ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಬರ್ಟ್ – ಸಾಡಿಯೊ ಮುಖಾಮುಖಿ

ಪೋಲೆಂಡ್‌ ತಂಡಕ್ಕೆ ಸೆನೆಗಲ್‌ ಸವಾಲು
Last Updated 18 ಜೂನ್ 2018, 18:08 IST
ಅಕ್ಷರ ಗಾತ್ರ

ಪೋಲೆಂಡ್‌: ಯುರೋಪ್‌ನ ಇಬ್ಬರು ಪ್ರಮುಖ ಫಾರ್ವರ್ಡ್ ಆಟಗಾರರ ಮುಖಾಮುಖಿಗೆ ಇಲ್ಲಿನ ಸ್ಪಾರ್ತಕ್ ಕ್ರೀಡಾಂಗಣ ಸಜ್ಜಾಗಿದೆ. ವಿಶ್ವಕಪ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಪೋಲೆಂಡ್ ಮತ್ತು ಸೆನೆಗಲ್ ತಂಡಗಳು ಸೆಣಸಲಿದ್ದು ರಾಬರ್ಟ್‌ ಲ್ಯೂವಂಡೊಸ್ಕಿ ಮತ್ತು ಸ್ಯಾಡಿಯೊ ಮಾನೆ ಅವರು ಈ ಪಂದ್ಯದ ಕೇಂದ್ರ ಬಿಂದು ಆಗಲಿದ್ದಾರೆ.

ಪೋಲೆಂಡ್‌ನ ಲ್ಯೂವಂಡೊಸ್ಕಿ ಈ ಬಾರಿಯ ಬಂಡೆಸ್‌ಲೀಗ ಟೂರ್ನಿಯಲ್ಲಿ ಒಟ್ಟು 29 ಗೋಲು ಗಳಿಸಿದ್ದಾರೆ. ಇದು ಟೂರ್ನಿಯಲ್ಲಿ ಆಟಗಾರನೊಬ್ಬ ಗಳಿಸಿದ ಗರಿಷ್ಠ ಗೋಲುಗಳಾಗಿದ್ದು ಅವರು ಮೂರನೇ ಬಾರಿ ಈ ಸಾಧನೆ ಮಾಡಿದ್ದಾರೆ. ಈ ಬಾರಿ ವಿವಿಧ ಟೂರ್ನಿಗಳಲ್ಲಿ ಅವರು ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 41.

ಫೈನಲ್ ಪಂದ್ಯದ ಗೋಲು ಸೇರಿದಂತೆ ಚಾಂಪಿಯನ್ಸ್‌ ಲೀಗ್‌ನಲ್ಲಿ ಮಾನೆ 10 ಬಾರಿ ಚೆಂಡನ್ನು ಗುರಿ ಮುಟ್ಟಿಸಿದ್ದಾರೆ. ಈ ಮೂಲಕ ಲಿವರ್‌ಪೂಲ್‌ ತಂಡದ ಉತ್ತಮ ಸ್ಟ್ರೈಕ್ ರೇಟ್‌ ಹೊಂದಿದ ಮೂರನೇ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಮೊಹಮ್ಮದ್ ಸಲಾ ಮತ್ತು ರಾಬರ್ಟ್ ಫಿರ್ಮಿನೊ ಅವರ ಸಾಧನೆಯನ್ನು ಸಮಗಟ್ಟಿದ್ದಾರೆ.

ಪೋಲೆಂಡ್‌ಗೆ ಹೆಚ್ಚು ಸಾಧ್ಯತೆ
ಪಂದ್ಯದಲ್ಲಿ ಪೋಲೆಂಡ್ ಗೆಲ್ಲುವ ನೆಚ್ಚಿನ ತಂಡ ಎಂಬುದು ಫುಟ್‌ಬಾಲ್ ಪಂಡಿತರ ಅನಿಸಿಕೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ಪೋಲೆಂಡ್‌ ವಿಶ್ವಕಪ್‌ನಲ್ಲಿ ಆಡಲಿರುವ ಎಂಟನೇ ಪಂದ್ಯ ಇದು. 1974 ಮತ್ತು 1982ರಲ್ಲಿ ಮೂರನೇ ಸ್ಥಾನ ಗಳಿಸಿದ್ದ ಈ ತಂಡ ಈ ಬಾರಿ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿ ಮೊದಲ ಪಂದ್ಯಕ್ಕೆ ಸಜ್ಜಾಗಿದೆ.

ಸೆನೆಗಲ್‌ ತಂಡಕ್ಕೂ ಟೂರ್ನಿಯಲ್ಲಿ ಇದು ಮೊದಲ ಪಂದ್ಯವಾಗಿದ್ದು ಶುಭಾರಂಭದ ನಿರೀಕ್ಷೆಯಲ್ಲಿ ಕಣಕ್ಕೆ ಇಳಿಯಲಿದೆ. 2002ರಲ್ಲಿ ತಂಡದ ನಾಯಕನಾಗಿದ್ದ ಅಲ್ಯೂ ಸಿಸ್‌ ಈಗ ಕೋಚ್ ಆಗಿದ್ದಾರೆ. ಅಲ್ಯೂ ಸಿಸ್‌ ಅವರ ನಾಯಕತ್ವದಲ್ಲಿ ತಂಡ ಅಂದಿನ ಚಾಂಪಿಯನ್‌ ಫ್ರಾನ್ಸ್‌ ವಿರುದ್ಧ 1–0 ಜಯದೊಂದಿಗೆ ಶುಭಾರಂಭ ಮಾಡಿತ್ತು. ಈಗ ಅದೇ ರೀತಿಯ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ ಅಲ್ಯೂ ಸಿಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT