4
70ಕ್ಕೂ ಹೆಚ್ಚು ಮಹಿಳೆಯರ ಸರ ದೋಚಿದ್ದ

ಪೊಲೀಸ್ ಎದೆಗೆ ಗುದ್ದಿದ ಸರಗಳ್ಳನಿಗೆ ಗುಂಡೇಟು

Published:
Updated:
ಪೊಲೀಸ್ ಎದೆಗೆ ಗುದ್ದಿದ ಸರಗಳ್ಳನಿಗೆ ಗುಂಡೇಟು

ಬೆಂಗಳೂರು: 70ಕ್ಕೂ ಹೆಚ್ಚು ಸರಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗೂ ತನ್ನನ್ನು ಹಿಡಿಯಲು ಬಂದ ಎಎಸ್‌ಐವೊಬ್ಬರ ಎದೆಗೆ ಗುದ್ದಿ ಪರಾರಿಯಾಗಲು ಯತ್ನಿಸಿದ್ದ ಅಚ್ಯುತ್ ಕುಮಾರ್ (31) ಎಂಬಾತನ ಕಾಲಿಗೆ ಕೆಂಗೇರಿ ಠಾಣೆ ಎಸ್‌ಐ ಪ್ರವೀಣ್ ಯಲಿಗಾರ್ ಗುಂಡು ಹೊಡೆದಿದ್ದಾರೆ.

ಬನಶಂಕರಿ 6ನೇ ಹಂತದ ನಿರ್ಜನ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ 5.45ರ ಸುಮಾರಿಗೆ ಈ ಘಟನೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿರುವ ಅಚ್ಯುತ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಂದೂವರೆ ವರ್ಷದಿಂದ ಬೆಂಗಳೂರು ಹಾಗೂ ಚಿತ್ರದುರ್ಗದಲ್ಲಿ ರಾಜಾರೋಷವಾಗಿ ಸರಗಳವು ಮಾಡುತ್ತಿದ್ದರೂ, ಈತ ಒಮ್ಮೆಯೂ ಪೊಲೀಸರಿಗೆ ಸಿಕ್ಕಿಬಿದ್ದಿರಲಿಲ್ಲ.

ಗದಗದ ಅಚ್ಯುತ್, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದು ಕುಂಬಳಗೋಡಿನಲ್ಲಿ ನೆಲೆಸಿದ್ದ. ಮೊದಲು ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ಈತ, ವ್ಯವಹಾರದಲ್ಲಿ ನಷ್ಟ ಉಂಟಾದ ಬಳಿಕ ಸರಗಳ್ಳತನ ಶುರು ಮಾಡಿದ್ದ.

ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬೆಳಿಗ್ಗೆ 5 ಗಂಟೆಗೆ ಕಾರ್ಯಾಚರಣೆಗೆ ಇಳಿಯುತ್ತಿದ್ದ ಈತ, ವಾಯುವಿಹಾರ ಮಾಡುವ ಮಹಿಳೆಯರಿಂದ ಸರ ದೋಚಿ ಮಿಂಚಿನ ವೇಗದಲ್ಲಿ ಪರಾರಿಯಾಗುತ್ತಿದ್ದ. ಆ ನಂತರ ಮನೆಯಲ್ಲಿ ವಿಶ್ರಮಿಸಿ, ಸಂಜೆ 6 ಗಂಟೆ ಬಳಿಕ ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಜ್ಞಾನಭಾರತಿ, ಕೆಂಗೇರಿ, ಚಂದ್ರಾಲೇಔಟ್, ಅನ್ನಪೂರ್ಣೇಶ್ವರಿನಗರ ಠಾಣೆಗಳ ವ್ಯಾಪ್ತಿಯ ಬಡಾವಣೆಗಳಲ್ಲೇ ಹೆಚ್ಚು ಕೃತ್ಯಗಳನ್ನು ಎಸಗಿರುವ ಆರೋಪಿ, ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ. ಸರಗಳ್ಳತನದ ವಿರುದ್ಧ ದೂರುಗಳು ಹೆಚ್ಚಾದಂತೆ ಪಶ್ಚಿಮ ವಿಭಾಗದ ಪೊಲೀಸರು ವಿಶೇಷ ತಂಡಗಳನ್ನು ರಚಿಸಿಕೊಂಡು ಶೋಧ ಪ್ರಾರಂಭಿಸಿದ್ದರು.

ಕೊನೆಗೂ ಸಿಕ್ಕಿಬಿದ್ದ: ಜ್ಞಾನಭಾರತಿ ಠಾಣೆ ಹೆಡ್‌ ಕಾನ್‌ಸ್ಟೆಬಲ್ ಚಂದ್ರಕುಮಾರ್, ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಠಾಣೆ ವ್ಯಾಪ್ತಿಯ ರಾಜುಲೇಔಟ್‌ನಲ್ಲಿ ಗಸ್ತು ತಿರುಗುತ್ತಿದ್ದರು. ಇದೇ ವೇಳೆ ಅಚ್ಯುತ್‌ ಬೈಕ್‌ನಲ್ಲಿ ಬಂದಿದ್ದಾನೆ. ಆತನನ್ನು ನೋಡುತ್ತಿದ್ದಂತೆಯೇ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ ಚಂದ್ರಕುಮಾರ್, ತಾವೂ ಚೀತಾದಲ್ಲಿ (ಗಸ್ತು ಬೈಕ್) ಹಿಂಬಾಲಿಸಿಕೊಂಡು ಹೋಗಿ ರಾಜುಲೇಔಟ್‌ 4ನೇ ಅಡ್ಡರಸ್ತೆಯಲ್ಲಿ ಆತನ ಬೈಕ್‌ಗೆ ಡಿಕ್ಕಿ ಮಾಡಿದ್ದಾರೆ.

ಕೆಳಗೆ ಬಿದ್ದ ಅಚ್ಯುತ್, ಅವರ ಎದೆಗೆ ಕಲ್ಲಿನಿಂದ ಹೊಡೆದು ಓಡಿದ್ದಾನೆ. ಚೀತಾದಲ್ಲಿ ಜಿಪಿಎಸ್ ಉಪಕರಣ ಇದ್ದುದರಿಂದ, ಠಾಣೆಯ ಇತರೆ ಸಿಬ್ಬಂದಿ ಜಾಡು ಹಿಡಿದು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಸ್ಥಳೀಯರ ನೆರವಿನಿಂದ ಸುತ್ತಮುತ್ತಲ ರಸ್ತೆಗಳಲ್ಲಿ ಹುಡುಕಾಡಿ, ರಾತ್ರಿಯೇ ಅಚ್ಯುತ್‌ನನ್ನು ವಶಕ್ಕೆ ಪಡೆದಿದ್ದಾರೆ.

ಮೂತ್ರ ವಿಸರ್ಜನೆ ನೆಪದಲ್ಲಿ ಪರಾರಿ: ಅಚ್ಯುತ್‌ನನ್ನು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಹಲವು ಪ್ರಕರಣಗಳು ಬೆಳಕಿಗೆ  ಬಂದವು. ಮಹಜರು ಪ್ರಕ್ರಿಯೆ ಪೂರ್ಣಗೊಳಿಸಲು ಸಿಬ್ಬಂದಿ ನಸುಕಿನಲ್ಲೇ (2.30ರ ಸುಮಾರಿಗೆ) ಆತನನ್ನು ಕುಂಬಳಗೋಡಿಗೆ ಕರೆದುಕೊಂಡು ಹೊರಟಿದ್ದರು. ಸ್ಯಾಟಲೈಟ್ ಬಸ್‌ ನಿಲ್ದಾಣದ ಬಳಿ ಹೋಗುತ್ತಿರುವಾಗ ಮೂತ್ರ ವಿಸರ್ಜನೆ ಮಾಡಬೇಕೆಂದು ಸುಳ್ಳು ಹೇಳಿ ಜೀ‍ಪ್ ನಿಲ್ಲಿಸಿದ ಆರೋಪಿ, ಸಿಬ್ಬಂದಿಯನ್ನು ತಳ್ಳಿ ಪರಾರಿಯಾಗಿದ್ದ ಎನ್ನಲಾಗಿದೆ.

ನಂತರ ಕೆಂಗೇರಿ ಉಪವಿಭಾಗದ ಎಸಿಪಿ ಪ್ರಕಾಶ್ ನೇತೃತ್ವದಲ್ಲಿ ರಚನೆಯಾದ ಮೂರು ತಂಡಗಳು, ಆತನ ಪತ್ತೆಗಾಗಿ ಪ್ರತ್ಯೇಕ ಪ್ರದೇಶಗಳಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಬೆಳಿಗ್ಗೆ 5.45ರ ಸುಮಾರಿಗೆ ಎಸ್‌ಐ ಪ್ರವೀಣ್ ಯಲಿಗಾರ್ ನೇತೃತ್ವದ ತಂಡ ಆತನನ್ನು ಪತ್ತೆ ಮಾಡಿದೆ.

‘ಸಿಬ್ಬಂದಿಯನ್ನು ಚಾಕುವಿನಿಂದ ಬೆದರಿಸಿದ ಆತ, ಕಲ್ಲುಗಳನ್ನೂ ತೂರುತ್ತಿದ್ದ. ಒಂದು ಕಲ್ಲು ಎಎಸ್‌ಐ ವೀರಭದ್ರಯ್ಯ ಅವರ ಮೇಲೆ ಬಿತ್ತು. ಆದರೂ, ಹಿಡಿಯಲು ಹತ್ತಿರ ಹೋದ ಅವರಿಗೆ ಒಮ್ಮೆ ಎದೆಗೆ ಗುದ್ದಿದ. ಆತನ ಕೈಲಿ ಚಾಕು ಇದ್ದಿದ್ದರಿಂದ, ಎಸ್‌ಐ ಪ್ರವೀಣ್ ಬಲಗಾಲಿಗೆ ಗುಂಡು ಹೊಡೆದರು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry