ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ವ್ಯಾಪಾರ ಬಲು ಜೋರು

ಭದ್ರಾ ಹಿನ್ನೀರು ವ್ಯಾಪ್ತಿಯಲ್ಲಿ ಉತ್ತಮ ಮಳೆ– ಮತ್ಸ್ಯಪ್ರಿಯರಿಗೆ ಸುಗ್ಗಿ ಕಾಲ
Last Updated 18 ಜೂನ್ 2018, 10:54 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಕೆಲವು ದಿನಗಳಿಂದ ಉತ್ತಮವಾದ ಮಳೆಯಾಗುತ್ತಿದ್ದು, ಮೀನು ವ್ಯಾಪಾರ ಬಲು ಜೋರಾಗಿ ಸಾಗಿದೆ.

ಭದ್ರಾನದಿಗೆ ಬಿ.ಆರ್.ಪ್ರಾಜೆಕ್ಟ್‌ನ ಬಳಿ ಅಣೆಕಟ್ಟನ್ನು ನಿರ್ಮಾಣ ಮಾಡಿದ ಬಳಿಕ ನರಸಿಂಹರಾಜಪುರ ತಾಲ್ಲೂಕಿನ ಫಲವತ್ತಾದ ಕೃಷಿ ಭೂಮಿ ಜಲಾವೃತಗೊಂಡಿತು. ಪರಿಣಾಮವಾಗಿ ಕೃಷಿಗೆ ಪೂರಕವಾಗಿ ಮತ್ಸೋದ್ಯಮ ಈ ಭಾಗದಲ್ಲಿ ಪ್ರಮುಖ ವೃತ್ತಿಯಾಗಿ ಅನುಸರಣೆಯಾಯಿತು. ಲಭ್ಯವಿರುವ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ಕಾಯಂ ಆಗಿ ಇದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ, ರಾಜ್ಯದ ಬೇರೆ ಬೇರೆ ಭಾಗ ಗಳಿಂದ ವಲಸೆ ಬಂದು ಈ ವೃತ್ತಿಯಲ್ಲಿ ತೊಡಗಿಕೊಂಡವರೂ ಇದ್ದಾರೆ.

ತಾಲ್ಲೂಕಿನ ರಾವೂರು, ಲಿಂಗಾಪುರ, ಮಾರಿದಿಬ್ಬ, ಮೋರಿಮಠ, ಮಾಕೋಡು, ಲಕ್ಕುಂದ, ಕೂಸಗಲ್, ಆಲ್ದಾರ, ಬೈರಾಪುರ ಗ್ರಾಮಗಳಲ್ಲಿ ಈ ವೃತ್ತಿಯನ್ನೇ ಮೂಲ ವೃತ್ತಿಯನ್ನಾಗಿ ಅವಲಂಬಿಸಿ ಬದುಕುತ್ತಿರುವ ಕುಟುಂಬಗಳು ಇವೆ. ಇಲ್ಲಿನ ಭದ್ರಾ ಹಿನ್ನೀರಿನಲ್ಲಿ ಕಾಟ್ಲ, ರೊಹೊ, ಕಾಮನ್ ಕಾರ್ಪ್, ಮೃಘಾಲ, ಗೋಜಲೆ, ಕೊಲ್ಸ್, ಗಿರ್ಲ್, ಸುರಗಿ, ಪಟ್ಟೆಗಾರ, ಅವ್ಲು ಮೊದಲಾದ ಬಗೆಬಗೆ ಜಾತಿಯ ಮೀನುಗಳಿವೆ. ದಶಕಗಳ ಹಿಂದೆ ಮತ್ಸ್ಯ ಸಂಕುಲ ಸಮೃದ್ಧವಾಗಿ ಇಲ್ಲಿ ನೆಲೆಸಿತ್ತು. ಆದರೆ, ಕಾಲಕ್ರಮೇಣ ಶೇ 80ರಷ್ಟು ಮತ್ಸ್ಯ ಸಂತತಿ ನಾಶವಾಗಿದೆ ಎನ್ನುತ್ತಾರೆ ಮೀನುಗಾರರು.

ಬೇರೆ ಅವಧಿಗೆ ಹೋಲಿಸಿದಾಗ ಮಳೆಗಾಲದ ಸಂದರ್ಭದಲ್ಲಿ ಮತ್ಸೋದ್ಯಮ ಉತ್ತಮವಾಗಿ ನಡೆಯುತ್ತದೆ. ಸರಾಸರಿ ಪ್ರತಿನಿತ್ಯ 10 ಟನ್ ಗಿಂತಲೂ ಅಧಿಕ ಮೀನು ಶಿಕಾರಿ ಇಲ್ಲಿ ನಡೆಯುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಹಿನ್ನೀರು ಕಡಿಮೆ ಇರುವುದರಿಂದ ಹಾಗೂ ಮಣ್ಣು ಮಿಶ್ರಿತ ನೀರು ಹರಿದು ಬರುತ್ತದೆ. ಸಂತಾನಾಭಿವೃದ್ಧಿಗೆ ಮೀನುಗಳು ಮೇಲೆ ಬರುವುದರಿಂದ ಮಳೆಗಾಲದಲ್ಲಿ ಮೀನು ಶಿಕಾರಿ ಜಾಸ್ತಿಯಾಗಿರುತ್ತದೆ. ಇಲ್ಲಿನ ಮೀನುಗಳು ತಿನ್ನಲು ರುಚಿಕರವಾಗಿರುವುದರಿಂದ ಸ್ಥಳೀಯವಾಗಿ ಹಾಗೂ ಇತರೆ ಕಡೆಗಳಲ್ಲೂ ಭಾರಿ ಬೇಡಿಕೆಯಿದೆ. ಇಲ್ಲಿನ ಮೀನುಗಳು ಸಾಗರದ ಮಾರುಕಟ್ಟೆಯ ಮೂಲಕ ರಾಜ್ಯದ ಬೇರೆ, ಬೇರೆ ಭಾಗಗಳು ಸೇರಿದಂತೆ ಹೊರ ರಾಜ್ಯ, ವಿದೇಶಗಳಿಗೂ ರವಾನೆಯಾಗುತ್ತದೆ.

ಗೋಜಲೆ ಮೀನು ಬಹಳ ರುಚಿಕರವಾಗಿರುವುದರಿಂದ ಹಾಗೂ ಅದನ್ನು ಎಣ್ಣೆ ಉತ್ಪಾದನೆ ಬಳಸುವುದರಿಂದ ವಿದೇಶಕ್ಕೂ ರಪ್ತಾಗುತ್ತವೆ. ಗೋಜಲೆ ಮತ್ತು ಅಲ್ಲಿ ಈ ಮೀನುಗಳಿಗೆ ಭಾರಿ ಬೇಡಿಕೆಯಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಗೆ ₹ 180 ರಿಂದ 200ರವರೆಗೂ ಬೆಲೆ ಇದೆ. ಬೇರೆ ಕಡೆಯಿಂದ ಬರುವ ವ್ಯಾಪಾರಸ್ಥರು ಮೀನುಗಾರರು ಇರುವ ಸ್ಥಳದಲ್ಲೇ ಅಧಿಕ ಬೆಲೆ ನೀಡಿ ಖರೀದಿಸುತ್ತಾರೆ. ಮತ್ತೆ ಕೆಲವರು ಸ್ಥಳೀಯವಾಗಿ ಮಾರಾಟ ಮಾಡದೆ ಗೋದಾಮುಗಳಲ್ಲಿ ಸಂಗ್ರಹಿಸಿ ಹೊರ ಪ್ರದೇಶಗಳಿಗೆ ಸಾಗಣೆ ಮಾಡುತ್ತಾರೆ.

ಎರಡು ಮೂರು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಮೀನುಗಳು ಮಾರಾಟಕ್ಕೆ ಬರುತ್ತಿರುವುದರಿಂದ ಮೀನು ಪ್ರಿಯರು ಬೆಲೆಯನ್ನು ಲೆಕ್ಕಿಸದೆ ಮೀನುಕೊಳ್ಳುವಿಕೆಯಲ್ಲಿ ನಿರತರಾಗಿರುವುದು ಕಂಡು ಬಂದಿದೆ.

ಕೆ.ವಿ.ನಾಗರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT