ಸತೀಶ್‌ಗೆ ಸಚಿವ ಸ್ಥಾನ: ಜನಾಗ್ರಹ ಸಮಾವೇಶ ಇಂದು

7
ಶಕ್ತಿ ಪ್ರದರ್ಶನಕ್ಕೆ ಮುಂದಾದ ಜಾರಕಿಹೊಳಿ ಬೆಂಬಲಿಗರು

ಸತೀಶ್‌ಗೆ ಸಚಿವ ಸ್ಥಾನ: ಜನಾಗ್ರಹ ಸಮಾವೇಶ ಇಂದು

Published:
Updated:

ಬೆಳಗಾವಿ: ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ, ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆಯ ಸದಸ್ಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ (ಜೂನ್‌ 19) ‘ಜನಾಗ್ರಹ ಸಮಾವೇಶ’ ಆಯೋಜಿಸಿದ್ದು, ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

‘ಜನಪರ ಹಾಗೂ ಪ್ರಬುದ್ಧ ರಾಜಕಾರಣಿ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದನ್ನು ಖಂಡಿಸಿ ಹಾಗೂ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಪಾಲಿಸುವಂತೆ ಒತ್ತಾಯಿಸಿ ಸಮಾವೇಶ ನಡೆಸಲಾಗುತ್ತಿದೆ. ಸಚಿವ ಸಂಪುಟದಲ್ಲಿ ಕೆಲವು ಸಮುದಾಯಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ; ಇದನ್ನು ಖಂಡಿಸಲಾಗುವುದು. ಸರ್ಕಾರವು ಜಾರಿಗೊಳಿಸುವ ಯೋಜನೆಗಳು ಎಲ್ಲ ಸಮುದಾಯಗಳನ್ನೂ ಒಳಗೊಳ್ಳುವಂತೆ ಇರಬೇಕು. ನಿಗಮ, ಮಂಡಳಿಗಳಿಗೆ ನೇಮಕ ಮಾಡುವಾಗ ಸಾಮಾಜಿಕ ನ್ಯಾಯ ಪರಿಪಾಲಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಲಾಗುವುದು’ ಎಂದು ವೇದಿಕೆಯ ಸಂಚಾಲಕ ಅನಂತ ನಾಯ್ಕ ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ, ವಕೀಲ ಎ.ಕೆ. ಸುಬ್ಬಯ್ಯ, ಪ್ರಾಧ್ಯಾಪಕ ಬಿ.ಪಿ. ಮಹೇಶಚಂದ್ರ ಗುರು, ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು, ಹೋರಾಟಗಾರರಾದ ಮಾವಳ್ಳಿ ಶಂಕರ್‌, ಬಿ.ಕೆ. ಶಿವರಾಮ್‌, ಲಕ್ಷ್ಮಿನಾರಾಯಣ ನಾಗವಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ದಲಿತ, ಹಿಂದುಳಿದ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರತಿನಿಧಿಗಳು, ಜಾರಕಿಹೊಳಿ ಬೆಂಬಲಿಗರು ಸೇರಿ 10ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

ನಮ್ಮ ಕೋಟಾ ಮುಗಿದಿದೆ: ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಾಸಕ ಸತೀಶ ಜಾರಕಿಹೊಳಿ, ‘ಅಭಿಮಾನಿಗಳು, ಬೆಂಬಲಿಗರು ನಡೆಸುತ್ತಿರುವ ಹೋರಾಟಕ್ಕೆ ಮಣಿದು ನನಗೆ ಸಚಿವ ಸ್ಥಾನ ನೀಡಿದರೆ ಬೇಡ ಎನ್ನುತ್ತೇನೆ. ನಮ್ಮ ಕೋಟಾ ಮುಗಿದಿದೆ’ ಎಂದರು.

ತಾವು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿಸಿದ ಅವರು, ‘ಸಮಾನ ಮನಸ್ಕರು, ಬುದ್ಧಿಜೀವಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಬೆಂಬಲಿಗರು ಸಮಾವೇಶದಲ್ಲಿ ಸೇರಲಿದ್ದಾರೆ. ಅವರು ನನಗೆ ಮತ್ತು ಮೈತ್ರಿ ಸರ್ಕಾರಕ್ಕೆ ಯಾವ ಸಲಹೆಗಳನ್ನು ನೀಡುತ್ತಾರೆ ಕಾದು ನೋಡೋಣ’ ಎಂದರು.

ಬಜೆಟ್ ಮಂಡನೆಗೆ ಬೆಂಬಲ: ‘ಹಿಂದೆ ಹೊಸ ಸರ್ಕಾರ ಬಂದಾಗ ಬಜೆಟ್ ಮಂಡಿಸಲಾಗಿತ್ತು. ಈ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಯಾವ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಬಜೆಟ್ ಮಂಡಿಸುವುದಕ್ಕೆ ನನ್ನ ಬೆಂಬಲವಿದೆ’ ಎಂದರು.

‘ಸಚಿವ ಸಂಪುಟ ಬೇಗ ವಿಸ್ತರಣೆ ಮಾಡಬೇಕು. ಇಲ್ಲವಾದರೆ ಮತ್ತೆ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಅತೃಪ್ತರ ಸಭೆಗಳನ್ನು ನಡೆಸಬಾರದು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಸೂಚಿಸಿದ್ದಾರೆ. ಹೀಗಾಗಿ ನಾವು ಸಭೆ ಮಾಡುತ್ತಿಲ್ಲ. ವೈಯಕ್ತಿಕವಾಗಿ ಚರ್ಚಿಸುತ್ತಿದ್ದೇವೆ’ ಎಂದು ಮಾರ್ಮಿಕವಾಗಿ ಹೇಳಿದರು.

ಮುಖ್ಯಾಂಶಗಳು

* ಹೋರಾಟಕ್ಕೆ ಮಣಿದು ಸಚಿವ ಸ್ಥಾನ ಕೊಟ್ಟರೆ ಬೇಡ

* ಸಮಾವೇಶದಿಂದ ಸಲಹೆ ನಿರೀಕ್ಷೆ

* ಬಜೆಟ್‌ ಮಂಡನೆಗೆ ಬೆಂಬಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry