ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬಜೆಟ್‌ಗೆ ಕೈ ಹೈಕಮಾಂಡ್ ಅಸ್ತು

ಗೌರಿ ಹತ್ಯೆ: ಪ್ರಚೋದನಕಾರಿ ಹೇಳಿಕೆ ನೀಡಿದರೆ ಕ್ರಮ–ಕುಮಾರಸ್ವಾಮಿ
Last Updated 19 ಜೂನ್ 2018, 5:04 IST
ಅಕ್ಷರ ಗಾತ್ರ

ನವದೆಹಲಿ: ಇದೇ ಜುಲೈನಲ್ಲಿ ಸಮ್ಮಿಶ್ರ ಸರ್ಕಾರದ ಹೊಸ ಬಜೆಟ್ ಮಂಡಿಸಲು ಹಾಗೂ ಸಾಲ ಮನ್ನಾ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಸಿರು ನಿಶಾನೆ ತೋರಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

'ಹೊಸ ಬಜೆಟ್ ಮಂಡನೆಗೆ ರಾಹುಲ್ ಅವರ ಯಾವುದೇ ತಕರಾರು ಇಲ್ಲ. ಸಿದ್ದರಾಮಯ್ಯ ಕೆಲವು ಅನುಭವದ ಮಾತುಗಳನ್ನು ಹೇಳಿದ್ದಾರೆ ಅಷ್ಟೆ. ಕಾಂಗ್ರೆಸ್ ಅಧ್ಯಕ್ಷರ ಮುಂದೆ ಯಾವುದೇ ವ್ಯಕ್ತಿಗಳ ಕುರಿತು ಚರ್ಚೆ ನಡೆಯಲಿಲ್ಲ’ ಎಂದು ಅವರು ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಹುಲ್ ಜೊತೆ ಹಲವು ರಾಜಕೀಯ ವಿಚಾರಗಳ ಕುರಿತು ಕೂಡ ಚರ್ಚೆ ಮಾಡಿದ್ದೇನೆ. ಆದರೆ ಅವುಗಳನ್ನೆಲ್ಲ ಸಾರ್ವಜನಿಕಗೊಳಿಸಲು ನಾನು ತಯಾರಿಲ್ಲ. ಇದೊಂದು ಸೌಹಾರ್ದ ಭೇಟಿಯಾಗಿತ್ತು. ರೈತರ ಸಾಲಮನ್ನಾ ಕ್ರಮಕ್ಕೆ ಅವರ ಸಹಕಾರವಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ರೈತರ ಸಹಕಾರಿ ಸಾಲ ಮನ್ನಾ ಕ್ರಮಕ್ಕೂ ಅವರು ಸಮ್ಮತಿ ನೀಡಿದ್ದರು. ಸಾಲಮನ್ನಾ ಕ್ರಮ ರಾಜ್ಯದ ಆರ್ಥಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರದಂತೆ ಜಾಗ್ರತೆ ವಹಿಸುವ ಕುರಿತು ಚರ್ಚೆ ಮಾಡಿದ್ದೇವೆ. ಯಾವ ರೀತಿ ಮುಂದಿನ ದಿನಗಳಲ್ಲಿ ಹೋಗಬೇಕಿದೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರ ಸಲಹೆಗಳನ್ನು ಪಡೆದುಕೊಂಡಿದ್ದೇನೆ. ಸುಭದ್ರ ಸರ್ಕಾರ ನೀಡುವುದು ಈ ಮೈತ್ರಿಯ ಉದ್ದೇಶ. ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ನೀಡಲು ಅವರ ಸಹಕಾರ ಪಡೆಯಲು ವಿವರ ಚರ್ಚೆ ಮಾಡಿದ್ದೇನೆ. ತುಂಬು ಮನದ ಸಹಕಾರದ ಭರವಸೆ ನೀಡಿದ್ದಾರೆ' ಎಂದು ವಿವರಿಸಿದರು.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವವರು ಎಷ್ಟೇ ದೊಡ್ಡವರಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ನಿರ್ದೇಶನ ನೀಡಿರುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹತ್ಯೆಯ ಕುರಿತ ಮುಕ್ತ ತನಿಖೆ ನಡೆಸಲು ಅಧಿಕಾರಿಗಳಿಗೆ ಅವಕಾಶ ನೀಡಬೇಕು. ತನಿಖೆಯ ನಂತರ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಲಿದೆ. ಅಲ್ಲಿಯ ತನಕ ಕಾಯದೆ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಹಬ್ಬಿಸಲು ಯಾರೂ ಪ್ರೋತ್ಸಾಹ ನೀಡಕೂಡದು ಎಂದು ತಾಕೀತು ಮಾಡಿದರು.

‘5 ವರ್ಷ ನೀವೇ ಮುಖ್ಯಮಂತ್ರಿ’

ರಾಜ್ಯ ಕಾಂಗ್ರೆಸ್-ಜಾತ್ಯತೀತ ಜನತಾದಳದ ಮೈತ್ರಿ ಸರ್ಕಾರ ಐದು ವರ್ಷಗಳ ಪೂರ್ಣಾವಧಿಗೆ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪುನಃ ಅಭಯ ನೀಡಿದ್ದಾರೆ.

ಸೋಮವಾರ ಇಲ್ಲಿ ತಮ್ಮನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಈ ಸಂಗತಿಯನ್ನು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾಗಿ ವಿಶ್ವಸನೀಯ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.

ಕನಿಷ್ಠ ಪಕ್ಷ ಲೋಕಸಭೆ ಚುನಾವಣೆಯ ತನಕ ಮುಖ್ಯಮಂತ್ರಿಯಾಗಿ ತಮ್ಮ ಸ್ಥಾನ ಭದ್ರ, ಒಂದು ವರ್ಷ ಕಾಲವಾದರೂ ತಮ್ಮನ್ನು ಯಾರೂ ಮುಟ್ಟುವುದು ಸಾಧ್ಯವಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ರಾಹುಲ್ ಆಶ್ಚರ್ಯ ವ್ಯಕ್ತಪಡಿಸಿ, ಅವರು ಹಾಗೆ ಹೇಳಿದ್ದೇಕೆ ಎಂದು ತಿಳಿಯಬಯಸಿದರು ಎನ್ನಲಾಗಿದೆ. ತಾವು ಕೇವಲ ಒಂದು ವರ್ಷ ಕಾಲ ಮುಖ್ಯಮಂತ್ರಿ ಎಂಬುದಾಗಿ ಹೇಳಿಲ್ಲವೆಂದೂ, ಈ ಹೇಳಿಕೆಯನ್ನು ನೀಡಿದ ಸಂದರ್ಭ ಸನ್ನಿವೇಶಗಳನ್ನು ಕುಮಾರಸ್ವಾಮಿ, ರಾಹುಲ್ ಅವರಿಗೆ ವಿವರಿಸಿದ್ದಾಗಿಯೂ ತಿಳಿದು ಬಂದಿದೆ.

* ಸಮ್ಮಿಶ್ರ ಸರ್ಕಾರವನ್ನು ಸಮಾಧಾನ ಮತ್ತು ಸೌಹಾರ್ದದಿಂದ ನಡೆಸಿಕೊಂಡುಹೋಗಿ

–ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ

ಮುಖ್ಯಾಂಶಗಳು

* ಸಹಕಾರದ ಭರವಸೆ

* ಒಂದು ವರ್ಷ ಸಿ.ಎಂ. ಹೇಳಿಕೆಗೆ ರಾಹುಲ್ ಅಚ್ಚರಿ

* ಸೌಹಾರ್ದಯುತವಾಗಿ ಸರ್ಕಾರ ನಡೆಸೋಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT