್ನು ಜೋಡಿಸುತ್ತಾರೆ. ಹಾಗಂತ ಮಾರುಕಟ್ಟೆಯಲ್ಲಿರುವ ಬಿಡಿಭಾಗಗಳು ನಿಜಕ್ಕೂ ಉಪಯುಕ್ತವಾಗಿಯೇ?. ಹೆಚ್ಚುವರಿಯಾಗಿ ಅಳವಡಿಸಿದ ಕೆಲವು ಬಿಡಿಭಾಗಗಳು ಪ್ರಾಣಾಪಾಯಕ್ಕೂ ದೂಡುವಂತವು. ಅಂತಹ ಕೆಲವು ಸಾಧನಗಳ ಪರಿಚಯ ಇಲ್ಲಿದೆ. 

ಪ್ಲೋರ್‌ ಮ್ಯಾಟ್‌

ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಕಾರ್‌ ಪ್ಲೋರ್‌ ಮ್ಯಾಟ್‌ಗಳಿವೆ. ಇವು ಕಾರಿನ ಪ್ಲೋರಿಗೆ ಸರಿಯಾಗಿ ಹೊಂದುವಂತೆ ಇಲ್ಲದಿದ್ದರೆ, ಅಪಾಯವನ್ನು ತಂದು ಒಡ್ಡಬಲ್ಲವು. ಅಕ್ಸೆಲೇಟರ್‌, ಬ್ರೇಕ್‌ ಅಥವಾ ಕ್ಲಚ್‌ನ ಪೆಡಲ್‌ಗಳು ಈ ಮ್ಯಾಟ್‌ಗೆ ಸಿಕ್ಕಿಕೊಂಡು ಅಪಘಾತಕ್ಕೂ ಕಾರಣ ಆಗಬಲ್ಲವು. ನಿರ್ದಿಷ್ಟವಾದ ಕಾರಿಗೆ ಹೊಂದುವಂತೆ ತಯಾರಿಸಿದ, ನಂಬಲಾರ್ಹ ಗುಣಮಟ್ಟದ ಮ್ಯಾಟ್‌ಗಳನ್ನು ಬಳಸುವುದು ಒಳಿತು.

ಸ್ಟೇರಿಂಗ್‌ ಕವರ್‌

ಕಾರಿನ ಒಳಾಂಗಣ ಅಂದ ಕಾಣಲೆಂದು ಅಥವಾ ಗ್ರಿಪ್‌ ಸಿಗಲೆಂದು ಹಿಡಿಯುವ ಸ್ಟೇರಿಂಗ್‌ಗೆ ಕವರ್‌ಗಳನ್ನು ಹಲವರು ಅಳವಡಿಸಿಕೊಳ್ಳುತ್ತಾರೆ. ಕಳಪೆ ಗುಣಮಟ್ಟದ ಕವರ್‌ಗಳು ಸ್ಟೇರಿಂಗ್‌ ಚಕ್ರದಿಂದ ಜಾರಬಲ್ಲವು. ಇದರಿಂದ ವಾಹನ ಮೇಲಿನ ಹಿಡಿತ ತಪ್ಪಬಹುದು. ಆಯಾ ಕಾರು ಕಂಪನಿಗಳು ಅಗತ್ಯವಿರುವ ವಿನ್ಯಾಸದಲ್ಲಿಯೇ ಸ್ಟೇರಿಂಗ್‌ ರೂಪಿಸುತ್ತವೆ. ಹಾಗಾಗಿ ಅದಕ್ಕೆ ಇನ್ನಿತರೆ ಸಾಧನಗಳನ್ನು ಅಳವಡಿಸದಿರುವುದೇ ಒಳಿತು. ಹಾಗೊಂದು ವೇಳೆ ಕವರ್‌ ಇರಲೇಬೇಕು ಅಂದರೆ, ಟೈಟ್‌ ಫಿಟ್ಟಿಂಗ್‌ ಇರುವ ಕವರ್‌ಗಳನ್ನು ಆರಿಸಿಕೊಳ್ಳಬೇಕು.

ಬಣ್ಣದ ಫಾಗ್‌ ಲ್ಯಾಂಪ್ಸ್‌ ಮತ್ತು ಹೆಡ್‌ಲ್ಯಾಂಪ್ಸ್‌ 

ಕಾರುಗಳ ಲ್ಯಾಂಪ್‌ಗಳಿಗೆ ಚಳಿಗಾಲದ ದಿನಗಳಲ್ಲಿ ಪಾರದರ್ಶಕವಾದ ಹಳದಿ ಬಣ್ಣದ ಕವರ್‌ಗಳಿಂದ ಕೆಲವರು ಕವರ್‌ ಮಾಡಿರುವುದನ್ನು ನೀವು ಕಂಡಿರಬಹುದು. ಹೀಗೆ ಬಣ್ಣದ ಕವರ್‌ ಜೋಡಿಸುವುದರಿಂದ ಬೆಳಕಿನ ತೀವ್ರತೆ ಕಡಿಮೆಯಾಗಿ, ದಾರಿಯೂ ಸರಿಯಾಗಿ ಕಾಣದಾಗುತ್ತದೆ. ಒಂದು ವೇಳೆ ಹೆಚ್ಚು ಬೆಳಕು ಬೇಕಾದಲ್ಲಿ ಉತ್ತಮವಾದ ಹೆಡ್‌ಲ್ಯಾಂಪ್ಸ್‌ ಜೋಡಿಸಿಕೊಳ್ಳಬಹುದು.  

ಲ್ಯಾಂಪ್‌ಗಳಿಗೆ ಬ್ಲ್ಯಾಕ್‌ ಟಿಂಟ್‌

ಕಾರು ಸ್ಪೋರ್ಟ್ಸ್‌ ವಾಹನದಂತೆ ಕಾಣುವಂತಾಗಲು ಕೆಲವರು ಹೆಡ್‌ಲ್ಯಾಂಪ್‌ ಮತ್ತು ಟೈಲ್‌ ಲ್ಯಾಂಪ್‌ಗಳನ್ನು ಕಪ್ಪಗಿನ ಟಿಂಟ್‌ನಿಂದ ಮುಚ್ಚಿರುತ್ತಾರೆ. ಇದರಿಂದ ಆ ದೀಪಗಳು ಸರಿಯಾಗಿ ಉರಿಯಲು ಅಡಚಣೆ ಉಂಟಾಗುತ್ತದೆ. ರಾತ್ರಿವೇಳೆ ಇದರಿಂದ ಲ್ಯಾಂಪ್‌ಗಳು ತಮ್ಮ ಬೆಳಕಿನ ತೀವ್ರತೆಯನ್ನ ಕಳೆದುಕೊಳ್ಳುವುದರಿಂದ ಸವಾರರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ.

ರಿಯರ್‌ ಟ್ರೇ ಷೋಪೀಸ್‌

ಕಾರು ಹೊಂದಿರುವ ಕೆಲವರು ರಿಯಲ್‌ ಸೆಲ್ಫ್‌ ಪಾರ್ಸಲ್‌ ಟ್ರೇಗಳಲ್ಲಿ ಷೋಪೀಸ್‌ಗಳನ್ನು ಜೋಡಿಸುವ, ಅಳವಡಿಸುವ ಉಮೇದು ಹೊಂದಿದ್ದಾರೆ. ಅದರಲ್ಲಿ ಗೊಂಬೆಗಳು, ತಲೆದಿಂಬುಗಳು ಸೇರಿವೆ. ಇವು ರಿಯರ್‌ ವಿವ್‌ ಮೀರರ್‌ನಿಂದ ಹಿಂಬದಿಯ ದೃಶ್ಯಗಳನ್ನು ನೋಡಲು ಅಡ್ಡಲಾಗುತ್ತವೆ. ಹುಬ್ಬುತಗ್ಗುಗಳಲ್ಲಿ ವಾಹನ ಚಲಾಯಿಸಿದಾಗ, ಇವು ಆಚೀಚೆಯಾಗಿ ಕುಳಿತಿರುವವರಿಗೆ, ಚಾಲಕನಿಗೆ ತಾಗಲೂಬಹುದು.

ರೂಫ್‌ಗೆ ಜೋಡಿಸಿದ ವಿಡಿಯೊ ಪ್ಲೇಯರ್‌

ಬಹುತೇಕ ಕಾರು ಮಾಲೀಕರು ರೂಫ್‌ಗೆ ಜೋಡಿಸಿದ ವಿಡಿಯೊ ಪ್ಲೇಯರ್‌ಗಳನ್ನು ಬಳಸುತ್ತಾರೆ. ಇಂತಹ ಪ್ಲೇಯರ್‌ಗಳು ಚಾಲಕರ ಏಕಾಗ್ರತೆಗೆ ಭಂಗ ತರುತ್ತವೆ. ಹಾಗೆಂದೇ ಪ್ರತಿಷ್ಠಿತ ಕಂಪನಿಗಳು ಕಾರು ನಿಂತಿದ್ದಾಗ ಮಾತ್ರ ಕಾರ್ಯನಿರ್ವಹಿಸುವ ವಿಡಿಯೊ ಪ್ಲೇಯರ್‌ಗಳನ್ನು ಜೋಡಿಸುತ್ತವೆ. ಈ ಪ್ಲೇಯರ್‌ಗಳಿಂದಾಗಿ ಕಾರೊಳಗಿನ ರಿಯರ್‌ ವೀವ್‌ ಮಿರರ್‌ನಿಂದ ಹಿಂಬದಿಯ ನೋಟ ನೋಡಲು ಸಾಧ್ಯವಾಗದು. 

ಬಣ್ಣಬದಲಿಸುವ ಲ್ಯಾಂಪ್‌ಗಳು

ಕೆಲವರು ಹೆಡ್‌ ಮತ್ತು ಟೈಲ್‌ ಲ್ಯಾಂಪ್‌ಗಳಲ್ಲಿ ಫ್ಲಾಶಿಂಗ್‌ ಲೈಟ್‌ಗಳನ್ನು ಬಳಸುತ್ತಾರೆ. ಇವು ರಸ್ತೆಯಲ್ಲಿನ ಬೇರೆ ವಾಹನ ಚಾಲಕರಿಗೆ ಮತ್ತು ದಾರಿಹೋಕರಿಗೆ ನಿಜಕ್ಕೂ ಅಡ್ಡಿಯನ್ನು ಉಂಟುಮಾಡುತ್ತವೆ. ಅಲ್ಲದೆ ಇದರಿಂದ ದಾರಿಯೂ ಸರಿಯಾಗಿ ಕಾಣುವುದಿಲ್ಲ. ಹಾಗಾಗಿ ಇಂತಹ ಲೈಟ್‌ಗಳಿಂದ ದೂರವಿದ್ದಷ್ಟು, ಅಪಾಯವೂ ದೂರವಿರುತ್ತದೆ.

ಹೆಚ್ಚುವರಿ ಎಲೆಕ್ಟ್ರಿಕಲ್ಸ್‌ ಜೋಡಣೆ

ಕಾರು ಕೊಂಡ ಬಳಿಕ ಅದರಲ್ಲಿ ಹೆಚ್ಚುವರಿ ಎಲೆಕ್ಟ್ರಾನಿಕ್ಸ್‌ ಬಿಡಿಭಾಗ ಜೋಡಿಸಲು ವೈರಿಂಗ್‌ ಮಾಡಲೇಬೇಕಾಗುತ್ತದೆ. ಉದಾಹರಣೆಗೆ ಗುಣಮಟ್ಟದ ಆಡಿಯೊ ಸಿಸ್ಟಮ್‌ ಅಥವಾ ಹೆಡ್‌ಲ್ಯಾಂಪ್‌ಗಾಗಿ ವೈರಿಂಗ್‌ ಮಾಡಬೇಕು. ಈ ವೈರಿಂಗ್‌ ಸರಿಯಾಗಿ ಆಗದಿದ್ದರೆ, ವೈರ್‌ಗಳ ಜೋಡಣಾ ಜಾಗಗಳು ಬಿಸಿಯಾಗುತ್ತವೆ. ಇದು ಹೆಚ್ಚಾದರೆ ಅಗ್ನಿ ಅವಘಡವೂ ಸಂಭವಿಸಬಹುದು.

ಸ್ಟೇರಿಂಗ್‌ ಸ್ಪಿನ್ನರ್‌

ಸ್ಟೇರಿಂಗ್ ಸ್ಪಿನ್ನರ್‌ಗಳ ಉಪಯೋಗಿಸುವಿಕೆ ಅಪಾಯಕ್ಕೆ ನಾವಾಗೆ ಆಹ್ವಾನ ನೀಡಿದಂತೆ. ಈ ಸ್ಪಿನ್ನರ್‌ ಹೆಚ್ಚು ಶ್ರಮವಿಲ್ಲದೆ ರಸ್ತೆ ತಿರುವಿನಲ್ಲಿ ಗಾಲಿಗಳನ್ನು ತಿರುಗಿಸಲು ನೆರವಾದರೂ, ಇದನ್ನು ಬಳಸಿ ಎಂದು ಯಾವುದೇ ಕಾರು ಉತ್ಪಾದಕ ಕಂಪನಿಗಳು ಹೇಳಲಾರವು. ಕಾರಣ, ಈ ಸ್ಪಿನ್ನರ್‌ ಗುಣಮಟ್ಟದ ಮೇಲೆ ಬಹುತೇಕ ಅನುಮಾನಗಳಿವೆ. ಇದನ್ನು ಬಳಸಿ ಗಾಡಿ ತಿರುಗಿಸುವಾಗ, ಸ್ಪಿನ್ನರ್‌ಗಳೇ ಮುರಿದು ಅಪಘಾತಗಳು ಘಟಿಸಿವೆ. ವೇಗವಾಗಿ ಹೋಗಿ ರಸ್ತೆಗುಂಡಿಯಲ್ಲಿ ಕಾರು ಇಳಿದಾಗ ಈ ಸ್ಪಿನ್ನರ್‌ ಕೈಗೆ ತಾಗಿ ನೋವನ್ನು ಉಂಟು ಮಾಡುತ್ತೆ. ಅಲ್ಲದೆ, ಅಂಗಿಯ ತುಂಬು ತೋಳಿನಲ್ಲಿ ಸಿಕ್ಕಿಕೊಂಡು, ಚಾಲನೆಗೆ ಅಡ್ಡಿಯಾಗುತ್ತದೆ. 

ಸೀಟ್‌ಬೆಲ್ಟ್‌ ಭಾಗಗಳು

ಸೀಟ್‌ಬೆಲ್ಟ್‌ಗಳು ಸವಾರರ ಜೀವರಕ್ಷಕಗಳು. ಗುಣಮಟ್ಟವಿಲ್ಲದ ಬೆಲ್ಟ್‌ಗಳು ಜೀವಕ್ಕೆ ಕುತ್ತು ತರಬಲ್ಲವು. ಬೆಲ್ಟ್‌ಗಳನ್ನು ಸರಿಪಡಿಸುವಾಗ ಕಳಪೆ ಗುಣಮಟ್ಟದ ಹುಕ್‌ಗಳನ್ನು ಬಳಸಲೇಬಾರದು. ತುರ್ತು ಸಂದರ್ಭಗಳಲ್ಲಿ ಈ ಹುಕ್‌ಗಳು ತಕ್ಷಣ ಬಿಚ್ಚಿಕೊಳ್ಳದೆ, ನಮ್ಮನ್ನು ಅಪಾಯಕ್ಕೆ ಸಿಲುಕಿಸುತ್ತವೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry