ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಲು ಆದೇಶ

2ನೇ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಸೂಚನೆ
Last Updated 18 ಜೂನ್ 2018, 17:19 IST
ಅಕ್ಷರ ಗಾತ್ರ

ಮೈಸೂರು: ನಿವೇಶನ ಅಕ್ರಮ ಖರೀದಿ ಆರೋಪದ ಮೇಲೆ ಜೆಡಿಎಸ್–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ 2ನೇ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಆದೇಶಿಸಿದೆ.

ಸಿದ್ದರಾಮಯ್ಯ ಅವರು ಅಕ್ರಮವಾಗಿ ನಿವೇಶನ ಖರೀದಿ ಮಾಡಿದ್ದು, ಅನೇಕರು ಶಾಮೀಲಾಗಿದ್ದಾರೆ. ಆರೋಪಿಗಳ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳಲು ಸೂಚಿಸುವಂತೆ ಕೋರಿ ಆರ್‌ಟಿಐ ಕಾರ್ಯಕರ್ತ ಎನ್.ಗಂಗರಾಜು ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು, ಸಿದ್ದರಾಮಯ್ಯ, ಅಂದಿನ ‘ಸಿಐಟಿಬಿ’ ಅಧ್ಯಕ್ಷ ಸಿ.ಬಸವೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮಾಜಿ ಅಧ್ಯಕ್ಷ ಡಿ.ಧ್ರುವಕುಮಾರ್‌, ಆಯುಕ್ತ ಪಿ.ಎಸ್‌.ಕಾಂತರಾಜು ಅವರ ವಿರುದ್ಧ ದೂರು ದಾಖಲಿಸಬೇಕು. ಜುಲೈ 23ರೊಳಗೆ ಪ್ರಕರಣ ದಾಖಲಿಸಿ ವರದಿ ನೀಡುವಂತೆ ಜೂನ್‌ 4ರಂದು ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಸೂಚನೆ ನೀಡಿದೆ.

ಏನಿದು ಪ್ರಕರಣ?: 1981ರಲ್ಲಿ ಸಿಐಟಿಬಿ (ಸಿಟಿ ಇಂಪ್ರೂವ್‌ಮೆಂಟ್‌ ಟ್ರಸ್ಟ್ ಬೋರ್ಡ್) ವತಿಯಿಂದ ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಹಿನಕಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ 535 ಎಕರೆ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಿತ್ತು. ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಬಳಿಕ ಆಗ ಹಿನಕಲ್ ಗ್ರಾ.ಪಂ ಅಧ್ಯಕ್ಷರಾಗಿದ್ದ ಪಾಪಣ್ಣ ಅವರು 30 ಗುಂಟೆ ಜಮೀನನ್ನು ಕೈ ಬಿಡುವಂತೆ ಕೋರಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಆಗಿದ್ದಾಗ ‘ಮುಡಾ’ಗೆ ಅರ್ಜಿ ಸಲ್ಲಿಸಿದ್ದರು. ‘ಮುಡಾ’ ಅಧಿಕಾರಿಗಳು 30 ಗುಂಟೆ ಜಾಗವನ್ನು ಡಿನೋಟಿಫೈ ಮಾಡಿ ನಿರಾಕ್ಷೇಪಣಾ ಪತ್ರ ನೀಡಿದ್ದರು.

ನಂತರ ಈ ಜಮೀನನ್ನು ಕುಟುಂಬದವರು ಹಂಚಿಕೆ ಮಾಡಿಕೊಂಡಿದ್ದರು. ಪಾಪಣ್ಣ ಅವರ ಚಿಕ್ಕಮ್ಮ ಸಾಕಮ್ಮ ಅವರ ಪಾಲಿಗೆ ಬಂದಿದ್ದ 10 ಗುಂಟೆ ಜಮೀನನ್ನು ಸಿದ್ದರಾಮಯ್ಯ ಖರೀದಿಸಿ, ಮನೆ ನಿರ್ಮಿಸಿದ್ದರು. 30 ಗುಂಟೆಯನ್ನು ಡಿನೋಟಿಫೈ ಮಾಡಿದ್ದರೂ, ಈ ಜಮೀನನ್ನೂ ಸೇರಿಸಿಕೊಂಡು ‘ಮುಡಾ’ ಬಡಾವಣೆ ನಿರ್ಮಿಸಿತ್ತು. ಇದು ವಿವಾದ ಪಡೆದುಕೊಳ್ಳುತ್ತಿದ್ದಂತೆ 2003ರಲ್ಲಿ ಸಿದ್ದರಾಮಯ್ಯ ಮನೆ ಮಾರಾಟಮಾಡಿದ್ದರು. ಆ ವೇಳೆ ಸಾಕಮ್ಮ ಅವರಿಗೆ ಬದಲಿ ನಿವೇಶವನ್ನು ‘ಮುಡಾ’ ನೀಡಿತ್ತು.

2017ರ ಡಿಸೆಂಬರ್‌ನಲ್ಲಿ ಮತ್ತೆ ನಿವೇಶನ ನೀಡುವಂತೆ ಸಾಕಮ್ಮ ಅವರ ಪರವಾಗಿ ಕುಟುಂಬದವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ‘ಮುಡಾ’ ಅಂದಿನ ಅಧ್ಯಕ್ಷ ಡಿ.ಧ್ರುವಕುಮಾರ್, ಸಾಮಾನ್ಯ ಸಭೆಯಲ್ಲಿ ಅರ್ಜಿ ಮಂಡಿಸಿ, ಮತ್ತೊಂದು ನಿವೇಶನ ನೀಡಲು ಅನುಮೋದನೆ ಪಡೆದಿದ್ದರು.

* ನ್ಯಾಯಾಲಯ ಆದೇಶ ನೀಡಿರುವುದು ಗಮನಕ್ಕೆ ಬಂದಿದೆ. ಆದೇಶ ಪ್ರತಿ ಇನ್ನೂ ತಲುಪಿಲ್ಲ. ತಲುಪಿದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.

–ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌, ಪೊಲೀಸ್ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT