ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಿಥೇಯರಿಗೆ ‘ಹದಿನಾರರ’ ಕನಸು

ರಷ್ಯಾಗೆ ಇಂದು ಈಜಿಪ್ಟ್ ಎದುರಾಳಿ; ಗಾಯದಿಂದ ಚೇತರಿಸಿಕೊಂಡಿರುವ ಸಲಾ
Last Updated 19 ಜೂನ್ 2018, 11:12 IST
ಅಕ್ಷರ ಗಾತ್ರ

ಸೇಂಟ್ ಪೀಟರ್ಸ್‌ಬರ್ಗ್‌: ಮೊಹಮ್ಮದ್ ಸಲಾ ಮರಳಿದ್ದಾರೆ; ಆಡಲು ಸಜ್ಜಾಗಿದ್ದಾರೆ. ವಿಶ್ವಕಪ್ ಫುಟ್‌ಬಾಲ್‌ಗೆ ಸಂಬಂಧಿಸಿ ಸೋಮವಾರ ಹೆಚ್ಚು ಗಮನ ಸೆಳೆದ ಸುದ್ದಿ ಇದು.

ಗಾಯಗೊಂಡ ಕಾರಣ ಮೊದಲ ಪಂದ್ಯದಲ್ಲಿ ಈಜಿಪ್ಟ್ ತಂಡದ ಪರ ಕಣಕ್ಕೆ ಇಳಿಯದ ಸಲಾ ಇದೀಗ ಗುಣಮುಖರಾಗಿದ್ದು ಆತಿಥೇಯ ರಷ್ಯಾ ಎದುರು ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಸಲಾ ಅನುಪಸ್ಥಿತಿಯಲ್ಲಿ ಟೂರ್ನಿಯ ಎರಡನೇ ದಿನದ ಪಂದ್ಯದಲ್ಲಿ ಉರುಗ್ವೆಗೆ ಮಣಿದಿದ್ದ ಈಜಿಪ್ಟ್‌ ತಂಡದ ಭರವಸೆ ಈಗ ಆಗಸದೆತ್ತರಕ್ಕೆ ಏರಿದ್ದು ಆತಿಥೇಯರನ್ನು ಮಣಿಸುವ ತಂತ್ರಗಾರಿಕೆಯೊಂದಿಗೆ ಸೇಂಟ್ ಪೀಟರ್ಸ್‌ಬರ್ಗ್ ಕ್ರೀಡಾಂಗಣದಲ್ಲಿ ಸೆಣಸಲಿದೆ.

ಈ ತಂಡ ಟೂರ್ನಿಯಲ್ಲಿ ಮೊದಲ ಜಯದ ಕನಸು ಹೊತ್ತು ಕಣಕ್ಕೆ ಇಳಿಯಲಿದೆ. ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾವನ್ನು 5–0 ಗೋಲುಗಳಿಂದ ಮಣಿಸಿ ತವರಿನ ಪ್ರೇಕ್ಷಕರನ್ನು ಮುದಗೊಳಿಸಿದ ರಷ್ಯಾ ಮತ್ತೊಂದು ಭರ್ಜರಿ ಜಯದ ಭರವಸೆಯೊಂದಿಗೆ ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡ 16ರ ಘಟ್ಟ ಪ್ರವೇಶಿಸಲಿದೆ.

ಲಿವರ್‌ಪೂಲ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಸಲಾ ಮೂರು ವಾರಗಳ ಹಿಂದೆ ನಡೆದ ಚಾಂಪಿಯನ್ಸ್‌ ಲೀಗ್‌ ಟೂರ್ನಿಯ ಮೊದಲ ಘಟ್ಟದಲ್ಲೇ ಕಣ್ಣೀರು ಹಾಕಿ ಅಂಗಣ ತೊರೆದಿದ್ದರು. ಎಡ ಭುಜದಲ್ಲಿ ಕಾಣಿಸಿಕೊಂಡ ನೋವು ವಿಶ್ವಕಪ್‌ನ ಮೊದಲ ಪಂದ್ಯದಲ್ಲೂ ಅವರು ಬೆಂಚು ಕಾಯುವಂತೆ ಮಾಡಿತ್ತು. ಈಗ ಅವರು ಸಂಪೂರ್ಣ ಗುಣಮುಖರಾಗಿರುವುದಾಗಿ ತಂಡದ ವೈದ್ಯರು ಹೇಳಿದ್ದಾರೆ. ಆದ್ದರಿಂದ ಮಂಗಳವಾರ ಆಡುವುದು ಖಚಿತವಾಗಿದೆ.

‘ರಷ್ಯಾ ವಿರುದ್ಧದ ಪಂದ್ಯ ಮಹತ್ವದ್ದು ಮತ್ತು ಸವಾಲಿನದ್ದು. ಹೀಗಾಗಿ ಮಂಗಳವಾರ ನಮ್ಮ ತಂಡ ಅಗ್ನಿಪರೀಕ್ಷೆಗೆ ಒಳಗಾಗಲಿದೆ’ ಎಂದು ಈಜಿಪ್ಟ್ ತಂಡದ ಕೋಚ್‌ ಹೆಕ್ಟರ್ ಕೂಪರ್‌ ಹೇಳಿದ್ದಾರೆ. ಹೀಗಾಗಿ ತಂಡ ಈ ಪಂದ್ಯದಲ್ಲಿ ಗೆಲ್ಲಲು ಕಠಿಣ ಪ್ರಯತ್ನ ಮಾಡಲಿದೆ.

ಡೆನಿಸ್‌ ಮೇಲೆ ಹೆಚ್ಚಿದ ನಿರೀಕ್ಷೆ: ಉದ್ಘಾಟನಾ ಪಂದ್ಯದಲ್ಲಿ ಎರಡು ಗೋಲು ಗಳಿಸಿಕೊಟ್ಟ ಡೆನಿಸ್ ಚೆರಿಷೆವ್ ಅವರ ಮೇಲೆ ರಷ್ಯಾ ಹೆಚ್ಚಿನ ನಿರೀಕ್ಷೆ ಹೊಂದಿದೆ. ಮೊದಲ ಪಂದ್ಯದಲ್ಲಿ ಬದಲಿ ಆಟಗಾರರ ಪಟ್ಟಿಯಲ್ಲಿದ್ದ ಚೆರಿಷೆವ್‌ 43 ಮತ್ತು 90+1ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡ ಭಾರಿ ಜಯ ಸಾಧಿಸಲು ಕಾರಣರಾಗಿದ್ದರು.

ಟೂರ್ನಿಗೂ ಮೊದಲು ನಿರಂತರ ಏಳು ಅಂತರರಾಷ್ಟ್ರೀಯ ಪಂದ್ಯಗಳನ್ನು ಸೋತಿದ್ದ ರಷ್ಯಾ ವಿಶ್ವಕಪ್‌ನ 16ರ ಘಟ್ಟ ಪ್ರವೇಶಿಸುವುದರ ಬಗ್ಗೆ ಸಂದೇಹ ಇತ್ತು. ನಾಕೌಟ್ ಹಂತಕ್ಕೇ ಪ್ರವೇಶಿಸದೇ ಇದ್ದರೆ, ವಿಶ್ವಕಪ್‌ನಲ್ಲಿ ಈ ಅವಮಾನಕ್ಕೆ ಒಳಗಾದ ಎರಡನೇ ಆತಿಥೇಯ ರಾಷ್ಟ್ರ ಎಂಬ ಅಪಖ್ಯಾತಿ ತಂಡದ್ದಾಗುತ್ತಿತ್ತು. ಆದರೆ ಎದುರಾಳಿ ತಂಡಕ್ಕೆ ಒಂದು ಗೋಲೂ ಬಿಟ್ಟುಕೊಡದೆ, ಐದು ಬಾರಿ ಚೆಂಡನ್ನು ಗುರಿ ಮುಟ್ಟಿಸಿದ ತಂಡ ಈಗ ಭರವಸೆಯಿಂದ ಬೀಗುತ್ತಿದೆ. ಲ್ಯೂರಿ ಗಜಿನ್‌ಸ್ಕಿ, ಜೈಯುಬಾ ಮತ್ತು 90+4ನೇ ನಿಮಿಷದಲ್ಲಿ ಗೋಲು ತಂದಿತ್ತ ಗೋಲೊವಿನ್‌ ಅವರ ಮೇಲೆಯೂ ನಿರೀಕ್ಷೆಯ ಭಾರ ಇದೆ.

*
ಸಲಾ ಅವರು ಭಾನುವಾರ ನಡೆದ ಅಭ್ಯಾಸದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ರಷ್ಯಾ ಎದುರಿನ ಪಂದ್ಯದಲ್ಲಿ ಅವರು ಕಣಕ್ಕೆ ಇಳಿಯುವುದರಲ್ಲಿ ಸಂದೇಹ ಇಲ್ಲ.
-ಇಹಾಬ್‌ ಲೆಹತಾ, ಈಜಿಪ್ಟ್ ತಂಡದ ವ್ಯವಸ್ಥಾಪಕ

*
ಮಂಗಳವಾರದ ಪಂದ್ಯ ನಮ್ಮ ಪಾಲಿಗೆ ಮಹತ್ವದ್ದು. ಮೊದಲ ಪಂದ್ಯದಲ್ಲಿ ಗಳಿಸಿದ ಜಯ ನಮ್ಮ ಆಟಗಾರರಿಗೆ ನೈತಿಕ ಬಲ ತುಂಬಿದೆ.
-ವಿಟಾಲಿ ಮುಕ್ತೊ‌, ರಷ್ಯಾದ ಉಪ ಪ್ರಧಾನ ಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT