ವೈದ್ಯಕೀಯ ಕಾಲೇಜು ಶುಲ್ಕ ಶೇ 10 ಹೆಚ್ಚಳ?

7

ವೈದ್ಯಕೀಯ ಕಾಲೇಜು ಶುಲ್ಕ ಶೇ 10 ಹೆಚ್ಚಳ?

Published:
Updated:
ವೈದ್ಯಕೀಯ ಕಾಲೇಜು ಶುಲ್ಕ ಶೇ 10 ಹೆಚ್ಚಳ?

ಬೆಂಗಳೂರು: ರಾಜ್ಯದಲ್ಲಿ 2018–19ನೇ ಸಾಲಿನಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್‌ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಶುಲ್ಕ ಶೇ 10ರಷ್ಟು ಹೆಚ್ಚಳ ಬಹುತೇಕ ಖಚಿತ.

ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ ಅವರು ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳ ಜತೆಗೆ ವಿಧಾನಸೌಧದಲ್ಲಿ ಸೋಮವಾರ ಸಭೆ ನಡೆಸಿದರು.

ಶೇ 15ಕ್ಕೆ ಹೆಚ್ಚಳಕ್ಕೆ ಅನುಮತಿ ನೀಡಬೇಕು ಎಂದು ಕಾಲೇಜುಗಳ ಆಡಳಿತ ಮಂಡಳಿ ಸಂಘಟನೆಗಳ ಪ್ರತಿನಿಧಿಗಳು ವಿನಂತಿಸಿದರು. ಈ ಪ್ರಮಾಣದ ಹೆಚ್ಚಳ ಸಾಧ್ಯವಿಲ್ಲ ಎಂದು ಸಚಿವರು ಸಾರಾಸಗಟಾಗಿ ತಿರಸ್ಕರಿಸಿದರು.

‘ಡೀಮ್ಡ್‌ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳ ಜತೆಗೆ ಬುಧವಾರ ಸಭೆ ನಡೆಯಲಿದ್ದು, ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಶಿವಕುಮಾರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

2017–18ನೇ ಸಾಲಿನಲ್ಲಿ ಶೇ 10ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿತ್ತು. ಇದೇ ಶುಲ್ಕ ಮೂರು ವರ್ಷ ಮುಂದುವರಿಯಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದ್ದರು. ‘ಶೇ 50ರಷ್ಟು ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಬೇಕು’ ಎಂದು ಸಂಘಟನೆಗಳ ಮುಖ್ಯಸ್ಥರು 2018ರ ಜನವರಿಯಲ್ಲಿ ಮನವಿ ಸಲ್ಲಿಸಿದ್ದರು.

‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಶುಲ್ಕ ಕಡಿಮೆ. ಬೇರೆ ರಾಜ್ಯಗಳಲ್ಲಿ ₹ 10 ಲಕ್ಷಕ್ಕೂ ಅಧಿಕ ಇದೆ. ನೌಕರರ ವೇತನವನ್ನು ಶೇ 30ರಷ್ಟು ಹೆಚ್ಚಳ ಮಾಡಿದ್ದು, ದೊಡ್ಡ ಹೊರೆಯಾಗಿದೆ. ಇಲ್ಲದಿದ್ದರೆ ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ’ ಎಂದು ಆಡಳಿತ ಮಂಡಳಿಗಳ ಸದಸ್ಯರು ಗಮನ ಸೆಳೆದರು. ‘ರೇಡಿಯಾಲಜಿ ಪ್ರಾಧ್ಯಾಪಕರ ತಿಂಗಳ ವೇತನ ₹ 5 ಲಕ್ಷ. ಅವರು ವಾರಕ್ಕೆ ಮೂರು ದಿನ ಕಾಲೇಜಿಗೆ ಬರುತ್ತಾರೆ. ವೇತನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ’ ಎಂದರು.

‘ಶಿಕ್ಷಣ ಕ್ಷೇತ್ರಕ್ಕೆ ನೀವೆಲ್ಲ ದೊಡ್ಡ ಕೊಡುಗೆ ನೀಡಿದ್ದೀರಿ. ಶುಲ್ಕ ಹೆಚ್ಚಳದ ಬಗ್ಗೆ ಈಗಾಗಲೇ ತಿಳಿಸಲು ಸಾಧ್ಯವಿಲ್ಲ. ಇನ್ನೊಂದು ಸುತ್ತಿನ ಸಭೆ ನಡೆಸುತ್ತೇನೆ’ ಎಂದು ಸಚಿವರು ಸಮಾಧಾನಪಡಿಸಿದರು.

‘ರಾಜ್ಯದಲ್ಲಿ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಇದು ಒಳ್ಳೆಯ ನಡೆ ಅಲ್ಲ. ಈಗಾಗಲೇ ಎಂಜಿನಿಯರಿಂಗ್‌ ಪದವಿಗೆ ಬೇಡಿಕೆಯೇ ಇಲ್ಲ. ಇನ್ನಷ್ಟು ಕಾಲೇಜುಗಳು ಆರಂಭವಾದರೆ ವೈದ್ಯಕೀಯ ಶಿಕ್ಷಣಕ್ಕೂ ಎಂಜಿನಿಯರಿಂಗ್‌ ಗತಿಯೇ ಆಗಲಿದೆ’ ಎಂದು ವೃತ್ತಿಪರ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಎಂ.ಆರ್‌. ಜಯರಾಮ್‌ ಎಚ್ಚರಿಸಿದರು.

ಡೀಮ್ಡ್‌ ವಿವಿಗಳ ವಿರುದ್ಧ ಕಿಡಿ

ಡೀಮ್ಡ್‌ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣಾ ಶೈಲಿಗೆ ಡಿ.ಕೆ. ಶಿವಕುಮಾರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ರಾಜ್ಯದ ಎಲ್ಲ ಸವಲತ್ತುಗಳು ಅವರಿಗೆ ಬೇಕು. ಆದರೆ, ನಮ್ಮ ವಿದ್ಯಾರ್ಥಿಗಳಿಗೆ ಸೀಟು ನೀಡುತ್ತಿಲ್ಲ. ವಿದ್ಯಾರ್ಥಿಗಳನ್ನು ಹತ್ತಿರಕ್ಕೆ ಸೇರಿಸುವುದಿಲ್ಲ’ ಎಂದು ಕಿಡಿಕಾರಿದರು.

ವಿದ್ಯಾರ್ಥಿಗಳಿಗೆ ಗರಿಷ್ಠ ₹66 ಸಾವಿರ ಹೊರೆ

ಈಗ ಸಂಸ್ಥೆಗಳ ಕೋಟಾದ ಎಂಬಿಬಿಎಸ್‌ ಸೀಟಿನ ಶುಲ್ಕ ₹6.60 ಲಕ್ಷ ಹಾಗೂ ಸರ್ಕಾರಿ ಕೋಟಾದ ಸೀಟಿನ ಶುಲ್ಕ ₹4.40 ಲಕ್ಷ ಇದೆ. ಇದು ಕ್ರಮವಾಗಿ ₹7.26 ಲಕ್ಷ ಹಾಗೂ ₹4.84 ಲಕ್ಷ ಆಗಲಿದೆ. ದಂತ ವೈದ್ಯಕೀಯ ವಿಭಾಗದಲ್ಲಿ ಸಂಸ್ಥೆಗಳ ಕೋಟಾದ ಶುಲ್ಕ 3.52 ಲಕ್ಷ ಹಾಗೂ ಸರ್ಕಾರಿ ಕೋಟಾದ ಶುಲ್ಕ ₹2.25 ಲಕ್ಷ ಇದೆ. ಇದು ಕ್ರಮವಾಗಿ ₹3.87 ಹಾಗೂ ₹2.47 ಲಕ್ಷ ಆಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry