ಋತುಸ್ರಾವ ಜಾಗೃತಿಗೆ ‘ಸ್ವಚ್ಛ ಗೆಳತಿ’ ಅಭಿಯಾನ

7
ದೇಶದಲ್ಲಿಯೇ ಮೊದಲ ವಿನೂತನ ಕಾರ್ಯಕ್ರಮಕ್ಕೆ ಅಡಿ ಇಟ್ಟ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ

ಋತುಸ್ರಾವ ಜಾಗೃತಿಗೆ ‘ಸ್ವಚ್ಛ ಗೆಳತಿ’ ಅಭಿಯಾನ

Published:
Updated:
ಋತುಸ್ರಾವ ಜಾಗೃತಿಗೆ ‘ಸ್ವಚ್ಛ ಗೆಳತಿ’ ಅಭಿಯಾನ

ಮಂಗಳೂರು: ವಿನೂತನ ಕಾರ್ಯಕ್ರಮಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಸ್ವಚ್ಛ ಭಾರತ್‌ ಮಿಷನ್‌ ಅಡಿ ಮಹಿಳೆಯರ ಮುಟ್ಟಿನ ನೈರ್ಮಲ್ಯ ಕುರಿತು ಜಾಗೃತಿ ಅಭಿಯಾನ ಹಾಗೂ ತ್ಯಾಜ್ಯ ನಿರ್ವಹಣೆಗೆ ‘ಸ್ವಚ್ಛ ಗೆಳತಿ’ ಎಂಬ ಕಾರ್ಯಕ್ರಮದ ಮೂಲಕ ಜಿಲ್ಲೆಯ ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆ ಇಟ್ಟಿರುವುದು ದೇಶದಲ್ಲಿಯೇ ಮೊದಲ ಪ್ರಯತ್ನ.

ಈ ಹಿಂದೆ ಕೂಡಾ ಸ್ವಚ್ಛ ಭಾರತ್‌ ಮಿಷನ್‌ ಅಡಿ ‘ನಮ್ಮ ತ್ಯಾಜ್ಯ – ನಮ್ಮ ಹೊಣೆ’ ಎಂಬ ಕಾರ್ಯಕ್ರಮದ ಮೂಲಕ ತ್ಯಾಜ್ಯ ವಿಲೇವಾರಿಗೆ, ಜನರ ಸಮಸ್ಯೆಗೆ ಧ್ವನಿ ಆಗುವ ಮೂಲಕ ಹತ್ತಿರವಾಗಿತ್ತು. ಈಗ ಋತುಸ್ರಾವ ಜಾಗೃತಿ ಅಭಿಯಾನದ ಮೂಲಕ ಶುಚಿತ್ವದ ಪಾಠ ಬೋಧನೆಗೆ ಸಜ್ಜಾಗುತ್ತಿದೆ.

ಹದಿಯಹರೆಯ ಪ್ರತಿಯೊಬ್ಬರ ಜೀವನದ ಮಹತ್ವದ ಘಟ್ಟ. ಈ ವಯಸ್ಸಿನಲ್ಲಿ ಹಲವು ದೈಹಿಕ ಹಾಗೂ ಮಾನಸಿಕ ಬದಲಾವಣೆ ಸಹಜ. ಹದಿಯಹರೆಯದ ಬಾಲಕಿಯರಲ್ಲಿ ಆಗುವ ನೈಸರ್ಗಿಕ ಹಾಗೂ ಸಹಜ ಬದಲಾವಣೆ ತಿಳಿದುಕೊಳ್ಳುವುದು, ಋತುಸ್ರಾವದ ಕಾಲದಲ್ಲಿ ಮಹಿಳೆಯರ ಸ್ವಚ್ಛತೆ ಹೇಗೆ ಕಾಪಾಡುವುದು, ಅದರಿಂದ ಆಗುವ ಸಮಸ್ಯೆಗೆ ಪರಿಹಾರ, ಜತೆಗೆ ಮಹಿಳೆಯರ ಸಬಲೀಕರಣ ಮೂಲ ಉದ್ದೇಶ ‘ಸ್ವಚ್ಛ ಗೆಳತಿ’  ಮೂಲ ಆಶಯ.

ಈ ಅಭಿಯಾನದ ಅನುಷ್ಠಾನಕ್ಕೆ ಗ್ರಾಮಾಂತರ ಮತ್ತು ನಗರ ವ್ಯಾಪ್ತಿಯ 1291 ಆಶಾ ಕಾರ್ಯಕರ್ತೆಯರು ಜಿಲ್ಲೆಯಾದ್ಯಂತ ಒಟ್ಟು 6455 ಮಹಿಳೆಯರ ಮಾದರಿ ಸಮೀಕ್ಷೆ ಮಾಡಿದ್ದಾರೆ. ಸಮೀಕ್ಷೆಯ ಫಲಿತಾಂಶವೂ ಸಿಕ್ಕಿದೆ. ವಿವಿಧ ವಯೋಮಾನದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಲ್ಲಿ ಮಾಸಿಕ ಋತುಸ್ರಾವದ ವೇಳೆ ಶೇ 79.75 (5148) ರಷ್ಟು ಸಂಖ್ಯೆಯ ಸ್ಯಾನಿಟರಿ ಪ್ಯಾಡ್‌/ ನ್ಯಾಪ್‌ಕಿನ್‌ ಹಾಗೂ  ಶೇ 20. 24 (1307 ಮಂದಿ) ಹತ್ತಿ ಬಟ್ಟೆ ಬಳಸುತ್ತಿದ್ದಾರೆ.

ಋತುಸ್ರಾವದ ದಿನಗಳಲ್ಲಿ 2 ರಿಂದ 4 ಬಾರಿ ಪ್ಯಾಡ್‌ ಅಥವಾ ಬಟ್ಟೆ ಬಳಸುವ ಮಹಿಳೆಯರು ಇದ್ದಾರೆ. ಮಹಿಳೆಯರು ಬಳಸಿದ ಪ್ಯಾಡ್‌ ಅಥವಾ ಬಟ್ಟೆ ಯಾವ ರೀತಿ ವಿಲೇವಾರಿ ಆಗುತ್ತಿದೆ ಎಂಬುದು ಸಮೀಕ್ಷೆ ವೇಳೆ ಗೊತ್ತಾಗಿದೆ. ಹಲವರು ತೆಂಗಿನ ಮರದ ಗುಂಡಿಗೆ, ಕಸ ವಿಲೇವಾರಿ ವಾಹನಕ್ಕೆ ಹಾಕುವುದು, ಶೌಚಾಲಯದಲ್ಲಿ ಬಿಸಾಡುವುದು, ಸುಡುವುದನ್ನು ಮಾಡುತ್ತಿದ್ದಾರೆ.

ಅಭಿಯಾನದ ಜಾಗೃತಿಗಾಗಿ ಮೊದಲ ಹಂತದಲ್ಲಿ ಜಿಲ್ಲೆಯ 6 ಮತ್ತು 7ನೇ ತರಗತಿ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ (2011ರ ಜನಗಣತಿ ಪ್ರಕಾರ) 10.54 ಲಕ್ಷ ಮಹಿಳೆಯರು ಇದ್ದಾರೆ. 11 ರಿಂದ 49ರ ಪ್ರಾಯದವರು 4.76 ಲಕ್ಷ ಮಂದಿ ಇದ್ದಾರೆ. ಪ್ರತಿ ತಿಂಗಳು ನ್ಯಾಪ್‌ಕಿನ್‌ /ಪ್ಯಾಡ್‌ ಬಳಸುವವರ ಸಂಖ್ಯೆ 3.81 ಲಕ್ಷವಿದೆ. ಸರಾಸರಿ ಪ್ರತಿ ತಿಂಗಳ ಬಳಕೆ 30.51 ಲಕ್ಷ (ಒಬ್ಬ ಮಹಿಳೆ ತಿಂಗಳಿಗೆ 8 ಪ್ಯಾಡ್‌).

‘ಜಿಲ್ಲೆಯಲ್ಲಿ ನೈರ್ಮಲ್ಯ ಮತ್ತು ಶುಚಿತ್ವದಡಿ ನಿರಂತರತೆ ಕಾಯ್ದುಕೊಂಡು ಬರಲು ಈ ಬಾರಿ ಸ್ವಚ್ಛ ಗೆಳತಿ’ ಅಭಿಯಾನ ಜಾರಿಗೆ ತರಲಾಗುತ್ತಿದೆ. ಋತುಸ್ರಾವ ಜಾಗೃತಿ ಅಭಿಯಾನ ಹಾಗೂ ತ್ಯಾಜ್ಯ ನಿರ್ವಹಣೆ ಪ್ರಮುಖ ಉದ್ದೇಶವಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಶಕೆ ಜಿಲ್ಲೆಯಲ್ಲಿ ಆರಂಭಿಸಲಾಗುತ್ತಿದೆ. ಪರಿಸರ ಸ್ನೇಹ, ತಜ್ಞರಿಂದ ಆಪ್ತ ಸಮಾಲೋಚನೆ, ಸಮಗ್ರ ಆರೋಗ್ಯ ಮಾಹಿತಿ, ಪಾಲಕರ ಜತೆಗೆ ಆಪ್ತ ಸಮಾಲೋಚನೆಯೂ ಸೇರಿದೆ. ಆರೋಗ್ಯ ಇಲಾಖೆ, ಮಂಗಳೂರು ವಿಶ್ವವಿದ್ಯಾಲಯ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ತಂಡವೂ ಕಾರ್ಯಕ್ರಮ ಅನುಷ್ಠಾನದಲ್ಲಿ ಟೊಂಕ ಕಟ್ಟಿ ನಿಂತಿವೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಂ.ಆರ್‌. ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಮಟ್ಟದ ಕಾರ್ಯಾಗಾರ

ಸ್ವಚ್ಛ ಗೆಳತಿ ಅಭಿಯಾನದ ಮೊದಲ ಭಾಗವಾಗಿ ಜೂನ್‌ 22ರಂದು ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಲಿದೆ. ಜುಲೈನಿಂದ ಸ್ಚಚ್ಛ ಗೆಳತಿಯ ಸಂಪೂರ್ಣ ಅನುಷ್ಠಾನವಾಗಲಿದೆ. ಋತುಸ್ರಾವ ಜಾಗೃತಿ ಅಭಿಯಾನ, ತ್ಯಾಜ್ಯ ನಿರ್ವಹಣೆ, ಮಹತ್ವ, ವೈಯಕ್ತಿಕ ಶುಚಿತ್ವ, ಆರೋಗ್ಯ ನಿರ್ವಹಣೆ ಸೇರಿದಂತೆ ಎಲ್ಲ ಮಾಹಿತಿ ವರ್ಷ ಪೂರ್ತಿಯಾಗಿ 1152 ಶಾಲೆಗಳಲ್ಲಿ ನಡೆಸಲಾಗುತ್ತದೆ. ಪಾಠದ ಬದಲು ಅನುಭವ ಹಂಚಿಕೆಯೂ ಕಾರ್ಯಾಗಾರದಲ್ಲಿ ನಡೆಯುತ್ತದೆ.

ಪ್ರತಿ ಶಾಲೆಯಲ್ಲಿ 25 ಮಕ್ಕಳ ತಂಡ ರಚನೆ ಮಾಡಿ, ಆ ತಂಡಕ್ಕೆ ಪದವಿ ವಿದ್ಯಾರ್ಥಿನಿ ಆಪ್ತ ಗೆಳತಿ ಅಥವಾ ಮಾರ್ಗದರ್ಶಿನಿ ಆಗಿ ಕಾರ್ಯ ನಿರ್ವಹಿಸುತ್ತಾರೆ. ಋತುಸ್ರಾವದ ವೇಳೆ ಬಳಸಿದ ಪ್ಯಾಡ್‌ ಅಥವಾ ನ್ಯಾಪ್‌ಕಿನ್‌ಗಳನ್ನು ಬಿಸಾಡುವ ಬದಲು ಮಿನಿ ಪ್ಯಾಡ್‌ ಬರ್ನರ್‌ ಮೂಲಕ ಸುಡುವುದು ಒಳಿತು. ಈಗಾಗಲೇ ಜಿಲ್ಲೆಯಲ್ಲಿ ಕೆಲವು ಹಾಸ್ಟೆಲ್‌ ಹಾಗೂ ಶಾಲೆಗಳಿಗೆ ಇಂತಹ ಬರ್ನರ್‌ಗಳನ್ನು ನೀಡಲಾಗಿದೆ. ಸರ್ಕಾರ ಎಲ್ಲ ಕುಟುಂಬಕ್ಕೂ ಇಂತಹ ಬರ್ನರ್‌ ಕಿಟ್‌ ನೀಡುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ. ಆರ್‌. ರವಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry