4
ಕಳಸ- ಕಾರ್ಕಳ- ಮಂಗಳೂರು ಸಂಪರ್ಕ ರಸ್ತೆಗೂ ಕುತ್ತು?

ಕುದುರೆಮುಖ: ಪ್ರವಾಹದಿಂದ ಎರಡು ಸೇತುವೆಗೆ ಸಂಚಕಾರ

Published:
Updated:
ಕುದುರೆಮುಖ: ಪ್ರವಾಹದಿಂದ ಎರಡು ಸೇತುವೆಗೆ ಸಂಚಕಾರ

ಕಳಸ: ವಾರವಿಡಿ ಕುದುರೆಮುಖದಲ್ಲಿ ಸುರಿದ ಭಾರಿ ಮಳೆಗೆ ಅಲ್ಲಿನ ಭದ್ರಾ ಕೊಳ್ಳದ ಎರಡು ಪ್ರಮುಖ ಸೇತುವೆಗಳಿಗೆ ಭಾರಿ ಹಾನಿ ಸಂಭವಿಸಿದೆ.

ಕಳಸದಿಂದ ಕುದುರೆಮುಖ ಹೆದ್ದಾರಿಯಲ್ಲಿ ಹೊಸಮಕ್ಕಿ ಬಳಿ ಹಳ್ಳವೊಂದು ಭದ್ರಾ ನದಿ ಸೇರುವಲ್ಲಿ ಹೆದ್ದಾರಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಆ ಸೇತುವೆಯ ಎರಡೂ ಬದಿ ಆಗಿನ ಕುದುರೆಮುಖ ಸಂಸ್ಥೆ ಕಬ್ಬಿಣದ ತಡೆಗೋಡೆ ನಿರ್ಮಿಸಿತ್ತು. ಗುರುವಾರದ ಕುದುರೆಮುಖದಲ್ಲಿ ಸುರಿದ 12 ಇಂಚು ಮಳೆಗೆ ಈ ಹಳ್ಳದಲ್ಲಿ ಭಾರಿ ಗಾತ್ರದ ಮರದ ದಿಮ್ಮಿ ತೇಲಿಬಂದು ತಡೆಗೋಡೆಯನ್ನೇ ಮುರಿದಿದೆ. ಈಗಲೂ ಆ ದಿಮ್ಮಿಗಳು ಸೇತುವೆಯ ಬುಡದಲ್ಲೇ ಬಿದ್ದಿವೆ. ಸೇತುವೆಗೆ ಬಳಸಿದ ದೊಡ್ಡ ಗಾತ್ರದ ಸಿಮೆಂಟ್ ಪೈಪ್‍ಗಳಿಗೆ ಹಾನಿಯಾಗಿದೆ.

ಮತ್ತೆ ಮಳೆ ಸುರಿದಲ್ಲಿ ಈ ದಿಮ್ಮಿಗಳು ಹಳ್ಳದ ನೀರು ಸರಾಗವಾಗಿ ಹರಿದು ನದಿ ಸೇರಲು ಅಡ್ಡಿಯಾಗಿವೆ. ಆದ್ದರಿಂದ ಅವುಗಳನ್ನು ತೆರವು ಮಾಡಬೇಕು. ಸೇರುವೆಗೆ ಶಾಶ್ವತ ತಡೆಗೋಡೆ ನಿರ್ಮಿಸಬೇಕು ಎಂದು ಆಸುಪಾಸಿನ ಗ್ರಾಮಗಳ ನಿವಾಸಿಗಳು ಒತ್ತಾಯಿಸಿದ್ದಾರೆ.

ಇನ್ನು ಇದೇ ಹೆದ್ದಾರಿಯಲ್ಲಿ ಕುದುರೆಮುಖದಿಂದ- ಕಾರ್ಕಳ ಹಾದಿಯಲ್ಲಿ ಲಕ್ಯಾ ಹೊಳೆಯು ಭದ್ರಾ ನದಿ ಸೇರುವ ಹಂತದಲ್ಲಿ ಹೆದ್ದಾರಿಗೆ ಅಡ್ಡಲಾಗಿ ದೊಡ್ಡ ಸೇತುವೆಯೊಂದು ಇದೆ. ಈ ಸೇತುವೆಯ ಎಡ ಬದಿ ಭದ್ರೆಯ ಭೋರ್ಗರೆತದಿಂದಾಗಿ ಭಾರಿ ಭೂಕುಸಿತ ಸಂಭವಿಸಿದೆ.

ಸೇತುವೆಗೆ ಹೊಂದಿಕೊಂಡಂತೆ ಇದ್ದ ಧರೆಯು ಕುಸಿದಿದೆ. ಇನ್ನಷ್ಟು ಭೂಕುಸಿತ ಸಂಭವಿಸಿದರೆ ಸೇತುವೆಗೆ ಭಾರಿ ಅಪಾಯ ಕಾದಿದೆ. ಜತೆಗೆ ಕಳಸ- ಕಾರ್ಕಳ- ಮಂಗಳೂರು ಸಂಪರ್ಕ ರಸ್ತೆಯೂ ಕಡಿತ ಆಗುತ್ತದೆ ಎಂಬ ಆತಂಕ ಈ ರಸ್ತೆ ಬಳಕೆದಾರರಲ್ಲಿ ಮನೆ ಮಾಡಿದೆ.

ಇವೆರಡೂ ಸೇತುವೆಗಳ ದುರಸ್ತಿ ಮತ್ತು ನಿರ್ವಹಣೆಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯು ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry