ಗುರುವಾರ , ಡಿಸೆಂಬರ್ 12, 2019
17 °C

ಸಾಯ ಹೊಡೆಯುವ ‘ಸಾಮೂಹಿಕ ಮನರಂಜನೆ’

ನಾರಾಯಣ ಎ
Published:
Updated:
ಸಾಯ ಹೊಡೆಯುವ ‘ಸಾಮೂಹಿಕ ಮನರಂಜನೆ’

ಗಮನಿಸಿ. ಜನ ಗುಂಪು ಸೇರಿ ಯಾರನ್ನಾದರೂ ಯಾವುದೋ ಆಪಾದನೆ ಹೊರಿಸಿ ಸಾರ್ವಜನಿಕವಾಗಿ ಬಡಿದು ಕೊಲ್ಲುವುದು ದೇಶದಲ್ಲಿ ಹೊಸ ಸಾಮೂಹಿಕ ಮನರಂಜನೆಯಾಗುತ್ತಿದೆ. ಅಲ್ಲೊಂದು ಇಲ್ಲೊಂದು ಎಂಬಂತೆ ನಡೆಯುತ್ತಿದ್ದ ಇಂತಹ ಘಟನೆಗಳು ಈಗ ದಿನಕ್ಕೆ ಒಂದೆರಡು ಎಂಬಂತೆ ವರದಿಯಾಗುತ್ತಿವೆ. ಜನರ ಮಿದುಳು ಮತ್ತು ಹೃದಯವನ್ನು ಏಕಕಾಲದಲ್ಲಿ ಕೆಡಿಸಿರುವ ಈ ಸಾಮಾಜಿಕ ವೈರಸ್ಸಿನ ಮುಂದೆ ನಿಫಾ-ಗಿಫಾ ಎಲ್ಲಾ ಏನೂ ಅಲ್ಲ. ಮೊದಮೊದಲು ಕೆಲ ವಿಲಕ್ಷಣ ಸನ್ನಿವೇಶದಲ್ಲಿ ಯಾವುದೋ ಸಂಶಯದಿಂದ ಜನ ಹೀಗೆ ಮಾಡುತ್ತಿದ್ದರು. ಆಗಲೇ ಇಡೀ ಸಮಾಜ, ಇಡೀ ಪೊಲೀಸ್ ವ್ಯವಸ್ಥೆ, ಇಡೀ ರಾಜಕೀಯ ನಾಯಕತ್ವ ಎಚ್ಚೆತ್ತು ಅಪಾಯದ ಮುನ್ಸೂಚನೆಗಳನ್ನು ಅರಿತು ಈ ಪಿಡುಗಿಗೆ ಮದ್ದರೆಯಬೇಕಿತ್ತು. ಯಾರೂ ಅದಕ್ಕೆ ಮುಂದಾಗಲಿಲ್ಲ. ಯಾಕೆ ಮುಂದಾಗಲಿಲ್ಲ ಎಂದರೆ ಇಂತಹ ಸಾಮೂಹಿಕ ಉನ್ಮಾದಕ್ಕೆ ಬಲಿಯಾಗುತ್ತಿದ್ದವರು ಬಡವರು, ಭಿಕ್ಷುಕರು, ಚಿಂದಿ ಆಯುವವರು, ಮನೋರೋಗಿಗಳು ಆಗಿರುತ್ತಿದ್ದರು. ಈಗ ಪರಿಸ್ಥಿತಿ ಸಂಪೂರ್ಣ ಕೈಮೀರಿದ ಲಕ್ಷಣಗಳು ಕಾಣಿಸುತ್ತಿವೆ.

ಮೊನ್ನೆ ಅಸ್ಸಾಂನಲ್ಲಿ ಈ ಸಾಮಾಜಿಕ ಉನ್ಮಾದಕ್ಕೆ ಬಲಿಯಾದದ್ದು ಮಧ್ಯಮವರ್ಗದ ಇಬ್ಬರು ಯುವಕರು. ಒಬ್ಬ ಉದ್ಯಮಿ, ಇನ್ನೊಬ್ಬ ಕಲಾವಿದ. ಈರ್ವರೂ ಅಸ್ಸಾಂನವರೇ. ತಮ್ಮದೇ ರಾಜ್ಯದಲ್ಲಿ ಹೊಸ ಜಾಗಕ್ಕೆ ಪ್ರವಾಸ ಹೋದವರು ಸ್ಥಳೀಯರಿಗಿಂತ ಭಿನ್ನರಾಗಿ ಕಂಡದ್ದೇ ಅವರ ತಪ್ಪು. ಸ್ಥಳೀಯರಿಗೆ ಅವರು ಮಕ್ಕಳ ಕಳ್ಳರಾಗಿ ಕಂಡರು. ಅಷ್ಟೇ... ಗಾಳಿ ಸುದ್ದಿ, ಸುಳ್ಳು ಸುದ್ದಿಗಳೆಲ್ಲಾ ನೆಪ ಮಾತ್ರ. ಸಾರ್ವಜನಿಕವಾಗಿ ಯಾರನ್ನೂ ಹಿಡಿದು ಹಿಂಸಿಸಿ, ಸಾಧ್ಯವಾದರೆ ಕೊಂದು ವಿಕೃತಾನಂದ ಪಡೆಯುವ ಹೊಸದೊಂದು ಸಾಮೂಹಿಕ ಗೀಳು ಆಧುನಿಕ ಭಾರತೀಯ ಸಂಸ್ಕೃತಿಯ ಭಾಗವಾದಂತೆ ತೋರುತ್ತದೆ. ಇದು ಸಾಂಕ್ರಾಮಿಕ. ಇದಕ್ಕೆ ಬೇಕಾದ ಕಾರಣಗಳು ದಿಢೀರ್ ಆಗಿ ನಿರ್ಮಾಣವಾಗುತ್ತವೆ. ಕಳ್ಳತನ, ದನಕಳ್ಳತನ ಇತ್ಯಾದಿಗಳೆಲ್ಲಾ ಆಯಿತು, ಈಗ ಮಕ್ಕಳ ಕಳ್ಳತನದ ಗಾಳಿ ಸುದ್ದಿಯದ್ದು ಹೊಸ ನೆಪ.

ಪ್ರತೀ ಬಾರಿ ಜನ ಗುಂಪು ಸೇರಿ ಉನ್ಮತ್ತರಾಗಿ ಯಾವುದೋ ವ್ಯಕ್ತಿಯನ್ನು ಥಳಿಸಿ- ತುಳಿದು ಕೊಲೆಗೈದಾಗ ಅಲ್ಲಿ ಸಾಯುವುದು ಒಂದು ವ್ಯಕ್ತಿಯಲ್ಲ. ಸಾಯುವುದು ಇಡೀ ದೇಶದ ಅಪರಾಧ-ಕಾನೂನು ಪಾಲನಾ ವ್ಯವಸ್ಥೆ (criminal justice system). ಹಲ್ಲೆ ಅಥವಾ ಕೊಲೆಗೆ ಒಳಗಾದ ವ್ಯಕ್ತಿ ಅಪಾದಿತನೋ, ಅಮಾಯಕನೋ ಎನ್ನುವ ವಿಚಾರ ಇಲ್ಲಿ ಪ್ರಸ್ತುತವೇ ಅಲ್ಲ. ಅದೆಂತಹಾ ಪಾತಕಿಯೇ ಆದರೂ ಬೀದಿಯಲ್ಲಿ ದಿಢೀರ್ ನ್ಯಾಯ ನಿರ್ಣಯ, ಶಿಕ್ಷೆ ಎಲ್ಲವೂ ಆಗುತ್ತದೆ ಎಂದಾಗ ಅಲ್ಲಿ ಖಾಕಿ ತೊಟ್ಟು ಪೊಲೀಸ್ ಕೆಲಸ ಮಾಡುವವರು, ಕರಿಕೋಟು ತೊಟ್ಟು ನ್ಯಾಯಾನ್ಯಾಯ ನಿರ್ಣಯಿಸುವ ನ್ಯಾಯಾಧೀಶರುಗಳು, ಕಾವಲುನಾಯಿಗಳು ಎಂದು ಕರೆಸಿಕೊಳ್ಳುವ ಮಾಧ್ಯಮಗಳು ಮತ್ತು ಅಧಿಕಾರ ಚಲಾಯಿಸುವ ರಾಜಕೀಯ ನಾಯಕತ್ವ ಜೀವಚ್ಛವವಾಗಿವೆ ಎಂದು ಲೆಕ್ಕ. ಬರಬರುತ್ತಾ ಭಾರತದಲ್ಲಿ ಕೇಂದ್ರ ಸರ್ಕಾರದ ಆಳ್ವಿಕೆಯೂ ಇಲ್ಲ, ರಾಜ್ಯ ಸರ್ಕಾರಗಳ ಆಳ್ವಿಕೆಯೂ ಇಲ್ಲ, ಇಡೀ ದೇಶವನ್ನು ಉನ್ಮಾದ ಆಳುತ್ತಿದೆ. ದೇಶದಲ್ಲಿ ದಿನ ಬೆಳಗಾದರೆ ಅಲ್ಲಲ್ಲಿ ಈ ಪರಿ ಜನ ಹುಚ್ಚೆದ್ದು ಅಪರಿಚಿತರನ್ನೂ, ಆಪಾದಿತರನ್ನೂ ಗುಮಾನಿಯ ಮೇಲೆ ಥಳಿಸಿ-ತುಳಿದು ಕೊಲ್ಲುತ್ತಿದ್ದಾರೆ ಎಂದ ಮೇಲೆ ಆಳುವವರ ಎದೆ ಅದೆಷ್ಟೇ ಅಗಲವಿದ್ದರೂ ಅದಕ್ಕೆ ಅರ್ಥವಿಲ್ಲ.

ಎಲ್ಲದಕ್ಕಿಂತ ಇಂತಹ ಘಟನೆಗಳಲ್ಲಿ ಅಮಾಯಕ ಹೆಣ ಬಿದ್ದಾಗ ನಿಜಕ್ಕೂ ಸಾಯುತ್ತಿರುವುದು ಎರಡು ಅಖಿಲ ಭಾರತ ಸೇವೆಗಳು (ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ). ಈ ಎರಡು ಸೇವೆಗಳನ್ನು  ದೇಶದ ‘ಉಕ್ಕಿನ ಚೌಕಟ್ಟು’ ಅಂತ ಯಾರೋ ಬಣ್ಣಿಸಿದ್ದರು. ಇದೀಗ ಈ ಎರಡೂ ಸೇವೆಗೆ ಸೇರಿದ ಮಂದಿ ತಮ್ಮನ್ನು ತಾವೇ ಒಮ್ಮೆ ಮುಟ್ಟಿ ನೋಡಿಕೊಳ್ಳಬೇಕು. ಉಕ್ಕು ಬಿಡಿ ಹುಲ್ಲು-ಕಡ್ಡಿಯ ಚೌಕಟ್ಟು ನೀಡಲು ಸಾಧ್ಯವಾದಲ್ಲೂ ಇಂತಹದೆಲ್ಲಾ ನಡೆಯಬಾರದು.

ಅರವತ್ತರ ದಶಕದಲ್ಲಿ ಗುನ್ನಾರ್ ಮಿರ್ಡಾಲ್ ಎನ್ನುವ ವಿದ್ವಾಂಸ, ಭಾರತವನ್ನು ‘ಮೃದು ದೇಶ’ ಎಂದಿದ್ದ. ಯುದ್ಧ ಗೆದ್ದಿದ್ದ ರಾಷ್ಟ್ರವೊಂದನ್ನು ‘ಮೃದು’ ಅಂತ ವರ್ಣಿಸಿದ್ದು ಹಲವರ ಕಣ್ಣು ಕೆಂಪಾಗುವಂತೆ ಮಾಡಿತ್ತು. ನಿಜಕ್ಕೂ ಆತ ಹೇಳಿದ್ದು ದೇಶದ ಮಿಲಿಟರಿ ವ್ಯವಸ್ಥೆ ದುರ್ಬಲವಾಗಿದೆ ಎಂದಲ್ಲ. ಆತ ಹಾಗೆ ಹೇಳಿದ್ದು ಈ ದೇಶದಲ್ಲಿ ಕಾನೂನಿಗೆ ಬಲವೂ ಇಲ್ಲ, ಬೆಲೆಯೂ ಇಲ್ಲ ಎನ್ನುವ ಕಾರಣಕ್ಕೆ. ಆತ ಈಗ ಇದ್ದಿದ್ದರೆ ಭಾರತದ ಸ್ಥಿತಿಯನ್ನು ಹೇಗೆ ವರ್ಣಿಸುತ್ತಿದ್ದನೋ ಏನೋ. ಅದಕ್ಕಿಂತ ಮುಖ್ಯವಾಗಿ ಇಂದಿನ ಭಾರತದಲ್ಲಿ ಹಾಗೇನಾದರೂ ಹೇಳಿದ್ದರೆ ಆತನನ್ನು ಯಾವುದೋ ಗುಂಪು ಹೊಡೆದು ಸಾಯಿಸಿಯೇ ಬಿಡುತಿತ್ತು.

ಜನ ಸ್ಥಿಮಿತ ಕಳೆದುಕೊಂಡು ಹುಚ್ಚೆದ್ದು ವರ್ತಿಸಿದರೆ ಪೊಲೀಸರು, ಆಡಳಿತ, ಮಾಧ್ಯಮಗಳು ಏನು ತಾನೇ ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಸಹಜವಾಗಿ ಹುಟ್ಟಬಹುದು. ಇದಕ್ಕೆ ಉತ್ತರ ಕಂಡುಕೊಳ್ಳಬೇಕಾದರೆ ಇಂತಹಾ ಘಟನೆಗಳು ನಡೆದಾಗ ಇವರೆಲ್ಲಾ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಸ್ಸಾಂನ ಘಟನೆಗೆ ಮುನ್ನ ಬೆಂಗಳೂರಿನಲ್ಲಿ ನಡೆದ ಈ ರೀತಿಯ ಘಟನೆಯನ್ನು ಉದಾಹರಣೆಗಾಗಿ ನೋಡೋಣ.

ಬೆಂಗಳೂರಿನಲ್ಲಿ ಮಕ್ಕಳ ಕಳ್ಳ ಎಂಬ ಗುಮಾನಿಯಿಂದ ಜನ ಸಾಯಹೊಡೆದದ್ದು ದೂರದ ರಾಜಸ್ಥಾನದಿಂದ ಕೆಲಸ ಅರಸಿಕೊಂಡು ಬಂದಿದ್ದ ಅನಾಥ ಅಮಾಯಕ ಯುವಕನನ್ನು. ಘಟನೆಯ ನಂತರ ಆ ಪ್ರದೇಶದ ಪೊಲೀಸ್ ಮುಖ್ಯಸ್ಥರಿಂದ ಹಿಡಿದು ಹೊಸದಾಗಿ ಅಧಿಕಾರ ವಹಿಸಿಕೊಂಡ ಮುಖ್ಯಮಂತ್ರಿಯ ತನಕ ಎಲ್ಲರೂ ಹೇಳಿದ್ದು ‘ಮಕ್ಕಳ ಕಳ್ಳರಿದ್ದಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿದರೆ ಜೋಕೆ’ ಅಂತ. ‘ಸುಳ್ಳು ಸುದ್ದಿ ನಂಬಿ ಅಮಾಯಕರನ್ನು ಹಿಂಸಿಸಿದರೆ ಎಚ್ಚರ’ ಅಂತ. ಅಂದರೆ ಸುದ್ದಿ ಸತ್ಯವಾಗಿದ್ದರೆ, ಅಮಾಯಕನ ಸ್ಥಾನದಲ್ಲಿ ಆಪಾದಿತನಿದ್ದರೆ ಜನ ಸೇರಿ ಹೊಡೆಯಬಹುದು ಎಂದೇ? ಇಲ್ಲಿ ಎರಡು ಸಮಸ್ಯೆಗಳಿದ್ದವು. ಒಂದು ಸುಳ್ಳು ಸುದ್ದಿಯದ್ದು. ಇನ್ನೊಂದು ಸಂಶಯದಿಂದ ಜನ ಯಾರನ್ನೂ ಬಡಿದು ಕೊಲ್ಲುವ ಪ್ರವೃತ್ತಿಯದ್ದು. ಸುಳ್ಳು ಸುದ್ದಿ ಹಬ್ಬಿಸಿದ್ದು ಕೀಟಲೆಯ ಹಂತದಿಂದ ಅಪಾಯಕಾರಿ ಪಿಡುಗಾಗಿದ್ದು ಯಾಕೆ ಎಂದರೆ ಜನ ಸಿಕ್ಕ ಸಿಕ್ಕವರನ್ನು ಹೊಡೆದು ಕೊಂದು ಹಾಕುವುದಕ್ಕೆ ಮುಂದಾದಾಗ. ಸುಳ್ಳು ಸುದ್ದಿಗಿಂತ ಹೆಚ್ಚಾಗಿ ಎಚ್ಚರ ನೀಡಬೇಕಾಗಿದ್ದದ್ದು ಮತ್ತು ನಿಯಂತ್ರಿಸಬೇಕಾಗಿದ್ದದ್ದು ಈ ಪ್ರವೃತ್ತಿಯನ್ನು. ಕಾರಣ ಏನೇ ಇರಲಿ, ‘ಅನುಮಾನಿತರ ಮೇಲೆ ಅಥವಾ ಆಪಾದಿತರ ಮೇಲೆ ಕೈಮಾಡಿದರೆ ಎಚ್ಚರ’ ಅಂತ ಒಬ್ಬನೇ ಒಬ್ಬ ಒಂದು ಸಂದೇಶ ನೀಡಿದ್ದರೆ ಹೇಳಿ!

ಮೊನ್ನೆ ಅಸ್ಸಾಂನಲ್ಲೂ ಕಂಡದ್ದು ಇದನ್ನೇ. ಎಲ್ಲರೂ ನಿಯಂತ್ರಿಸಲು ಹೊರಟಿದ್ದು ಗಾಳಿಸುದ್ದಿಯನ್ನು. ದಿನೇ ದಿನೇ ಜನ ಸೇರಿ ಯಾರನ್ನೋ ಯಾವುದೋ ಸಂಶಯದಿಂದ ಸಾಯಹೊಡೆಯುವ ಪ್ರವೃತ್ತಿಯ ಬಗ್ಗೆ ಎಚ್ಚರಿಸುವ, ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಅಲ್ಲಿಯೂ ನಡೆಯಲಿಲ್ಲ.

ಗೋರಕ್ಷಣೆಯ ವಿಚಾರದಲ್ಲಿ ಕೆಲ ಸಂಘಟನೆಗಳು ಆಪಾದಿತರನ್ನೋ ಅಮಾಯಕರನ್ನೋ ಹಿಡಿದು ಕೊಂದು ಹಾಕಿದ ಘಟನೆಗಳು ಮತ್ತೆ ಮತ್ತೆ ನಡೆದಾಗಲೂ ಈ ದೇಶದ ಯಾವುದೇ ಮೂಲೆಯಿಂದ ಪೊಲೀಸರಿಂದ ಆಗಲೀ, ರಾಜಕೀಯ ನಾಯಕರಿಂದ ಆಗಲೀ ಒಂದು ಕಟುವಾದ ಎಚ್ಚರಿಕೆ ಬಂದಿರಲಿಲ್ಲ. ವಿಚಿತ್ರವೆಂದರೆ ಇಂತಹ ಘಟನೆಗಳನ್ನು ಕೆಲ ನಾಯಕರು ಬೇರೆ ರೀತಿಯಲ್ಲಿ ಸಮರ್ಥಿಸಿಕೊಂಡರು. ಆಪಾದಿತರನ್ನು ರಕ್ಷಣೆ ಮಾಡಲು ಕೆಲವರು ಮುಂದಾದರು. ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಪ್ರಾಣಾಂತಿಕ ಆಕ್ರಮಣಗಳು ಒಂದು ನಿರ್ದಿಷ್ಟ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳಿಂದ, ನಿರ್ದಿಷ್ಟ ಉದ್ದೇಶಕ್ಕಾಗಿ ನಡೆಯುತ್ತವೆ. ವಿವಿಧ ರೀತಿಯ ಕಳ್ಳತನದ ಗುಮಾನಿಯಲ್ಲಿ ಸಂಶಯಿತರನ್ನು ಕೊಂದು ಹಾಕುವುದರ ಹಿಂದೆ ಅನಿರ್ವಚನೀಯ ಮನಸ್ಥಿತಿಯ ಜನಸಮೂಹ ಇರುತ್ತದೆ. ಎರಡರ ಪರಿಣಾಮವೂ ಒಂದೇ. ಅವು ಅರಾಜಕತೆಯ ಲಕ್ಷಣಗಳು. ಮಾತ್ರವಲ್ಲ, ಮತ್ತಷ್ಟು ಅರಾಜಕತೆಯನ್ನು ಸೃಷ್ಟಿಸುವುದಕ್ಕೆ ಮೂಲವಾಗುವ ಬೆಳವಣಿಗೆಗಳು.

ಆದರೂ ಈ ಪ್ರವೃತ್ತಿಯ (ಇಂಗ್ಲಿಷ್ ನಲ್ಲಿ ಇದನ್ನು ಲಿಂಚಿಂಗ್ ಪ್ರವೃತ್ತಿ ಎನ್ನುತ್ತಾರೆ) ಬಗ್ಗೆ ಕನಿಷ್ಠ ಪೊಲೀಸರಾದರೂ ಯಾಕೆ ಒಂದು ಸ್ಪಷ್ಟವಾದ ಮತ್ತು ದಿಟ್ಟವಾದ ಸಂದೇಶ ರವಾನಿಸುತ್ತಿಲ್ಲ ಎನ್ನುವುದೇ ವಿಚಿತ್ರವಾದ ಸಂಗತಿ. ಮನಃಶಾಸ್ತ್ರೀಯವಾಗಿ ಹೇಳುವುದಾದರೆ ಈ ದೇಶದ ಪೊಲೀಸರಿಗೆ ಇದೊಂದು ಗಂಭೀರ ಸಮಸ್ಯೆ ಅಂತ ಅನಿಸುವುದೇ ಇಲ್ಲ. ಯಾಕೆಂದರೆ ಅವರು ಇದೇ ‘ಲಿಂಚಿಂಗ್ ಅಸ್ತ್ರ’ವನ್ನು ವ್ಯವಸ್ಥಿತವಾಗಿ ನಾಲ್ಕು ಗೋಡೆಗಳ ನಡುವೆ ಮಾಡಿ ತನಿಖೆ ನಡೆಸುವವರು. ಉನ್ಮತ್ತ  ಜನಸಮೂಹಗಳ ಕೈಗೆ ಸಿಕ್ಕ ಸಂಶಯಿತರು ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ, ಪೊಲೀಸರು ಸಂಶಯಿತರ ಪ್ರಾಣ ತೆಗೆಯುವುದು ವಿರಳ ಎನ್ನುವುದನ್ನು ಬಿಟ್ಟರೆ ಅವರೂ ತೋರುವುದು ಸಾಕ್ಷಾತ್ ‘ಲಿಂಚಿಂಗ್ ಪ್ರವೃತ್ತಿ’ಯನ್ನೇ. ಆದಕಾರಣ ಅವರಿಗಿದೆಲ್ಲಾ ಮಾಮೂಲು ಅನ್ನಿಸುತ್ತಿರಬೇಕು. ಹೀಗಲ್ಲದೆ ಬೇರೆ ಯಾವ ರೀತಿಯಲ್ಲೂ ಈ ಉದಾಸೀನ ಮನೋಭಾವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.

ಇನ್ನು ಮಾಧ್ಯಮದ ಮಂದಿ, ಅದರಲ್ಲೂ ಟಿ.ವಿ. ಮಾಧ್ಯಮದ ಮಂದಿ, ಇಂತಹ ಘಟನೆಗಳನ್ನು ಅಪ್ಪಟ ಮನರಂಜನೆಯನ್ನು ತೋರಿಸಿದ ಹಾಗೆ ತೋರಿಸುತ್ತಾರೆ. ಕನಿಷ್ಠ ಮಾನವೀಯ ಸಂವೇದನೆಗಳನ್ನೂ ಮರೆತು ವಿಲಕ್ಷಣ ಪದಗಳ ವಿವರಣೆಯೊಂದಿಗೆ ಟಿಆರ್‌ಪಿ ದೃಷ್ಟಿಯಿಂದ ಎಷ್ಟು ತೋರಿಸಬೇಕೋ ಅಷ್ಟು ತೋರಿಸಿದರೆ ಅವುಗಳ ಕೆಲಸ ಮುಗಿಯಿತು. ಮುದ್ರಣ ಮಾಧ್ಯಮಗಳು ದಿನದ ರಾಜಕೀಯ ಬೆಳವಣಿಗೆಗಳ ಸುದ್ದಿ ನೀಡಿದ ನಂತರ ಜಾಗ ಉಳಿದರೆ ಇಂತಹ ಘಟನೆಗಳ ಕುರಿತು ಸಣ್ಣಗೆ ಬರೆಯುತ್ತವೆ. ಈಗ್ಗೆ ಎರಡು ವಾರಗಳ  ಹಿಂದೆ ಉಡುಪಿಯಲ್ಲಿ ಇಂತಹದ್ದೊಂದು ಘಟನೆ ಸಾಕ್ಷಾತ್ ಸ್ಥಳೀಯ ಪೊಲೀಸರ ಕುಮ್ಮಕ್ಕಿನಿಂದ ನಡೆದು ಹೋಯಿತು. ಸ್ಥಳೀಯ ಸಬ್ ಇನ್‌ಸ್ಪೆಕ್ಟರ್ ಮತ್ತು ಈರ್ವರು ಕಾನ್‌ಸ್ಟೆಬಲ್‌ಗಳು ಜೈಲಿನಲ್ಲಿದ್ದಾರೆ. ದೇಶದಲ್ಲಿ ಮತ್ತು ಆ ಜಿಲ್ಲೆಯ ಪರಿಸರದಲ್ಲಿ ಬಹುದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಯಾವ ದೃಷ್ಟಿಯಿಂದ ನೋಡಿದರೂ ಮಾಧ್ಯಮಗಳು ಶೋಧಿಸಿ ಶೋಧಿಸಿ ಬರೆಯಬೇಕಾಗಿದ್ದ ಘಟನೆ ಇದು. ಆದರೆ ಯಾವ ಪತ್ರಿಕೆಯೂ ಈ ಕುರಿತು ವಾಸ್ತವಗಳನ್ನು ಬಿಂಬಿಸುವ ಒಂದು ವರದಿ ಪ್ರಕಟಿಸಿಲ್ಲ. ಮಾಧ್ಯಮಗಳು ಒಂದೋ ತಮ್ಮನ್ನು ತಾವು ಯಾವುದೋ ಹಿತಾಸಕ್ತಿಗಳಿಗೆ ಮಾರಿಕೊಂಡಿವೆ. ಇಲ್ಲವೇ ಕಸುಬಿನ ಕಸುವು ಕಳೆದುಕೊಂಡು ನಿಸ್ತೇಜವಾಗಿವೆ.

ಆದರೆ ನೆನಪಿರಲಿ. ದೇಶದಲ್ಲಿ ಹೆಚ್ಚುತ್ತಿರುವ ಈ ಅರಾಜಕ ಪ್ರವೃತ್ತಿಯ ಕುರಿತಾದ ಪೊಲೀಸರ, ಆಡಳಿತ ವ್ಯವಸ್ಥೆಯ ಮತ್ತು ಮಾಧ್ಯಮದವರ ಔದಾಸೀನ್ಯವಿದೆಯಲ್ಲಾ,  ಇದು ಸ್ವಯಂಘಾತಕ ಔದಾಸೀನ್ಯ. ಉನ್ಮತ್ತ ಗುಂಪುಗಳಿಗೆ ಪ್ರೆಸ್ ಆದರೂ ಅಷ್ಟೇ, ಪೊಲೀಸ್ ಆದರೂ ಅಷ್ಟೇ, ಐಎಎಸ್‌ ಆದರೂ ಅಷ್ಟೇ. ನಾಳಿನ ಬಲಿ ಇವರೋ, ಇವರ ಮಕ್ಕಳೋ ಆಗಬಹುದು. ಅಂದ ಹಾಗೆ ಒಂದೆರಡು ದಶಕಗಳಿಗೆ ಹಿಂದೆ ಬಿಹಾರದಲ್ಲಿ ಹೀಗೊಂದು ಉನ್ಮತ್ತ ಗುಂಪು ಒಬ್ಬ ಜಿಲ್ಲಾಧಿಕಾರಿಯ ಜೀವವನ್ನು ಹಾಡಹಗಲೇ ಹೊಸಕಿ ಹಾಕಿತ್ತು. ಅಂದು ದಾರುಣವಾಗಿ ಹೆಣವಾಗಿ ಹೋದದ್ದು ಕೃಷ್ಣಯ್ಯ ಎಂಬ 1985ರ ಬ್ಯಾಚಿನ ಐಎಎಸ್ ತರುಣ.  ಆಂಧ್ರ ಪ್ರದೇಶದಲ್ಲಿ ಕೂಲಿ ಕೆಲಸಮಾಡುವ ದಲಿತ ಕುಟುಂಬವೊಂದರಲ್ಲಿ ಬೆಳೆದು ಕಡುಕಷ್ಟದಲ್ಲಿ ಆಡಳಿತ ಸೇವೆಗೆ ಸೇರಿ ಆದರ್ಶಗಳನ್ನು ಹೊತ್ತಿದ್ದ ಜೀವವೊಂದು ಅನ್ಯಾಯವಾಗಿ ಅಂತ್ಯ ಕಂಡ ಕತೆ ಅದು. ಅಲ್ಲೂ ದೈವ ದುರ್ಬಲ ಘಾತಕವೇ. ಆಗಿನ್ನೂ ಜನ ಗುಂಪು ಸೇರಿ ಯಾರ ಮೇಲೋ ಯಾವ್ಯಾವುದೋ ಆಪಾದನೆ ಹೊರಿಸಿ ಹೊಡೆದು ಕೊಲ್ಲುವ ಪರಿಪಾಟ ಭಾರತೀಯ ಸಂಸ್ಕೃತಿಯ ಭಾಗವಾಗಿರಲಿಲ್ಲ. ಅಂದು ಅದೆಲ್ಲಾ ಬಿಹಾರದಲ್ಲಿ ಮಾತ್ರ ಸಾಧ್ಯವಿತ್ತು. ಇಂದು ಹಾಗಲ್ಲ. ಬಿಹಾರ ಇಡೀ ದೇಶಕ್ಕೆ ದೀಕ್ಷೆ ನೀಡಿಬಿಟ್ಟಿದೆ.

 

ಪ್ರತಿಕ್ರಿಯಿಸಿ (+)