ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿ, ಶ್ರೇಯಸ್‌ ಅಯ್ಯರ್‌ ಅರ್ಧಶತಕ

ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಇಲೆವನ್‌ ವಿರುದ್ಧದ ಏಕದಿನ ಪಂದ್ಯ: ಭಾರತ ‘ಎ’ ಜಯಭೇರಿ
Last Updated 18 ಜೂನ್ 2018, 18:00 IST
ಅಕ್ಷರ ಗಾತ್ರ

ಲೀಡ್ಸ್: ಆರಂಭಿಕ ಆಟಗಾರ ಪೃಥ್ವಿ ಶಾ (70; 61ಎ, 7ಬೌಂ, 3ಸಿ) ಮತ್ತು ನಾಯಕ ಶ್ರೇಯಸ್‌ ಅಯ್ಯರ್‌ (54; 45ಎ, 5ಬೌಂ, 1ಸಿ) ಅವರ ಅರ್ಧಶತಕಗಳ ಬಲದಿಂದ ಭಾರತ ‘ಎ’ ತಂಡ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಇಲೆವನ್‌ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 125ರನ್‌ಗಳಿಂದ ಗೆದ್ದಿದೆ.

ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಸೋಮವಾರ ಮೊದಲು ಬ್ಯಾಟ್‌ ಮಾಡಿದ ಭಾರತ ‘ಎ’ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 328ರನ್ ಕಲೆಹಾಕಿತು. ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಇಲೆವನ್‌ 36.5 ಓವರ್‌ಗಳಲ್ಲಿ 203ರನ್‌ಗಳಿಗೆ ಆಲೌಟ್‌ ಆಯಿತು.

ಮಂಕಾದ ಮಯಂಕ್‌: ಬ್ಯಾಟಿಂಗ್‌ ಆರಂಭಿಸಿದ ಭಾರತ ‘ಎ’ ತಂಡ ಆರಂಭಿಕ ಸಂಕಷ್ಟ ಎದುರಿಸಿತು. ಕರ್ನಾಟಕದ ಮಯಂಕ್‌ ಅಗರವಾಲ್‌ 12 ಎಸೆತಗಳಲ್ಲಿ 4ರನ್‌ ಗಳಿಸಿ ಟಾಮ್‌ ಬಾರ್ಬರ್‌ಗೆ ವಿಕೆಟ್‌ ನೀಡಿದರು.

ನಂತರ ಪೃಥ್ವಿ ಶಾ ಮತ್ತು ಹನುಮ ವಿಹಾರಿ (38; 52ಎ, 2ಬೌಂ, 1ಸಿ) ಎಚ್ಚರಿಕೆಯ ಇನಿಂಗ್ಸ್‌ ಕಟ್ಟಿದರು. ಹೀಗಾಗಿ ಭಾರತದ ಮೊತ್ತ 20 ಓವರ್‌ಗಳಲ್ಲಿ 125ರ ಗಡಿ ದಾಟಿತು. 21ನೇ ಓವರ್‌ನಲ್ಲಿ ಪೃಥ್ವಿ ಔಟಾದರು.

ಬಳಿಕ ನಾಯಕ ಶ್ರೇಯಸ್‌ ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ (50; 46ಎ, 4ಬೌಂ, 2ಸಿ) ಮಿಂಚಿದರು.

ಕೃಣಾಲ್‌ ಪಾಂಡ್ಯ (34; 28ಎ, 2ಬೌಂ, 2ಸಿ) ಮತ್ತು ಅಕ್ಷರ್‌ ಪಟೇಲ್‌ (ಔಟಾಗದೆ 28; 30ಎ, 2ಬೌಂ) ತಂಡದ ಮೊತ್ತ ಹೆಚ್ಚಿಸಿದರು.

ಆರಂಭಿಕ ಆಘಾತ: ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಇಲೆವನ್‌ ತಂಡಕ್ಕೆ ಮೂರನೇ ಓವರ್‌ನಲ್ಲಿ ದೀಪಕ್‌ ಚಾಹರ್‌ ಆಘಾತ ನೀಡಿದರು. ಎರಡನೇ ಎಸೆತದಲ್ಲಿ ಅವರು ಎದುರಾಳಿ ತಂಡದ ನಾಯಕ ಅಲೆಕ್ಸ್‌ ಡೇವಿಸ್‌ (4) ಅವರನ್ನು ಔಟ್‌ ಮಾಡಿದರು.

ಆರಂಭಿಕ ಆಟಗಾರ ಜಾರ್ಜ್‌ ಹಾಕಿನ್ಸ್‌ (27; 29ಎ, 3ಬೌಂ, 1ಸಿ), ಬೆನ್‌ ಸ್ಲೇಟರ್‌ (37; 38ಎ, 6ಬೌಂ, 1ಸಿ) ಮತ್ತು ವಿಲ್‌ ಜಾಕ್ಸ್‌ (28; 28ಎ, 2ಬೌಂ, 2ಸಿ) ಅವರೂ ಬೇಗನೆ ವಿಕೆಟ್‌ ಒಪ್ಪಿಸಿದರು. ಮ್ಯಾಥ್ಯೂ ಕ್ರಿಟಚ್ಲೆ (40; 48ಎ, 4ಬೌಂ) ಭಾರತ ‘ಎ’ ತಂಡದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನ ನಡೆಸಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ. ಹೀಗಾಗಿ ಆತಿಥೇಯರ ಜಯದ ಕನಸು ಕಮರಿತು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’, 50 ಓವರ್‌ಗಳಲ್ಲಿ 8 ವಿಕೆಟ್‌ಗೆ 328 (ಪೃಥ್ವಿ ಶಾ 70, ಹನುಮ ವಿಹಾರಿ 38, ಶ್ರೇಯಸ್‌ ಅಯ್ಯರ್‌ 54, ವಿಜಯ್‌ ಶಂಕರ್‌ 11, ಇಶಾನ್‌ ಕಿಶನ್‌ 50, ಕೃಣಾಲ್‌ ಪಾಂಡ್ಯ 34, ಅಕ್ಷರ್‌ ಪಟೇಲ್‌ ಔಟಾಗದೆ 28, ದೀಪಕ್‌ ಚಾಹರ್‌ 10, ಎಂ.ಪ್ರಸಿದ್ಧ ಕೃಷ್ಣ ಔಟಾಗದೆ 9; ರ‍್ಯಾನ್‌ ಹಿಗ್ಗಿನ್ಸ್‌ 50ಕ್ಕೆ4, ಒಲ್ಲೀ ರಾಬಿನ್‌ಸನ್‌ 65ಕ್ಕೆ1, ಟಾಮ್‌ ಬಾರ್ಬರ್‌ 51ಕ್ಕೆ1, ಡೆಲ್‌ರೇ ರಾವಲಿನ್ಸ್‌ 33ಕ್ಕೆ1).

ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಇಲೆವನ್‌: 36.5 ಓವರ್‌ಗಳಲ್ಲಿ 203 (ಜಾರ್ಜ್‌ ಹಾಕಿನ್ಸ್‌ 27, ಬೆನ್‌ ಸ್ಲೇಟರ್‌ 37, ವಿಲ್‌ ಜಾಕ್ಸ್‌ 28, ಮ್ಯಾಥ್ಯೂ ಕ್ರಿಟಚ್ಲೆ 40; ದೀಪಕ್‌ ಚಾಹರ್‌ 48ಕ್ಕೆ3, ಅಕ್ಷರ್‌ ಪಟೇಲ್‌ 21ಕ್ಕೆ2, ಪ್ರಸಿದ್ಧ ಕೃಷ್ಣ 58ಕ್ಕೆ1, ಕೆ.ಖಲೀದ್‌ ಅಹ್ಮದ್‌ 35ಕ್ಕೆ1, ವಿಜಯ್‌ ಶಂಕರ್‌ 18ಕ್ಕೆ1, ಕೃಣಾಲ್‌ ಪಾಂಡ್ಯ 21ಕ್ಕೆ1). ಫಲಿತಾಂಶ: ಭಾರತ ‘ಎ’ ತಂಡಕ್ಕೆ 125ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT