ಕಾವೇರಿ ಪ್ರಾಧಿಕಾರ: ಶೀಘ್ರದಲ್ಲೇ ಸಭೆ- ಸಚಿವ ನಿತಿನ್ ಗಡ್ಕರಿ ಭರವಸೆ

7

ಕಾವೇರಿ ಪ್ರಾಧಿಕಾರ: ಶೀಘ್ರದಲ್ಲೇ ಸಭೆ- ಸಚಿವ ನಿತಿನ್ ಗಡ್ಕರಿ ಭರವಸೆ

Published:
Updated:
ಕಾವೇರಿ ಪ್ರಾಧಿಕಾರ: ಶೀಘ್ರದಲ್ಲೇ ಸಭೆ- ಸಚಿವ ನಿತಿನ್ ಗಡ್ಕರಿ ಭರವಸೆ

ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ರಾಜ್ಯದ ರೈತರ ಹಿತಕ್ಕೆ ಮಾರಕವಾಗುವ ಅಂಶಗಳ ಕುರಿತ ಚರ್ಚೆಗೆ ಸದ್ಯದಲ್ಲೇ ಸಭೆ ಕರೆಯುವುದಾಗಿ ಕೇಂದ್ರ ಜಲಸಂಪನ್ಮೂಲ ಅಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.

ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾಗಿ ಮಾರಕ ಅಂಶಗಳನ್ನು ಅಧಿಸೂಚನೆಯಿಂದ ಕೈಬಿಡುವಂತೆ ಒತ್ತಾಯಪಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಸಲೀಂ ಅಹ್ಮದ್ ಅವರ ನಿಯೋಗಕ್ಕೆ ಅವರು ಅಭಯ ನೀಡಿದರು.

ಪ್ರಾಧಿಕಾರದ ಸದಸ್ಯ ಸ್ಥಾನಗಳಿಗೆ ಕರ್ನಾಟಕದಿಂದ ಎರಡು ಹೆಸರುಗಳನ್ನು ಕಳಿಸುವಂತೆ ಕೇಂದ್ರ ಸರ್ಕಾರ ಕೋರಿದೆ. ರಾಜ್ಯ ಎತ್ತಿರುವ ತಕರಾರು ಇತ್ಯರ್ಥಪಡಿಸಬೇಕು ಎಂಬ ಷರತ್ತಿನೊಂದಿಗೆ ಹೆಸರುಗಳನ್ನು ಕಳಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಯಪಡಿಸಿದರು.

'ನಮ್ಮ ಕಾವೇರಿ ಅಚ್ಚುಕಟ್ಟಿನ ರೈತರು ಪ್ರತಿ ವರ್ಷ ಪ್ರಾಧಿಕಾರವು ಇಂತಹುದೇ ಬೆಳೆಯನ್ನು ಬೆಳೆಯುವಂತೆ ವಿಧಿಸುವುದು ಅತ್ಯಂತ ಅವಾಸ್ತವಿಕ, ಅಸಂಬದ್ಧ ಅಂಶ. ರೈತರ ಹೊಲ ಗದ್ದೆಗಳಿಗೆ ಪ್ರತಿ ಹತ್ತು ದಿನಗಳಿಗೊಮ್ಮೆ ಮಾತ್ರವೇ ನೀರು ಬಿಡಬೇಕು ಎಂಬ ಅಂಶದಲ್ಲಿ ಅರ್ಥವಿಲ್ಲ. ನಾವು ನದಿ ಕಣಿವೆಯ ಮೇಲ್ಭಾಗದ ರಾಜ್ಯ. ನಮ್ಮ ಪಾಲಿನ ನೀರನ್ನು ನಾವು ಹೇಗೆ ಬೇಕಾದರೂ ಬಳಸುವ ಸ್ವಾತಂತ್ರ್ಯ ನೀಡಬೇಕು. ಅವೈಜ್ಞಾನಿಕ ಷರತ್ತುಗಳನ್ನು ಹಾಕಿದರೆ ಒಕ್ಕೂಟ ವ್ಯವಸ್ಥೆಯಲ್ಲಿ ಜನರು ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಬಂದೀತು' ಎಂದು ಮುಖ್ಯಮಂತ್ರಿ ದೂರಿದರು.

ದೇವೇಗೌಡರು ವಿಶ್ವಕೋಶ: ಮೋದಿ

ಕಾವೇರಿ ಕುರಿತ ಇವೇ ಆತಂಕಗಳನ್ನು ಮುಖ್ಯಮಂತ್ರಿಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿಯಲ್ಲಿ ಮಂಡಿಸಿದರು. ರಾಜ್ಯದ ಆಕ್ಷೇಪಗಳು ಇತ್ಯರ್ಥ ಆಗುವ ತನಕ ಪ್ರಾಧಿಕಾರ ಜಾರಿ ಮಾಡುವುದು ಬೇಡವೆಂದು ಜಲಸಂಪನ್ಮೂಲ ಮಂತ್ರಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದರು. 'ಮೋದಿ ಅವರು ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದೇ ವಿಷಯ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಆರು ತಿಂಗಳ ಹಿಂದೆ ತಮ್ಮನ್ನು ಭೇಟಿ ಮಾಡಿ ಪ್ರಸ್ತಾಪ ಮಾಡಿದ್ದನ್ನು ನೆನೆದರು. ಇಡೀ ದೇಶದ ನೀರಾವರಿ ವಿಚಾರಗಳ ಕುರಿತು ನಿಮ್ಮ ತಂದೆಯವರು ನಡೆದಾಡುವ ವಿಶ್ವಕೋಶ ಇದ್ದಂತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ತೀರ್ಪಿನ ಜಾರಿ ಅನಿವಾರ್ಯವೆಂದರು' ಎಂಬುದಾಗಿ ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ದೇಶದ ಬ್ಯಾಂಕುಗಳ ಆರ್ಥಿಕ ಸ್ಥಿತಿ ಸರಿಪಡಿಸಲು ಎತ್ತಲಾಗುವ ₹ ಎರಡು ಲಕ್ಷ ಕೋಟಿಯಲ್ಲಿ ಒಂದು ಭಾಗವನ್ನು ರೈತರ ಸಾಲಮನ್ನಾ ಮಾಡಲು ನೆರವು ನೀಡಬೇಕು. ರಾಜ್ಯದ ಕಲ್ಲಿದ್ದಿಲು ಕೊರತೆಯನ್ನು ನೀಗಿಸಬೇಕು ಎಂದೂ ಮೋದಿಯವರಿಗೆ ಮನವಿ ಮಾಡಿಕೊಳ್ಳಲಾಯಿತು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry